ಸೀರೆ ಉಟ್ಟರೆ ಅಪ್ಪಟ ಗೃಹಿಣಿ. ಚೂಡಿ ತೊಟ್ಟರೆ ಪಕ್ಕದ್ಮನೆ ಹುಡುಗಿ. ಮಾಡ್ ಡ್ರೆಸ್ ತೊಟ್ಟರೆ ಮಾಡೆಲ್. ನಗುವಿನ ಬಲೆ ಬೀಸುತ್ತಾಳೆ ವಾಟ್ಸಪ್ ಕಾಲ್ ಬರುತ್ತೆ. ಚಾಟ್ ಆಗುತ್ತೆ. ವಿಡಿಯೋ ಕಾಲ್ ಮಾಡ್ತಾಳೆ. ಅಲ್ಲಿ ಎಷ್ಟು ಬೇಕೋ ಅಷ್ಟನ್ನು ತೋರಿಸುತ್ತಾಳೆ. ಆಸೆ ಹುಟ್ಟಿಸ್ತಾಳೆ. ಹಕ್ಕಿ ಬಲೆಗೆ ಬಿತ್ತು ಎಂಬ ಭಾವನೆ ಮೂಡಿಸುತ್ತಾಳೆ. ಮನೆಗೇ ಕರೆಯುತ್ತಾಳೆ. ಅವಳೇ ಆಹ್ವಾನ ಕೊಡುತ್ತಾಳೆ. ಗಂಡನೆ ದಲ್ಲಾಳಿಯಂತೆ ಕೆಲಸ ಮಾಡುತ್ತಾನೆ. ಎಲ್ಲ ಮುಗೀತು. ಸುಖವೂ ಸಿಕ್ಕಿತು. ಎಂಜಾಯ್ ಮಾಡಿದೆ ಎಂದುಕೊಂಡಿರುವಾಗಲೇ ಒಂದು ಫೋನ್ ಬರುತ್ತೆ. ನಿಮ್ಮ ನನ್ನ ಆ ವಿಡಿಯೋನ ಯಾರೋ ಶೂಟ್ ಮಾಡಿದ್ದಾರೆ. ಏನ್ ಮಾಡೋದು..ದುಡ್ಡು ಕೇಳ್ತಿದ್ದಾರೆ. ಕೊಡ್ಲಿಲ್ಲ ಅಂದ್ರೆ ಲೀಕ್ ಮಾಡ್ತಾರಂತೆ. ನನ್ನ ಲೈಫ್ ಹಾಳಾಗ್ ಹೋಯ್ತು.. ಅಂತಾಳೆ. ಅಳ್ತಾಳೆ. ಮಾನಮರ್ಯಾದೆಗೆ ಅಂಜಿ ದುಡ್ಡು ಕಕ್ಕುತ್ತಾನೆ. ಲಕ್ಷಾಧಿಪತಿಯಾಗಿದ್ದರೆ ಲಕ್ಷ ಲಕ್ಷ. ಕೋಟ್ಯಧಿಪತಿಯಾಗಿದ್ದರೆ ಕೋಟಿ ಕೋಟಿ. ಇದು ಸಿನಿಮಾ ಸ್ಟೋರಿಯಲ್ಲ. ರಿಯಲ್ ಆಗಿ ನಡೆದಿರೋದು. ಅದು ಎಷ್ಟರಮಟ್ಟಿಗೆ ಎಂದರೆ ಒಂದು ರಾಜ್ಯ ಸರ್ಕಾರವನ್ನೇ ಅಲುಗಾಡಿಸುತ್ತಿದೆ. ಇದು ಒಡಿಶಾದಲ್ಲಿ.

ಒಡಿಶಾದ ಅರ್ಚನಾ ನಾಗ್ ಎಂಬ ಈ ಯುವತಿಯ ಚರಿತ್ರೆ ಒಂದು ಸಿನಿಮಾಗಿಂತ ರೋಚಕವಾಗಿದೆ. ಈಕೆಯಷ್ಟೇ ಅಲ್ಲ, ಈತನ ಗಂಡನೂ ಅಂತಹವನೇ. ಜಗಬಂಧು ಚಾಂದ್. ಇದನ್ನು ಒಂದು ಕಾರ್ಪೊರೇಟ್ ಕಂಪೆನಿಯಂತೆ ಮಾಡಿಕೊಂಡು ಕಾರ್ಪೊರೇಟ್ ಸ್ಟೈಲಿನಲ್ಲಿಯೇ ವ್ಯವಹಾರ ಮಾಡಿ ಈ ಗಂಡ-ಹೆಂಡತಿ ದುಡಿದಿರುವ ಸಂಪತ್ತಿನ ಮೊತ್ತ ಅಂದಾಜು 30 ಕೋಟಿ. ಯಾರನ್ನ ಬುಟ್ಟಿಗೆ ಹಾಕಿಕೊಳ್ಳಬೇಕು ಎಂದು ಲಿಸ್ಟ್ ಮಾಡುವವನು ಸ್ವಂತ ಗಂಡ. ಸೋಷಿಯಲ್ ಮೀಡಿಯಾದಲ್ಲಿ ನೋಡಿಕೊಂಡು ಆಸಕ್ತಿ ತಿಳಿದುಕೊಂಡು ದುಡ್ಡಿನ ಮನುಷ್ಯ ಎಂದು ಗೊತ್ತು ಮಾಡಿಕೊಂಡೇ ಆತ ಹಿಟ್ ಲಿಸ್ಟ್ ರೆಡಿ ಮಾಡ್ತಾನೆ. ಆ ಲಿಸ್ಟಿನ ಪ್ರಕಾರವೇ ಆತನ ಹೆಂಡತಿ ಅರ್ಚನಾ ಅಖಾಡಕ್ಕಿಳಿಯುತ್ತಾಳೆ. ಸೇಮ್ ಮೊಡೆಸ್ ಅಪರಾಂಡಿ. ಅದೇ ಪ್ಲಾನ್. ಬಕರಾ ಬಲೆಗೆ ಬಿದ್ದರೆ ಇವರಿಗೆ ದುಡ್ಡು ಬಂದಂತೆಯೇ ಲೆಕ್ಕ.

ಒಡಿಶಾದಲ್ಲಿ ಇವರದ್ದೊಂದು ಅರಮನೆಯಂತಾ ಮನೆ ಇದೆ. ಮನೆಯೋ ಐಷಾರಾಮಿ. ಕುಬೇರನ ಕೋಟೆಗೆ ಕಮ್ಮಿಯಿಲ್ಲ. ಓಡಾಟವೆಲ್ಲ ಐಷಾರಾಮಿ ಕಾರಿನಲ್ಲಿ. ಊಟವೆಲ್ಲ ಸ್ಟಾರ್ ಹೋಟೆಲ್ಲುಗಳಲ್ಲಿ. ಮನೆಯೊಳಗಿನ ಪ್ರತಿಯೊಂದು ವಸ್ತುವೂ ದುಬಾರಿಯದ್ದು. ಅಕೌಂಟಿನಲ್ಲೂ ಕೋಟಿ ಕೋಟಿ. ಬಂಗಾರದ ಆಭರಣಗಳು. ಮನೆಯಲ್ಲಿ ಸಾಕುವ ನಾಯಿ, ಬೆಕ್ಕು, ಕುದುರೆಗಳೆಲ್ಲ ದುಬಾರಿಯವು. ವಿದೇಶಿ ಬ್ರಾಂಡು. ಆಕೆಯೇನೂ ಹುಟ್ಟಿನಿಂದ ಶ್ರೀಮಂತೆಯಲ್ಲ. ಕಡಿದು ತಿನ್ನುವ ಬಡತನದಲ್ಲಿ ಹುಟ್ಟಿದವಳು. ಮನೆಯಲ್ಲಿ ಊಟಕ್ಕೂ ಪರದಾಡುತ್ತಿದ್ದ ಕುಟುಂಬದವಳು ಈ ಅರ್ಚನಾ ನಾಗ್. ಗಂಡನೂ ಅಷ್ಟೆ. ಅಪ್ಪನಿಗೆ ಇದ್ದ ದಿನಸಿ ಅಂಗಡಿ ನೋಡಿಕೊಳ್ಳುತ್ತಿದ್ದವನು. ನಂತರ ಈಕೆಯ ಪರಿಚಯವಾಯ್ತು. ಮೈಂಡ್ಸೆಟ್ ಕನೆಕ್ಟ್ ಆಯ್ತು. ದಂಧೆಯೂ ಆರಂಭವಾಯ್ತು.

ಅರ್ಚನಾ ನಾಗ್ ಒಡಿಶಾದ ಕಾಳಹಂದಿ ಜಿಲ್ಲೆಯ ಕೆಸಿಂಗಾ ಅನ್ನೋ ಪಟ್ಟಣದ ಹುಡುಗಿ.ಗುಡಿಸಲಿನಲ್ಲೇ ಹುಟ್ಟಿ ಬೆಳೆದ ಕಿತ್ತು ತಿನ್ನುವ ಬಡತನ ಕಂಡಿದ್ದ ಹುಡುಗಿ. ಆದರೆ ಚೆಲುವೆ. ಗಂಡ ಜಗಬಂಧು ಬಾಲಸೋರ್ ಜಿಲ್ಲೆಯ ಜಲೇಶ್ವರ್ನವನು. ಅಪ್ಪನ ಅಂಗಡಿ ನೋಡಿಕೊಂಡಿದ್ದವನು ಭುವನೇಶ್ವರಕ್ಕೆ ಬಂದ. ಹೋಟೆಲ್ಲಿನಲ್ಲಿ ಕೆಲಸಕ್ಕಿಳಿದ. ಅಲ್ಲಿಯೇ ಈತನಿಗೆ ಅರ್ಚನಾ ಪರಿಚಯವಾಯ್ತು. ಆಗ ಬಳಿ ಇದ್ದದ್ದು ಒಂದೇ ಬಂಡವಾಳ ಆಕೆ ಸುಂದರಿ.
ಅದನ್ನೆ ಬಳಸಿಕೊಂಡು ಒಬ್ಬನನ್ನು ಹನಿಟ್ರ್ಯಾಪ್ ಮಾಡಿದರು. ಮೊದಲ ಹನಿಟ್ರ್ಯಾಪ್ನಲ್ಲಿ ಈಕೆಯ ನಿರೀಕ್ಷೆಇದ್ದದ್ದು 2 ಲಕ್ಷ. ಆದರೆ 10 ಲಕ್ಷ ದುಡ್ಡು ಸಿಕ್ಕಿತು. ಹನಿಟ್ರ್ಯಾಪ್ನ ಕರಾಮುತ್ತು ಅರ್ಥ ಮಾಡಿಕೊಂಡವರೇ ಅದನ್ನೇ ಕಾರ್ಪೊರೇಟ್ ಆಗಿ ಪರಿವರ್ತಿಸಿದರು. ಐದಾರು ಹುಡುಗಿಯರಿಗೆ ಬಲೆ ಬೀಸಿದರು. ದೊಡ್ಡ ದೊಡ್ಡ ಕುಳಗಳಿಗೆ, ತಿಮಿಂಗಿಲಗಳಿಗೆ ಸ್ವತಃ ಅರ್ಚನಾ ಅಖಾಡಕ್ಕಿಳಿಯುತ್ತಿದ್ದಳು. ಉಳಿದವರಿಗೆ ಇವರ ಜೊತೆ ಕೆಲಸ ಮಾಡುತ್ತಿದ್ದ ಹುಡುಗಿಯರು. ಆ ಹುಡುಗಿಯರೂ ಅಷ್ಟೆ. ಅವರ ವಿಡಿಯೋ ಮಾಡಿಕೊಳ್ಳುತ್ತಿದ್ದ ಗಂಡ-ಹೆಂಡತಿ ಅವರನ್ನೂ ಬೆದರಿಸುತ್ತಿದ್ದರು. ಈಗ ಭುವನೇಶ್ವರ್ ಪೊಲೀಸರು ಈಕೆಯ ನೆಟ್ವರ್ಕ್ ನೋಡಿ ಬೆವೆತು ಹೋಗಿದ್ದಾರೆ.
ಈಕೆಯ ಬಳಿ ಅದೇ ಪೊಲೀಸ್ ಡಿಪಾರ್ಟ್ಮೆಂಟಿನ ಆಫೀಸರ್ಗಳು ಸೇರಿದಂತೆ ಹಲವು ಉನ್ನತ ಅಧಿಕಾರಿಗಳು, ರಾಜಕಾರಣಿಗಳು ಇದ್ದಾರೆ. 25ಕ್ಕೂ ಹೆಚ್ಚು ರಾಜಕಾಣಿಗಳಲ್ಲಿ ಎಲ್ಲ ಪಕ್ಷಗಳ ಶಾಸಕರು, 8 ಮಂತ್ರಿಗಳ ವಿಡಿಯೋ ಇದೆ. ಒಬ್ಬರ ಹೆಸರೂ ಹೊರಗೆ ಬಂದಿಲ್ಲ. ಈಗ ಈಕೆಯನ್ನು ರಕ್ಷಿಸಬೇಕಾದ ಹೊಣೆ ಖುದ್ದು ಅವರದ್ದೇ. ಅಕಸ್ಮಾತ್ ಆಕೆ ಬಾಯ್ಬಿಟ್ಟರೆ ಇವರೆಲ್ಲರ ಬಣ್ಣವೂ ಬಯಲಾಗುತ್ತೆ. ಒಂದು ರಾಜ್ಯದ ಸರ್ಕಾರವನ್ನೇ ಅಲುಗಾಡಿಸುತ್ತಿರುವ ಈಕೆಯ ತಾಕತ್ತೇ ಪೊಲೀಸರಿಗೆ ಬೆಚ್ಚಿ ಬೀಳಿಸಿರುವುದು. ಅರೆಸ್ಟ್ ಮಾಡಿಯಾಗಿದೆ. ಆದರೆ 10 ದಿನವಾದರೂ ತನಿಖೆ ಅಂತಾ ಶುರು ಮಾಡಿಲ್ಲ. ಕರೆದು ವಿಚಾರಣೆ ನಡೆಸಿಲ್ಲ ಎಂದರೆ ಮಿಕ್ಕಿದ್ದನ್ನು ಆಕೆಯ ಪ್ರಭಾವ, ಸೃಷ್ಟಿಸರುವ ಆತಂಕವನ್ನು ಅರ್ಥ ಮಾಡಿಕೊಳ್ಳಬಹುದು.

ಈಗ ಬಯಲಿಗೆ ಬಂದಿರೋದು ಕೂಡಾ ಈಕೆಯ ನೆಟ್ವರ್ಕ್ನಲ್ಲಿದ್ದ ಹುಡುಗಿಯೊಬ್ಬಳು ದೂರು ಕೊಟ್ಟ ಕಾರಣದಿಂದ. ಇಲ್ಲದೇ ಹೋಗಿದ್ದರೆ ಈಕೆ ಈಗಲೂ ಫ್ರೀ-ಬರ್ಡ್ ಆಗಿಯೇ ಇರುತ್ತಿದ್ದಳು. ಅಂದಹಾಗೆ ಈಕೆ ಆರೋಪಿಯಷ್ಟೇ. ಹಲವರು ಈಕೆ ನಮಗೆ ಗೊತ್ತೇ ಇಲ್ಲ ಎನ್ನುತ್ತಿದ್ದರೆ ಇನ್ನೂ ಕೆಲವರು ಗೊತ್ತಿದೆ. ಆದರೆ ನಮಗೆ ಅವಳ ಜೊತೆ ಕಾಂಟ್ಯಾಕ್ಟ್ ಇರಲಿಲ್ಲ ಎನ್ನುತ್ತಿದ್ದಾರೆ. ದೂರು ಕೊಟ್ಟಿರುವ ಹುಡುಗಿಯ ಬಳಿ ಸಾಕ್ಷಿಗಳಿಲ್ಲ ಎನ್ನುತ್ತಿದ್ದಾರೆ ಪೊಲೀಸರು. ಆ ಯುವತಿ ಹೊರತಾಗಿ ಇನ್ಯಾರೂ ಈಕೆಯ ಬಗ್ಗೆ ದೂರು ಕೊಡದೇ ಹೋದರೆ ಪೊಲೀಸರಿಗೆ ವಿಚಾರಣೆಯೇ ಕಷ್ಟವಾಗಬಹುದು.



