ಕರ್ನಾಟಕದಲ್ಲಿ ಎಲೆಕ್ಷನ್ ಮುಗಿದಿದೆ. ಇನ್ನೇನಿದ್ದರೂ ಜೂನ್ 4ರ ವರೆಗೆ ಕಾಯುವುದಷ್ಟೇ ಉಳಿದಿರೋದು. ಕರ್ನಾಟಕದಲ್ಲಿ ಕಳೆದ ಬಾರಿಗಿಂತ ಶೇ.2ರಷ್ಟು ಹೆಚ್ಚು ಮತದಾನವಾಗಿದೆ. ಕೆಲವು ಕ್ಷೇತ್ರಗಳಲ್ಲಿ ಶೇ. 5 ರಿಂದ 6ರಷ್ಟು ಹೆಚ್ಚು ಮತದಾನವಾಗಿರುವುದು ವಿಶೇಷ. ಆದರೆ.. ಕೆಲವು ಕ್ಷೇತ್ರಗಳಲ್ಲಿ ನೋ ಚೇಂಜ್. ಹೀಗಾಗಿಯೇ ಪಕ್ಷಗಳಲ್ಲಿ ಸೋಲು ಗೆಲುವಿನ ಲೆಕ್ಕಾಚಾರ ಶುರುವಾಗಿದೆ.
ಕಾಂಗ್ರೆಸ್ಸಿನವರ ಪ್ರಕಾರ :
28 ಕ್ಷೇತ್ರಗಳ ಪೈಕಿ ಕನಿಷ್ಠ 9ರಲ್ಲಿ ಗೆಲುವು ಖಚಿತ ಎಂಬ ವಿಶ್ವಾಸ ಪಕ್ಷದ ನಾಯಕ ರಲ್ಲಿ ಕಂಡು ಬರುತ್ತಿದೆ. 4 ಕ್ಷೇತ್ರಗಳಲ್ಲಿ ಪಕ್ಷ ಗೆಲುವಿನ ತುದಿಯಲ್ಲಿದ್ದರೆ, ಇನ್ನೆರಡು ಕ್ಷೇತ್ರಗಳಲ್ಲಿ 50-50 ಅವಕಾಶವಿದೆಯಂತೆ. ಗ್ಯಾರಂಟಿ ಯೋಜನೆಗಳು ಫಲ ನೀಡಿದರೆ 16ರಿಂದ 17 ಸ್ಥಾನ ಗೆಲ್ಲುವ ಸಾಧ್ಯತೆಯೂ ಇದೆ ಎನ್ನುವುದು ಅವರ ವಿಶ್ವಾಸ. 9ರಿಂದ 10 ಪಕ್ಕಾ. 50:50 ಪಕ್ಕಾ ವರ್ಕೌಟ್ ಆದರೆ.. 16ರಿಂದ 17. ತುರುಸಿನ ಪೈಪೋಟಿಯಲ್ಲಿ ಲಾಭವಾದರೆ.. 12 ಸ್ಥಾನ ಗೆಲ್ಲಬಹುದು ಎಂಬ ಉತ್ಸಾಹ ಕಾಂಗ್ರೆಸ್ಸಿನಲ್ಲಿದೆ.
ಮೊದಲ ಹಂತದ (ದಕ್ಷಿಣ ಕರ್ನಾಟಕ) ಚುನಾವಣೆಗಿಂತ 2ನೇ ಹಂತದ ಚುನಾವಣೆಯಲ್ಲಿ (ಉತ್ತರ ಕರ್ನಾಟಕ) ಹೆಚ್ಚಿನ ಸ್ಥಾನ ಲಭ್ಯವಾಗುವ ಸಾಧ್ಯತೆ ಇದ್ದು, ಉ. ಕರ್ನಾಟಕದಲ್ಲಿ ಗ್ಯಾರಂಟಿ ಪರಿಣಾಮ ತೀವ್ರ ಪ್ರಮಾಣದಲ್ಲಿ ಆಗಿದ್ಯಂತೆ.
ಬಿಜೆಪಿ ಪ್ರಕಾರ :
ಕನಿಷ್ಠ 18ರಿಂದ 20 ಸ್ಥಾನ ಗೆಲ್ಲುವ ನಿರೀಕ್ಷೆ ಹೊಂದಿದೆ ಬಿಜೆಪಿ. 28 ಕ್ಷೇತ್ರಗಳ ಪೈಕಿ ಬಿಜೆಪಿ 25ರಲ್ಲಿ ಸ್ಪರ್ಧಿಸಿದ್ದು, 3 ಸ್ಥಾನ ಜೆಡಿಎಸ್‌ಗೆ ಬಿಟ್ಟುಕೊಟ್ಟಿತ್ತು.ಆದರೆ.. ಬಿಜೆಪಿ ಪ್ರಚಾರ ಡಲ್ಲು ಹೊಡೆದಿದ್ದರೂ.. ಗೆಲುವಿನ ನಿರೀಕ್ಷೆ ಇರುವುದಕ್ಕೆ ಕಾರಣ ಮೋದಿ ನಾಮಬಲ. ಕಳೆದ ಬಾರಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯಾ ಧ್ಯಕ್ಷರಾಗಿದ್ದ ವೇಳೆ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ದಾಖಲೆ ಎಂಬಂತೆ 25 ಸ್ಥಾನಗಳಲ್ಲಿ ಜಯಭೇರಿ ಬಾರಿಸಿತ್ತು. ಇದೀಗ ಅವರ ಪುತ್ರ ಬಿ.ವೈ. ವಿಜಯೇಂದ್ರ, ರಾಜ್ಯಾಧ್ಯಕ್ಷ ಹುದ್ದೆ ಅಲಂಕರಿಸಿ, ಎದುರಿಸಿದ ಮೊದಲ ಚುನಾವಣೆ ಇದು.
28ಕ್ಕೆ 28 ಕ್ಷೇತ್ರಗಳನ್ನೂ ಗೆಲ್ಲುತ್ತೇವೆ ಎನ್ನುತ್ತಿದ್ದ ಬಿಜೆಪಿಗೆ, ಕಾರ್ಯಕರ್ತರಲ್ಲಿ ಉತ್ಸಾಹ ತುಂಬುವುದರಲ್ಲಿ ವಿಜಯೇಂದ್ರ ಸೋತಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತಿರುವ ಅಂಶ. ಆದರೆ.. ಕಾರ್ಯಕರ್ತರಲ್ಲಿ ಇಲ್ಲದ ಉತ್ಸಾಹ, ಬಿಜೆಪಿಯ ಮತದಾರರಲ್ಲಿತ್ತು ಎನ್ನುವ ಕಾನ್ಫಿಡೆನ್ಸ್ ನೆಚ್ಚಿಕೊಂಡು ಹೇಳೋದಾದರೆ.. 18ರಿಂದ20 ಸ್ಥಾನಗಳನ್ನು ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಗೆಲ್ಲಬಹುದು.
ಜೆಡಿಎಸ್ ಪ್ರಕಾರ :
ಬಿಜೆಪಿ ಮೈತ್ರಿಯೊಂದಿಗೆ 3 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಜೆಡಿಎಸ್ 2 ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸ ಇಟ್ಟುಕೊಂಡಿದೆ. ಮಂಡ್ಯ, ಹಾಸನ ಮತ್ತು ಕೋಲಾರ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರೂ, ಮಂಡ್ಯ ಮತ್ತು ಕೋಲಾರದ ಬಗ್ಗೆ ಇರುವ ವಿಶ್ವಾಸ ಹಾಸನದಲ್ಲಿ ಇಲ್ಲ. ಹಾಸನದಲ್ಲಿ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ಲೈಂಗಿಕ ಹಗರಣ ತೀವ್ರ ಪರಿಣಾಮ ಬೀರಿದೆ. ಜತೆಗೆ ಕಾಂಗ್ರೆಸ್ ಶ್ರೇಯಸ್ ಪಟೇಲ್ ಮೂಲಕ ಉತ್ತಮ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು. ಹೀಗಾಗಿ ಕಾಂಗ್ರೆಸ್ಸಿಗೆ ಗೆಲ್ಲುವ ಸಾಧ್ಯತೆ ಹೆಚ್ಚಿದೆ ಎಂಬ ಅಭಿಪ್ರಾಯ ಕಾಂಗ್ರೆಸ್ಸಿನಲ್ಲಿದೆ.



