ಊಟ ಬಲ್ಲವನಿಗೆ ರೋಗವಿಲ್ಲ ಎನ್ನುವುದು ಒಂದು ಗಾದೆ.
ಒಂದೊಂತ್ತುಂಡವ ಯೋಗಿ.. ಎರಡೊತ್ತುಂಡವ ಭೋಗಿ.. ಮೂರ್ ಹೊತ್ತುಂಡವನ್ನ ಹೊತ್ಕೊಂಡ್ ಹೋಗಿ ಅನ್ನೋದೂ ಗಾದೆಯೇ..
ಊಟಕ್ಕೆ ಸಂಬಂಧಪಟ್ಟಂತೆ ಇಂತಹ ಗಾದೆಗಳಿಗೆ ಲೆಕ್ಕವಿಲ್ಲ. ಊಟದ ಸೆಂಟ್ರಲ್ ಗವರ್ನಮೆಂಟ್ ಯಾವುದು ಅಡುಗೆ ಮನೆ ಅಲ್ವಾ? ಆ ಅಡುಗೆ ಮನೆಯೇ ಒಂದು ಆಯುರ್ವೇದ ಮೆಡಿಕಲ್ ಸ್ಟೋರ್ ಅನ್ನೋ ವಿಷಯ ಗೊತ್ತಿದೆಯಾ? ಹೌದು.. ನಮ್ಮ ಅಡುಗೆ ಮನೆಯಲ್ಲಿ ನಾವು ದಿನ ನಿತ್ಯ ಬಳಸೋ ಪದಾರ್ಥಗಳಲ್ಲಿಯೇ ಹಲವು ಔಷಧೀಯ ಗುಣಗಳಿವೆ.
ಮೆಂತ್ಯ :
ಮೆಂತ್ಯ ಕಾಳು ಇದ್ಯಲ್ಲ. ಇದನ್ನು ನೀರಿನಲ್ಲಿ ನೆನಸಿ ಆ ನೀರನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುತ್ತಾ ಹೋಗಿ.. ತೂಕ ಡೌನ್ ಆಗುತ್ತಾ ಬರುತ್ತೆ. ಅಥವಾ ಮೆಂತ್ಯವನ್ನು ಪುಡಿ ಮಾಡಿಟ್ಟುಕೊಂಡು ಉಗುರು ಬೆಚ್ಚಗಿರೋ ನೀರಿನಲ್ಲಿ ಕುಡಿಯಿರಿ. ಆನಂತರ ಕನಿಷ್ಠ ಒಂದು ಗಂಟೆ ನೀವು ಏನನ್ನೂ ತಿನ್ನಬಾರದು ಮತ್ತು ಕುಡಿಯಬಾರದು. ಅಷ್ಟೆ.
ಕೊತ್ತಂಬರಿ ವಾಟರ್ : ಕೊತ್ತಂಬರಿ ಬೀಜ ಅದೇ ರೀ ಧನಿಯಾ ಬೀಜ. ಸಾಂಬಾರು ಪುಡಿಗೆ ಬಳಸುತ್ತೇವಲ್ಲ.. ಅವೇ.. ಆ ಬೀಜಗಳನ್ನ ನೀರಿನಲ್ಲಿ ನೆನಸಿ ಕೊತ್ತಂಬರಿ ನೀರು ಕುಡಿಯುತ್ತಾ ಹೋಗಿ. ಬೆಳಗ್ಗೆ ಹೊತ್ತೇ ಕುಡೀರಿ. ಅಯ್ಯೋ… ರಾತ್ರಿ ನೆನಸಿ ಇಡೋದು ಮರೆತೆ ಅಂದ್ರಾ.. ಡೋಂಟ್ ವರಿ.. ಒಂದಿಷ್ಟು ನೀರನ್ನು ಒಲೆಯ ಮೇಲಿಟ್ಟು ಕುದಿಸಿ. ಕೊತ್ತಂಬರಿ ಬೀಜ ಹಾಕಿ. ಟೀ ಪೌಡರ್ ರಸ ಬಿಟ್ಟುಕೊಳ್ಳುವಂತೆ ಕೊತ್ತಂಬರಿ ಬೀಜವೂ ಬಿಡುತ್ತೆ. ಆ ನೀರು ಕುಡಿಯಿರಿ. ಗ್ಯಾಸ್ಟ್ರಿಕ್ಟ್, ಎದೆಯುರಿ, ಬಾಯಿಹುಣ್ಣು.. ಎಲ್ಲ ಗಾಯಬ್.
ಕರಿಮೆಣಸು : ದನ್ನು ಬಾಯಲ್ಲಿ ಹಾಗೆಯೇ ಹಾಕಿಕೊಂಡು ಅಗೆಯಿರಿ ಅಥವಾ ಕಷ್ಟ ಎನಿಸಿದರೆ ಟೀ ರೀತಿ ಮಾಡಿಕೊಂಡು ಕುಡಿಯಿರಿ. ಹೊಟ್ಟೆಯ ಸುತ್ತಲಿನ ಕೊಬ್ಬು ಕರಗಿಸೋ ತಾಕತ್ತು ಕರಿ ಮೆಣಸಿಗೆ ಇದೆ.

ಅವಲಕ್ಕಿ ಪೋಹಾ : ಮಲೆನಾಡು, ಕರಾವಳಿ ಜನರಿಗೆ ಅವಲಕ್ಕಿ ಪೋಹಾ ಎಂದರೆ ಒಂಥರಾ ಲವ್ವು. ಆದರೆ ಈ ಪೋಹಾದಿಂದಾಗಿಯೇ ಅವರು ಸ್ಲಿಮ್ ಆಗಿರ್ತಾರೆ ಅಂದ್ರೆ ನಂಬ್ತೀರಾ.. ಇದರಲ್ಲಿ ಗ್ಲುಟನ್ ಅಂಶ ಇರಲ್ಲ. ಹೀಗಾಗಿ ತಿಂದ ಮೇಲೆ ಹೊಟ್ಟೆ ಉಬ್ಬುವ ಅಥವಾ ಮಲಬದ್ಧತೆಯಾಗುವ ಆತಂಕ ಇಲ್ಲ. ಈಸಿಯಾಗಿ ಡೈಜೇಷನ್ ಆಗುತ್ತದೆ. ಹೀಗಾಗಿ ಸ್ಲಿಮ್ ಆಗೋಕೆ ಇದು ಒಳ್ಳೆ ಮೆಡಿಸಿನ್.
ಅರಿಶಿಣ : ಅರಿಶಿನ ಬೆರೆಸಿದ ಹಾಲು ಕೂಡಾ ಆರೋಗ್ಯಕ್ಕೆ ಒಳ್ಳೆಯದು. ಇದು ದೇಹದಲ್ಲಿರೋ ಕೆಟ್ಟ ಅಂಶಗಳನ್ನೆಲ್ಲ ಸೋಸಿ ತೆಗೆಯುತ್ತೆ. ದೇಹಕ್ಕೆ ಶಕ್ತಿಯನ್ನೂ ಕೊಡುತ್ತೆ. ಮಿಲನ ಮಹೋತ್ಸವದ ಆಟಕ್ಕೂ ಹೇಳಿ ಮಾಡಿಸಿದ್ದು.
ಹಂಗಂತ ನಾನು ಚೆನ್ನಾಗಿ ಇವನ್ನೆಲ್ಲ ಮಾಡ್ತಿದ್ದೇನೆ ಎಂದು ಹೋಟೆಲ್ಲು, ಚಾಟ್ಸ್ಗೆ ಹೋಗಿ ಕಂಡಾಪಟ್ಟೆ ತಿಂದರೆ, ಪಿಜ್ಜಾ, ಬರ್ಗರುಗಳನ್ನು ಕುತ್ತಿಗೆವರೆಗೂ ಮೆದ್ದರೆ ಅಪ್ಪಿತಪ್ಪಿಯೂ ನೀವು ಸಣ್ಣಗಾಗಲ್ಲ. ಭಜ್ಜಿಬೋಂಡಾ, ಪಾನಿಪೂರಿ, ಪಿಜ್ಜಾ, ಬರ್ಗರ್, ಬ್ರೆಡ್ಡು, ಕೇಕು.. ಎಲ್ಲವನ್ನೂ ದೂರ ಇಡ್ಲೇಬೇಕು.
ಸಮಯಕ್ಕೆ ಸರಿಯಾಗಿ ತಿಂಡಿ, ಊಟ ಇರಬೇಕು. ಮೊಳಕೆ ಕಾಳು ಊಟ ತಿಂಡಿಯಲ್ಲಿ ಖಾಯಮ್ಮಾಗಿರೋ ಹಾಗೆ ನೋಡಿಕೊಳ್ಳಿ. ಊಟದಲ್ಲಿ ನೀರು ಹೆಚ್ಚಾಗಿ ಕುಡೀರಿ.



