ಎಲ್ಲರೂ ಬ್ಯಾಂಕ್ ಜನಾರ್ದನ್ ಥರಾ ಬಾಂಡ್ಲಿ ತಲೆ ಎಂಜಾಯ್ ಮಾಡೋಕೆ ಆಗಲ್ಲ. ಸಿಹಿ ಕಹಿ ಚಂದ್ರು, ಶಿಖರ್ ಧವನ್ ತರಾ ಅದನ್ನೇ ಸ್ಟೈಲ್ ಮಾಡಿಕೊಳ್ಳೋಕೂ ಆಗಲ್ಲ. ಸ್ಟೈಲು ಮಾಡೋ ಆಸೆ ಯಾರಿಗಿರಲ್ಲ. ಆದರೆ ಎಲ್ಲರೂ ಧೋನಿ ಅಲ್ಲವಲ್ಲ. ರಾಕಿಭಾಯ್ ತರಾ ಕೂದಲು ಬಿಡೋ ಅಸೆ ಇದ್ದರೂ ತಲೆಯೇ ರಾಕ್ ಆಗಿಬಿಟ್ಟರೆ ಏನ್ ಗತಿ ಅನ್ನೋವ್ರು ಹೆದರ್ತಾನೇ ಬದುಕ್ತಾರೆ.
ಹೀಗಾಗಿಯೇ ಎಲ್ಲರಿಗೂ ತಲೆ ಕೂದಲು ಮುಖ್ಯ. ಅದು ಅವರ ನೋಟವನ್ನೇ ಬದಲಾಯಿಸಿಬಿಡುತ್ತದೆ. ಕೂದಲು ಉದುರುವ ಸಮಸ್ಯೆ ಹೆಚ್ಚಿನವರನ್ನು ಕಾಡುತ್ತಿರುತ್ತದೆ. ಅದರ ಆರಂಭಿಕ ಲಕ್ಷಣಗಳನ್ನು ಗಮನಿಸದೇ ಇದ್ದಲ್ಲಿ ಕೂದಲು ಉದುರಿ ಬೋಳು ತಲೆಯಾಗುವುದಂತೂ ಖಂಡಿತ.
ಪುರುಷರಿಗೆ ಬೋಳು ತಲೆಯಾದರೆ ಹೇಗೋ ಸಹಿಸಿಕೊಳ್ಳಬಹುದು. ಆದರೆ ಮಹಿಳೆಯರಿಗೆ ಬೋಳು ತಲೆಯಾದರೆ ತುಂಬಾನೇ ಕಷ್ಟ. ಅದಕ್ಕಾಗಿ ಬೋಳು ತಲೆಯಾಗುತ್ತಿರುವ ಲಕ್ಷಣಗಳನ್ನು ಮೊದಲೇ ಪತ್ತೆಹಚ್ಚಿ ಸರಿಯಾದ ಚಿಕಿತ್ಸೆ ಪಡೆಯಬೇಕು.
ನಿಮ್ಮ ತಲೆಯಿಂದ ಬಹಳಷ್ಟು ಕೂದಲು ಉದುರಲು ಪ್ರಾರಂಭಿಸಿದ್ದರೆ ಅದೇ ಮೊತ್ತ ಮೊದಲ ಲಕ್ಷಣ. ಸಾಮಾನ್ಯವಾಗಿ, ಬೋಳು ತಲೆಗೆ ಮುಖ್ಯವಾಗಿ ಎರಡು ಕಾರಣಗಳಿವೆ. ಮೊದಲನೆಯದಾಗಿ ಆನುವಂಶಿಕತೆ ಮತ್ತು ಎರಡನೆಯದಾಗಿ ಪೌಷ್ಟಿಕಾಂಶದ ಕೊರತೆ ಅಥವಾ ದೈಹಿಕ ದೌರ್ಬಲ್ಯ. ಎಲ್ಲರ ಕೂದಲೂ ಉದುರುತ್ತದೆ. ಹಾಗಂತ ಅವರೆಲ್ಲರ ತಲೆ ಬೋಳಾಗುತ್ತದೆ ಎನ್ನುವುದು ಅರ್ಥವಲ್ಲ. ಅದರಲ್ಲೂ ಕೆಲವು ನಿರ್ಧಿಷ್ಟ ಲಕ್ಷಣಗಳಿವೆ.
ಒಬ್ಬ ವ್ಯಕ್ತಿಯ ತಲೆಕೂದಲು ಬೋಳಾಗುವಾಗ ಕೂದಲು ಒಂದು ನಿರ್ದಿಷ್ಟ ರೀತಿಯಲ್ಲಿ ಬೀಳುತ್ತದೆ, ಉದಾಹರಣೆಗೆ ಕೂದಲು ಉದುರುವುದು ತಲೆಯ ಮಧ್ಯದಿಂದ ಪ್ರಾರಂಭವಾಗುತ್ತದೆ, ತೇಪೆಗಳ ರೂಪದಲ್ಲಿ ಕೂದಲು ಉದುರುವುದು, ಮುಂಭಾಗದಿಂದ ಕೂದಲು ಉದುರುವುದು ಅಥವಾ ಬದಿಯಿಂದ ಕೂದಲು ಉದುರುವುದು. ಹಾಗಂತ ಎಲ್ಲಾ ಜಾಗದಲ್ಲೂ ಕೂದಲು ಏಕಕಾಲದಲ್ಲಿ ಉದುರಲ್ಲ. ಆದರೆ ಒಂದು ಸ್ಥಳದ ಕೂದಲು ವಿಪರೀತವಾಗಿ ಬೀಳಲು ಪ್ರಾರಂಭಿಸುತ್ತದೆ ಮತ್ತು ಖಾಲಿಯಾಗುತ್ತದೆ.
ಬೋಳಾಗುವ ಸಮಯದಲ್ಲಿ, ಕೂದಲು ಬೀಳುವ ಸ್ಥಳಗಳಲ್ಲಿ ನೀವು ತುರಿಕೆ ಅಥವಾ ಸೌಮ್ಯವಾದ ನೋವನ್ನು ಸಹ ಅನುಭವಿಸಬಹುದು. ಸಾಮಾನ್ಯವಾಗಿ ಈ ಸಮಸ್ಯೆ ನೆತ್ತಿಯ ಬೋಳುಗಳಲ್ಲಿ ಕಂಡುಬರುತ್ತದೆ. ಕೆಲವು ಸಂದರ್ಭಗಳಲ್ಲಿ ಗಡ್ಡ ಮತ್ತು ಹುಬ್ಬುಗಳಲ್ಲಿಯೂ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದು ಗಂಡಸರಿಗೆ.
ಕೂದಲು ಉದುರಲು ಎರಡು ಮುಖ್ಯ ಕಾರಣಗಳಾದ ಅನುವಂಶಿಕತೆ ಮತ್ತು ದೈಹಿಕ ದೌರ್ಬಲ್ಯಗಳನ್ನು ಹೊರತುಪಡಿಸಿ ಪೌಷ್ಟಿಕಾಂಶದ ಕೊರತೆಯೂ ಒಂದು ದೊಡ್ಡ ಕಾರಣ. ಮಾನಸಿಕ ಆಘಾತ, ಚಿಂತೆ ಹೆಚ್ಚಿದಷ್ಟೂ ಕೂದಲು ಉದುರುವ ಸಮಸ್ಯೆಯೂ ಹೆಚ್ಚು. ಕುಟುಂಬದ ಟೆನ್ಷನ್ ಅಥವಾ ಕೆಲಸದ ಟೆನ್ಷನ್ ಕೂಡಾ ಕೂದಲು ಉದುರಲು ಕಾರಣವಾಗುತ್ತದೆ.
ಹುಳುಕಡ್ಡಿ, ಉರಿಯೂತ, ಯಾವುದೇ ಚರ್ಮದ ಸೋಂಕು ಅಥವಾ ಸೋರಿಯಾಸಿಸ್ ಕೂಡ ಕೂದಲು ಉದುರುವಿಕೆಗೆ ಕಾರಣವಾಗಬಹುದು. ತಲೆಬೋಳಾಗುವುದು ಸಹ ಒಂದು ರೋಗ. ಇದರ ಚಿಕಿತ್ಸೆಯು ಕೂದಲು ಉದುರಲು ಇರುವ ಕಾರಣಗಳ ಆಧಾರದ ಮೇಲೆ ಅವಲಂಬಿತವಾಗಿರುತ್ತದೆ. ತಪ್ಪಿಸಿಕೊಳ್ಳೋಕೆ ನೀವು ನಿಮ್ಮ ಆಹಾರದಲ್ಲಿ ಕಬ್ಬಿಣ, ಕ್ಯಾಲ್ಸಿಯಂ ಮತ್ತು ವಿಟಮಿನ್ ಆಹಾರವನ್ನ ಹೆಚ್ಚಾಗಿ ಸೇವಿಸಿ ಅಷ್ಟೆ.
ದೇಹದಲ್ಲಿ ನೀರಿನ ಕೊರತೆ ಇರಬಾರದು, ದೇಹದಲ್ಲಿ ಸದಾ ಹೈಡ್ರೇಟ್ ಆಗಿರಬೇಕು. ಆಹಾರದಲ್ಲಿ ಒಂದು ಲೋಟ ಹಾಲು, ಒಂದು ಲೋಟ ಮಜ್ಜಿಗೆ ಮತ್ತು ಒಂದು ಲೋಟ ಮೊಸರು ತಪ್ಪದೇ ಇರಲಿ. ಕಾಳುಗಳು, ಮೊಳಕೆ ಕಾಳುಗಳು, ಹುರಿದ ಕಾಳುಗಳು ಮತ್ತು ಒಣ ಹಣ್ಣುಗಳನ್ನು ತಿನ್ನಿರಿ. ಕೂದಲನ್ನು ಬಿಗಿಯಾಗಿ ಎಳೆಯುವಂತ ಹೇರ್ ಸ್ಟೈಲ್ ಬೇಡ. ಹೆಚ್ಚಿನ ಶಾಖದ ಹೇರ್ ಸ್ಟೈಲಿಂಗ್ ಉಪಕರಣಗಳನ್ನು ಬಳಸಬೇಡಿ. ಕೂದಲಗೆ ಹೆಚ್ಚಿನ ರಾಸಾಯನಿಕ ಬಳಸಬೇಡಿ. ಬ್ಲೀಚ್ ಮಾಡಬೇಡಿ. ಸೌಮ್ಯವಾದ ಮತ್ತು ನಿಮ್ಮ ಕೂದಲಿಗೆ ಸೂಕ್ತವಾದ ಶಾಂಪೂ ಬಳಸಿ. ಅಥವಾ ಸೀಗೆಕಾಯಿ,ಕಡಲೆಹಿಟ್ಟು ಬಳಸಿದರೆ ಇನ್ನೂ ಒಳ್ಳೆಯದು. ಗಡಸು ನೀರು ಬಿಟ್ಟು ಸೌಮ್ಯವಾದ ನೀರನ್ನು ಬಳಸಿ. ಗಡುಸು ನೀರು ಕೂದಲನ್ನು ಕಿತ್ತು ತಿಂದು ಹಾಕುತ್ತದೆ.



