ಇಡೀ ಜಗತ್ತಿನಲ್ಲಿ ಕೊರೊನಾ ಹೆಚ್ಚು ಕಡಿಮೆ ಸಂಹಾರವಾಗಿದೆ. ಇಡೀ ವಿಶ್ವದ ಬಹುತೇಕ ರಾಷ್ಟ್ರಗಳು ಕೊರೋನಾದಿಂದ ಹೊರಬಂದಿವೆ. ಕೊರೊನಾದಿಂದಾಗಿ ಸುಮಾರು 2 ವರ್ಷ ನರಳಿದ ಎಲ್ಲ ರಾಷ್ಟ್ರಗಳು ಈಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿವೆ. ಕುಸಿದು ಹೋಗಿದ್ದ ಅರ್ಥ ವ್ಯವಸ್ಥೆಯನ್ನು ಸರಿ ಮಾಡಿಕೊಳ್ಳುತ್ತಿವೆ. ಚೆನ್ನಾಗಿದ್ದ ಅರ್ಥ ವ್ಯವಸ್ಥೆ ಹಾಳಾಗಿ ಸುಭಿಕ್ಷ, ಶ್ರೀಮಂತ ರಾಷ್ಟ್ರಗಳೆನ್ನಿಸಿಕೊಂಡಿದ್ದ ರಾಷ್ಟ್ರಗಳು ದಾರಿ ತಪ್ಪಿವೆ. ಅಮೆರಿಕ, ಬ್ರಿಟನ್, ಫ್ರಾನ್ಸ್, ಇಟಲಿಯಂತಾ ರಾಷ್ಟ್ರಗಳಲ್ಲಿ ಆರ್ಥಿಕ ಹಿಂಜರಿ. ಕೊರೊನಾಗೆ ಔಷಧಿಯೂ ಇದೆ. ಆದರೆ ಚೀನಾದಲ್ಲಿ ಮಾತ್ರ ಕೊರೊನಾ ಕಡಿಮೆಯಾಗಿಲ್ಲ.
ಚೀನಾದಲ್ಲಿ ಈಗಲೂ ದಿನವೊಂದಕ್ಕೆ 30 ಸಾವಿರ ಕೊರೊನಾ ಕೇಸುಗಳು ಪತ್ತೆಯಾಗುತ್ತಿವೆ. ಕೊರೊನಾ ಲಕ್ಷಣಗಳಿಲ್ಲದಿದ್ದರೂ ಸೋಂಕು ಮಾತ್ರ ಪತ್ತೆಯಾಗುತ್ತಿದೆ. ವ್ಯಾಕ್ಸಿನ್ ತೆಗೆದುಕೊಂಡಿದ್ದರೂ ಕೊರೊನಾ ಕೇಸ್ ಕಮ್ಮಿಯಾಗಿಲ್ಲ. ಹಂತ ಹಂತವಾಗಿ ಒಂದೊಂದೇ ನಗರಗಳನ್ನು ಲಾಕ್ ಡೌನ್ ಮಾಡುತ್ತಿದೆ ಚೀನಾ. ಈ ಬಾರಿ ಚೀನಾದವರು ಲಾಕ್ ಡೌನ್ ಬದಲಿಗೆ ಝೀರೋ ಕೋವಿಡ್ ಎಂದು ಹೆಸರು ಬದಲಿಸಿ ಹೇಳುತ್ತಿದ್ದಾರಷ್ಟೆ, ಜಾರಿಯಾಗಿರುವುದು ಲಾಕ್ ಡೌನ್.
ಚೀನಾದ ರಾಜಧಾನಿ ಬೀಜಿಂಗ್‍ನಲ್ಲೀಗ ಝೀರೋ ಕೋವಿಡ್ ಸೂತ್ರ ಜಾರಿಯಲ್ಲಿದೆ. ಸೋಂಕಿತರು ಪತ್ತೆಯಾದ ಪ್ರದೇಶಗಳನ್ನು ಸಂಪೂರ್ಣವಾಗಿ ಲಾಕ್ ಮಾಡಲಾಗುತ್ತಿದೆ. ಅಲ್ಲಿಗೆ ಯಾರೂ ಹೋಗುವಂತಿಲ್ಲ. ಯಾರೂ ಬರುವಂತಿಲ್ಲ. ಸತ್ತರೂ ಕೂಡಾ ಹೆಣ ತೆಗೆಯವುದು ಪರಿಸ್ಥಿತಿ ಸರಿ ಹೋದ ನಂತರ ಎನ್ನುವ ಸ್ಥಿತಿ ಇದೆ. ಈ ಮೊದಲು ವುಹಾನ್, ಪೀಕಿಂಗ್ ಸೇರಿದಂತೆ ಹಲವು ನಗರಗಳಲ್ಲಿ ಇಂಥದ್ದೇ ಸೂತ್ರ ಅನುಸರಿಸಲಾಗಿತ್ತು. ಆಗ ಇಂಥಹ ಕಥೆಗಳೇ ಹೊರಬಂದಿದ್ದವು.
ಅಂದಹಾಗೆ ಇವತ್ತಿಗೂ ಜಗತ್ತು ಕೊರೊನಾ ವೈರಸ್ ಹುಟ್ಟಿದ್ದೇ ಚೀನಾದಲ್ಲಿ ಎಂದು ನಂಬುತ್ತದೆ. ಚೀನಾ ಮತ್ತು ವಿಶ್ವಸಂಸ್ಥೆ ಹೊರತುಪಡಿಸಿ ಬೇರೆಲ್ಲ ರಾಷ್ಟ್ರಗಳಲ್ಲಿ ಇಂದಿಗೂ ಅದೇ ಅಭಿಪ್ರಾಯ ಜನಜನಿತವಾಗಿದೆ. ವಿಶ್ವಸಂಸ್ಥೆ ಪ್ರತಿನಿಧಿಗಳೇ ಹೋಗಿ ಬಂದರೂ ಸಮಗ್ರ ವುಹಾನ್ ದರ್ಶನ ಸಾಧ್ಯವಾಗಲಿಲ್ಲ. ಅರ್ಧ ಸತ್ಯ ಮುಚ್ಚಿಟ್ಟು, ಅರ್ಧ ಸುಳ್ಳು ಹೇಳುತ್ತಿದೆ ಚೀನಾ ಎನ್ನುವುದು ಜಗತ್ತಿನ ಹಲವರ ನಂಬಿಕೆ. ಅದಕ್ಕೆ ಪುಷ್ಠಿ ಕೊಡುವಂತೆ ಚೀನಾ ಕೂಡಾ ಅನುಮಾನಗಳನ್ನು ಬಗೆಹರಿಸುವ ಪ್ರಯತ್ನ ಮಾಡಿಲ್ಲ. ನಾನ್ ಹೇಳ್ತಿದ್ದೀನಿ. ನೀವ್ ನಂಬಿ ಅನ್ನೋ ಸ್ಟೈಲಲ್ಲೇ ಮಾತನಾಡುತ್ತಿದೆ.
ಇದರ ಮಧ್ಯೆ ಡಿಸೀಸ್ ಎಕ್ಸ್ ಅನ್ನೋ ವೈರಸ್ ಜನ್ಮ ತಾಳಿದೆ ಎಂಬ ಭಯ ವಿಶ್ವಸಂಸ್ಥೆಯದ್ದು. ಜಗತ್ತಿನ 25 ಪ್ರಖ್ಯಾತ ವಿಜ್ಞಾನಿಗಳು ಸಾವಿರಾರು ವೈರಸ್ ಹಾಗೂ ಬ್ಯಾಕ್ಟೀರಿಯಾಗಳ ಅಧ್ಯಯನ ಮಾಡಿ ಹೊಸ ರೋಗವನ್ನು ಪತ್ತೆ ಮಾಡಿದ್ದಾರೆ. ಸದ್ಯಕ್ಕೆ ಅದಕ್ಕೆ ಡಿಸೀಸ್ ಎಕ್ಸ್ ಎಂಬ ಹೆಸರು ಕೊಡಲಾಗಿದೆ. ಇನ್ನಷ್ಟು ಮಾಹಿತಿಗಳು ಹೊರಬರಬೇಕಿದೆಯಂತೆ. ಸಂಶಗಳು ಸತ್ಯವಾದರೆ ಇದು ಕೊರೊನಾಗಿಂತ ಭಯಂಕರ. ಪ್ಯಾನ್‍ಡೆಮಿಕ್ ಎಂದು ಹೇಳಲಾಗಿದೆ. ಅಂದಹಾಗೆ ಈ ಡಿಸೀಸ್ ಎಕ್ಸ್ ಮೂಲವೂ ಚೀನಾ ಎಂಬುದು ಕಳವಳಕಾರಿ.



