ಚೀನಾದಲ್ಲಿ ಕೊರೊನಾ ಮತ್ತೊಮ್ಮೆ ತಾಂಡವ ಮಾಡಲು ಶುರುವಾಗುತ್ತಿದ್ದಂತೆಯೇ ಸರ್ಕಾರ ಮತ್ತೊಮ್ಮೆ ಕೊರೊನಾ ದಂಡಾಸ್ತ್ರ ಪ್ರಯೋಗ ಮಾಡಿದೆ. ಹೊಸ ವರ್ಷಾಚರಣೆಗೆ, ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ಕೆಲವು ನಿರ್ಬಂಧ ವಿಧಿಸಿದೆ. ಥಿಯೇಟರುಗಳಲ್ಲಿ ಮಾಸ್ಕ್ ಕಡ್ಡಾಯ ಮಾಡಿದೆ. ಹೊಸ ವರ್ಷದ ಸಂಭ್ರಮಕ್ಕೆ ಸ್ವಲ್ಪ ಕತ್ತರಿ ಹಾಕಿದೆ.
ವಿದೇಶಗಳಿಂದ ಬಂದವರು ಕೋವಿಡ್ ಪರೀಕ್ಷೆ ಮಾಡಿಸಬೇಕು. ಪರೀಕ್ಷೆ ಮಾಡಿಸಿಕೊಂಡವರು ಒಂದು ವಾರ ಕ್ವಾರಂಟೈನ್ ಕಡ್ಡಾಯವಾಗಿ ಮಾಡಬೇಕು. ಸೋಂಕು ಕಂಡು ಬಂದರೆ ಆಸ್ಪತ್ರೆಗೆ ಸೇರಬೇಕು.

ಎಂದಿನಂತೆ ಚಿತ್ರಮಂದಿರಗಳೇ ಮೊದಲ ಟಾರ್ಗೆಟ್. ಇನ್ನು ಮುಂದೆ ಥಿಯೇಟರುಗಳಲ್ಲಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಥಿಯೇಟರಿಗೆ ಹೋಗುವವರು ಮಾಸ್ಕ್ ಧರಿಸಲೇಬೇಕು. ಇದು ಕಡ್ಡಾಯ. ಮಾಸ್ಕ್ ಇಲ್ಲದವರನ್ನು ಥಿಯೇಟರ್ ಒಳಗೆ ಬಿಡಬಾರದು ಎಂದು ಖುದ್ದು ಆರ್.ಅಶೋಕ್ ಹೇಳಿದ್ದಾರೆ. ಆರೋಗ್ಯ ಸಚಿವ ಸುಧಾಕರ್ ಅವರದ್ದೂ ಕೂಡಾ ಇದೇ ಹೇಳಿಕೆ.
ಇನ್ನು ಬಾರ್, ಪಬ್ಬುಗಳಲ್ಲಿ ಎಷ್ಟು ಜನಕ್ಕೆ ಅವಕಾಶವಿದೆಯೋ.. ಅಷ್ಟೇ ಜನರನ್ನು ಸೇರಿಸಬೇಕು. ಸಭೆ, ಸಮಾರಂಭಗಳಲ್ಲೂ ಅಷ್ಟೆ. ಬಾರುಗಳಲ್ಲಿ ಸರ್ವ್ ಮಾಡುವವರಿಗೆ ಎರಡು ಡೋಸ್ ವ್ಯಾಕ್ಸಿನೇಷನ್ ಆಗಿರಬೇಕು. ಹೊಸ ವರ್ಷದ ಪಾರ್ಟಿಗಳು ಮಧ್ಯರಾತ್ರಿ 1 ಗಂಟೆಗೆ ಬಂದ್ ಆಗಬೇಕು.

2022ರಲ್ಲಿ ಕನ್ನಡ ಚಿತ್ರರಂಗ ಭರ್ಜರಿ ಹಿಟ್, ಸಕ್ಸಸ್ ಕಂಡಿದೆ. ಇದಕ್ಕೆ ಮತ್ತೊಮ್ಮೆ ಕೊಡಲಿ ಪೆಟ್ಟು ಬೀಳುತ್ತಾ ಎಂಬ ಆತಂಕ ಚಿತ್ರೋದ್ಯಮಿಗಳದ್ದು. ಏಕೆಂದರೆ ಸದ್ಯಕ್ಕೆ ಜಾರಿಯಾಗಿರುವುದು ಮಾಸ್ಕ್ ನಿಯಮ ಮಾತ್ರ. ಸ್ಯಾನಿಟೈಸರ್, ಅಂತರ ಕಾಪಾಡಿಕೊಳ್ಳುವ, 50:50 ರೂಲ್ಸ್, ಥಿಯೇಟರ್ ತಿಂಡಿ ತಿನಿಸು.. ಇಂತಹ ರೂಲ್ಸ್ ಜಾರಿಯಾಗಿಲ್ಲ. ಹೀಗಾಗಿ ಕೇವಲ ಮಾಸ್ಕ್ ನಿಯಮ ಜಾರಿಯಾಗಿರುವ ಕಾರಣ ಥಿಯೇಟರಿನವರೂ ಸಕಾರಾತ್ಮಕವಾಗಿಯೇ ಸ್ಪಂದಿಸಿದ್ದಾರೆ.
ಅಂದಹಾಗೆ ಥಿಯೇಟರ್ ಸಿಬ್ಬಂದಿಗೆ ಎರಡು ಡೋಸ್ ಲಸಿಕೆ ಕಡ್ಡಾಯವಾಗಿ ಆಗಿರಬೇಕು. ಆದರೆ ಸದ್ಯಕ್ಕೆ ದಂಡ ವಿಧಿಸುವ ಯಾವುದೇ ಕ್ರಮ, ಆಲೋಚನೆ ಸದ್ಯಕ್ಕಿಲ್ಲ ಎಂದಿದ್ದಾರೆ ಕಂದಾಯ ಸಚಿವ ಆರ್.ಅಶೋಕ್. ನಮ್ಮಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿದೆ. ಆತಂಕಕ್ಕೊಳಗಾಗಬೇಡಿ. ಇದು ಎಚ್ಚರಿಕೆ ಮಾತ್ರ ಎಂಬ ರೀತಿ ಭರವಸೆ ನೀಡಿರುವುದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್.



