ಬಾಯಾರಿದ ಮನುಷ್ಯನಿಗೆ, ಒಂದು ಹನಿ ನೀರು ಚಿನ್ನಕ್ಕಿಂತ ಮಿಗಿಲು
ಇದು ಒಂದು ಗಾದೆ. ನೀರಿನ ಮಹತ್ವ ಅರ್ಥವಾಗಬೇಕೆಂದರೆ ಏಳು ಕೆರೆ ನೀರು ಕುಡಿದಿರಬೇಕು. ಅದು ಅರ್ಥವಾದವರು ತುಂಬಿದ ಕೊಡ ತುಳುಕುವುದಿಲ್ಲ ಎನ್ನುವಂತಿರ್ತಾರೆ. ಅರ್ಥವಾಗದೇ ಹೋದವರು ಕುಡಿದ ನೀರು ಅಲ್ಲಾಡದ ಹಾಗೆ ಕುಳಿತಿರ್ತಾರೆ. ಇಂತಹವರಿಗೆ ನೀರಿನ ಮಹತ್ವ ಹೇಳೋದು ಗೋರ್ಕಲ್ಲ ಮೇಲೆ ನೀರು ಸುರಿದ೦ತೆ . ಹಾಲಿಗೆ ಹುಳಿ ಹಿಂಡಿದರೆ ಮೊಸರು, ಮಣ್ಣಿಗೆ ನೀರು ಹಾಕಿದರೆ ಕೆಸರು ಅನ್ನೋದು ಗಾದೆಯೇ.. ಆದರೆ ನೀರಿನ ಮಹತ್ವ ಅರ್ಥವಾಗೋಕೆ ಏನು ಮಾಡಬೇಕು. ಉಪ್ಪು ತಿಂದವನು ನೀರು ಕುಡಿಯಲೇ ಬೇಕು ಎಂಬಂತೆ ನೀರಿನ ಮಹತ್ವ ಅರ್ಥ ಮಾಡಿಕೊಳ್ಳಬೇಕು, ಅಷ್ಟೆ.
ನೀರನ್ನು ಎಲ್ಲರೂ ಕುಡಿಯುತ್ತಾರೆ. ಮನುಷ್ಯ ಆರೋಗ್ಯವಾಗಿರಬೇಕು ಎಂದರೆ ನೀರು ಕುಡಿಯಲೇಬೇಕು. ಯಥೇಚ್ಚವಾಗಿ ಕುಡಿಯಬೇಕು. ಅವರವರ ಎತ್ತರ, ದೇಹತೂಕಕ್ಕೆ ತಕ್ಕಂತೆ ನೀರು ಕುಡಿಯುತ್ತಿರಲೇಬೇಕು. ಇಲ್ಲದೇ ಹೋದರೆ ಅಪಾಯ ತಪ್ಪಿದ್ದಲ್ಲ. ಸಮಸ್ಯೆಗಳಾದಾಗ ಹಾಲಲ್ಲಾದರೂ ಹಾಕು, ನೀರಲ್ಲಾದರು ಹಾಕು ಎಂದು ದೇವರಲ್ಲಿ ದೂರಿ ಪ್ರಯೋಜನವೂ ಇಲ್ಲ.
ಪ್ರತಿಯೊಂದಕ್ಕೂ ಮಾರ್ಗದರ್ಶನ ಸೂತ್ರ ಹೇಳಿರುವ ಆಯುರ್ವೇದ ನೀರು ಕುಡಿಯೋದಕ್ಕೂ ಸೂತ್ರ ಹೇಳಿದೆ. ಒಬ್ಬ ವ್ಯಕ್ತಿ ದಿನಕ್ಕೆ ಎಷ್ಟು ನೀರು ಕುಡಿಯಬೇಕು. ಹೇಗೆ ಕುಡಿಯಬೇಕು ಎಂದೂ ಹೇಳಿಕೊಟ್ಟಿದೆ. ಸಾಮಾನ್ಯವಾಗಿ ಆರೋಗ್ಯವಂತ ಮನುಷ್ಯ ದಿನಕ್ಕೆ ಕನಿಷ್ಠ 8 ಗ್ಲಾಸ್ ನೀರು ಕುಡಿಯಬೇಕು. ಕನಿಷ್ಠ 8 ಗ್ಲಾಸ್ ಕೂಡಾ ನೀರು ಕುಡಿಯದಿದ್ದರೆ ನಮ್ಮ ದೇಹ ನಾವು ಹೇಳಿದಂತೆ ಕೇಳುವುದಿಲ್ಲ. ಆಯುರ್ವೇದಲ್ಲಿ ನೀರು ಕುಡಿಯುವುದು ಹೇಗೆ? ಏಕೆ ಎಂಬ ಬಗ್ಗೆಯೇ ಸುದೀರ್ಘ ಅಧ್ಯಾಯವಿದೆ.
ನಾವ್ ಬಿಡಿ, ಈಗ ಸಿಕ್ಕಾಪಟ್ಟೆ ಅರ್ಜೆಂಟಲ್ಲಿರುತ್ತೇವೆ. ಹುಟ್ಟಿದಾಗಿನಿಂದ ಸಾಯುವ ತನಕ ನಮಗೆ ಎಲ್ಲವೂ ಅರ್ಜೆಂಟ್ ಆಗಿಯೇ ಆಗಬೇಕು. ಫಟಾಫಟ್ ಆಗುತ್ತಿರಬೇಕು. ನೀರು ಕುಡಿಯೋದು ಕೂಡಾ ಅಷ್ಟೆ. ಗಟಗಟಗಟಗಟ ಎಂದು ಒಂದ್ಸಲ ಎತ್ತಿದರೆ ಲೊಳಲೊಳಲೊಳಲೊಳ ಎಂದು ಗಂಟಲಲ್ಲಿ ಇಳಿದು, ದೇಹದ ನರನಾಡಿಗೆಲ್ಲ ಹಬ್ಬಬೇಕು. ಅಷ್ಟೊಂದು ಅರ್ಜೆನ್ಸಿ ನಮಗೆಲ್ಲ. ಆದರೆ ಆಯುರ್ವೇದದ ಪ್ರಕಾರ ಇದು ತಪ್ಪು. ಅದರಲ್ಲೂ ಓಡಿ ಬಂದಾಗ, ಏದುಸಿರು ಬಿಡುತ್ತಿರುವಾಗಲಂತೂ ಹಾಗೆಲ್ಲ ನೀರನ್ನು ಗಟಗಟನೆ ಕುಡಿಯಬಾರದು. ಅದು ಅತ್ಯಂತ ಅಪಾಯಕಾರಿ. ಏದುಸಿರು ಬಿಡುವಾಗ ನೀರಿನ ರೂಟ್ ಮಿಸ್ ಆದರೆ ನಮ್ಮ ಜೀವದ ರೂಟ್ ಕೂಡಾ ಔಟ್ ಆಗುವಂತಾ ಅಪಾಯವೂ ಇದೆ.
ನೀರನ್ನು ಹನಿಹನಿಯಾಗಿಯೇ ಕುಡಿಯಬೇಕು. ಸಿಪ್ ಬೈ ಸಿಪ್ ಅಂತಾರಲ್ಲ ಹಾಗೆ. ಇಡೀ ದಿನ ಕುಡಿಯುವ ನೀರನ್ನು ಒಮ್ಮೆಗೆ ಕುಡಿಯುವ ಬದಲಿಗೆ ಇಡೀ ದಿನ ಸ್ವಲ್ಪ ಸ್ವಲ್ಪವೇ ದೇಹಕ್ಕೆ ಸೇರಿಸುತ್ತಾ ಹೋದರೆ ನೀವು ಹೆಲ್ದಿ.ಕೋಲ್ಡ್ ಇರುವ ನೀರು ಕುಡಿಯಲೇಬೇಡಿ. ಅದರಲ್ಲೂ ಫ್ರಿಜ್ಜಿನಿಂದ ತೆಗೆದ ನೀರನ್ನಂತೂ ಒಂದು ಹದಕ್ಕೆ ಬರುವ ಮುನ್ನ ಕುಡಿಯಲೇಬೇಡಿ. ಮಣ್ಣಿನ ಮಡಕೆ ಅಥವಾ ಹರವಿಯ ನೀರು ತಣ್ಣಗಿದ್ದರೂ ಅಪಾಯಕಾರಿಯಲ್ಲ. ಆದರೆ ಫ್ರಿಜ್ ನೀರು ಅದರಲ್ಲೂ ಐಸಿನಂತಾ ನೀರು ಅಪಾಯಕಾರಿ. ಕುಡಿಯುವ ನೀರು ನಾವು ಇರೋ ರೂಮಿನ ವಾತಾವರಣದಷ್ಟೇ ಬೆಚ್ಚಗಿದ್ದರೆ ಒಳ್ಳೆಯದು.
ಕುಳಿತು ನೀರು ಕುಡಿಯುವುದೇ ಉತ್ತಮ. ನಿಂತು ನೀರು ಕುಡಿಯಬೇಡಿ.ಬೆಳಗ್ಗೆ ಎದ್ದ ತಕ್ಷಣ ಕುಡಿಯುವ ನೀರು ಅತ್ಯಂತ ಆರೋಗ್ಯಕಾರಿ. ಅದು ದೇಹದ ಜೀರ್ಣಶಕ್ತಿಯನ್ನು ಸರಾಗಗೊಳಿಸುತ್ತದೆ.
ದೇಹಕ್ಕೆ ನೀರು ಕಡಿಮೆಯಾಗಿರುವುದು ನಿಮ್ಮ ಮೂತ್ರ ವಿಸರ್ಜನೆಯಲ್ಲಿ ಗೊತ್ತಾಗುತ್ತದೆ. ಮೂತ್ರದ ಬಣ್ಣ ಕಪ್ಪು ಅಥವಾ ಅರಿಶಿಣ ಬಣ್ಣದಲ್ಲಿದ್ದರೆ ನೀವು ನೀರು ಕುಡಿತಿಲ್ಲ ಎಂದರ್ಥ. ಜಾಸ್ತಿ ಬೆವರುತ್ತಿದ್ದರೆ, ಬಾಯಿ ಒಣಗುತ್ತಿದ್ದರೆ ನೀರು ಕುಡಿಯುತ್ತಿರಿ. ಬೆವರುವುದೇ ಕಡಿಮೆಯಿರುವಾಗ ಹೆಚ್ಚು ಹೆಚ್ಚು ನೀರು ಕುಡಿಯುವ ಅಗತ್ಯ ಇಲ್ಲ.
ಊಟಕ್ಕೆ ಅರ್ಧ ಗಂಟೆ ಮುಂಚೆ ಮತ್ತು ಊಟವಾದ ಅರ್ಧ ಗಂಟೆಯ ನಂತರ ನೀರು ಕುಡಿಯಿರಿ. ಕುದಿಸಿ ಆರಿಸಿದ ನೀರು ಒಳ್ಳೆಯದು.ಕುಡಿಯುವ ನೀರಿಗೆ ಒಂದಿಷ್ಟು ಜೀರಿಗೆ ಅಥವಾ ತುಳಸಿ ಬೆರೆಸಿದರೆ ಆರೋಗ್ಯಕ್ಕೆ ಇನ್ನೂ ಉತ್ತಮ.



