ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಮೊದಲ ಮೂರೂ ಸಿನಿಮಾಗಳು ಸೂಪರ್ ಹಿಟ್. ಆನಂದ್, ರಥಸಪ್ತಮಿ ಹಾಗೂ ಮನ ಮೆಚ್ಚಿದ ಹುಡುಗಿ. ಅವುಗಳಿಂದಲೇ ಸಿಕ್ಕಿದ್ದು ಹ್ಯಾಟ್ರಿಕ್ ಹೀರೋ ಬಿರುದು. ಈ ದಾಖಲೆ ಮುಂದುವರೆಯುತ್ತಲೇ ಇದೆ.
ಮೈಲುಗಲ್ಲು ಎನಿಸುವುದು ಆ ಚಿತ್ರಗಳ ನಂಬರ್‍ನಲ್ಲಿ.
ಆನಂದ್ : ಮೊದಲ ಸಿನಿಮಾ

ಮೊದಲ ಚಿತ್ರ ಆನಂದ್ ಸೂಪರ್ ಹಿಟ್ ಸಿನಿಮಾ. 1986ರಲ್ಲಿ. ಜೂನ್ 19ನೇ ತಾರೀಕು ರಿಲೀಸ್ ಆದ ಸಿನಿಮಾ. 38 ವಾರಗಳ ಯಶಸ್ವಿ ಪ್ರದರ್ಶನ ಕಂಡಿತ್ತು. ಕನ್ನಡ ಚಿತ್ರರಂಗಕ್ಕೆ ಶಿವ ರಾಜ್ ಕುಮಾರ್ ಹಾಗೂ ಸುಧಾರಾಣಿ ಎಂಬ ಅಪರೂಪದ ಜೋಡಿಯನ್ನು ಪರಿಚಯಿಸಿದ ಸಿನಿಮಾ. ಸಿಂಗೀತಂ ಶ್ರೀನಿವಾಸ ರಾವ್ ನಿರ್ದೇಶನದ ಆನಂದ್ ಚಿತ್ರಕ್ಕೆ ಪಾರ್ವತಮ್ಮ ರಾಜ್ ಕುಮಾರ್ ನಿರ್ಮಾಪಕಿ. ಟುವ್ವಿ ಟುವ್ವಿ ಹಾಡನ್ನು ಜನ ಇವತ್ತಿಗೂ ಮರೆತಿಲ್ಲ. ಶಿವಣ್ಣಗೆ ಚಿತ್ರದಲ್ಲಿ ರಾಜೇಶ್ ತಂದೆಯಾಗಿ, ಜಯಂತಿ ತಾಯಿಯಾಗಿ ನಟಿಸಿದ್ದರು.
ಓಂ. 25ನೇ ಸಿನಿಮಾ :

125 ಸಿನಿಮಾ ಮಾಡಿರುವ ಶಿವಣ್ಣ ಅಭಿನಯದ 25ನೇ ಸಿನಿಮಾ ಓಂ. ಆ ಚಿತ್ರ ದಾಖಲೆಯನ್ನೇ ಬರೆಯಿತು. ಇಂಡಸ್ಟ್ರಿ ಹಿಟ್ ಎನಿಸಿಕೊಂಡ ಓಂ, ರೌಡಿಸಂ ಚಿತ್ರಗಳ ಟ್ರೆಂಡ್ ಸೃಷ್ಟಿಸಿತು. ಇವತ್ತಿಗೂ ಓಂ ಟ್ರೆಂಡ್ ನಿಂತಿಲ್ಲ. ಉಪೇಂದ್ರ ಆ ಚಿತ್ರದ ಮೂಲಕ ಸ್ಟಾರ್ ಡೈರೆಕ್ಟರ್ ಆದರು. ಶಿವಣ್ಣ-ಪ್ರೇಮಾ ಜೋಡಿ ಈ ಚಿತ್ರದ ಮೂಲಕ ಟ್ರೆಂಡ್ ಸೃಷ್ಟಿಸಿತು. ಚಿತ್ರದ ಒಂದೊಂದು ಹಾಡೂ ಸೂಪರ್ ಡ್ಯೂಪರ್ ಹಿಟ್. ಬೆಕ್ಕಿನ ಕಣ್ಣು ರಾಜೇಂದ್ರ, ಕೊರಂಗು ಕೃಷ್ಣ, ತನ್ವೀರ್, ಜೇಡರಳ್ಳಿ ಕೃಷ್ಣಪ್ಪ ಮೊದಲಾದ ರಿಯಲ್ ರೌಡಿಗಳೇ ಚಿತ್ರದಲ್ಲಿ ನಟಿಸಿದ್ದರು. 500ಕ್ಕೂ ಹೆಚ್ಚು ಬಾರಿ ರೀ-ರಿಲೀಸ್ ಆಗಿರುವ ಚಿತ್ರ ಎಂಬ ದಾಖಲೆ ಲಿಮ್ಕಾ ಪುಸ್ತಕದಲ್ಲಿ ದಾಖಲಾಗಿದೆ. 1995ರ ಮೇ 19ರಂದು ರಿಲೀಸ್ ಆಗಿದ್ದ ಸಿನಿಮಾ ಇದು.
50ನೇ ಸಿನಿಮಾ ಎ.ಕೆ.47 :

ಓಂಪ್ರಕಾಶ್ ರಾವ್ ನಿರ್ದೇಶನದ ಚಿತ್ರಕ್ಕೆ ಕೋಟಿ ರಾಮು ನಿರ್ಮಾಪಕ. ಆಗ ದಿನದಿನವೂ ದೇಶದೆಲ್ಲೆಡೆ ಬಾಂಬ್ ಸ್ಫೋಟ, ಉಗ್ರ ದಾಳಿ ಸುದ್ದಿಯಾಗುತ್ತಲೇ ಇದ್ದವು. ಅದನ್ನೇ ಬೇಸ್ ಆಗಿಟ್ಟುಕೊಂಡು ಅಮಾಯಕನೊಬ್ಬನಿಗೆ ಭಯೋತ್ಪಾದಕ ಕಟ್ಟಿದಾಗ, ಆತ ತನ್ನನ್ನು ತಾನು ದೇಶದ್ರೋಹಿಯಲ್ಲ, ನಾನೊಬ್ಬ ದೇಶಭಕ್ತ ಎಂದು ಪ್ರೂವ್ ಮಾಡಿಕೊಳ್ಳೋ ಪಕ್ಕಾ ಕಮರ್ಷಿಯಲ್ ಸಿನಿಮಾ. ಜೂನ್ 17 ರಿಲೀಸ್ ಆದ ಸಿನಿಮಾ. ಮೊದಲ ಬಾರಿಗೆ ಕನ್ನಡದಲ್ಲಿ ಡಿಟಿಎಸ್‍ನಲ್ಲಿ ರಿಲೀಸ್ ಆಗಿದ್ದ ಸಿನಿಮಾ, ಆಗಿನ ಕಾಲಕ್ಕೆ ಮೊದಲ ವಾರದಲ್ಲೇ 2 ಕೋಟಿ ಕಲೆಕ್ಷನ್ ಮಾಡಿತ್ತು. ಅದು ದಾಖಲೆ. 25 ವಾರ ಪ್ರದರ್ಶನ ಕಂಡಿದ್ದ ಚಿತ್ರದ ಡೈಲಾಗ್ಸ್, ರಾಷ್ಟ್ರಧ್ವಜ ಸುತ್ತಿಕೊಂಡು ಜೈಲಿಂದ ಎಸ್ಕೇಪ್ ಆಗುವ ದೃಶ್ಯ ಇವತ್ತಿಗೂ ರೋಮಾಂಚನ ಹುಟ್ಟಿಸುತ್ತದೆ. ಶಿವಣ್ಣ ಎದುರು ಚಾಂದಿನಿ ನಾಯಕಿಯಾಗಿದ್ದರು. ಗಿರೀಶ್ ಕಾರ್ನಾಡ್ ಶಿವಣ್ಣ ತಂದೆಯಾಗಿ ನಟಿಸಿದ್ದರು.
75ನೇ ಸಿನಿಮಾ : ಶ್ರೀರಾಮ್

ಎಂ.ಎಸ್.ರಮೇಶ್ ನಿರ್ದೇಶನದ ಸಿನಿಮಾಗೆ ರಾಮಾಯಣದ ಒಂದು ಎಳೆಯಿತ್ತು. ಮಿಕ್ಕಂತೆ ಔಟ್ & ಔಟ್ ತೆಲುಗು ಫ್ಲೇವರ್ ಇದ್ದ ಸಿನಿಮಾ. ಆಗ ಅದು ಟ್ರೆಂಡ್ ಆಗಿತ್ತು. ಅಪ್ಪಟ ಮಸಾಲಾ ಮೂವಿ. ಶಿವಣ್ಣ ಎದುರು ಅಂಕಿತಾ ಹಾಗೂ ಅಭಿರಾಮಿ ನಾಯಕಿಯಾಗಿದ್ದರು. ಶ್ರೀನಿವಾಸ ಮೂರ್ತಿ, ರಂಗಾಯಣ ರಘು, ಹೇಮಾ ಚೌಧರಿ, ಅವಿನಾಶ್.. ಹೀಗೆ ಎಲ್ಲರೂ ಪ್ರಮುಖ ಪಾತ್ರಗಳಲ್ಲಿದ್ದರು. ಸಿನಿಮಾ ಸೂಪರ್ ಹಿಟ್ ಆಗಿತ್ತು.
ಜೋಯಯ್ಯ, 100ನೇ ಸಿನಿಮಾ :

ಜೋಗಿ ಚಿತ್ರದ ಮೂಲಕ ಸೆನ್ಸೇಷನ್ ಸೃಷ್ಟಿಸಿದ್ದ ಪ್ರೇಮ್ ಅವರಿಗೆ ಜೋಗಯ್ಯ ಚಿತ್ರವನ್ನು 100ನೇ ಚಿತ್ರವನ್ನು ಕಾಣಿಕೆಯಾಗಿ ನೀಡಿದ್ದರು ಶಿವಣ್ಣ. ಜೋಗಯ್ಯ ಚಿತ್ರದ ಮೂಲಕ ರಕ್ಷಿತಾ ಪ್ರೇಮ್ ನಿರ್ಮಾಪಕಿಯಾಗಿ ಸಕ್ಸಸ್ ಕಂಡರು. ಅಂಬರೀಷ್, ಚಿರಂಜೀವಿ, ವಿಜಯ್, ಸೂರ್ಯ ಮೊದಲಾದವರ ಸಮ್ಮುಖದಲ್ಲಿ ಮುಹೂರ್ತವಾಗಿದ್ದ ಸಿನಿಮಾ ಅದು. ಚಿತ್ರದ ಓಡಲೇ.. ಹಾಡೊಂದಕ್ಕೆ ಒಂದೂವರೆ ಕೋಟಿ ಖರ್ಚು ಮಾಡಿದ್ದುದು ಸುದ್ದಿಯಾಗಿತ್ತು. ಚಿತ್ರ ರಿಲೀಸ್ ಆಗಿ ಭರ್ಜರಿ ದುಡ್ಡು ಮಾಡಿತಾದರೂ, ಜೋಗಿಯ ರೇಂಜ್‍ಗೆ ಹೋಗಲಿಲ್ಲ ಎಂಬ ಅಸಮಾಧಾನ ಪ್ರೇಕ್ಷಕರಲ್ಲಿ ಹಾಗೆಯೇ ಉಳಿಯಿತು. ಹೀಗಿದ್ದರೂ ಕಮರ್ಷಿಯಲಿ ಭರ್ಜರಿ ಲಾಭ ತಂದು ಕೊಟ್ಟ ಸಿನಿಮಾ ಜೋಗಯ್ಯ.
ವೇದ, 125ನೇ ಸಿನಿಮಾ :

ಈ ವರ್ಷದ ಕೊನೆಯಲ್ಲಿ ಸೆನ್ಸೇಷನಲ್ ಥ್ರಿಲ್ಲಿಂಗ್ ಸಂಭ್ರಮ ನೀಡಿರುವುದು ಶಿವರಾಜ ಕುಮಾರ್. ಶಿವಣ್ಣ ಅಭಿನಯದ 125ನೇ ಸಿನಿಮಾ ವೇದ ಸತತ 2ನೇ ವಾರವೂ ಎಲ್ಲೆಡೆ ಹೌಸ್‍ಫುಲ್. ಗೀತಾ ಪಿಕ್ಚರ್ಸ್ ನ ಮೊದಲ ಸಿನಿಮಾಗೆ ಹರ್ಷ ಡೈರೆಕ್ಟರ್. ಶಿವಣ್ಣ ಈ ಚಿತ್ರದಲ್ಲಿ ಹೀರೋ ಆಗಿದ್ದರೂ ಆದಿತಿ ಸಾಗರ್ ಹಾಗೂ ಗಾನವಿ ಲಕ್ಷ್ಮಣ್ ಅವರಿಗೆ ನಟಿಸುವುದಕ್ಕೆ ಹೆಚ್ಚು ಅವಕಾಶವಿದೆ. ಹೆಣ್ಣು ಮಕ್ಕಳ ಮೂಲಕವೇ ಸೇಡು ತೀರಿಸಿಕೊಳ್ಳೋ ವೇದ ಚಿತ್ರದ ಮೂಲಕ ಒಂದು ಅದ್ಭುತ ಸಂದೇಶವನ್ನೂ ಜನರಿಗೆ ಕೊಟ್ಟಿದ್ದಾರೆ ಹರ್ಷ ಮತ್ತು ಶಿವಣ್ಣ. ಹೀಗಾಗಿಯೇ ಇದು ಪ್ರೇಕ್ಷಕರಿಗೆ ಇಷ್ಟವಾಗಿದೆ. ಜೊತೆಗೆ ಗಿಲಕ್ಕೋ ಶಿವ ಗಿಲ್ಲಕ್ಕೋ, ಜುಂಜಪ್ಪನ ಹಾಡು, ಪುಷ್ಪ ಪುಷ್ಪ ಹಾಡುಗಳು ಸೃಷ್ಟಿಸಿರೋ ಕ್ರೇಜ್ ಬೇರೆಯದೇ ಲೆವೆಲ್ಲಿನಲ್ಲಿದೆ. ಈ ಎಲ್ಲವೂ ಒಟ್ಟಾಗಿ ಸೇರಿ ಚಿತ್ರವನ್ನು ಬ್ಲಾಕ್ ಬಸ್ಟರ್ ಲಿಸ್ಟಿಗೆ ಸೇರಿಸಿವೆ.



