



ಆ ತಾಯಿಗೆ ನಾಲ್ವರು ಮಕ್ಕಳು. ವಯಸ್ಸು 88 ವರ್ಷ. ಹೆಸರು ಕ್ಯಾಥರಿನ್ ಡಿ ಕ್ರೂಸ್. ಇವರಿಗೆ ನಾಲ್ವರು ಮಕ್ಕಳಲ್ಲಿ ಇಬ್ಬರು ಗಂಡು ಮಕ್ಕಳು ಅಮೆರಿಕದಲ್ಲಿದ್ದಾರೆ. ಮದುವೆ ನಿರಾಕರಿಸಿರುವ ಮಗಳು ಆಶ್ರಮ ಸೇರಿದ್ದಾಳೆ. ಅರ್.ಟಿ.ನಗರದಲ್ಲಿರೋ ಈಕೆಗೆ ಕೋಟಿಗಟ್ಟಲೆ ಆಸ್ತಿಯಿತ್ತು. ಎಲ್ಲ ಮಕ್ಕಳಿಗೂ ಆಸ್ತಿಯನ್ನು ಹಂಚಿಯೂ ಆಗಿತ್ತು. ಒಬ್ಬೊಬ್ಬರಿಗೂ ಕೋಟಿ ಕೋಟಿ ಮೌಲ್ಯದ ಆಸ್ತಿಯೂ ಸಿಕ್ಕಿತ್ತು. ಆದರೆ ಹಿರಿಯ ಮಗನಿಗೆ ಇನ್ನೂ ಇನ್ನೂ ಬೇಕು ಎಂಬ ಆಸೆ. ಆ ದುರಾಸೆಗೆ ಬಿದ್ದು ತಾಯಿಯನ್ನೇ ಕೊಲ್ಲಲು ಯತ್ನಿಸಿದ ಘಟನೆ ನಡೆದಿದೆ. ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಆರ್.ಟಿ.ನಗರದಲ್ಲಿರುವ ಮನೆಗೆ ಬಂದಿರೋ ಮಗ ತಾಯಿಯ ಕೊಲೆಗೆ ಯತ್ನಿಸಿದ್ದಾನೆ. ಹೆಸರು ಜಾನ್ ಡಿ ಕ್ರೂಸ್. ವಯಸ್ಸು 65 ವರ್ಷ.ತಾಯಿ 2ನೇ ಮಹಡಿಯಲ್ಲಿದ್ದರೆ ಕೆಳಗಿನ ಮನೆಯಲ್ಲಿ ಮಗನಿದ್ದ. ತಾಯಿಗೆ ಉಸಿರಾಟದ ತೊಂದರೆ. ಸದಾ ಆಕ್ಸಿಜನ್ ಇರಲೇಬೇಕು. ಈ ಹಿಂದೆಯೂ ಇದೇ ರೀತಿ ಯತ್ನಿಸಿದ್ದ ಹಿನ್ನೆಲೆಯಲ್ಲಿ ಮಕ್ಕಳು ಒಬ್ಬ ಕೇರ್ ಟೇಕರ್‍ನನ್ನು ವ್ಯವಸ್ಥೆ ಮಾಡಿದ್ದರು. ಇದು ಮಗ ಜಾನ್‍ನನ್ನು ಸಿಟ್ಟುಗೊಳ್ಳುವಂತೆ ಮಾಡಿತ್ತು. ತಾಯಿ ಇರುವವರೆಗೆ ಉಳಿದ ಆಸ್ತಿಯನ್ನು ಅನುಭವಿಸುವುದಕ್ಕೆ ಆಗುವುದಿಲ್ಲ ಎಂದುಕೊಂಡಿದ್ದ ಜಾನ್ ಮನೆಗೆ ನುಗ್ಗಿ ತಾಯಿಯನ್ನು ಕೊಲ್ಲೋಕೆ ಯತ್ನಿಸಿದ್ದಾನೆ. ಹೇಗಿದ್ದರೂ ಆಕ್ಸಿಜನ್ ಪೈಪ್ ಇಲ್ಲದೆ ಉಸಿರಾಡೋಕೆ ಸಾಧ್ಯವಿಲ್ಲವಲ್ಲ. ಅದಕ್ಕಾಗಿ ಕೇರ್ ಟೇಕರ್‍ನನ್ನು ಮನೆಯಿಂದ ಹೊರಗೆ ತಳ್ಳಿ ಆಕ್ಸಿಜನ್ ಪೈಪ್ ಕಿತ್ತು ಹಾಕಿದ್ದಾನೆ. ತಕ್ಷಣವೇ ಪೊಲೀಸರಿಗೆ ಫೋನ್ ಮಾಡಿರುವ ಕೇರ್ ಟೇಕರ್ ಪೊಲೀಸರ ಮೂಲಕ ತಾಯಿಯನ್ನು ರಕ್ಷಿಸಿದ್ದಾರೆ.
ಪೊಲೀಸರು ಈಗ ಆರೋಪಿ ಜಾನ್‍ನನ್ನು ಕೊಲೆ ಯತ್ನದ ಕೇಸಿನಲ್ಲಿ ಅರೆಸ್ಟ್ ಮಾಡಿದ್ದಾರೆ. ಆದರೆ.. ತಾಯಿಯನ್ನೇ ಕೊಲ್ಲುವ ಮಕ್ಕಳಿದ್ದಾರಲ್ಲ.. ಅದು ಭಯ ಹುಟ್ಟಿಸುವುದು ನಿಜ.



