ಧ್ರುವ ಸರ್ಜಾ ಮಾರ್ಟಿನ್ ಚಿತ್ರಕ್ಕೆ ರಜನಿಕಾಂತ್.. ಸೂರ್ಯ ಚಾಲೆಂಜ್ : ಅರೆ..ಉಪೇಂದ್ರ ಕೂಡಾ ಫೈಟ್ ಕೊಡ್ತಾರಾ..?
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರನ್ನು ಬೆಳ್ಳಿ ತೆರೆಯ ಮೇಲೆ ನೋಡುವುದಕ್ಕೆ ಕಾತರದಿಂದ ಕಾಯುತ್ತಿರುವವರಿಗೆ ಇದು ಶಾಕಿಂಗ್ ನ್ಯೂಸ್ ಹೌದು. ಏಕೆಂದರೆ ಈ ಬಾರಿ ಧ್ರುವ ಅವರಿಗೆ ಚಾಲೆಂಜ್ ಹಾಕ್ತಿರೋದು ಸಣ್ಣ ಸಣ್ಣ ನಟರಲ್ಲ, ಸೂಪರ್ ಸ್ಟಾರುಗಳು, ರಿಯಲ್ ಸ್ಟಾರುಗಳು. ಎಲ್ಲರಿಗೂ ಗೊತ್ತಿರೋ ಹಾಗೆ.. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಮಾರ್ಟಿನ್ ಚಿತ್ರ ಅಕ್ಟೋಬರ್ 10ಕ್ಕೆ ರಿಲೀಸ್ ಆಗ್ತಿದೆ. ಇದೇ ವೇಳೆ ಧ್ರುವ ಅವರಿಗೆ ದೊಡ್ಡ ಚಾಲೆಂಜ್ ಎದುರಾಗಿದೆ. ಅದೇ ಸಮಯದಲ್ಲಿ ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಸೂರ್ಯ ಜೊತೆ ಪೈಪೋಟಿ ಎದುರಿಸಬೇಕಾಗಿದೆ. ಉಪೇಂದ್ರ ಅವರ ಪೈಪೋಟಿಯೂ ಇದೆ ಎನ್ನಲಾಗುತ್ತಿದೆ, ಅದಿನ್ನೂ ಅಧಿಕೃತವಾಗಿಲ್ಲ.
ಅಕ್ಟೋಬರ್ 3ರಿಂದ ಅಕ್ಟೋಬರ್ 12ರವರೆಗೆ ನವರಾತ್ರಿ ಇದೆ. ಹೀಗಾಗಿ ದಸರೆಯ ಸುದೀರ್ಘ ರಜೆಯ ಲಾಭ ಪಡೆಯಲು ಚಿತ್ರರಂಗ ಮುಂದಾಗಿದೆ. ದಸರಾ ಹಬ್ಬದ ಪ್ರಯುಕ್ತ ಹಲವು ಸಿನಿಮಾಗಳು ರಿಲೀಸ್ ಆಗುತ್ತಿವೆ. ರಜನಿಕಾಂತ್ ನಟನೆಯ ವೆಟ್ಟೈಯನ್ ಸಿನಿಮಾ ವಿಶ್ವಾದ್ಯಂತ ಅಕ್ಟೋಬರ್ 10ರಂದು ಬಿಡುಗಡೆ ಆಗಲಿದೆ. ಸೂಪರ್ಸ್ಟಾರ್ ಅವರು ಸೂಪರ್ ಕಾಪ್ ಆಗಿ ಬರುತ್ತಿದ್ದಾರೆ. ತಮಿಳು, ಕನ್ನಡ, ತೆಲುಗು ಹಾಗೂ ಹಿಂದಿಯಲ್ಲಿ ಸಿನಿಮಾ ರಿಲೀಸ್ ಆಗಲಿದೆ. ರಜನಿಕಾಂತ್ ಜೊತೆ ಅಮಿತಾಭ್ ಬಚ್ಚನ್, ಫಹಾದ್ ಫಾಸಿಲ್, ರಾಣಾ ದಗ್ಗುಬಾಟಿ, ಮಂಜು ವಾರಿಯರ್ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ಲೈಕಾ ಪ್ರೊಡಕ್ಷನ್ ಈ ಚಿತ್ರವನ್ನು ನಿರ್ಮಾಣ ಮಾಡಿದೆ. ಅನಿರುದ್ಧ್ ರವಿಚಂದರ್ ಅವರು ಈ ಸಿನಿಮಾನ ನಿರ್ಮಾಣ ಮಾಡಿದ್ದಾರೆ.
ಇದೇ ವೇಳೆ ತಮಿಳಿನ ಸೂರ್ಯ ಮತ್ತು ಬಾಬ್ಬಿ ಡಿಯೋಲ್ ನಟಿಸಿರುವ ಕಂಗುವಾ ಕೂಡಾ ರಿಲೀಸ್ ಆಗುತ್ತಿದೆ. ಕಂಗುವಾದಲ್ಲಿಯೂ ಕೂಡಾ ದೊಡ್ಡ ತಾರಾಗಣವಿದೆ. ದಿಶಾ ಪಟಾನಿ, ಜಗಪತಿ ಬಾಬು ನಟಿಸಿದ್ದಾರೆ. ತಮಿಳಿನ ಅಜಿತ್ ಅವರಿಗೆ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾ ಕೊಟ್ಟಿದ್ದ ಶಿವ ಈ ಚಿತ್ರದ ನಿರ್ದೇಶಕ.
ಒಟ್ಟಿನಲ್ಲಿ ಧ್ರುವ ಸರ್ಜಾ ಮತ್ತು ಎಪಿ ಅರ್ಜುನ್ ಕಾಂಬಿನೇಷನ್ನಿನ ಸಿನಿಮಾ ದೊಡ್ಡ ಸವಾಲನ್ನೇ ಎದುರಿಸಲಿದೆ. ಉದಯ್ ಕೆ ಮೆಹ್ತ ನಿರ್ಮಾಣದ ಮಾರ್ಟಿನ್, ಹಲವು ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಮೂರೂವರೆ ವರ್ಷಗಳ ನಂತರ ಧ್ರುವ ಸರ್ಜಾ ನಟನೆಯ ಚಿತ್ರ ರಿಲೀಸ್ ಆಗುತ್ತಿದ್ದು, ದೊಡ್ಡ ಸವಾಲನ್ನೇ ಎದುರಿಸಲಿದೆ.
ವಿಶೇಷ ಅಂದ್ರೆ ಉಪೇಂದ್ರ ನಟಿಸಿ, ನಿರ್ದೇಶಿಸಿರುವ ಯುಐ ಕೂಡಾ ಅಕ್ಟೋಬರ್ ತಿಂಗಳಲ್ಲೇ ರಿಲೀಸ್ ಆಗುತ್ತಿದೆ. ದಿನಾಂಕ ಒಂದು ಫಿಕ್ಸ್ ಆಗಿಲ್ಲ. ಉಪೇಂದ್ರ ಹುಟ್ಟುಹಬ್ಬದ ದಿನ ಯುಐ ರಿಲೀಸ್ ಡೇಟ್ ಘೋಷಣೆಯಾಗುತ್ತಿದೆ. ಈಗಾಗಲೇ ಚಿತ್ರದ ಶೇ.೮೦ರಷ್ಟು ಪೋಸ್ಟ್ ಪ್ರೊಡಕ್ಷನ್ ಮುಗಿದಿದೆ.
ಯುಐ ಕೂಡಾ ರಿಲೀಸ್ ಆದರೆ.. ಪ್ರೇಕ್ಷಕರಿಗೆ ಭಾರಿ ಹಬ್ಬ. ಆದರೆ.. ಯಾವ ಚಿತ್ರ ಗೆಲ್ಲುತ್ತದೋ.. ಯಾವ ಚಿತ್ರ ಸೋಲುತ್ತದೋ ಬಲ್ಲವರಾರು. ಧ್ರುವ ಸರ್ಜಾ ಅವರ ಈ ಹಿಂದಿನ ಪೊಗರು ಚಿತ್ರ ಭರ್ಜರಿ ಸುದ್ದಿ ಮಾಡಿತ್ತು. ಭರ್ಜರಿ ಓಪನಿಂಗ್ ಕೂಡಾ ಸಿಕ್ಕಿತ್ತು. ಆದರೆ, ದಯನೀಯವಾಗಿ ಸೋತಿತ್ತು. ಧ್ರುವ ಸರ್ಜಾ ಕಂಡಿರುವ ಮೊದಲ ಸೋಲು ಅದು. ಅದ್ಧೂರಿ, ಭರ್ಜರಿ ಹಾಗೂ ಬಹದ್ದೂರ್ ಚಿತ್ರಗಳಲ್ಲಿ ಹ್ಯಾಟ್ರಿಕ್ ಸಕ್ಸಸ್ ಕಂಡಿದ್ದ ಧ್ರುವ ಅವರ ಪೊಗರು ಸೋತಿರುವ ಕಾರಣ, ಮಾರ್ಟಿನ್ ಮೇಲೆ ನಿರೀಕ್ಷೆಯ ಭಾರ ಹೆಚ್ಚಾಗಿಯೇ ಇದೆ.


