ಹಾಸನದಲ್ಲಿ ನಡೆದಿದ್ದ ಮಿಕ್ಸಿ ಸ್ಫೋಟ ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿತ್ತು. ಕುಕ್ಕರ್ ಬ್ಲಾಸ್ಟ್‍ನಿಂದ ಬೆಚ್ಚಿ ಬಿದ್ದಿದ್ದ ಜನ ಮಿಕ್ಸಿ ಸ್ಫೋಟಕ್ಕೆ ನಡುಗಿ ಹೋಗಿದ್ದರು. ಶಾರ್ಟ್ ಸಕ್ರ್ಯೂಟ್ ಆದರೆ ಈ ಪ್ರಮಾಣದ ಸ್ಫೋಟ ಸಾಧ್ಯವಿರಲಿಲ್ಲ ಎನ್ನುವುದೇ ಜನರ ಆತಂಕಕ್ಕೆ ಕಾರಣ. ಸ್ಫೋಟದಲ್ಲಿ ಕೊರಿಯರ್ ಅಂಗಡಿಯ ಶಶಿ ಎಂಬುವವರು ತೀವ್ರವಾಗಿ ಗಾಯಗೊಂಡಿದ್ದರೆ, ಮತ್ತೊಬ್ಬರಿಗೂ ಸುಟ್ಟ ಗಾಯಗಳಾಗಿದ್ದವು. ತನಿಖೆ ಒಂದು ಹಂತಕ್ಕೆ ಬರುವವರೆಗೆ ಏನೂ ಹೇಳಲು ಸಾಧ್ಯವಿಲ್ಲ ಎಂದಿದ್ದರು ಪೊಲೀಸರು. ಈಗ ಎಲ್ಲವೂ ಗೊತ್ತಾಗಿದೆ. ಮಿಕ್ಸಿ ಸ್ಫೋಟದ ಹಿಂದೆ ಒಂದು ವಿಫಲ ಪ್ರೇಮಕಥೆ ಬೆಳಕಿಗೆ ಬಂದಿದೆ.

ಮಹಿಳೆಯೊಬ್ಬರು ಗಂಡನಿಂದ ದೂರವಾಗಿದ್ದರು. ಹಾಸನದಲ್ಲಿಯೇ ಇದ್ದ ಆ ಮಹಿಳೆಗೆ ಬೆಂಗಳೂರಿನ ಅನಿಲ್ ರಾಜ್ ಎಂಬ ಯುವಕನೊಂದಿಗೆ ಸಂಪರ್ಕ ಹಾಗೂ ಸಲುಗೆ ಇತ್ತು. ಹೀಗಾಗಿಯೇ ಅನೂಪ್, ಆ ಮಹಿಳೆಗೆ ಹಲವು ಬಾರಿ ಉಡುಗೊರೆಗಳನ್ನು ನೀಡುತ್ತಿದ್ದ. ಕೊರಿಯರ್ ಮಾಡುತ್ತಿದ್ದ. ಆರಂಭದಲ್ಲಿ ಉಡುಗೊರೆಗಳನ್ನು ಸ್ವೀಕರಿಸಿದ್ದ ಮಹಿಳೆ, ಆನಂತರ ಇದು ಜಾಸ್ತಿಯಾಯಿತು ಎನ್ನಿಸಿ ಉಡುಗೊರೆಗಳನ್ನು ತೆಗೆದುಕೊಳ್ಳೋದನ್ನು ನಿರಾಕರಿಸಿದರು. ಅನೂಪ್ ಪ್ರೀತಿಯ ನಿವೇದನೆಯನ್ನೂ ಒಲ್ಲೆ ಎಂದುಬಿಟ್ಟರು. ಆದರೆ ಅನೂಪ್ ಬಿಡಲಿಲ್ಲ. ಮತ್ತೆ ಮತ್ತೆ ಪ್ರೀತಿಸುವಂತೆ ಬೆನ್ನು ಬಿದ್ದ. ಯಾವಾಗ ಆ ಮಹಿಳೆ ಒಪ್ಪಲಿಲ್ಲವೋ.. ಆಗ ಅನೂಪ್ ಸೇಡು ತೀರಿಸಿಕೊಳ್ಳೋಕೆ ಸಂಚು ಮಾಡಿದ. ಮಿಕ್ಸಿಯೊಂದನ್ನು ತಂದು, ಅದರೊಳಕ್ಕೆ ಸ್ಪೋಟಕಗಳನ್ನು ಇಟ್ಟು, ಮಿಕ್ಸ್ ಆನ್ ಮಾಡಿದರೆ ಬ್ಲಾಸ್ಟ್ ಆಗುವಂತೆ ರೂಪಿಸಿದ. ನಂತರ ಕೊರಿಯರ್ ಮಾಡಿದ. ಕೊರಿಯರ್‍ನವರು ಆ ಗಿಫ್ಟ್ ಬಾಕ್ಸ್‍ನ್ನು ತಲುಪಿಸಿಯೂ ಆಗಿತ್ತು. ಕೊರಿಯರ್ ಬಂದಾಗ ಆ ಮಹಿಳೆ ಮನೆಯಲ್ಲಿ ಇರಲಿಲ್ಲವಂತೆ.

ಆದರೆ ಕಳಿಸಿದವರ ಅಡ್ರೆಸ್ ಇಲ್ಲದ ಕಾರಣ ಆ ಮಹಿಳೆ ಮನೆಗೆ ತಲುಪಿದ್ದ ಗಿಫ್ಟ್‍ನ್ನು ವಾಪಸ್ ತಂದು ಕೊಟ್ಟಿದ್ದರು ಆ ಮಹಿಳೆ. ಕೊರಿಯರ್ ಕಚೇರಿಯವರು ಇದನ್ನು ವಾಪಸ್ ಮಾಡೋಕೆ 350 ರೂ. ಚಾರ್ಜ್ ಆಗುತ್ತೆ ಎಂದಾಗ ನಾನ್ಯಾಕೆ ಕೊಡಬೇಕು, ಕಳಿಸಿದವರ ಅಡ್ರೆಸ್ಸೇ ಇಲ್ಲ. ನೀವ್ ಏನಾದ್ರೂ ಮಾಡಿಕೊಳ್ಳಿ ಎಂದು ಗಿಫ್ಟ್ ಬಾಕ್ಸ್‍ನ್ನು ಅಲ್ಲಿಯೇ ಇಟ್ಟು ಹೋಗಿದ್ದರು. ಕೊನೆಗೆ ಕೊರಿಯರ್ ಏಜೆನ್ಸಿ ಮಾಲೀಕ ಶಶಿ ಕುತೂಹಲ ತಡೆಯಲಾರದೆ, ಅಡ್ರೆಸ್ ಏನಾದರೂ ಸಿಗುವುದಾ ಎಂದು ಬಾಕ್ಸ್ ಓಪನ್ ಮಾಡಿದರು. ಮಿಕ್ಸಿ ನೋಡಿ ಆನ್ ಮಾಡಿಯೇ ಬಿಟ್ಟರು. ಬ್ಲಾಸ್ಟ್ ಆಗಿಯೇ ಬಿಟ್ಟಿತು. ಇದು ಮೊದಲ ಕಥೆ.

ಇನ್ನೂ ಒಂದು ಕಥೆ ಇದೆ. ಆ ಮಹಿಳೆ ಡೈವೋರ್ಸಿ. ಮ್ಯಾಟ್ರಿಮೋನಿಯಲ್ಲಿ ಫೋಟೋ ಅಪ್‍ಡೇಟ್ ಮಾಡಿದ್ದಳು. ನೋಡೋಕೆ ಚೆನ್ನಾಗಿದ್ದಳು. ಆಕೆಯ ಸೌಂದರ್ಯಕ್ಕೆ ಮಾರು ಹೋದ ಅನೂಪ್ ಮದುವೆ ಪ್ರಸ್ತಾಪ ಇಟ್ಟಿದ್ದ ಅನೂಪ್. ಅನೂಪ್ ಜೊತೆ ಚೆನ್ನಾಗಿಯೇ ಇದ್ದ ಮಹಿಳೆ, ಪ್ರಪೋಸಲ್ಲಿಗೆ ಓಕೆ ಎಂದರು. ಜೊತೆಯಲ್ಲಿಯೇ ಓಡಾಟ ನಡೆಸಿದರು. ಆಕೆಗಾಗಿ ಅನೂಪ್ ಲಕ್ಷ ಲಕ್ಷ ಹಣ ಖರ್ಚು ಮಾಡಿದ್ದ. ದುಡ್ಡನ್ನೂ ಕೊಟ್ಟಿದ್ದ. ಎಲ್ಲ ಆದ ಮೇಲೆ ಆ ಮಹಿಳೆ ಮದುವೆಗೆ ನೋ ಎಂದುಬಿಟ್ಟರು. ದುಡ್ಡನ್ನೂ ವಾಪಸ್ ಕೊಡಲಿಲ್ಲ. ಹಣಕ್ಕಾಗಿ ಜಗಳ ಕೂಡಾ ಮಾಡಿದ್ದ ಅನೂಪ್, ಯಾವಾಗ ದುಡ್ಡೂ ಇಲ್ಲ, ಮದುವೆಯೂ ಇಲ್ಲ ಎಂದಾಯಿತೋ.. ಕೆರಳಿದ. ಆಕೆಯ ಸೌಂದರ್ಯವೇ ಹಾಳಾಗಬೇಕು ಎಂದು ಪ್ಲಾನ್ ಮಾಡಿ, ಜೀವಕ್ಕೆ ಹಾನಿಯಾಗದಂತೆ, ಮುಖ ಮಾತ್ರ ಕುರೂಪಿಯಾಗುವಂತೆ ಮಾಡಬೇಕು ಎಂದು ಮಿಕ್ಸಿ ಬಾಂಬ್ ಪ್ಲಾನ್ ಮಾಡಿದ. ಉದ್ದೇಶ ಪೂರ್ವಕವಾಗಿಯೇ ಫ್ರಂ ಅಡ್ರೆಸ್ ಹಾಕಿರಲಿಲ್ಲ. ಆದರೆ ಪೊಲೀಸರಿಗೆ ಇಂತಹವು ಹೊಸದೇನಲ್ಲ. ಈ ಪ್ರೀತಿ-ಪ್ರೇಮ-ದೋಖಾದಲ್ಲಿ ಗಾಯಾಳುವಾಗಿ ನರಳುತ್ತಿರುವುದು ಮಾತ್ರ ಕೊರಿಯರ್ ಏಜೆನ್ಸಿ ಓನರ್ ಶಶಿ. ಅನೂಪ್ ಈಗ ಜೈಲಲ್ಲಿದ್ದಾನೆ.



