ಕಡಿಮೆ ರಕ್ತದೊತ್ತಡ ಅಥವಾ ಅಧಿಕ ರಕ್ತದೊತ್ತಡ ಯಾವುದೇ ಆಗಲಿ, ಯಾವತ್ತಿಗೂ ಡಂಜರ್. ಅವು ಹೃದಯ, ಮೆದುಳು ಮತ್ತು ಇತರ ಪ್ರಮುಖ ಅಂಗಗಳಿಗೆ ರಕ್ತದ ಹರಿವನ್ನು ಡಿಸ್ಟರ್ಬ್ ಮಾಡುತ್ತವೆ. ಬ್ಲಡ್ ಸರ್ಕ್ಯುಲೇಷನ್ ಏರುಪೇರಾದರೆ ಅಪಾಯ ಕಟ್ಟಿಟ್ಟ ಬುತ್ತಿ.
ಮಲಗಿರುವ ಅಥವಾ ಕುಳಿತುಕೊಳ್ಳುವ ಸ್ಥಾನದಿಂದ ತಕ್ಷಣ ಎದ್ದಾಗ ಪ್ರಾಬ್ಲಂ ಹೆಚ್ಚು. ರಕ್ತದೊತ್ತಡದಲ್ಲಿ ಹಠಾತ್ ಏರುಪೇರಾಗುವ ಅಪಾಯವಿದ್ದು, ಸಾವಿನ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಇದನ್ನು ಭಂಗಿಯ ಹೈಪೋ-ಟೆನ್ಷನ್ ಅಂತಾರೆ. ಸಡನ್ ತಲೆ ಸುತ್ತು ಬಂದರೂ ಹುಷಾರಾಗಿರಿ.
ಆದಷ್ಟು ಜೀವನಶೈಲಿ, ಮನೆಮದ್ದಿನಿಂದಲೇ ಕಡಿಮೆ ಮಾಡಿಕೊಳ್ಳಬಹುದು. ಇಲ್ಲದೇ ಹೋದರೆ ಜೇಬು ತೂತಾಗುತ್ತಲೇ ಇರುತ್ತದೆ. ಲೈಫ್ ಸ್ಟೈಲ್ ಬದಲಿಸಿಕೊಂಡರೆ ಜೇಬಿನ ತೂತನ್ನು ಚಿಕ್ಕದು ಮಾಡಬಹುದು.
ಹಸಿವಾದ ತಕ್ಷಣ ಹೊಟ್ಟೆ ತುಂಬಿಸುವುದು
ಲೋ ಬಿಪಿ ಇರುವವರು ಮುಖ್ಯವಾಗಿ ಮಾಡಬೇಕಾದ ಕೆಲಸ. ಇವರು ಆಗಾಗ ತಿನ್ನುವ ಅಭ್ಯಾಸ ಮಾಡಿಕೊಳ್ಳಬೇಕು. ಹೊಟ್ಟೆ ಖಾಲಿ ಇರಬಾರದು. ಹಾಗಂತ ಹೊಟ್ಟೆ ಉಬ್ಬುವಷ್ಟು ತುಂಬಿಕೊಂಡೂ ಇರಬಾರದು. ಆಗಾಗ್ಗೆ ತಿನ್ನೋದ್ರಿಂದ ದೇಹದಲ್ಲಿ ಶಕ್ತಿಯ ಕೊರತೆಯಾಗದು. ದೇಹದಲ್ಲಿ ರಕ್ತಸಂಚಾರ ಕೂಡ ಸರಿಯಾಗಿರುತ್ತದೆ.
ಹೀಗಾಗಿ ಬೆಳಗ್ಗೆ ತಿಂಡಿ ಮಧ್ಯಾಹ್ನದ ಊಟದ ನಡುವೆ ಸ್ವಲ್ಪ ಸ್ವಲ್ಪ ಆಹಾರ ತೆಗೆದುಕೊಳ್ಳಿ. ಆದಷ್ಟು ಪೌಷ್ಟಿಕ ಆಹಾರಗಳಾದ ಹಣ್ಣು, ಮೊಳಕೆ ಕಾಳು ಇವುಗಳನ್ನು ಸೇವಿಸಿ. ಇವು ದೇಹಕ್ಕೆ ಬೇಕಾದ ಸತ್ವವನ್ನೂ ಒದಗಿಸುತ್ತವೆ.

ಉಪ್ಪು ಜಾಸ್ತಿ ತಿನ್ನುವ ತಪ್ಪು ಮಾಡಬೇಡಿ
ಅತಿಯಾದ ಉಪ್ಪಿನ ಸೇವನೆ ಒಳ್ಳೆಯದಲ್ಲ. ದೇಹಕ್ಕೆ ಎಷ್ಟು ಬೇಕೋ ಅಷ್ಟು ತಿನ್ನಿ. ಕೆಲವರಿಗೆ ಉಪ್ಪು ಹೆಚ್ಚು ತಿನ್ನುವ ಚಟ ಇರುತ್ತೆ. ಸೀಬೆ ಕಾಯಿ, ಕಲ್ಲಂಗಡಿಯಂತ ಹಣ್ಣಿಗೆ ಉಪ್ಪನ್ನು ಮೈತುಂಬಾ ಸವರಿ ತಿನ್ನುವ ಅಭ್ಯಾಸ ಇರುತ್ತೆ. ಅದಕ್ಕೆ ಕಂಪ್ಲೀಟ್ ಬ್ರೇಕ್ ಹಾಕಿ. ಬೇ ನೀವು ಪ್ರತಿದಿನ ವ್ಯಾಯಾಮ ಮಾಡುತ್ತಿದ್ದರೆ, ಲಿಂಬು ರಸಕ್ಕೆ ನೀರು ಚಿಟಿಕೆ ಉಪ್ಪು ಸೇರಿಸಿ ಪಾನೀಯವನ್ನು ಸೇವಿಸಿ. ಇದರಿಂದಾಗಿ ಲೋ ಬಿಪಿಯ ಅಪಾಯದಿಂದ ದೂರವಿರಬಹುದು. ಉಪ್ಪು ಅಮೃತ. ಅತಿಯಾದರೆ ಅಮೃತವೇ ವಿಷವಾಗುತ್ತಂತೆ. ಉಪ್ಪಾಗಲ್ವಾ?
ಕ್ಯಾರೆಟ್..ಬೀಟ್ರೂಟ್..ಫುಲ್ ಫಿಟ್
ಜೇನುತುಪ್ಪದೊಂದಿಗೆ ಒಂದು ಲೋಟ ತಾಜಾ ಕ್ಯಾರೆಟ್ ಜ್ಯೂಸ್ ಸೇವನೆ ಮಾಡುವುದರಿಂದ ಇಡೀ ದಿನ ಚೈತನ್ಯ ಪೂರ್ಣವಾಗಿರಬಹುದು. ಇದು ಲೋ ಬಿಪಿಯನ್ನು ನಿಯಂತ್ರಣ ಮಾಡಿ ರಕ್ತದೊತ್ತಡವನ್ನು ಬ್ಯಾಲೆನ್ಸ್ ಮಾಡುತ್ತೆ. ಇವು ಹೃದಯ ಮತ್ತು ಮೂತ್ರಪಿಂಡದ ಕಾರ್ಯಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ. ಬೀಟ್ರೂಟ್ ರಸ ರಕ್ತದೊತ್ತಡವನ್ನು ಸ್ಥಿರವಾಗಿರಿಸುವ ಪರಿಣಾಮಕಾರಿ ತರಕಾರಿ. ದಿನ ಎರಡು ಗ್ಲಾಸ್ ಬೀಟ್ರೂಟ್ ರಸ ಸೇವಿಸುವುದರಿಂದ ಬಿಪಿ ಕಂಟ್ರೋಲ್ ಮಾಡಬಹುದು.
ದ್ರವ ಪದಾರ್ಥಂ ಆರೋಗ್ಯ ಸೌಖ್ಯಂ
ಪ್ರತಿದಿನ ಕನಿಷ್ಠ 2 ರಿಂದ 3 ಲೀಟರ್ ನೀರು ಕುಡಿಯಿರಿ. ಕಡಿಮೆ ರಕ್ತದೊತ್ತಡ ಇದ್ದರೆ ಎಳನಿರು, ಬಾರ್ಲಿ ನೀರಿನ ಸೇವನೆ ಮಾಡಿ. ಇವುಗಳು ದೇಹದಲ್ಲಿನ ದ್ರವದ ಅಂಶವನ್ನು ನಿರ್ವಹಿಸಲು ಅಗತ್ಯವಾದ ಎಲೆಕ್ಟ್ರೋಲೈಟ್ಗಳನ್ನು ನೀಡುತ್ತವೆ. ದೇಹ ನಿರ್ಜಲೀಕರಣವಾಗದಂತೆ ನೋಡಿಕೊಳ್ಳಬಹುದು.
ಇದರ ಜೊತೆಗೆ ಜೀರಿಗೆ, ಕೊತ್ತಂಬರಿ ಬೆರೆಸಿ ಕುದಿಸಿದ ನೀರು, ಹಣ್ಣಿನ ಜ್ಯೂಸ್ಗಳನ್ನು ಆಗಾಗ ಸೇವಿಸುತ್ತಿರಿ.
ಒಣ ಖರ್ಜೂರ
ದೇಹದಲ್ಲಿನ ರಕ್ತ ಸಂಚಾರವನ್ನು ಉತ್ತಮಗೊಳಿಸಲು ಖರ್ಜೂರ ಬೆಸ್ಟ್ ಆಹಾರವಾಗಿದೆ. ಒಣ ಖರ್ಜೂರವನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಖಾಲಿ ಹೊಟ್ಟೆಯನ್ನು ಅದನ್ನು ತಿನ್ನಿ. ಇದು ದೇಹದಲ್ಲಿ ರಕ್ತವನ್ನು ಹೆಚ್ಚು ಮಾಡುತ್ತದೆ. ಒಣ ಖರ್ಜೂರವನ್ನು ಬೇಯಿಸಿ ಜ್ಯೂಸ್ ರೀ ಕುಡಿದರೆ ಇನ್ನೂ ಒಳ್ಳೆಯದು.
ಇಷ್ಟೆಲ್ಲದರ ಮಧ್ಯೆ ಆರೋಗ್ಯಕರ ಆಹಾರವನ್ನಷ್ಟೇ ತಿನ್ನೋದು, ಹೋಟೆಲ್ಲುಗಳ ಊಟ ತಿಂಡಿ ಪಾನಿಪೂರಿಗಳನ್ನು ದೂರವಿಟ್ಟರೆ ಇನ್ನೂ ಇನ್ನೂ ಒಳ್ಳೆಯದು.



