ರಾಜ್ಯ ಬಿಜೆಪಿಯಲ್ಲಿ ತನ್ನ ಕಾಲ ಮೇಲೆ ತಾನೇ ಚಪ್ಪಡಿ ಎಳೆದುಕೊಳ್ಳುತ್ತಿದೆಯಾ ಬಿಜೆಪಿ..? ಹೀಗೊಂದು ಅನುಮಾನ ಮೂಡುತ್ತಿರುವುದು ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಳಿಬಂದಿರುವ ಮುಡಾ ಹಗರಣದ ವಿರುದ್ಧ ಪಾದಯಾತ್ರೆ ವಿಷಯದಲ್ಲಿ. ಏನೆಂದರೆ ಕೇವಲ ಎರಡೇ ದಿನಗಳಲ್ಲಿ ಎಲ್ಲರ ನಿಲುವೂ ಬದಲಾಗಿದೆ.
ಎರಡು ದಿನಗಳ ಹಿಂದೆ ಅಂದರೆ ಭಾನುವಾರ ಉಭಯ ಪಕ್ಷಗಳ ಹಿರಿಯ ನಾಯಕರನ್ನೊಳಗೊಂಡ ಸಮನ್ವಯ ಸಭೆಯಲ್ಲಿ ಪಾದಯಾತ್ರೆ ಬಗ್ಗೆ ಒಮ್ಮತದ ನಿರ್ಧಾರ ಕೈಗೊಳ್ಳಲಾಗಿತ್ತು. ಮಂಗಳವಾರದ ಹೊತ್ತಿಗೆ ಜೆಡಿಎಸ್ ನಾಯಕರ ನಿಲುವು ಬದಲಾಗಿದೆ. ಪಕ್ಷದ ಕೋರ್ ಕಮಿಟಿ ಸಭೆ ನಡೆಸಿ ಮುಂದೂಡುವಂತೆ ಮನವಿ ಮಾಡಲು ನಿರ್ಣಯ ಕೈಗೊಂಡಿದ್ದಾರೆ.
ಇತ್ತ ಬಿಜೆಪಿಯಲ್ಲಿಯೂ ಅಷ್ಟೆ, ಆರ್.ಅಶೋಕ್ ಮತ್ತು ಅಶ್ವತ್ಥ್ ನಾರಾಯಣ ಅವರಂತಹ ದೊಡ್ಡ ದೊಡ್ಡ ನಾಯಕರು ಪಾದಯಾತ್ರೆಗೆ ವಿರೋಧ ವ್ಯಕ್ತಪಡಿಸುತ್ತಿದ್ಧಾರೆ. ಪಾದಯಾತ್ರೆ ನಡೆಯುತ್ತಿರುವ ಸಮಯದಲ್ಲಿ ಬಿತ್ತನೆ ನಡೆಯುತ್ತಿರುತ್ತದೆ. ಹೀಗಾಗಿ ಪಾದಯಾತ್ರೆ ಬೇಡ ಅನ್ನೋದು ಅವರ ವಾದ.
ಆದರೆ.. ಒಳಗಿನ ಕಥೆ ಬೇರೆಯೇ ಇದ್ದಂತಿದೆ.
ಪಾದಯಾತ್ರೆ ಬೇಡ ಅಂತಿರೋ ಜೆಡಿಎಸ್ ನಾಯಕರ ವಾದ :
ಪಾದಯಾತ್ರೆ ನಡೆಯೋದು ಬೆಂಗಳೂರಿನಿಂದ ಮೈಸೂರುವರೆಗೆ. ಆದರೆ ಈ ಪಾದಯಾತ್ರೆಯಲ್ಲಿ ಕುಮಾರಸ್ವಾಮಿ ಇರುವುದಕ್ಕೆ ಸಾಧ್ಯವಿಲ್ಲ. ಅವರೀಗ ಸೆಂಟ್ರಲ್ ಮಿನಿಸ್ಟರ್. ಪಾದಯಾತ್ರೆ ಮಾಡಬೇಕು ಎಂದರೂ ವಯಸ್ಸು ಸಹಕರಿಸುವುದಿಲ್ಲ. ನಿಖಿಲ್ ಕುಮಾರಸ್ವಾಮಿ ಇರುತ್ತಾರಾದರೂ, ಮೈಲೇಜ್ ವಿಜಯೇಂದ್ರ ಅವರಿಗೆ ಸಿಗುತ್ತದೆ. ವಿಜಯೇಂದ್ರ ಅವರಿಗೆ ಮೈಲೇಜ್ ಕೊಡುವುದಕ್ಕೆ ನಾವೇಕೆ ಪಾದಯಾತ್ರೆ ಮಾಡಬೇಕು ಅನ್ನೋ ವಾದ ಜೆಡಿಎಸ್ಸಿನವರದ್ದು.
ಅಷ್ಟೇ ಅಲ್ಲ, ನಿಖಿಲ್ ಕುಮಾರಸ್ವಾಮಿಗೆ ದೊಡ್ಡ ಮೈಲೇಜ್ ಕೊಡುವುದಕ್ಕೆ ಹಾಗೂ ನಿಖಿಲ್ ಅವರನ್ನು ಕುಮಾರಸ್ವಾಮಿಯವರ ಉತ್ತರಾಧಿಕಾರಿ ಎಂದು ಒಪ್ಪಿಕೊಳ್ಳೋದಕ್ಕೂ ಜೆಡಿಎಸ್ ನಾಯಕರು ತಯಾರಿಲ್ಲ. ಇದೆಲ್ಲವೂ ಒಳಗಿನ ಕಾರಣಗಳಾಗಿವೆ ಎನ್ನಲಾಗಿದ್ದು ಬಹಿರಂಗವಾಗಿ ಮಾತ್ರ ರಾಜ್ಯಾದ್ಯಂತ ಭಾರಿ ಮಳೆಯಾಗುತ್ತಿದ್ದು, ಮಳೆ ಅವಾಂತರಗಳು ಹೆಚ್ಚಾಗಿವೆ. ಪ್ರಕೃತಿ ಈಗ ವಿಕೋಪಕ್ಕೆ ತಿರುಗಿದೆ. ರಾಜ್ಯದಲ್ಲಿ ಮಳೆ ಅಬ್ಬರದಿಂದ ಸಾಕಷ್ಟು ಪ್ರಮಾಣದಲ್ಲಿ ಅನಾಹುತಗಳು ನಡೆದಿವೆ. ಹೀಗಾಗಿ, ಮಳೆ ಕಡಿಮೆಯಾದ ನಂತರ, ಎಲ್ಲಾ ಅನುಕೂಲ ಪರಿಸ್ಥಿತಿಗಳನ್ನು ನೋಡಿಕೊಂಡು ಪಾದಯಾತ್ರೆ ಮಾಡಬಹುದು ಎಂದು ಹೇಳುತ್ತಿದೆ.
ಇನ್ನು ಸಭೆಯಲ್ಲಿ ಕೆಲವು ಮುಖಂಡರು ಕುಮಾರಸ್ವಾಮಿ ಅವರು ಸಂಸತ್ ಅಧಿವೇಶನದಲ್ಲಿ ಇರುತ್ತಾರೆ. ಅವರು, ಇಲ್ಲದೆ ಈ ಪಾದಯಾತ್ರೆ ಯಶಸ್ವಿ ಆಗಲ್ಲ. ಕುಮಾರಸ್ವಾಮಿ ಅವರಿಲ್ಲದೇ ನಾವು ಪಾದಯಾತ್ರೆಯಲ್ಲಿ ಭಾಗವಹಿಸಲು ಹೇಗೆ ಸಾಧ್ಯ ಅನ್ನೋ ಪ್ರಶ್ನೆ ಎತ್ತಿದ್ಧಾರೆ.
ಬಿಜೆಪಿಯ ಒಳಗಿನ ಕಥನಗಳು ಮತ್ತೂ ವಿಚಿತ್ರ :
ರಾಜ್ಯ ಬಿಜೆಪಿಯಲ್ಲಿ ಬಸನಗೌಡ ಪಾಟೀಲ ಯತ್ನಾಳ್ ಮತ್ತು ರಮೇಶ್ ಜಾರಕಿಹೊಳಿ ʻಈ ಪಾದಯಾತ್ರೆ ನಡೆಸುತ್ತಿರುವುದು ವಿಜಯೇಂದ್ರ. ಅವರಿಗೆ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿ ಡಿಕೆ ಶಿವಕುಮಾರ್ ಅವರನ್ನು ಸಿಎಂ ಆಗಿ ಮಾಡುವ ಹುನ್ನಾರ ಇದೆʼʼ ಎಂದು ಬಹಿರಂಗವಾಗಿಯೇ ಹೇಳಿದ್ದಾರೆ. ಅವರಿಬ್ಬರೂ ಉತ್ತರ ಕರ್ನಾಟಕದಲ್ಲಿ ಪ್ರತ್ಯೇಕ ಪಾದಯಾತ್ರೆ ಮಾಡ್ತಾರಂತೆ.
ಇನ್ನು ಮೂಲಗಳ ಪ್ರಕಾರ ಆರ್.ಅಶೋಕ್ ಮತ್ತು ಅಶ್ವತ್ಥ್ ನಾರಾಯಣ್ ಅವರು ಇದು ಬಿತ್ತನೆ ಸಮಯ, ಈಗ ಬೇಡ ಅನ್ನೋ ವಾದ ಇಟ್ಟಿದ್ದಾರಂತೆ. ವೊರಿಜಿನಲ್ ಕಾರಣ ಏನೆಂದರೆ ಈಗ ನಡೆಯುತ್ತಿರುವ ಅಥವಾ ನಡೆಯಬೇಕಿರುವ ಪಾದಯಾತ್ರೆ ಸಂಪೂರ್ಣ ಒಕ್ಕಲಿಗರ ಪ್ರಾಬಲ್ಯದ ಕ್ಷೇತ್ರಗಳಲ್ಲಿ. ಅಲ್ಲಿ ಪಾದಯಾತ್ರೆ ನಡೆದರೆ, ನೇತೃತ್ವ ವಹಿಸಿರುವ ವಿಜಯೇಂದ್ರ ಒಕ್ಕಲಿಗರ ನಾಯಕರೂ ಆಗುತ್ತಾರೆ. ಈಗಾಗಲೇ ಕಾಂಗ್ರೆಸ್ ಜೊತೆ ಹೋಗಿದ್ದ ಲಿಂಗಾಯತ ಸಮುದಾಯ ಒಂದು ಹಂತಕ್ಕೆ ಬಿಜೆಪಿಗೆ ವಾಪಸ್ ಆಗುತ್ತಿರುವ ಸೂಚನೆ ಇದೆ. ಹೀಗಿರುವಾಗ ಒಕ್ಕಲಿಗರಲ್ಲೂ ನಾಯಕನಾಗಿಬಿಟ್ಟರೆ.. ಆಗ ತಮ್ಮ ಬುಡಕ್ಕೇ ಕೊಡಲಿಪೆಟ್ಟು ಬೀಳಬಹುದು ಎಂಬಾ ಮುಂದಾಲೋಚನೆ ಇದೆಯಂತೆ.
ಒಟ್ಟಿನಲ್ಲಿ ಬಿಜೆಪಿಯಲ್ಲಿ ಅವರ ಕಾಲನ್ನು ಇವರು.. ಇವರ ಕಾಲನ್ನು ಅವರು ಎಳೆಯುವ ಆಟ ಜೋರಾಗಿದೆ.



