ಚೇಳು ನೋಡೋಕೆ ಭಯಾನಕ. ಪ್ರಾಣಾಪಾಯ ಕಡಿಮೆಯಿದ್ದರೂ ಅದು ಡಿಪೆಂಡ್ ಆಗುವುದು ಅದು ಯಾವ ಚೇಳು ಅನ್ನೋದ್ರ ಮೇಲೆ. ವಿಷಕಾರಿ ಚೇಳು ಒಮ್ಮೆ ಕೊಂಡಿಯೂರಿದರೆ ಸಾವು ಇಣುಕಿ ನೋಡುತ್ತೆ. ಕೆಲವು ಚೇಳುಗಳು ನೋವು ಮಾತ್ರ ಕೊಡುತ್ತವೆ. ಆದರೆ ಕೆಲವು ಚೇಳುಗಳು ಪ್ರಾಣವನ್ನೇ ಹೀರುತ್ತವೆ. ಅಂತಹ ಸಂದರ್ಭದಲ್ಲಿ ಏನು ಮಾಡಬೇಕು?
ಚೇಳು ಕಚ್ಚಿದಾದ ಮೊದಲು ಕಡಿದ ಜಾಗದಲ್ಲಿ ಸಣ್ಣದೊಂದು ಹೋಲ್ ಆಗುತ್ತೆ. ಮುಳ್ಳು ಅಥವಾ ಸೂಜಿಯಿಂದ ಚುಚ್ಚಿದಾಗ ಆಗುವಂತೆ ಸಣ್ಣ.. ಅತೀ ಸಣ್ಣ ರಂಧ್ರದ ಮಾದರಿಯ ಗುರುತು ಕಾಣಿಸುತ್ತೆ. ನಿಧಾವಾಗಿ ಆ ಜಾಗದಲ್ಲಿ ಸಣ್ಣದಾಗಿ ಊತ ಕಾಣಿಸಿಕೊಳ್ಳುತ್ತೆ. ಒಂದು ರೀತಿಯ ವಿಚಿತ್ರ ನವೆ ಅಥವಾ ಉರಿ ಕಾಣಿಸಿಕೊಳ್ಳುತ್ತೆ. ಆ ಸಂದರ್ಭದಲ್ಲಿ ಹಲವರು ಎಂಜಲು ಹಚ್ಚುತ್ತಾರೆ. ಆದರೆ ಪದೇ ಪದೇ ಚೇಳು ಕಚ್ಚಿದ ಜಾಗಕ್ಕೆ ಎಂಜಲು ಹಚ್ಚಿದ ಬೆರಳಿಂದಲೇ ಮತ್ತೆ ಮತ್ತೆ ನಾಲಗೆ ಮುಟ್ಟಿಕೊಳ್ಳೋದೂ ಅಪಾಯಕಾರಿ.
ಮೊದಲು ಮಾಡಬೇಕಾದ ಕೆಲಸ ಆ ಜಾಗವನ್ನು ಕ್ಲೀನ್ ಮಾಡೋದು. ಸೋಪ್ ಅಥವಾ ಡೆಟಾಲ್ ಬಳಸಿ ಶುಚಿ ಮಾಡಿ ಕ್ಲೀನ್ ಆಗಿಡೋದು. ನಂತರ ಆ ಜಾಗಕ್ಕೆ ಐಸ್ ಕ್ಯೂಬ್ ಇಡಬೇಕು. ಐಸ್ ಕ್ಯೂಬ್ ಇಲ್ಲದೇ ಹೋದರೆ ತಣ್ಣೀರಿನಲ್ಲಿ ಒದ್ದೆ ಮಾಡಿದ ಬಟ್ಟೆ ಇಡಬೇಕು.
ಚೇಳು ಕಚ್ಚಿದ ಜಾಗದಿಂದ ಮೂರು ಅಥವಾ ನಾಲ್ಕು ಬೆರಳು ಅಂತರದಲ್ಲಿ ಗಟ್ಟಿಯಾಗಿ ಕಟ್ಟಬೇಕು. ಇದರಿಂದ ವಿಷ ಮೈಗೆ ಏರುವುದಿಲ್ಲ. ಸಿಂಪಲ್ಲಾಗ್ ಹೇಳ್ಬೇಕಂದ್ರೆ ಹಾವು ಕಚ್ಚಿದಾಗ ಮಾಡುವಂತೆಯೇ ಚೇಳು ಕಚ್ಚಿದಾಗಲೂ ಮಾಡಬೇಕು. ಪ್ರತಿ 5 ನಿಮಿಷಕ್ಕೆ ಬಟ್ಟೆ ಚೇಂಜ್ ಮಾಡಬೇಕು.
ತಣ್ಣೀರಿನ ಬಟ್ಟೆ ಅಥವಾ ಐಸ್ಕ್ಯೂಬ್ ಇಟ್ಟಿರುತ್ತೀರಲ್ಲ. ಆ ಜಾಗಕ್ಕೆ ನಂತರ ಇಂಗಿನ ಪುಡಿಯನ್ನು ಹಾಕಬೇಕು. ಇದರಿಂದ ಉರಿ ಕಡಿಮೆಯಾಗುತ್ತಾ ಹೋಗುತ್ತೆ.
ಹೊರಗಿದ್ದಾಗ ಅಥವಾ ತೋಟ, ಹೊಲಗಳಲ್ಲಿದ್ದಾಗ ಹೀಗಾದರೆ ಮಾವಿನ ಎಲೆ ಅಥವಾ ಆಲದ ಎಲೆಯನ್ನು ಜಜ್ಜಿ ಆ ಎಲೆಯ ರಸ ಹಚ್ಚುವುದಿರಿಂದಲೂ ಚೇಳು ಕಚ್ಚಿದ ಉರಿ ಕಡಿಮೆಯಾಗುತ್ತದೆ.
ದೇಹಕ್ಕೆ ಬಿಸಿ ಹಾಲಿಗೆ ಅರಿಶಿನ ಹಾಕಿ ಕುಡಿದರೆ ಚೇಳಿನ ವಿಷದ ನಂಜಿನ ತೀವ್ರತೆ ದೇಹಕ್ಕೆ ಏರದಂತೆ ತಡೆಯಬಹುದು.
ಇವೆಲ್ಲವೂ ಪ್ರಾಥಮಿಕ ಚಿಕಿತ್ಸೆಯ ಸಲಹೆಗಳೇ ಹೊರತು ಮತ್ತೇನಲ್ಲ. ಚೇಳು ವಿಷಕಾರಿಯಾಗಿದ್ದರೆ..
ಚೇಳು ಕಚ್ಚಿದ ಜಾಗ ಸ್ಪರ್ಶಜ್ಞಾನ ಕಳೆದುಕೊಳ್ಳುತ್ತೆ. ವಾಂತಿಯಾಗುತ್ತೆ ಅಥವಾ ವಾಂತಿಯಾಗುವಂತೆ ಫೀಲ್ ಆಗುತ್ತೆ. ಕಣ್ಣು ಮಂಜು ಮಂಜಾಗೋಕೆ ಶುರುವಾಗುತ್ತೆ. ಉಸಿರಾಟ ಕಷ್ಟವಾಗಿ ಏದುಸಿರು ಬಿಡೋಕೆ ಶುರುವಾಗುತ್ತೆ. ಮೂಗಿನ ಜೊತೆ ಬಾಯಿಯಲ್ಲೂ ಉಸಿರಾಡುವ ಪರಿಸ್ಥಿತಿ ಸೃಷ್ಟಿಯಾಗುತ್ತೆ. ಇದರಿಂದ ಸಹಜವಾಗಿಯೇ ಎದೆಬಡಿತ ಜೋರಾಗುತ್ತೆ. ಆಗ ತಡಮಾಡಲೇಬೇಡಿ. ಇವುಗಳಲ್ಲಿ ಯಾವುದೇ ಒಂದು ಸೂಚನೆ ಕಂಡರೂ ಕಚ್ಚಿರುವ ಚೇಳು ವಿಷಕಾರಿ ಎಂದರ್ಥ. ತಕ್ಷಣ ವೈದ್ಯರನ್ನು ಭೇಟಿ ಮಾಡಿ.



