ಈ ಬಾರಿಯ ಎಸ್ಸೆಸ್ಸೆಲ್ಸಿ ಫಲಿತಾಂಶವೇನೋ ಬಂದಿದೆ. ಆದರೆ.. ಪರೀಕ್ಷೆಯಲ್ಲಿ ಪಾಸ್ ಆಗಿರುವ 1.70 ಲಕ್ಷ ವಿದ್ಯಾರ್ಥಿಗಳು ಗ್ರೇಸ್ ಮಾರ್ಕ್ಸ್ ಪಡೆದು ಪಾಸ್ ಆಗಿದ್ದಾರೆ.
ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳ ಸಂಖ್ಯೆ 8,59,967.
ಇವರಲ್ಲಿ ಪಾಸ್ ಆದವರು ಒಟ್ಟು 6,31,204.
ಈ 6,31,204ರಲ್ಲಿ ಗ್ರೇಸ್ ಮಾರ್ಕ್ಸ್ ಪಡೆದು ಪಾಸ್ ಆದವರು 1 ಲಕ್ಷದ 70 ಸಾವಿರ ವಿದ್ಯಾರ್ಥಿಗಳು. ಅಂದರೆ.. ವಿದ್ಯಾರ್ಥಿಗಳು 15 ಅಂಕಕ್ಕೆ ಸರಿಯಾದ ಉತ್ತರ ಬರೆದರೆ, ಸರ್ಕಾರ ಕೊಟ್ಟಿದ್ದು 20 ಉಚಿತ ಅಂಕಗಳು. ಆ ಮೂಲಕ 1 ಲಕ್ಷದ 70 ಸಾವಿರದಷ್ಟು ವಿದ್ಯಾರ್ಥಿಗಳು ಕೇವಲ 15 ಅಂಕ ಪಡೆದು ಪಾಸ್ ಆಗಿದ್ದಾರೆ. ಸಿಎಂ ಸಿದ್ದರಾಮಯ್ಯ ಆಕ್ರೋಶಕ್ಕೆ ಕಾರಣವಾಗಿರುವುದೇ ಇದು.
ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದ 2 ತಿಂಗಳ ಬಳಿಕ ಶುಕ್ರವಾರ ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳೂ ಇದ್ದರು. ವ್ಯವಸ್ಥಿತವಾಗಿ ನಡೆಯುತ್ತಿದ್ದ ಸಿಇಟಿ ಪರೀಕ್ಷೆಯಲ್ಲಿ ಈ ಸಲ ಪಠ್ಯೇತರ ಪ್ರಶ್ನೆಗಳು ಬಂದು ವಿವಾದ ಸೃಷ್ಟಿಯಾಗಿದ್ದಕ್ಕೆ ಸಿಟ್ಟಾದ ಸಿದ್ದರಾಮಯ್ಯ, ಎಸ್ಸೆಸ್ಸೆಲ್ಸಿಯಲ್ಲಿ ಶೇ. 20 ಕೃಪಾಂಕ ನೀಡಿರುವ ಬಗ್ಗೆ ಕೆಂಡಾಮಂಡಲವಾದರು.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 20 ಕೃಪಾಂಕ ಕೊಟ್ಟಿದ್ದು ಏಕೆ? ಯಾರನ್ನು ಕೇಳಿ ಇಷ್ಟೊಂದು ಗ್ರೇಸ್ ಮಾರ್ಕ್ಸ್ ಕೊಟ್ಟಿರಿ? ಇದರ ಅಗತ್ಯ ಏನಿತ್ತು? ಶಿಕ್ಷಣದ ಗುಣಮಟ್ಟ ಕುಸಿದಿದ್ದೇಕೆ? ಕೃಪಾಂಕ ನೀಡುತ್ತಾ ಹೋದರೆ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕತೆ ಇರುವುದಿಲ್ಲ. ಪರಿಶ್ರಮಕ್ಕೆ ಬೆಲೆ ಸಿಗುವುದಿಲ್ಲ ಎಂದು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಯನ್ನು ತರಾಟೆಗೆ ತೆಗೆದುಕೊಂಡರು.
ಇದಕ್ಕೆ ಒಂದು ರೀತಿಯಲ್ಲಿ ಸಮರ್ಥನೆ ನೀಡುತ್ತಾ ಸಚಿವ ಮಧು ಬಂಗಾರಪ್ಪ “ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 5 ಗ್ರೇಸ್ ಮಾರ್ಕ್ಸ್ ನೀಡುವುದು ಇತ್ತು. ಕೋವಿಡ್ ಸಂದರ್ಭದಲ್ಲಿ ಅದನ್ನು ಶೇ. 10ಕ್ಕೆ ಹೆಚ್ಚಳ ಮಾಡಲಾಗಿತ್ತು. ಆದರೆ, ಈ ಸಲ ಮೊದಲ ಬಾರಿಗೆ ವೆಬ್ ಕಾಸ್ಟಿಂಗ್ ವಿಧಾನವನ್ನು ಪರಿಚಯಿಸಲಾಗಿತ್ತು. ಇದರಿಂದ ಒಟ್ಟಾರೆ ಫಲಿತಾಂಶ ಕಳೆದ ವರ್ಷಕ್ಕಿಂತ ಶೇ. 30ರಷ್ಟು ಕಡಿಮೆಯಾಗಿತ್ತು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಫಲಿತಾಂಶವನ್ನು ಉತ್ತಮಪಡಿಸಲು ಗ್ರೇಸ್‌ಮಾರ್ಕ್ಸ್ ಹೆಚ್ಚಳದ ತೀರ್ಮಾನ ಮಾಡಲಾಯಿತು” ಎಂದು ವಿವರಣೆ ಕೊಟ್ಟರು.
ಆದರೆ ಸಿದ್ದರಾಮಯ್ಯ ಕೂಲ್ ಆಗಲಿಲ್ಲ. ಆಗ ಮಧ್ಯಪ್ರವೇಶಸಿದ ಡಿಸಿಎಂ ಡಿಕೆ ಶಿವಕುಮಾರ್ ನಾನು ಕೂಡ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿದ್ದೆ. ಹಾಗೆಂದ ಮಾತ್ರಕ್ಕೆ ಅಸಮರ್ಥ ಎನ್ನಲಾಗುತ್ತಾ? ವಿದ್ಯಾರ್ಥಿಗಳು ಸ್ವಂತ ಪರಿಶ್ರಮದಿಂದ ತೇರ್ಗಡೆ ಹೊಂದುವಂತಹ ವಾತಾವರಣ ನಿರ್ಮಾಣ ಮಾಡಿ ಎಂದು ಹೇಳಿ ಚರ್ಚೆಗೆ ಇತಿಶ್ರೀ ಹಾಡಿದರು.
ಅಂದಹಾಗೆ ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ಕೊಡುವ ಪದ್ಧತಿಯೇ ಇರುವುದಿಲ್ಲವಂತೆ.
ಈ ವರ್ಷ ಕೊಟ್ಟಿರುವ ಗ್ರೇಸ್ ಮಾರ್ಕ್ಸ್ ನಲ್ಲಿ ಯಾವುದೂ ಬದಲಾವಣೆ ಇಲ್ಲ. ಮುಂದಿನ ವರ್ಷದಿಂದ 20% ಗ್ರೇಸ್ ಮಾರ್ಕ್ಸ್ ಕೊಡುವ ಪದ್ಧತಿ ಇರಲ್ಲ. ಇನ್ನು ಮುಂದೆ ಹಿಂದಿನ ಪದ್ಧತಿಯೇ ಮುಂದುವರಿಯಲಿದೆ ಎಂದು ಹೇಳಿದ್ದಾರೆ ಶಿಕ್ಷಣ ಸಚಿವ ಮಧು ಬಂಗಾರಪ್ಪ.



