ವುಹಾನ್. ಚೀನಾದ ಈ ನಗರವನ್ನ ಇಡೀ ಜಗತ್ತಿನ ಜನ ನೆನಪಿಸಿಕೊಳ್ಳೋದು ಆ ನಗರ ಸೃಷ್ಟಿಸಿದ ಕೋವಿಡ್ 19 ವೈರಸ್‍ನಿಂದಾಗಿ. ಇಡೀ ಜಗತ್ತಿನಲ್ಲಿ ಕೋವಿಡ್ 19 ಕಂಟ್ರೋಲ್‍ಗೆ ಬಂದಿದೆ. ಕೊರೊನಾ ವೈರಸ್‍ನಿಂದಾಗಿ ಮಕಾಡೆ ಬಿದ್ದಿದ್ದ ಆರ್ಥಿಕತೆ ಇದೀಗ ತಾನೇ ಚೇತರಿಕೆಯ ಹಾದಿಯಲ್ಲಿದೆ. ಆದರೆ, ಕೊರೊನಾ ಕಾಣಿಸಿಕೊಂಡ ಪ್ರಥಮ ನಗರ ವುಹಾನ್‍ನಲ್ಲಿ ಕೋವಿಡ್ ಕಂಟ್ರೋಲಿಗೆ ಬಂದಿಲ್ಲ. ಕೋವಿಡ್ 19 ವೈರಸ್ ಸೃಷ್ಟಿಯಾಗಿದ್ದು ವುಹಾನ್‍ನ ಲ್ಯಾಬ್‍ಗಳಲ್ಲಿ ಎನ್ನುವುದು ಜಗತ್ತಿನ ನಂಬಿಕೆ. ಅಲ್ಲಿನ ಲ್ಯಾಬ್ ಮತ್ತು ಹಸಿ ಮಾಂಸವನ್ನು ಮಾರಾಟ ಮಾಡುವ ಮಾರ್ಕೆಟ್‍ನಿಂದ ವೈರಸ್ ಹಬ್ಬಿತು ಎಂದು ಎಲ್ಲರೂ ನಂಬಿದ್ದಾರೆ. ಆದರೆ ಅದು ಸುಳ್ಳು ಎಂದು ಚೀನಾ ಹೇಳುತ್ತಿದೆ. ವಿಶ್ವಸಂಸ್ಥೆಯೂ ಅದನ್ನೇ ವರದಿ ಮಾಡಿದೆ. ಆದರೆ ಆ ವರದಿಯನ್ನು ಜಗತ್ತಷ್ಟೇ ಅಲ್ಲ, ಚೀನಾದವರೇ ನಂಬಿಲ್ಲ.
ಹೌದು, ಇತ್ತೀಚೆಗೆ ಚೀನಾದಲ್ಲಿ ಮತ್ತೆ ಕೆರಳಿದ್ದು ಸೋಂಕಿತರ ಸಂಖ್ಯೆ ದಿನಕ್ಕೆ 40 ಸಾವಿರದ ಗಡಿ ದಾಟುತ್ತಿದೆ. ಚೀನಾ ಮತ್ತೊಮ್ಮೆ ಎಂದಿನಂತೆ ಯಾವುದೇ ಸೌಲಭ್ಯವನ್ನೂ ನೀಡದೆಯೇ ಸೆಮಿ ಲಾಕ್ ಡೌನ್ ಹೇರಿದೆ. ರಾಜಧಾನಿ ಬೀಜಿಂಗ್, ಹಾಂಕಾಂಗ್, ಪೀಕಿಂಗ್ ,ಶಾಂಘೈ ಸೇರಿದಂತೆ ಹಲವು ನಗರಗಳಲ್ಲಿ ಆರ್ಥಿಕ ಸ್ಥಿತಿ ನೆಟ್ಟಗಾಗಿಲ್ಲ. ಕೆಲವರಂತೂ ನೂರಾರು ದಿನಗಳಿಂದ ಕ್ವಾರಂಟೈನ್ ಕೇಂದ್ರಗಳಲ್ಲೇ ಇದ್ದಾರೆ. ಊಟ ತಿಂಡಿ ಸೇರಿದಂತೆ ಯಾವ ಸೌಲಭ್ಯಗಳನ್ನೂ ನೀಡದೆಯೇ ಕ್ವಾರಂಟೈನ್ ಮಾಡಿದೆ ಚೀನಾ ಸರ್ಕಾರ.
ಇತ್ತೀಚೆಗೆ ತಾನೇ ಆಪಲ್ ಕಂಪೆನಿ ನೌಕರರು ಕಂಪೆನಿಗೆ ನುಗ್ಗಿ ದಾಂಧಲೆ ಎಬ್ಬಿಸಿದ್ದರು. ಈಗ ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ ವಿರುದ್ಧ ಪ್ರತಿಭಟನೆ, ದಂಗೆಗಳು ಶುರುವಾಗಿವೆ. ಜನ ಬೀದಿಗೆ ಬಂದು ತೊಲಗು ಜಿಂಪಿಂಗ್ ತೊಲಗು ಎಂದು ಘೋಷಣೆ ಕೂಗುತ್ತಿದ್ದಾರೆ. ಚೀನಾದಲ್ಲಿ ಪ್ರತಿಭಟನೆಗೆ ಮುಕ್ತ ಸ್ವಾತಂತ್ರ್ಯವಿಲ್ಲ. ಜನ ಪಿಸುಮಾತಿನಲ್ಲಿ ಸರ್ಕಾರವನ್ನು ಟೀಕಿಸುವುದಕ್ಕೂ ಹಿಂದೆ ಮುಂದೆ ನೋಡುತ್ತಾರೆ. ಅಂಥಾದ್ದರಲ್ಲಿ ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆಂದರೆ.. ಜನರ ತಾಳ್ಮೆಯ ಅವಧಿ ಮುಗಿದಿದೆಯೆಂದೇ ಲೆಕ್ಕ. ಇದರ ನಡುವೆ ಇನ್ನೂ ಕೆಲವು ಏನನ್ನೂ ಬರೆಯದೆ ಬಿಳಿ ಹಾಳೆ ಹಿಡಿದುಕೊಂಡು ಪ್ರತಿಭಟನೆ ನಡೆಸಿದ್ದಾರೆ. ಸರ್ಕಾರದ ವಿರುದ್ಧ ಬರವಣಿಗೆ ಸಾಕ್ಷ್ಯ ಸಿಗದಂತೆ ಎಚ್ಚರಿಕೆ ವಹಿಸಿದ್ದಾರೆ. ನೂರಾರು ಜನ ವುಹಾನ್‍ನಲ್ಲಿ ಇರುವ ಲ್ಯಾಬ್‍ನ್ನೇ ಒಡೆದು ಹಾಕಲು ನುಗ್ಗಿ ನುಗ್ಗಿ ಹೋಗುತ್ತಿದ್ದಾರೆ.
ಇದೆಲ್ಲದರ ಮಧ್ಯೆ ಭಾರತದಲ್ಲಿ ಇಡೀ ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ ಪತ್ತೆಯಾಗಿರುವ ಕೊರೊನಾ ಪ್ರಕರಣಗಳ ಸಂಖ್ಯೆ 300+ ಭಾರತವೂ ಸೇರಿದಂತೆ ಹಲವು ದೇಶಗಳಲ್ಲಿ ಕೊರೊನಾ ಅಂತಿಮ ಹಂತದಲ್ಲಿದೆ. ಶೀತ ಪ್ರದೇಶದ ದೇಶಗಳಲ್ಲಿಯೂ ಕೊರೊನಾ ಸೋಂಕು ದೂರವಾಗಿದೆ. ಔಷಧಿಗಳೂ ಲಭ್ಯವಾಗಿವೆ. ಆದರೂ.. ಚೀನಾದಲ್ಲಿ ಮಾತ್ರ ಕಂಟ್ರೋಲಿಗೆ ಬಾರದ ಕೊರೊನಾ ಇನ್ನಷ್ಟು ಮತ್ತಷ್ಟು ಅನುಮಾನಗಳನ್ನೂ ಹುಟ್ಟುಹಾಕುತ್ತಿದೆ.



