23 ವರ್ಷದ ಯುವತಿಯೊಬ್ಬಳು, ಕಳೆದ 7 ತಿಂಗಳಿಂದ ಕೋಮಾ ಅರ್ಥಾತ್ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಕೋಮಾ ಎಂದರೆ ಕೋಮಾ ಸ್ಥಿತಿ ಅಲ್ಲ. ಪ್ರಜ್ಞಾಹೀನ ಸ್ಥಿತಿ. ಆಕೆಯ ದೇಹದ ಉಳಿದ ಅಂಗಗಳು ಕೆಲಸ ಮಾಡುತ್ತಿವೆ. ಹಲವು ಸರ್ಜರಿಗಳ ನಂತರ ಆ ಹೆಣ್ಣು ಮಗಳಿಗೆ ಹೆಣ್ಣು ಮಗು ಜನನವಾಗಿದೆ. ಇದು ನಡೆದಿರೋದು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ.
ಮಾರ್ಚ್ 31ರಂದು ಗಂಡನೊಂದಿಗೆ ಬೈಕ್‍ನಲ್ಲಿ ಬರುವಾಗ ಆಕ್ಸಿಡೆಂಟ್ ಆಗಿತ್ತು. ಹಿಂಬದಿ ಸೀಟಿನಲ್ಲಿದ್ದ ಮಹಿಳೆಯ ತಲೆಗೆ ಗಂಭೀರ ಪೆಟ್ಟು ಬಿದ್ದಿತ್ತು. ಹೆಲ್ಮೆಟ್ ಹಾಕಿಲ್ಲದ ಯುವತಿ ಪ್ರಜ್ಞಾಹೀನ ಸ್ಥಿತಿ ತಲುಪಿದ್ದರು. ಆ ಸಮಯದಲ್ಲಿ ಆಕೆ 40 ದಿನಗಳ ಗರ್ಭಿಣಿಯಾಗಿದ್ದರು. ಆಕೆ ಕಣ್ಣು ಬಿಡುತ್ತಿದ್ದರು. ಆದರೆ ನಮ್ಮ ಯಾವ ಸೂಚನೆಯನ್ನೂ ಫಾಲೋ ಮಾಡುತ್ತಿರಲಿಲ್ಲ ಎಂದಿದ್ದಾರೆ ವೈದ್ಯರು. ಬುಲಾಂದ್‍ಶಹರ್‍ನಲ್ಲಿ ನಡೆದ ಅಪಾಘಾತವಾದ ಮಹಿಳೆಯನ್ನು ಆಸ್ಪತ್ರೆಗೆ ತಂದಾಗ ಇದ್ದ ಸ್ಥಿತಿ ಇದು. ಪರಿಶೀಲನೆ ಮಾಡಿದಾಗ ಹೊಟ್ಟೆಯಲ್ಲಿದ್ದ ಮಗು ಆರೋಗ್ಯವಂತವಾಗಿದೆ ಎಂದು ಗೊತ್ತಾಯ್ತು.
ಒಂದೆಡೆ ಚಿಕಿತ್ಸೆ ನೀಡುತ್ತಲೇ ಮಗುವನ್ನೂ ರಕ್ಷಿಸಬಹುದು. ಆದರೆ ಕುಟುಂಬದವರು ಒಪ್ಪಿದರೆ ಮಾತ್ರ ರಿಸ್ಕ್ ತೆಗೆದುಕೊಳ್ಳುತ್ತೇವೆ ಎಂದರು ಡಾಕ್ಟರ್ಸ್. ಆಕೆಯ ಪತಿ ಒಪ್ಪಿಕೊಂಡ. ಅಂದಹಾಗೆ ಹೆರಿಗೆ ಸಿಸೇರಿಯನ್ ಆಗಿಲ್ಲ. ಮಗು ನಾರ್ಮಲ್ ಡೆಲಿವರಿಯಾಗಿಯೇ ಹುಟ್ಟಿದೆ. ಇದು ಇನ್ನೊಂದು ವಿಸ್ಮಯ.
ವಿಸ್ಮಯಗಳ ಪಟ್ಟಿ ಇಷ್ಟಕ್ಕೇ ಮುಗಿಯುವುದಿಲ್ಲ. ತಾಯಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರೂ ಎದೆ ಹಾಲು ಬರುತ್ತಿದೆ. ಮಗುವಿಗೆ ಎದೆ ಹಾಲನ್ನೇ ಫೀಡ್ ಮಾಡಿಸುತ್ತಿದ್ದಾರಂತೆ. ಈ ನಡುವೆ ತಾಯಿಯ ಮೆದುಳಿನಲ್ಲಿ ಗಂಭೀರ ಪೆಟ್ಟಾಗಿತ್ತು. ಮೆದುಳಿನಲ್ಲಿ ರಕ್ತಸ್ರಾವವಾಗಿ ಹೆಪ್ಪುಗಟ್ಟಿತ್ತು. ಅದನ್ನು ವೈದ್ಯರು ರಿಮೂವ್ ಮಾಡಿದ್ದಾರೆ. ಒಟ್ಟು 5 ಸರ್ಜರಿಗಳಾಗಿವೆಯಂತೆ.



