

ಗರ್ಭಿಣಿ ಆಗೋಕೆ ಮೊದಲು ಮಹಿಳೆಯರ ದೇಹದಲ್ಲಿ ನೈಸರ್ಗಿಕವಾಗಿ ಹಲವಾರು ಬದಲಾವಣೆಗಳಾಗುತ್ತವೆ. ಒಂದೊಂದು ಪ್ರಕ್ರಿಯೆಯೂ ಒಂದೊಂದು ಸಿಗ್ನಲ್. ಬಹುತೇಕರಿಗೆ ಇದು ಅರ್ಥವಾಗಲ್ಲ. ಇದರಿಂದಾಗಿಯೇ ಕೆಲವರಿಗೆ ತಾವು ಪ್ರೆಗ್ನೆಂಟ್ ಅನ್ನೋದು ಗೊತ್ತೂ ಆಗಲ್ಲ. ಕೆಲವರು ಆಸ್ಪತ್ರೆಗಳನ್ನು ಹುಡುಕಿಕೊಂಡು ಹೋಗ್ತಾರೆ. ಮೊದಲು ಮನೆಯಲ್ಲಿದ್ದ ಹಿರಿಯರು ತಮ್ಮ ಹಿರಿಯರಿಂದ ಅನುಭವ ಕೇಳಿಕೊಂಡು ಅರ್ಥ ಮಾಡಿಕೊಳ್ಳುತ್ತಿದ್ದರು. ಅದು ತಲೆಮಾರಿನಿಂದ ತಲೆಮಾರಿಗೆ ದಾಟಿ ಗರ್ಭಾವಸ್ಥೆ ಅರ್ಥವಾಗುತ್ತಿತ್ತು. ಈಗ ಮನೆಯಲ್ಲಿ ದೊಡ್ಡವರೂ ಇರಲ್ಲ. ಇದ್ದವರಿಗೆ ಇವೆಲ್ಲ ಗೊತ್ತೂ ಇರಲ್ಲ. ಅಂತಹ ಕೆಲವು ಸೂಚನೆ, ಬದಲಾವಣೆಗಳನ್ನು ಇಲ್ಲಿ ಹೇಳಿದ್ದೇವೆ.
ಪಿರಿಯಡ್ಸ್ ಮಿಸ್ ಆಗುತ್ತೆ
ಇದು ಮೊದಲ ಸಿಗ್ನಲ್. ಸರಿಯಾದ ಸಮಯಕ್ಕೆ ಡೇಟ್ಸ್ ಆಗದೇ ಹೋದರೆ ಅದು ಮೊದಲ ಸೂಚನೆ. ಆದರೆ ಕೆಲವೊಮ್ಮೆ ಬೇರೆ ಬೇರೆ ಕಾರಣಗಳಿಗೆ ಪಿರಿಯಡ್ಸ್ ಮಿಸ್ ಆಗಿರುವ ಸಾಧ್ಯತೆಯೂ ಇರುತ್ತೆ. ಅದನ್ನು ಆ ಮಹಿಳೆಯರೇ ಅರ್ಥ ಮಾಡಿಕೊಳ್ಳಬೇಕು. ಆಗ ಖಚಿತತೆಗಾಗಿ ಪ್ರಗ್ನೆನ್ಸಿ ಟೆಸ್ಟ್ ಸುಲಭ ಮಾರ್ಗ.
ಅವಧಿಗೆ ಮುನ್ನ ರಕ್ತಸ್ರಾವ
ಪಿರಿಯಡ್ ಅವಧಿಗೆ ಮಧ್ಯೆ ಸಣ್ಣ ಪ್ರಮಾಣದ ಬ್ಲೀಡಿಂಗ್ ಕೂಡಾ ಗರ್ಭಾವಸ್ಥೆಯ ಸುಳಿವು. ಮಹಿಳೆಯ ಲಾಸ್ಟ್ ಪಿರಿಯಡ್ ಮುಗಿದ ಕೆಲವು ವಾರಗಳಲ್ಲಿ ಈ ರೀತಿಯಾಗುತ್ತದೆ. ಈ ರೀತಿ ಆಗುತ್ತಿದ್ದರೆ ಬೇಗ ವೈದ್ಯರನ್ನು ನೋಡಬಹುದು.
ವಾಂತಿ
ಬೆಳಗಿನ ಆರೋಗ್ಯದ ಅಸ್ವಸ್ಥತೆ ಎದುರಾದರೆ ವಾಕರಿಕೆ ಮತ್ತು ವಾಂತಿ ಸಾಮಾನ್ಯ. ಅದನ್ನು ಪಿತ್ಥದ ವಾಂತಿ ಎನ್ನುತ್ತಾರೆ. ಆದರೆ ಮೇಲಿನಂತೆ ಪಿರಿಯಡ್ಸ್ ಮಿಸ್ ಆಗಿ ವಾಂತಿಯಾಗುತ್ತಿದ್ದರೆ ಡಾಕ್ಟರ್ನ್ನು ತಪ್ಪದೆ ನೋಡಿ.
ವಿಪರೀತ ತಲೆನೋವು
ಗರ್ಭಾವಸ್ಥೆಯ ಆರಂಭಿಕ ದಿನಗಳಲ್ಲಿ ಮಹಿಳೆಯರಿಗೆ ತಲೆನೋವು ಸಾಮಾನ್ಯ. ಆದರೆ ಬರುವ ಎಲ್ಲಾ ತಲೆನೋವಿಗೂ ಗರ್ಭಾವಸ್ಥೆಗೂ ಸಂಬಂಧ ಇರಲ್ಲ. ಮೇಲೆ ಹೇಳಿದ ಲಕ್ಷಣಗಳ ಜೊತೆಗೆ ತಲೆನೋವು ಬಂದರೆ ನಿಮಗೆ ಗುಡ್ ನ್ಯೂಸ್ ಇರುವ ಸಾಧ್ಯತೆ ಹೆಚ್ಚು. 3ನೇ ತಿಂಗಳಲ್ಲಿ ಹೀಗಾಗುವ ಸಾಧ್ಯತೆ ಇದೆ. ಇದರ ಜೊತೆಗೆ ಖುಷಿ ಮತ್ತು ಬೇಸರ ಒಟ್ಟೊಟ್ಟಿಗೇ ಆಗುತ್ತಿರುತ್ತದೆ. ಅದೂ ಸಿಗ್ನಲ್ಲೇ.
ಬೆನ್ನು, ಸೊಂಟ ನೋವು
ಪಿರಿಯಡ್ಸ್ ಸಂದರ್ಭದಲ್ಲಿ ಬೆನ್ನು ಅಥವಾ ಸೊಂಟನೋವು ಸಾಮಾನ್ಯ. ಗರ್ಭಾವಸ್ಥೆಯ ಆರಂಭದಲ್ಲಿ ಕೂಡ ಇದೇ ರೀತಿ ಆಗುತ್ತದೆ.
ಸ್ತನಗಳು ಸೆನ್ಸಿಟಿವ್ ಆಗುತ್ತವೆ
ಇದೂ ಸಹ ಗರ್ಭಾವಸ್ಥೆಯ ಆರಂಭಿಕ ಲಕ್ಷಣವೇ. ಸ್ತನಗಳು ದಪ್ಪಗಾಗುವುದು. ಸ್ತನದ ತುದಿಯಲ್ಲಿ ಚುಚ್ಚಿದ ಫೀಲಿಂಗ್. ನಿಪ್ಪಲ್ ಬಣ್ಣ ಗಾಢ ಬಣ್ಣಕ್ಕೆ ತಿರುಗುವುದು. ಅಲ್ಲಲ್ಲಿ ಬಿಳಿ ಚುಕ್ಕಿ.. ಎಲ್ಲವೂ ಗರ್ಭಾವಸ್ಥೆಯ ಸೂಚನೆಗಳೇ. ಇವೆಲ್ಲದರ ಜೊತೆಗೆ ಪದೇ ಪದೇ ಮೂತ್ರ ವಿಸರ್ಜನೆ ಆಗುತ್ತಿದ್ದರೆ, ಅರ್ಧ ಗಂಟೆಗೊಮ್ಮೆ ಬಾತ್ ರೂಂ ಕರೆಯುತ್ತಿದ್ದರೆ ಟೆಸ್ಟ್ ಮಾಡಿಕೊಳ್ಳಿ. ಇದೆಲ್ಲದರ ಜೊತೆಗೆ ಹೊಟ್ಟೆ ಹಸಿವೂ ಕೂಡಾ ಕಡಿಮೆಯಾಗುತ್ತಾ ಹೋಗುತ್ತೆ. ಆಯಾಸವಾಗುತ್ತೆ. ಆದರೆ ಕ್ರಮೇಣ ಹೆಚ್ಚುಹೆಚ್ಚು ತಿನ್ನಬೇಕು ಎನ್ನಿಸುತ್ತೆ. ಆದರೆ ಹೆಚ್ಚು ತಿನ್ನಬೇಕು ಎನಿಸುವ ಹೊತ್ತಿಗೆ ಗರ್ಭಿಣಿ ಅನ್ನೋದು ಪಕ್ಕಾ ಆಗಿರುತ್ತೆ.
ವಿಶೇಷ ಸೂಚನೆ : ಇದೆಲ್ಲವೂ ಸೂಚನೆಗಳೇ ಹೊರತು, ಇಂತಹ ಲಕ್ಷಣ ಕಂಡ ಕೂಡಲೇ ಗರ್ಭಿಣಿ ಎಂದು ಹೇಳಲು ಸಾಧ್ಯವಿಲ್ಲ. ಅದು ಪ್ರೆಗ್ನೆನ್ಸಿ ಕಿಟ್ ಅಥವಾ ಡಾಕ್ಟರ್ ಮಾತ್ರ ಖಚಿತಪಡಿಸಬಲ್ಲರು.



