ನನ್ನವಳು ನನ್ನೆದೆಯ ಹೊನ್ನಾಡನಾಳುವಳು
ಬೆಳಗುಗೆನ್ನೆ ಚೆನ್ನೆ ನನ್ನ ಮಡದಿ
ಬೆಳಗುಗೆನ್ನೆ ಚೆನ್ನೆ ನನ್ನ ಮಡದಿ
ಹೊಳೆಯ ಸುಳಿಗಳಿಗಿಂತ ಆಳಗಣ್ಣಿನ ಚೆಲುವು
ಅವಳೊಮ್ಮೆ ಹೆರಳ ಕೆದರಿ ಕಪ್ಪುಗುರುಳನ್ನು
ಬೆನ್ನ ಮೇಲೆಲ್ಲ ಹರಡಿದರೆ…
ದೂರದಲಿ, ಗಿರಿಯ ಮೇಲೆ ಇಳಿದಂತೆ ಇರುಳ ಮಾಲೆ
ಇಳಿದಂತೆ ಇರುಳ ಮಾಲೆ.
ಕೆ.ಎಸ್.ನರಸಿಂಹಸ್ವಾಮಿಯವರ ಈ ಪದ್ಯ ಓದುವ ತುಂಡುಗೂದಲಿನ ಚೆಲುವೆಯರೆಲ್ಲ ನಮಗ್ಯಾಕೆ ಈ ರೀತಿ ಇರಲ್ಲ ಎಂದುಕೊಂಡರೆ ತಪ್ಪೆನಿಲ್ಲ. ಈ ಹಿಂದೆ ಹುಡುಗಿಯರ ಜಡೆಗಳೆಲ್ಲ ನೆಲ ಮುಟ್ಟುತ್ತಿತ್ತು. ಈಗ ಉದುರುವ ಕೂದಲುಗಳ ರಾಶಿ ನೆಲ ಮುಟ್ಟುತ್ತಿದೆ. ಆದರೆ ಈ ಭಯವನ್ನೆಲ್ಲ ಮೆಹಂದಿಯಿಂದ ಹೋಗಲಾಡಿಸಬಹುದು.
ಮೆಹಂದಿಯನ್ನು ಕೂದಲಿಗೆ ಹಚ್ಚುವುದರಿಂದ ಹಲವು ಸಮಸ್ಯೆಗಳಿಗೆ ಗುಡ್ ಬೈ ಹೇಳಿ ಸೌಂದರ್ಯದ ಒಡತಿಯಾರಾಗಬಹುದು. ಕೂದಲಿನ ಸಣ್ಣ ಪುಟ್ಟ ಸಮಸ್ಯೆಗಳಿಗೆ ಮೆಹಂದಿಯೇ ಮದ್ದು. ಮೆಹಂದಿ ಕೈಗೆ ಹಚ್ಚಿದರೆ ಹೇಗೆ ಕೈ ಅಂದವನ್ನು ಹೆಚ್ಚಿಸುತ್ತದೆಯೋ ಹಾಗೆಯೇ ಕೂದಲಿಗೂ ಹಚ್ಚಿದರೆ ಕೂದಲಿನ ಅಂದ ಹೆಚ್ಚುತ್ತದೆ. ಆರೋಗ್ಯಕರವಾಗಿಯೂ ಇರುತ್ತದೆ. ಮೆಹಂದಿಯ ಮೂಲಕ ಕೂದಲ ಆರೈಕೆ ಮಾಡಿದರೆ ಕೂದಲು ದಟ್ಟವಾಗಿ ರೇಷ್ಮೆ ಹೊಳಪನ್ನೂ ಪಡೆಯುತ್ತದೆ. ಡ್ಯಾಂಡ್ರಫ್, ಒಣನೆತ್ತಿಯಂತಹ ಸಮಸ್ಯೆಗಳೂ ಇರುವುದಿಲ್ಲ.
ಮೆಹಂದಿ ಹಚ್ಚಿ ಸಿಲ್ಕಿ ಸಿಲ್ಕಿ ಕೂದಲು ನಿಮ್ಮದಾಗಿಸಿಕೊಳ್ಳಿ
ಕೂದಲು ಸ್ಮೂತ್ ಆಗಿರಲು ಹಲವರು ಶ್ಯಾಂಪು ಬಳಸಿದ ನಂತರ ಕಂಡೀಷನರ್ ಬಳಸುತ್ತಾರೆ. ಅದರ ಬದಲು ಮೆಹಂದಿ ಜೊತೆ ಮೊಟ್ಟೆಯ ಬಿಳಿಭಾಗ ಸೇರಿಸಿ ಕೂದಲಿಗೆ ಹಚ್ಚುವುದರಿಂದ ಕೂದಲು ಸಿಲ್ಕಿ ಸಿಲ್ಕಿಯಾಗಿ ಕಂಡೀಷನಿಂಗ್ ಆಗಿರುತ್ತದೆ. ಕೂದಲಿಗೆ ಹೊಳಪನ್ನೂ ನೀಡುತ್ತದೆ. ಯಾವುದೇ ಅಡ್ಡಪರಿಣಾಮ ಇರುವುದಿಲ್ಲ.
ಡ್ಯಾಂಡ್ರಫ್ ಓಡಿಸೋಕೂ ಮೆಹಂದಿ
ಕೂದಲಿಗೆ ಮೆಹಂದಿ ಹಚ್ಚುವುದರಿಂದ ನಿಮ್ಮ ನೆತ್ತಿಯಿಂದ ಕೊಳಕನ್ನು ತೆಗೆಯಬಹುದು. ಅಷ್ಟಾದರೆ ಸಾಕು, ಜಿಡ್ಡೂ ಔಟ್. ಡ್ಯಾಂಡ್ರಫ್ ಕೂಡಾ ಔಟ್. ನಿಯಮಿತವಾಗಿ ಪ್ರತಿ ತಿಂಗಳು ಹಚ್ಚುವುದರಿಂದ ಡ್ಯಾಂಡ್ರಫ್ ಸಮಸ್ಯೆ ಮತ್ತೆ ನಿಮ್ಮನ್ನು ಕಾಡುವುದಿಲ್ಲ.

ಕೂದಲು ಒಡೆಯುವುದಕ್ಕೂ ಮೆಹಂದಿ ಸೀತಾ ಬಾಣ
ರಾಮ ಬಾಣ ಗುರಿ ತಪ್ಪುತ್ತಿರಲಿಲ್ಲವಂತೆ. ಆದರೆ ಇದು ಹೆಣ್ಣು ಮಕ್ಕಳ ಕೂದಲ ವಿಷಯವಾದ್ದರಿಂದ ನಾವಿದನ್ನು ಸೀತಾಬಾಣ ಎನ್ನುತ್ತೇವೆ. ಕೆಲವರಲ್ಲಿ ಕೂದಲು ಕವಲೊಡೆದಿರುವುದನ್ನು ಗಮನಿಸಿರುತ್ತೀರಿ. ಕೂದಲಿನ ತುದಿ ಇಬ್ಬಾಗವಾಗಿರುತ್ತದೆ. ಕೂದಲಿನ ಅನಾರೋಗ್ಯಕ್ಕೆ ಇದಕ್ಕಿಂದ ದೊಡ್ಡ ಸಾಕ್ಷಿ ಬೇಕಿಲ್ಲ. ಈ ರೀತಿ ಕವಲೊಡೆದ ಕೂದಲನ್ನು ಹಾಗೆಯೇ ಬಿಡುವ ಬದಲು ಅಥವಾ ಕತ್ತರಿಸುವ ಬದಲು ಮೆಹಂದಿ ಹಚ್ಚಿದರೆ ಸಾಕು. ಒಂದೆರಡುಮೂರು ಬಾರಿ ಹಚ್ಚುವಷ್ಟರಲ್ಲಿ ಸರಿ ಹೋಗಿರುತ್ತೆ. ರೆಗ್ಯುಲರ್ ಆಗಿ ಹಚ್ಚುತ್ತಿದ್ದರೆ ಸಮಸ್ಯೆಯೇ ಇರಲ್ಲ.


ಬಹುತೇಕರು ತಮ್ಮ ಬಿಳಿ ಕೂದಲನ್ನು ಕಪ್ಪು ಹೇರ್ ಡೈ ಮಾಡಲು ಹೋಗಿ ಕೂದಲೆಲ್ಲಾ ಸಂಪೂರ್ಣ ಬಿಳಿಯಾಗಿರುವುದನ್ನು ನೋಡಿರುತ್ತೀರಿ. ಅಲ್ಲದೆ ಆ ಕಪ್ಪು ಡೈಯನ್ನೂ ಸರಿಯಾಗಿ ಹಚ್ಚದೆ ಅದೇ ಕೂದಲು ಕೆಂಚು ಕೆಂಚಾಗಿರುವುದನ್ನೂ ನೋಡಿರುತ್ತೀರಿ. ಆದರೆ ಮೆಹಂದಿ ಹಚ್ಚಿದರೆ ಕೂದಲು ಕಲರಿಂಗ್ ಮಾಡಿಸಿದಂತೆ ಇರುತ್ತದೆ. ಬಿಳಿ ಕೂದಲು ಮರೆಯಾಗುತ್ತದೆ. ಕೂದಲಿಗೆ ಯಾವುದೇ ಹಾನಿಯಿಲ್ಲ.


ತಲೆ ತುರಿಕೆಗೂ ಒಳ್ಳೆಯದು
ಬೇಸಿಗೆಯಲ್ಲಿ ದೇಹ ಮಾತ್ರವಲ್ಲ ತಲೆ ಕೂಡಾ ಬೆವರುತ್ತದೆ. ತಲೆಕೂದಲಿನ ಒಳಗೆಲ್ಲಾ ತುರಿಕೆ. ಇದು ಡ್ಯಾಂಡ್ರಫ್ನ ಕಾರಣದಿಂದಲೂ ಆಗಿರಬಹುದು. ಮೆಹಂದಿಯಲ್ಲಿರುವ ಆಂಟಿ ಫಂಗಲ್ ಹಾಗೂ ಆಂಟಿ ಮೈಕ್ರೋಬಯಲ್ ಗುಣವು ತಲೆಯನ್ನು ಚರ್ಮವನ್ನು ಕೂಲ್ ಆಗಿರಿಸುತ್ತದೆ.


ಮೆಹಂದಿ ಪುಡಿಯನ್ನು ನೀವು ಸಕ್ಕರೆ ಹಾಕದ ಬ್ಲ್ಯಾಕ್ ಟೀಯಲ್ಲಿ ಮಿಕ್ಸ್ ಮಾಡಿ. ಚೆನ್ನಾಗಿ ಪೇಸ್ಟ್ ಮಾಡಿ ಇಡಿ. ಕೂದಲು ಸಿಲ್ಕೀಯಾಗಬೇಕೆಂದಿದ್ದರೆ ನೀವು ಅದಕ್ಕೆ ಮೊಟ್ಟೆಯ ಬಿಳಿಭಾಗ ಹಾಕಿ. ಮೊಟ್ಟೆ ವಾಸನೆ ಬೇಡ ಎನ್ನುವವರು ಮೊಸರನ್ನೂ ಹಾಕಬಹುದು. ಮೆಂತ್ಯವನ್ನು ನೆನೆಸಿ ಪೇಸ್ಟ್ ಮಾಡಿಯೂ ಮಿಕ್ಸ್ ಮಾಡಬಹುದು. ಜಾಯಿ ಕಾಯಿ, ಜೇಷ್ಟ ಮಧುವನ್ನೂ ಮಿಶ್ರಣ ಮಾಡಿ ಹಚ್ಚಬಹುದು. ಕೂದಲಿಗೆ ಹಚ್ಚಿ, ನೆತ್ತಿಗೂ ಹಚ್ಚಿ, ಕೂದಲಿನ ಬುಡದಿಂದ ತುದಿಯವರೆಗೆ ಹಚ್ಚಿ. ಒಂದೆರಡು ಗಂಟೆ ಬಿಟ್ಟು ಸ್ನಾನ ಮಾಡಿ. ಶ್ಯಾಂಪೂ ಬಳಸಬೇಡಿ.
ಮರುದಿನ ಲೈಟ್ ಆಗಿ ಕೊಬ್ಬರಿ ಎಣ್ಣೆ ಹಚ್ಚಿ. ಲುಕ್ಕಿಂಗ್ ಬೊಂಬಾಟ್.



