ದೇಶಾದ್ಯಂತ ಸಂಚಲನ ಮೂಡಿಸಿರುವ ಪ್ರಕರಣ ಶ್ರದ್ದಾ ಹತ್ಯೆ. ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ದೆಹಲಿಯ ಕಾಡು, ಚರಂಡಿಗಳಲ್ಲಿ ಬಿಸಾಡಿದ್ದ ಅಫ್ತಾಬ್. ಆ ಕ್ರೌರ್ಯವನ್ನು ಕೇಳಿಯೇ ದೇಶ ಬೆಚ್ಚಿ ಬಿದ್ದಿದೆ. ಆಕೆಯ ತಂದೆ ಇನ್ನೂ ಶಾಕ್‍ನಲ್ಲೇ ಇದ್ದಾರೆ. ಅಂದಹಾಗೆ ಅಫ್ತಾಬ್-ಶ್ರದ್ಧಾ ಲವ್ ಸ್ಟೋರಿ ಇತ್ತೀಚಿನದ್ದಲ್ಲ. ಹಲವು ವರ್ಷಗಳದ್ದು. ಇಬ್ಬರೂ ಸಪರೇಟ್ ಆಗಿ ಬೇರೆ ಬೇರೆ ಇದ್ದಾಗ ಪ್ರೀತಿಯೂ ಅದ್ಭುತವಾಗಿತ್ತು. ಅಫ್ತಾಬ್‍ನ ಪ್ರೀತಿಯ ಮಾತುಗಳಿಗೆ, ಸ್ಟೈಲ್‍ಗೆ ಮಾರು ಹೋಗಿದ್ದ ಶ್ರದ್ಧಾ ಪ್ರೀತಿಯಲ್ಲಿ ಮಿಂದೆದ್ದಿದ್ದಳು. ಅಫ್ತಾಬ್ ಇಲ್ಲದೆ ಇನ್ನೊಂದು ಜಗತ್ತೇ ತನಗಿಲ್ಲ ಎಂದು ಭ್ರಮಿಸಿದ್ದಳು. ಹೀಗಾಗಿಯೇ ತಂದೆ ತಾಯಿಗೆ ವಿಷಯ ಗೊತ್ತಾದಾಗ ನನಗೆ ಅಫ್ತಾಬ್ ಮುಖ್ಯ. ನನಗೂ 25 ವರ್ಷ ದಾಟಿದೆ. ನನ್ನ ಲೈಫ್ ಬಗ್ಗೆ ನಾನೇ ನಿರ್ಧಾರ ತೆಗೆದುಕೊಳ್ಳುವಷ್ಟು ದೊಡ್ಡವಳಾಗಿದ್ದೇನೆ ಎಂದಿದ್ದಳು. ಅಪ್ಪ ಅಮ್ಮ ವಿರೋಧಿಸಿದಾಗ ನಾನು ನಿಮ್ಮ ಮಗಳೇ ಅಲ್ಲ ಎಂದುಕೊಳ್ಳಿ. ನಿಮಗೆ ಮಗಳೇ ಹುಟ್ಟಿಲ್ಲ ಎಂದು ತಿಳಿದುಕೊಳ್ಳಿ ಎಂದು ಮನೆಯಿಂದ ಹೊರನಡೆದಿದ್ದಳು. ಹೆತ್ತವರು ಅಸಹಾಯಕರಾಗಿ ನಿಂತಿದ್ದರು.
ಶ್ರದ್ಧಾ ದೆಹಲಿಗೆ ಶಿಫ್ಟ್ ಆಗಿ ಅಫ್ತಾಬ್ ಜೊತೆ ಒಂದೇ ಮನೆಯಲ್ಲಿ ವಾಸಿಸತೊಡಗಿದಳು. ಅಲ್ಲಿಂದಲೇ ಶುರುವಾಯ್ತು ಅಫ್ತಾಬ್ ಹಿಂಸೆ. ಅಫ್ತಾಬ್‍ಗೆ ಶ್ರದ್ಧಾ ಒಬ್ಬಳೇ ಗೆಳತಿಯಾಗಿರಲಿಲ್ಲ. ತಾನೊಬ್ಬಳೇ ಅಲ್ಲ ಎನ್ನುವುದು ಶ್ರದ್ಧಾಗೆ ಗೊತ್ತಾಗುವ ಹೊತ್ತಿಗೆ ಸಮಯ ಮೀರಿ ಹೋಗಿತ್ತು. ಮತ್ತು ಹೆಚ್ಚಾದಾಗ ಶ್ರದ್ಧಾಳನ್ನು ವಿಕೃತವಾಗಿ ಲೈಂಗಿಕತೆಗೆ ಬಳಸಿಕೊಳ್ಳುತ್ತಿದ್ದ. ನಾನು ನರಕದಲ್ಲಿದ್ದೇನೆ ಎಂದು ಗೆಳೆಯರ ಬಳಿ ಹೇಳಿಕೊಳ್ಳುತ್ತಿದ್ದ ಶ್ರದ್ದಾ ಕಿರುಚಾಟವನ್ನು, ಅಳುವನ್ನು ಇಬ್ಬರ ಜಗಳವನ್ನೂ ನೋಡಿದ್ದೇವೆ ಎಂದು ಅಫ್ತಾಬ್ ನೆರೆಹೊರೆಯವರು ಹೇಳಿದ್ದಾರೆ. ಶ್ರದ್ಧಾ ನನ್ನನ್ನು ಬಿಟ್ಟು ಹೋದಳು ಎಂದು ಅಕ್ಕಪಕ್ಕದವರಿಗೆ ಅಫ್ತಾಬ್ ಹೇಳಿದಾಗ ಹೋಗಲಿ ಬಿಡು, ಬದುಕಿಕೊಳ್ಳಲಿ ಎಂದುಕೊಂಡಿದ್ದೇವೆಯೇ ಹೊರತು, ಅಫ್ತಾಬ್ ಇಂತಹದ್ದೊಂದು ಅಪರಾಧ ಮಾಡಿದ್ದಾನೆ ಎಂದು ಅಂದುಕೊಂಡಿರಲಿಲ್ಲ ಎನ್ನುವುದು ನೆರೆಹೊರೆಯವರ ಮಾತು.
ಶ್ರದ್ಧಾಳ ಫ್ರೆಂಡ್ ರಜತ್ ಶುಕ್ಲಾ ಪ್ರಕಾರ ಶ್ರದ್ಧಾ ತುಂಬಾ ಆಕ್ಟಿವ್ ಆಗಿದ್ದ ಹುಡುಗಿ. ಜೊತೆಯಲ್ಲಿ ಓದುತ್ತಿದ್ದೆವು. ನಾಟಕ ಆಡುತ್ತಿದ್ದೆವು. ಆಕೆಗೆ ಓದುವ ಅಭ್ಯಾಸ ಹೆಚ್ಚಾಗಿತ್ತು. ಆದರೆ ಅಫ್ತಾಬ್ ಪರಿಚಯವಾದ ಮೇಲೆ ಸ್ವಲ್ಪ ಸ್ವಲ್ಪವೇ ಬದಲಾದಳು. ಹಾಡಿ ಕುಣಿಯುತ್ತಿದ್ದ ಹುಡುಗಿ 2018ರ ನಂತರ ಮೌನಕ್ಕೆ ಶರಣಾದಳು. ಬಹುಶಃ ಆ ವೇಳೆಗೆ ಅಫ್ತಾಬ್ ಪ್ರೀತಿಗೆ ಬಿದ್ದಿರಬೇಕು. ಆಗ ಅಫ್ತಾಭ್-ಶ್ರದ್ಧಾ ಲಿವಿಂಗ್ ಟುಗೆದರ್ ಇದ್ದ ಬಗ್ಗೆ ನಮಗೂ ಗೊತ್ತಿರಲಿಲ್ಲ. ದೆಹಲಿಗೆ ಹೋದ ಮೇಲೆ ಕ್ರಮೇಣ ಗೊತ್ತಾಯಿತು. ಆಕೆ ನಾಪತ್ತೆಯಾಗುವವರೆಗೆ ಸರಿಯಾದ ಪಿಕ್ಚರ್ ಸಿಗಲೇ ಇಲ್ಲ ಎನ್ನುತ್ತಾರೆ ರಜತ್ ಶುಕ್ಲಾ.
ಆಕೆಯ ತಂದೆಗೆ ಇಡೀ ಪ್ರಕರಣದಲ್ಲಿ ಲವ್ ಜಿಹಾದ್ ಇರುವ ಶಂಕೆಯಿದೆ. ಇನ್ನೊಬ್ಬ ಗೆಳತಿ ಪ್ರಕಾರ ಆಕೆ ಆರಂಭದಲ್ಲಿ ಖುಷಿಯಾಗಿದ್ದಳು. ಅಫ್ತಾಬ್ ಮತ್ತು ತನ್ನ ನಡುವಿನ ಪ್ರೀತಿಯನ್ನು ಹೇಳಿಕೊಳ್ಳುತ್ತಿದ್ದಳು. ಆದರೆ ಕೆಲವೇ ದಿನ. ಅಫ್ತಾಬ್ ನನ್ನನ್ನು ಹೊಡೆಯುತ್ತಾನೆ. ಹಿಂಸಿಸುತ್ತಾನೆ ಎನ್ನುತ್ತಿದ್ದಳು. ಎಲ್ಲವೂ ಸರಿಹೋಗಲಿದೆ ಎಂಬ ನಂಬಿಕೆಯೂ ಆಕೆಯಲ್ಲಿತ್ತು. ಮೊದಲೇ ಅಪ್ಪ ಅಮ್ಮನನ್ನು ದೂರವಿಟ್ಟಿದ್ದೇನೆ, ಈತನೊಂದಿಗೆ ಚೆನ್ನಾಗಿ ಬದುಕಿ ತೋರಿಸಬೇಕು ಎಂಬ ಕನಸು ಕಟ್ಟಿಕೊಂಡಿದ್ದಳು. ಆದರೆ ಯಾವಾಗ ಮನೆಗೆ ಆತನ ಬೇರೆ ಬೇರೆ ಗೆಳತಿಯರು ಬರಲಾರಂಭಸಿದ್ದರೋ ಶ್ರದ್ಧಾ ಕೆರಳಿದಳು. ಆದರೆ ಅಫ್ತಾಬ್‍ನನ್ನು ಪ್ರಶ್ನಿಸಿದರೆ ಸಾಕು ಹೊಡೆತ ಬೀಳುತ್ತಿತ್ತು. ನನ್ನನ್ನು ಹೊರಗೆ ಕರೆದುಕೊಂಡು ಹೋಗು, ಅಫ್ತಾಬ್ ನನ್ನನ್ನು ಸಾಯಿಸಿಯೇ ಬಿಡುತ್ತಾನೆ ಎಂದು ಕೆಲವು ಬಾರಿ ಗೆಳೆಯರಿಗೆ ಕರೆ ಮಾಡಿ ಮಧ್ಯರಾತ್ರಿ ಮನೆಯಿಂದ ಹೊರ ಬಂದಿದ್ದಳು.
ಆದರೆ ತಂದೆ ತಾಯಿ ಅವನನ್ನು ನಂಬಬೇಡ ಎಂದು ಹೇಳಿದಾಗ ಅವರಿಗೆ ಹೇಳಿದ್ದ ಮಾತುಗಳೇ ಆಕೆಯನ್ನು ಅಫ್ತಾಬ್‍ನೊಂದಿಗೇ ಬದುಕುವುದನ್ನು ಮುಂದುವರೆಸುವಂತೆ ಮಾಡಿತ್ತು. ಬಹುಶಃ ತಂದೆ ತಾಯಿಯ ಬಳಿ ನನ್ನುನ್ನು ಕ್ಷಮಿಸಿಬಿಡಿ ಎಂದಿದ್ದರೆ ಹೆತ್ತ ಜೀವಗಳು ಮತ್ತೆ ಮಡಿಲಲ್ಲಿ ಹಾಕಿಕೊಳ್ಳುತ್ತಿದ್ದರೇನೋ.. ದೂರವಿದ್ದ ಮಗಳು ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿಲ್ಲ ಎಂದ ಕೂಡಲೇ ಮಗಳ ಹುಡುಕಾಟಕ್ಕೆ ಬಂದ ಹೆತ್ತವರು, ತಪ್ಪು ಮಾಡಿದೆ ಎಂದಾಗ ಕ್ಷಮಿಸುತ್ತಿದ್ದ ಬಗ್ಗೆ ಅನುಮಾನವಿರಲಿಲ್ಲ. ಆದರೆ ಹೆತ್ತವರ ಬಳಿ ತಪ್ಪಾಯ್ತು ಎಂದು ಕೇಳಿಕೊಳ್ಳೋದು ಹೇಗೆ? ಅದು ಅವಮಾನ ಎಂದು ಭಾವಿಸಿದಳೇನೋ ಶ್ರದ್ದಾ. ತುಂಡು ತುಂಡಾಗಿ ಶವವಾಗಿ ಹೋದಳು.



