ಒಂದು ಯೂನಿವರ್ಸಿಟಿ ಯಾವ ಕಾರಣಗಳಿಗೆ ಸುದ್ದಿಯಲ್ಲಿರುತ್ತದೆಯೋ.. ಸುದ್ದಿಯಲ್ಲಿರಬೇಕೋ.. ಅದೊಂದನ್ನು ಬಿಟ್ಟು ಮಿಕ್ಕೆಲ್ಲ ಕಾರಣಗಳಿಗೆ ಸುದ್ದಿಯಾಗುತ್ತದೆಯೆಂದರೆ ಅದು ಜೆಎನ್‍ಯು. ದೆಹಲಿಯಲ್ಲಿರೋ ಜವಹರಲಾಲ್ ನೆಹರು ಯುನಿವರ್ಸಿಟಿ. ಈ ವಿವಿಯು ತನ್ನ ಯಾವುದಾದರೂ ವಿದ್ಯಾರ್ಥಿ ದೇಶ ಮೆಚ್ಚುವ ಸಾಧನೆ ಮಾಡಿದ್ದಕ್ಕೋ.. ಸಂಶೋಧನೆ ಮಾಡಿದ್ದಕ್ಕೋ.. ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಪ್ರತಿಭೆಯಿಂದ ಗುರುತಿಸಿಕೊಂಡಿದ್ದಕ್ಕೋ.. ಸುದ್ದಿಯಾಗುವುದಿಲ್ಲ. ಅಪರೂಪದಲ್ಲಿ ಅಪರೂಪ. ಸುದ್ದಿಯಾಗುವುದು ಬೇರೆಯದೇ ಕಾರಣಕ್ಕೆ. ವಿವಾದಕ್ಕೆ. ಹೊಡೆದಾಟಕ್ಕೆ.

ಈ ವಿವಿಯ ಬಗ್ಗೆ ಮೊದಲು ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದು ಸಂಸತ್ ಮೇಲಿನ ದಾಳಿಯ ಸಂಚುಗಾರ ಅಫ್ಜಲ್ ಗುರು ಪುಣ್ಯತಿಥಿ ಆಚರಿಸಿ ಆತ ಮತ್ತೊಮ್ಮೆ ಹುಟ್ಟಿಬರಲಿ ಎಂದು ಹಾರೈಸಿ ಕಾರ್ಯಕ್ರಮ ಮಾಡಿದಾಗ. ಒಬ್ಬ ಭಯೋತ್ಪಾದಕನನ್ನು ಒಂದು ವಿಶ್ವವಿದ್ಯಾಲಯದಲ್ಲಿ ಪ್ರೀತಿಸುವ, ಆರಾಧಿಸುವ ಯುವಕರೂ ಇದ್ದಾರೆ. ಉಪನ್ಯಾಸಕರು ಕೂಡಾ ಇದ್ದಾರೆ ಎನ್ನುವುದೇ ಭಯ ಹುಟ್ಟಿಸುವ ಸಂಗತಿ. ಆಗ ಬೆಚ್ಚಿಬಿದ್ದ ಭಾರತಕ್ಕೆ ಜೆಎನ್‍ಯು ತನ್ನ ಚಿತ್ರ ವಿಚಿತ್ರ ವಾದ, ವಿವಾದ, ಗಲಾಟೆಗಳಿಂದ ಸುದ್ದಿಯನ್ನೂ ಆಘಾತವನ್ನೂ ಕೊಡುತ್ತಲೇ ಬಂದಿದೆ. ಮನೆ ಮನೆಯಲ್ಲೂ ಅಫ್ಜಲ್ ಗುರು ಹುಟ್ಟುತ್ತಾನೆ ಎಂದು ಘೋಷಣೆ ಕೂಗುವ ವಿದ್ಯಾರ್ಥಿಗಳು ಓದುತ್ತಿರುವುದಾದರೂ ಏನನ್ನು, ಯುನಿವರ್ಸಿಟಿ ಕಲಿಸುತ್ತಿರುವುದಾದರೂ ಏನನ್ನು.. ಎಂಬ ಪ್ರಶ್ನೆಗೆ ಇಲ್ಲಿನವರು ಅಭಿವ್ಯಕ್ತಿ ಸ್ವಾತಂತ್ರ್ಯ, ಸಂವಿಧಾನ, ಅಂಬೇಡ್ಕರ್ ಉತ್ತರ ಕೊಟ್ಟು ಬಚಾವ್ ಆಗುತ್ತಾರೆ. ಇಂತಹವರಿಗೆ ದೇಶದ ಮತ್ತು ಅಂತಾರಾಷ್ಟ್ರೀಯ ಮಟ್ಟದ ಖ್ಯಾತ ಪ್ರಖ್ಯಾತ ವ್ಯಕ್ತಿ, ಚಿಂತಕರು ಬೆಂಬಲಕ್ಕೆ ನಿಲ್ಲುತ್ತಾರೆ. ಎಷ್ಟೋ ಬಾರಿ ಅದು ಸುದ್ದಿಯಾಗುವುದಕ್ಕೂ ಮೊದಲೇ ಬರುವ ಪ್ರತಿಕ್ರಿಯೆಗಳು ಸಂಥಿಂಗ್ ಈಸ್ ರಾಂಗ್ ಇನ್ ಜೆಎನ್‍ಯು ಎಂದು ಅನ್ನಿಸುವುದೂ ಉಂಟು. ಈಗ ಮತ್ತೊಮ್ಮೆ ಅಂತಹುದೇ ರೀತಿಯಲ್ಲಿ ಸುದ್ದಿ ಮಾಡಿದೆ ಜೆಎನ್‍ಯು.

ಜೆಎನ್ಯು ಆವರಣದ ಹಲವು ಕಟ್ಟಡಗಳಲ್ಲಿ ಬ್ರಾಹ್ಮಣ ವಿರೋಧಿ ಘೋಷಣೆಯನ್ನು ಬರೆದು ವಿರೂಪಗೊಳಿಸಲಾಗಿದೆ. ಆ ಬರಹಗಳಲ್ಲಿ..
ಬ್ರಾಹ್ಮಣರು ಕ್ಯಾಂಪಸ್ ಬಿಟ್ಟು ತೊಲಗಿ..
ಇಲ್ಲಿ ರಕ್ತಪಾತವಾಗಲಿದೆ
ಬ್ರಾಹ್ಮಣ್ ಭಾರತ್ ಚೋಡೋ
ಬ್ರಾಹ್ಮಣ-ಬನಿಯಾಗಳೇ ನಿಮ್ಮ ಬಳಿ ನಾವು ಬರುತ್ತಿದ್ದೇವೆ, ನಿಮ್ಮ ವಿರುದ್ಧ ಸೇಡು ತೀರಿಸಿಕೊಳ್ಳುತ್ತೇವೆ
ಇಂತಹ ಬರಹಗಳನ್ನು ಕೆಂಪುಬಣ್ಣದ ಅಕ್ಷರಗಳಲ್ಲಿ ಬರೆದು ಕೊನೆಯಲ್ಲಿ ಜೈಭೀಮ್ ಎಂದು ಹಸಿರು ಬಣ್ಣದಲ್ಲಿ ಬರೆಯಲಾಗಿದೆ. ಈ ಮೂಲಕ ಮತ್ತೊಮ್ಮೆ ಅಂಬೇಡ್ಕರ್ ಅವರನ್ನು ಗುರಾಣಿಯನ್ನಾಗಿ ಬಳಸಿಕೊಳ್ಳುವ ಯತ್ನವೂ ಇದೆ. ಘೋಷಣೆಗಳನ್ನು ಬರೆದಿದ್ದಲ್ಲದೆ ಇದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಈ ಬಗ್ಗೆ ಜೆಎನ್ಯು ಉಪಕುಲಪತಿ ವಿವಿಯ ಕುಂದುಕೊರತೆ ಸಮಿತಿಯಿಂದ ವರದಿ ನೀಡುವಂತೆ ಸೂಚಿಸಿದ್ದಾರೆ. ಪ್ರಕರಣದ ಕುರಿತಾಗಿ ಕೂಲಂಕಷ ತನಿಖೆ ನಡೆಸಿ ಅದರ ವರದಿಯನ್ನು ಶೀಘ್ರದಲ್ಲಿ ನೀಡಬೇಕು ಎಂದು ಹೇಳಿದ್ದಾರೆ. ಜೆಎನ್ಯು ಆವರಣದ ಸ್ಕೂಲ್ ಆಫ್ ಇಂಟರ್ನ್ಯಾಷನಲ್ ಸ್ಟಡೀಸ್ನಲ್ಲಿ ಕೆಲವು ಅಪರಿಚಿತ ವ್ಯಕ್ತಿಗಳು, ಅಧ್ಯಾಪಕರ ಕೊಠಡಿಗಳು ಹಾಗೂ ಆವರಣದ ಗೋಡೆಗಳ ಮೇಲೆ ಬ್ರಾಹ್ಮಣ ವಿರೋಧಿ ಬರಹಗಳನ್ನು ಬರೆದು ವಿರೂಪ ಮಾಡಲಾಗಿದೆ. ಇದನ್ನು ಉಪಕುಲಪತಿಗಳು ಗಂಭೀರವಾಗಿ ಪರಿಗಣಿಸಿದ್ದಾರೆ. ಕ್ಯಾಂಪಸ್ನ ಆವರಣದಲ್ಲಿ ಈ ರೀತಿಯ ವರ್ತನೆಯನ್ನು ಎಂದಿಗೂ ಸಹಿಸಲು ಸಾಧ್ಯವಿಲ್ಲ. ಜೆಎನ್ಯು ಎನ್ನುವುದು ಎಲ್ಲರಿಗೂ ಸೇರಿರುವ ವಿಶ್ವವಿದ್ಯಾಲಯ ಆಗಿರುವ ಕಾರಣ ಇಂಥ ಘಟನೆಯನ್ನು ಸಹಿಸೋದಿಲ್ಲ ಎಂದು ವಿಶ್ವವಿದ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಮ್ಯುನಿಸ್ಟ್ ಗೂಂಡಾಗಳಿಂದ ಶೈಕ್ಷಣಿಕ ಜಾಗವನ್ನು ಧ್ವಂಸಗೊಳಿಸುವುದನ್ನು ಎಬಿವಿಪಿ ಖಂಡಿಸುತ್ತದೆ.. ಮುಕ್ತ ಚಿಂತನೆಯ ಪ್ರಾಧ್ಯಾಪಕರ ಚೇಂಬರ್ಗಳನ್ನು ಇವರು ವಿರೂಪ ಮಾಡಿದ್ದಾರೆ ಎಂದು ಎಬಿವಿಪಿ ಜೆಎನ್ಯು ಅಧ್ಯಕ್ಷ ರೋಹಿತ್ ಕುಮಾರ್ ಹೇಳಿದ್ದಾರೆ. ಜೆಎನ್ಯು ಪ್ರಾಧ್ಯಾಪಕರ ವರ್ಗ ಕೂಡ ಈ ವಿಧ್ವಂಸತೆಯನ್ನು ಖಂಡಿಸಿದೆ. ಇದಕ್ಕೆ ಎಡಪಂಥೀಯ ವಿಚಾರಧಾರೆಯ ಗ್ಯಾಂಗ್ ಕಾರಣ ಎಂದು ಹೇಳಿದೆ.
ಈ ಬಗ್ಗೆ ನಮ್ಮ ಹೋರಾಟ ಬ್ರಾಹ್ಮಣ್ಯದ ವಿರುದ್ಧ, ಬ್ರಾಹ್ಮಣರ ವಿರುದ್ಧ ಅಲ್ಲ ಎನ್ನುವ ಎಡಪಂಥೀಯರು, ಬುದ್ದಿಜೀವಿಗಳು, ಚಿಂತಕರು ಈ ಬಗ್ಗೆ ತುಟಿ ಬಿಚ್ಚಿಲ್ಲ. ರೌಡಿಗಳು, ಅಂಡರ್‍ವಲ್ರ್ಡ್ ಡಾನ್‍ಗಳು ಪೊಲೀಸರ ಕಾಟ ಜಾಸ್ತಿಯಾದಾಗ ಭೂಗತರಾಗುತ್ತಾರೆ. ಪೊಲೀಸರು ಸೇರಿದಂತೆ ಯಾವುದೇ ತನಿಖಾ ಸಂಸ್ಥೆಯ ಜಾಡಿಗೂ ಸಿಗುವುದಿಲ್ಲ. ಅಂದರ್ ಆಗುತ್ತಾರೆ. ಜೆಎನ್‍ಯು ಬೆಂಬಲಕ್ಕೆ ಸದಾಕಾಲ ನಿಲ್ಲುವ ಸಾಹಿತಿಗಳು, ಚಿಂತಕರು, ಬುದ್ದಿಜೀವಿಗಳು ರೌಡಿಗಳಂತೂ ಖಂಡಿತಾ ಅಲ್ಲ. ಆದರೆ ತಮ್ಮ ಹೇಳಿಕೆಗಳಿಗೆ ವಿರುದ್ಧದ ಬೆಳವಣಿಗೆಗಳು ನಡೆದಾಗ ಬಂದರ್ ಆಗುತ್ತಾರೆ.

ಈಗ ಜೆಎನ್‍ಯುನಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ದೇಶದಾದ್ಯಂತ ಸದ್ದು ಮಾಡುತ್ತಿವೆ. ವಿವಿಯ ಪ್ರೊಫೆಸರುಗಳಾದ ನಳಿನ್ ಕುಮಾರ್ ಮೊಹಾಪಾತ್ರ, ರಾಜ್ ಯಾದವ್, ಪ್ರವೇಶ್ ಕುಮಾರ್, ವಂದನಾ ಮಿಶ್ರಾ ಮೊದಲಾದವರ ಕೊಠಡಿ ಮೇಲೆ ಈ ರೀತಿ ಗೋ ಬ್ಯಾಕ್ ಟು ಶಾಖಾ ಅಂತ ಬರೆದಿದ್ದು, ಅವರಿಗೆ ಸದ್ಯಕ್ಕೆ ಭದ್ರತೆ ನೀಡಲಾಗಿದೆ.



