ಸಣ್ಣಗಾಗಬೇಕು, ತೂಕ ಕಳೆದುಕೊಳ್ಳಬೇಕು ಅಂದ್ರೆ ಎಲ್ಲರೂ ಹೇಳೋ ಮೊದಲ ಮಾತು ವಿಶ್ರಾಂತಿ ಕಡಿಮೆ ಮಾಡಿ. ಹಾಸಿಗೆಯಿಂದ ಬೇಗ ಎದ್ದೇಳಿ ಅನ್ನೋದೇ. ಹಾಸಿಗೆ ಮೇಲೂ ಮಾಡಬಹುದಾದ ವ್ಯಾಯಾಮಗಳಿವೆ ಅಂದ್ರೆ ಎಲ್ಲರೂ ರೊಮ್ಯಾಂಟಿಕ್ ಮೂಡಿಗೇ ಹೋಗ್ತಾರೆ. ಆದರೆ ನಾವು ಹೇಳೋ ವ್ಯಾಯಾಮ ರೊಮ್ಯಾಂಟಿಕ್ ವ್ಯಾಯಾಮಗಳಂತೂ ಅಲ್ಲ. ಆದರೆ ಇವನ್ನು ನಿಗದಿತವಾಗಿ ಮಾಡ್ತಾ ಹೋದರೆ ತೂಕ ಇಳಿಯೋದಂತೂ ಪಕ್ಕಾ.
ನಮ್ಮ ಡೈಲಿ ರೋಟೀನುಗಳಲ್ಲಿ ನಾವೆಲ್ಲರೂ ಮಷೀನುಗಳೇ. ತಿನ್ನೋಕೂ ಟೈಮಿಲ್ಲದಂತೆ ದುಡಿಯೋ ನಮಗೆ ಜೀವನದ ಪ್ರತಿಕ್ಷಣವೂ ಒತ್ತಡವೇ. ಹೀಗಿರುವಾಗ ಯೋಗ, ಫಿಟ್ನೆಸ್ ಇವಕ್ಕೆಲ್ಲ ಟೈಂ ಕೊಡೋದು ಕಷ್ಟ. ರೆಗ್ಯುಲರ್ ವ್ಯಾಯಾಮ ಸಾಧ್ಯವೇ ಇಲ್ಲ ಅನ್ನೋವ್ರೇ ಜಾಸ್ತಿ. ಚಳಿಗಾಲದಲ್ಲಿ ಹೊರಗೆ ಹೋಗಿ ವ್ಯಾಯಾಮ ಮಾಡಲು ಇಷ್ಟವಿಲ್ಲದೆ ಸೊಂಪಾದ ನಿದ್ರೆ ಹೊಡೆಯೋವ್ರಿಗೇನು ಕಡಿಮೆ ಇಲ್ಲ. ಆದ್ರೆ ವ್ಯಾಯಾಮ ಮಾಡಬೇಕು. ಆಗ.. ಹಾಸಿಗೆಯೇ ಪಾರ್ಕು, ಜಿಮ್ಮು, ಯೋಗ ಮ್ಯಾಟ್ ಎಲ್ಲ.. ಅಂತಹ ಕೆಲವು ಹಾಸಿಗೆ ವ್ಯಾಯಾಮಗಳು ಇಲ್ಲಿವೆ. ಎಲ್ಲವನ್ನೂ 15 ನಿಮಿಷ ಮಾಡಿದ್ರೆ ಸಾಕು.
ವ್ಯಾಯಾಮ ನಂ.1
ಪ್ಲ್ಯಾಂಕ್ ಅನ್ನೋ ವ್ಯಾಯಾಮ ಇದೆ. ಇದರಿಮದ ಡುಮ್ಮಕ್ಕಿರುವ ಹೊಟ್ಟೆಯನ್ನು ಚಪ್ಪಟೆ ಮಾಡಿಕೊಳ್ಳಬಹುದು. ಪುಷ್ ಅಪ್ ಮಾಡೋದು ಗೊತ್ತಲ್ವಾ.. ಮೊದಲು ಹಾಸಿಗೆಯ ಮೇಲೆ ಆ ಪೊಸಿಷನ್ ತೆಗೆದುಕೊಳ್ಳಿ. ಆಮೇಲೆ ನಿಮ್ಮ ಮೊಣಕೈಗಳನ್ನು 90 ಡಿಗ್ರಿಯಷ್ಟು ಬಗ್ಗಿಸಿ. ಮೊಣಕೈಗಳು ನೇರ ನಿಮ್ಮ ಭುಜಗಳ ಕೆಳಗೆ ಇರಬೇಕು. ನಿಮ್ಮ ದೇಹ ನಿಮ್ಮ ತಲೆಯಿಂದ ನಿಮ್ಮ ಪಾದಗಳಿಗೆ ನೇರವಾಗಿರಬೇಕು. ಈ ಪೊಸಿಷನ್ 15 ರಿಂದ 20 ಸೆಕೆಂಡ್ ಮೈಂಟೇನ್ ಮಾಡಿ. ರೆಸ್ಟ್ ಮಾಡಿ. ಮತ್ತೆ ಮಾಡಿ. ರೆಸ್ಟ್ ಮಾಡಿ. ಆರಂಭದಲ್ಲಿ ನಾಲ್ಕೈದು ಬಾರಿಯಷ್ಟೇ ಮಾಡುತ್ತಾ ಹೋಗಿ ನಂತರ ಸಂಖ್ಯೆಗಳನ್ನ ಹೆಚ್ಚಿಸಿಕೊಳ್ಳಿ.
ವ್ಯಾಯಾಮ ನಂ.2
ಇದನ್ನ ರೋಲ್ ಅಪ್ಸ್ ಅಂತಾರೆ. ಅಂದ್ರೆ ಹಾಸಿಗೆಯ ಮೇಲೆ ಮಲಗಿ, ನಿಮ್ಮ ಕಾಲುಗಳನ್ನು ನೇರವಾಗಿ ಇಟ್ಟು, ತೋಳುಗಳನ್ನು ನಿಮ್ಮ ತಲೆಯ ಮೇಲೆ ನೇರವಾಗಿ ಚಾಚಿ ಕಾಲ್ಬೆರಳನ್ನು ಹಿಡಿದುಕೊಳ್ಳೋದು. ಯು ಅಥವಾ ವಿ ಶೇಪ್ನಲ್ಲಿ. ಈ ಭಂಗಿಯಲ್ಲಿ ಸ್ವಲ್ಪ ಹೊತ್ತು ಇದ್ದು ನಂತರ ಪುನಃ ಮಲಗುವ ಪೊಸಿಷನ್ಗೆ ಬನ್ನಿ. ಇದರಲ್ಲಿ ಯಾವುದೇ ಕಾರಣಕ್ಕೂ ಕಾಲುಗಳನ್ನು ಮಡಚಬೇಡಿ. ಬೆಂಡ್ ಮಾಡಿದರೆ ಸುಲಭ ಎನ್ನಿಸುತ್ತದೆ. ಆದರೆ ಸುಲಭವಾಗಿ ಮಾಡಿದರೆ ವ್ಯಾಯಾಮ ಆಗುವುದಿಲ್ಲ.
ವ್ಯಾಯಾಮ ನಂ.3
ಸೈಕಲ್ ತುಳಿಯೋದು ಗೊತ್ತಲ್ವಾ? ಒಂದು ಕಾಲು ಮುಂದೆ.. ಒಂದು ಕಾಲು ಹಿಂದೆ.. ಇದನ್ನ ಬೈಸಿಕಲ್ ಕ್ರಂಚ್ ಅಂತಾರೆ. ಇದರಿಂದ ನೀವು ಚಪ್ಪಟೆಯಾಕಾರದ ಹೊಟ್ಟೆ ಪಡೆದುಕೊಳ್ಳಬಹುದು. ಹೊಟ್ಟೆ ಉಬ್ಬರವಿದ್ದರೆ ಅದೂ ಕರಗುತ್ತೆ. ಬೆನ್ನನ್ನು ಹಾಸಿಗೆಯ ಮೇಲೆ ಒತ್ತಿ ಮಲಗಿಕೊಂಡೇ ತಲೆ, ಭುಜ ಮತ್ತು ಬೆನ್ನನ್ನು ಮೇಲಕ್ಕೆತ್ತಿ. ನಂತರ ನಿಮ್ಮ ಕಿಬ್ಬೊಟ್ಟೆಯ ಸ್ನಾಯುಗಳನ್ನು ಟೈಟ್ ಮಾಡಿಕೊಳ್ಳಿ. ಸೈಕಲ್ ತುಳಿಯೋ ಹಾಗೆ ವ್ಯಾಯಾಮ ಮಾಡಿ. ನಿಮ್ಮ ಕೈಗಳು ಎಡಗಾಲಿಗೆ ಬಲಗೈ ಮತ್ತು ಬಲಗಾಲಿಗೆ ಎಡಗೈ ಟಚ್ ಆದರೆ ಒಳ್ಳೆಯದು.
ವ್ಯಾಯಾಮ ನಂ.4
ಇದನ್ನ ವಿ ಅಪ್ಸ್ ಅಂತಾರೆ. ಇದರಲ್ಲಿ ಮಲಗಿಕೊಂಡೇ ದೇಹವನ್ನು ವಿ ಆಕಾರಕ್ಕೆ ತರಬೇಕು. ಬೆನ್ನಿನ ಮೇಲೆ ಮಲಗಿ ತೋಳುಗಳನ್ನು ನೇರವಾಗಿ ಇರಿಸಿ. ನಿಧಾನವಾಗಿ ನಿಮ್ಮ ಕಾಲು ಮತ್ತು ತೋಳುಗಳನ್ನು ಮೇಲಕೆತ್ತಿ, ಸೊಂಟದಲ್ಲಿ ಬಾಗಿರಬೇಕು. ಆದಷ್ಟು ನಿಮ್ಮ ಪಾದಗಳ ಕಡೆಗೆ ನಿಮ್ಮ ಕೈಗಳು ರೀಚ್ ಆಗಲಿ. ಈ ವ್ಯಾಯಾಮ ಮಾಡುವಾಗ ನಿಮ್ಮ ಕೈ ಮತ್ತು ಕಾಲುಗಳು ನೇರವಾಗಿಯೇ ಇರಬೇಕು. ಇದರಿಂದ ಸೊಂಟದ ಬೊಜ್ಜು ಇಳಿಯುತ್ತೆ. ಬೆನ್ನಿಗೆ ತಾಕತ್ತು ಬರುತ್ತೆ.
ವ್ಯಾಯಾಮ ನಂ.5
ಬಟರ್ ಫ್ಲೈ ಕ್ರಂಚ್ ಅಂದರೆ ಇಡೀ ದೇಹ ಚಿಟ್ಟೆಯಂತಾಗಬೇಕು. ಮಲಗಿರುತ್ತೀರಲ್ಲ, ಇಡೀ ದೇಹ ನೇರವಾಗಿರಲಿ. ತಲೆಯ ಕೆಳಗೆ ಕೈಗಳನ್ನಿಡಿ. ಕಾಲುಗಳನ್ನು ಚಿಟ್ಟೆಯಂತೆ ಅತ್ತಿಂದಿತ್ತ ಇತ್ತಿಂದತ್ತ ಆಡಿಸಿ. ಕಿಬ್ಬೊಟ್ಟೆಯೂ ಸ್ಟ್ರಾಂಗ್ ಆಗುತ್ತೆ. ತೊಡೆಗಳಿಗೆ ತಾಕತ್ತು ಬರುತ್ತೆ.



