ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ಭಯಾನಕ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಾ ಹೋದಂತೆ, ಒಂದೊಂದೇ ಮಾಹಿತಿ ಹೊರಬೀಳುತ್ತಿದ್ದಂತೆ ಪೊಲೀಸರೇ ಬೆಚ್ಚಿ ಬೀಳುತ್ತಿದ್ದಾರೆ. ಏಕೆಂದರೆ ಶ್ರದ್ಧಾಳನ್ನು ಕೊಂದ ಅಫ್ತಾಬ್‍ನ ಕ್ರೌರ್ಯವೇ ಹಾಗಿದೆ. ಅಫ್ತಾಬ್ ಪ್ರೀತಿಗಾಗಿ ಹೆತ್ತವರನ್ನೇ ಬಿಟ್ಟು ಬಂದು 35 ತುಂಡುಗಳಾದ ಶ್ರದ್ಧಾ ಕೇಸ್ ಮೇಲ್ನೋಟಕ್ಕೆ ಕಾಣುವಷ್ಟು ಸರಳವಲ್ಲ. ಇದೊಂದು ಶಟ್ & ಕ್ಲೋಸ್ ಎಂದು ಕೆಲವು ಹಿರಿಯ ಅಧಿಕಾರಿಗಳೇ ಹೇಳುತ್ತಿರುವುದು ಅಚ್ಚರಿ ಮೂಡಿಸುವುದು ಸತ್ಯ. ಏಕೆಂದರೆ ಕೋರ್ಟು ಮೀಡಿಯಾಗಳಲ್ಲಿ ಬಂದಂತೆಯೇ ತೀರ್ಪು ನೀಡುವುದಿಲ್ಲ. ಸಾಕ್ಷಿಗಳನ್ನು ಅಧ್ಯಯನ ಮಾಡುತ್ತದೆ. ಪ್ರಬಲವಾದ ಸಾಕ್ಷಿಗಳೇ ಇದ್ದರೂ ಒಂದು ಲೂಪ್ ಹೋಲ್ ಇದ್ದರೂ ಅಫ್ತಾಬ್ ತಪ್ಪಿಸಿಕೊಳ್ಳಬಹುದು. ಹೀಗಾಗಿ ಪೊಲೀಸರು ಕಾಂಕ್ರೀಟ್ ಎವಿಡೆನ್ಸ್ ಕಲೆಕ್ಟ್ ಮಾಡುತ್ತಿದ್ದಾರೆ. ಅಂದರೆ ಪೊಲೀಸ್ ಭಾಷೆಯಲ್ಲಿ ಆರೋಪಿ ತಪ್ಪಿಸಿಕೊಳ್ಳಲು ಒಂದು ಲೂಪ್ ಹೋಲ್ ಕೂಡಾ ಸಿಗದಂತೆ ಸಾಕ್ಷಿ ಸಂಗ್ರಹಿಸುವುದು. ಈಗ ಸಿಕ್ಕಿರುವ ಸಾಕ್ಷಿಗಳು ಹಾಗೂ ಪೊಲೀಸರಿಗೆ ಇನ್ನೂ ಸಿಗಬೇಕಿರುವ ಸಾಕ್ಷಿಗಳು ಅತ್ಯಂತ ಮುಖ್ಯವಾಗುತ್ತವೆ.
ಸಿಕ್ಕಿರುವ ಸಾಕ್ಷಿಗಳಲ್ಲಿ ಅಫ್ತಾಬ್ ತಪ್ಪೊಪ್ಪಿಗೆ ಹೇಳಿಕೆ ಇದೆ. ತಾನು ಶ್ರದ್ದಾಳನ್ನು ಹೇಗೆ ಕೊಂದೆ, ಕತ್ತರಿಸಿದೆ, ದೇಹದ ತುಂಡುಗಳನ್ನು ಎಲ್ಲೆಲ್ಲಿ ಬಿಸಾಕಿದೆ, ಆತನ ಬೇರೆ ಬೇರೆ ಅಫೇರ್‍ಗಳು.. ಇವೆಲ್ಲವನ್ನೂ ಹೇಳಿದ್ದಾನೆ. ಆದರೆ ಆತನ ತಪ್ಪೊಪ್ಪಿಗೆ ಹೇಳಿಕೆಯೊಂದೇ ಸಾಕಾಗುವುದಿಲ್ಲ. ಅದಕ್ಕೆ ಪೂರಕ ಸಾಕ್ಷಿಗಳನ್ನೂ ಪೊಲೀಸರು ಹೊಂದಿಸಬೇಕು. ಆತ ಫ್ರಿಡ್ಜ್ ಖರೀದಿಸಿರುವುದು ಹಾಗೂ ಆತನ ಮನೆಯಲ್ಲಿಯೇ ಇರುವ ಫ್ರಿಡ್ಜ್ ಸಿಕ್ಕಿದೆ. ಆದರೆ ಅದೇ ಫ್ರಿಡ್ಜ್‍ನಲ್ಲಿಯೇ ಶ್ರದ್ಧಾಳ ದೇಹವನ್ನು ತುಂಡು ತುಂಡು ಮಾಡಿ ಇಟ್ಟಿದ್ದನ್ನು ಪೊಲೀಸರು ಸಾಬೀತು ಮಾಡಬೇಕು. ವೈಜ್ಞಾನಿಕ ಸಾಕ್ಷಿಗಳನ್ನು ಸಂಗ್ರಹಿಸಬೇಕು. ಆದರೆ ಕೊಲೆ ನಡೆದಿರುವುದು ಮೇ 18ರಂದು. ಈಗ ಅಲ್ಲಿ ಹೆಣವಿದ್ದ ಬಗ್ಗೆ ಸೈಂಟಿಫಿಕ್ ಎವಿಡೆನ್ಸ್ ಸಿಗುವುದು ಕಷ್ಟವಾಗಬಹುದು.

ಇನ್ನು ರೆಗ್ಯುಲರ್ ಆಗಿ 300 ರೂ. ಬರುತ್ತಿದ್ದ, ಮಿನಿಮಮ್ ನೀರು ಖರ್ಚು ಮಾಡುತ್ತಿದ್ದ ಅಫ್ತಾಬ್, ಕೊಲೆಯಾದ ತಿಂಗಳು ಮನೆಯ ಕ್ಲೀನಿಂಗ್‍ಗೆ 20 ಸಾವಿರ ಲೀಟರ್ ನೀರು ಬಳಸಿದ್ದಾನೆ. ದುಬಾರಿ ವಾಟರ್ ಬಿಲ್ ಕೂಡಾ ಇದೆ. ಜೊತೆಗೆ ಶ್ರದ್ಧಾಳ ದೇಹವನ್ನು ತುಂಡು ತುಂಡಾಗಿ ಕತ್ತರಿಸುವಾಗ ಕೈಗೆ ಗಾಯವಾಗಿ ಹೊಲಿಗೆ ಹಾಕಿಸಿಕೊಂಡಿದ್ದಕ್ಕೆ ಡಾಕ್ಟರ್ ಪ್ರಿಸ್ಕಿಪ್ಷನ್ ಹಾಗೂ ಡಾಕ್ಟರ್ ಹೇಳಿಕೆ ಇದೆ.
ಮೂಲಗಳ ಪ್ರಕಾರಣ 14ರಿಂದ 18 ಮೂಳೆಗಳು ಸಿಕ್ಕಿವೆ. ಆ ಮೂಳೆಗಳು ಶ್ರದ್ಧಾಳದ್ದೇ ಎನ್ನುವುದು ಇನ್ನೂ ಖಚಿತವಾಗಿಲ್ಲ. ಡಿಎನ್‍ಎ ಟೆಸ್ಟ್ ಇನ್ನೂ ಮುಗಿದಲ್ಲ. ಇವುಗಳು ಸಾಬೀತಾದರೆ ಕ್ರೈಂ ಸೀನ್ ಕ್ರಿಯೇಟ್ ಮಾಡಬಹುದು. ಸಾಂದರ್ಭಿಕ ಸಾಕ್ಷಿಗಳು ಇರುತ್ತವೆ.
ಆತ ತೋರಿಸಿದ ಜಾಗದಲ್ಲಿ ಸಿಕ್ಕ ಮೂಳೆಗಳು ಶ್ರದ್ಧಾಳದ್ದೇ ಆಗಿದ್ದರೆ ವಿಡಿಯೋ ಎವಿಡೆನ್ಸ್ ಮತ್ತು ಡಿಎನ್‍ಎ ಮ್ಯಾಚಿಂಗ್ ಮೂಲಕ ಕೋರ್ಟಿನಲ್ಲಿ ಸಾಬೀತು ಮಾಡಬಹುದು. ಅಲ್ಲದೆ ಪೊಲೀಸರು ಇನ್ನೂ ಹುಡುಕುತ್ತಿರುವ ಶ್ರದ್ಧಾಳ ತಲೆಬುರುಡೆ ಸಿಕ್ಕಿಲ್ಲ. ಆ ತಲೆ ಬರುಡೆ ಸಿಕ್ಕರೆ ಅಫ್ತಾಬ್ ಫಿಕ್ಸ್ ಆದಂತೆಯೇ ಲೆಕ್ಕ.

ಅಲ್ಲದೆ ಶ್ರದ್ಧಾಳನ್ನು ಮೇ 18ರಂದೇ ಕೊಂದಿದ್ದರೂ, ಆಕೆ ಅದಾದ ಮೇಲೂ ಬದುಕಿದ್ದಾಳೆ ಎಂದು ಜಗತ್ತಿಗೆ ನಂಬಿಸಿದ್ದ ಅಫ್ತಾಬ್. ಹೀಗಾಗಿ ಪೊಲೀಸರು ನಡೆಸುವ ಮೂಳೆಗಳ ಪರೀಕ್ಷೆ ಶ್ರದ್ಧಾಳದ್ದೇ ಆಗಿದ್ದರೂ ಆಕೆಯ ಸಾವಿನ ದಿನಾಂಕ ಆದಷ್ಟೂ ಖಚಿತವಾಗಿರಬೇಕು. ಆಕೆಯ ಮೊಬೈಲ್ ಸಿಗಬೇಕು. ಮೊಬೈಲ್ ಡೇಟಾ ದಾಖಲೆಯಾಗಬೇಕು. ಅವೆಲ್ಲವೂ ಅಫ್ತಾಬ್ ವಿರುದ್ಧದ ಸಾಕ್ಷಿಗಳಾಗಲಿವೆ. ಇದರ ಮಧ್ಯೆ ಶ್ರದ್ಧಾಳ ಸಾವಿನ ನಂತರ ಅಕೆಯ ಮೊಬೈಲ್‍ನಿಂದಲೇ ತನ್ನ ಅಕೌಂಟ್‍ಗೆ 54 ಸಾವಿರ ಹಾಕಿಕೊಂಡಿದ್ದಾನೆ. ಇದು ಪ್ರಬಲ ಸಾಕ್ಷಿಯಾಗಲಿದೆ.
ಇನ್ನ ಅಫ್ತಾಬ್ ಇಡೀ ಮನೆಯನ್ನ ಕೆಮಿಕಲ್ ಹಾಕಿ ಉಜ್ಜಿ ಉಜ್ಜಿ ತೊಳೆದಿದ್ದಾನೆ. 5 ತಿಂಗಳು ಕಳೆದುಹೋಗಿವೆ. ಅಲ್ಲೇನಾದರೂ ಶ್ರದ್ಧಾಳ ದೇಹದ ಕಲೆಗಳು ಉಳಿದಿರುವ ಸಾಧ್ಯತೆ ಕಡಿಮೆ. ಸಿಕ್ಕರೆ ಅದು ಪ್ರಬಲವಾದ ಸಾಕ್ಷಿಯಾಗಲಿದೆ. ಜೊತೆಗೆ ಶ್ರದ್ಧಾ ಧರಿಸಿದ್ದ ಬಟ್ಟೆ ಸಿಕ್ಕರೂ ಸ್ಟ್ರಾಂಗ್ ಎವಿಡೆನ್ಸ್ ಆಗಲಿದೆ.
ಆದರೆ ಪೊಲೀಸರಿಗೆ ತಲೆನೋವಾಗಿರುವುದು ಏನು ಗೊತ್ತೇ. ಅಫ್ತಾಬ್ ಶ್ರದ್ದಾಳನ್ನು ಕೇವಲ 35 ತುಂಡುಗಳಾಗಿ ಕತ್ತರಿಸಿಲ್ಲ. ಅದಾದ ನಂತರ ಅವನ್ನು ಬಿಸಾಕುವಾಗ ಅದೇ ತುಂಡನ್ನು ಮತ್ತೆ ಮತ್ತೆ ಕಬಾಬ್ ಪೀಸ್‍ನಂತೆ ಕತ್ತರಿಸಿ ಬೀದಿ ನಾಯಿಗಳಿಗೆ ಹಾಕಿದ್ದಾನೆ. ಆ ಸಾಕ್ಷಿಯಂತೂ ಸಿಗುವ ಸಾಧ್ಯತೆಗಳಿಲ್ಲ. ಮಂಪರು ಪರೀಕ್ಷೆಯ ವರದಿಯನ್ನು ಪ್ರಧಾನವಾಗಿ ಪರಿಗಣಿಸಲಾಗುತ್ತದೆ. ಆದರೆ, ವಿಚಾರಣೆ ಮತ್ತು ಶಿಕ್ಷೆ ಕೇವಲ ಜನ ಅಂದುಕೊಂಡಂತೆ ನಡೆಯವುದಿಲ್ಲ. ಕೋರ್ಟು ಕೋರ್ಟೆ. ಮಾಧ್ಯಮಗಳು ಹೇಳಿದಂತೆ ಕೆಲಸ ಮಾಡುವುದಿಲ್ಲ. ನೋಡುವುದು ಸಾಕ್ಷಿಗಳನ್ನು ಮಾತ್ರ.



