ವರ್ಷಾ ಒಡೆಯರ್. ಬೆಂಗಳೂರು ನಗರ ಜಿಲ್ಲೆ ಉತ್ತರ ತಾಲೂಕಿನ ವಿಶೇಷ ತಹಸೀಲ್ದಾರ್. 2014ನೇ ಸಾಲಿನ ಕೆಎಎಸ್ ಅಧಿಕಾರಿ. ಈ ಹಿಂದೆ ಚಾಮರಾಜನಗರದ ಯಳಂದೂರು, ರಾಮನಗರ ಜಿಲ್ಲೆಯ ಕನಕಪುರಗಳಲ್ಲಿ ಕೆಲಸ ಮಾಡಿದ್ದವರು. ಜನಪ್ರಿಯರಾಗಿದ್ದರು. ಎರಡೂ ಕಡೆ ಜನಪ್ರಿಯರೂ ಆಗಿದ್ದರು. ಹಾಗೆಯೇ ವಿವಾದವನ್ನೂ ಸೃಷ್ಟಿಸಿಕೊಂಡಿದ್ದರು. ಕನಕಪುರದಲ್ಲಂತೂ ಡಿಕೆ ಶಿವಕುಮಾರ್ ಮತ್ತು ಡಿಕೆ ಸುರೇಶ್ ಅವರು ಬಹಿರಂಗವಾಗಿ ಕಿಡಿ ಕಾರುವಷ್ಟರಮಟ್ಟಿಗೆ ಪ್ಯಾಪುಲರ್ ಆಗಿದ್ದರು. ಬಡವರ ಮನೆಯಲ್ಲಿ ಊಟ, ಸ್ಥಳಗಳಿಗೆ ಭೇಟಿ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುವುದು ಸೇರಿದಂತೆ ಹಲವು ವಿಷಯಗಳಲ್ಲಿ ಕ್ಯಾಮೆರಾಗೆ ಸಿಗುತ್ತಿದ್ದ ವರ್ಷಾ ಒಡೆಯರ್ ಅವರ ಪರವಾಗಿ ನಮ್ಮ ತಹಸೀಲ್ದಾರ್ ನಮ್ಮ ಹೆಮ್ಮೆ ಎಂದು ಹೇಳಿಕೊಂಡು ಯುವಕರು ಅಭಿಯಾನವನ್ನೇ ಆರಂಭಿಸಿದ್ದಾರೆ. ಅಂತಹ ವರ್ಷಾ ಒಡೆಯರ್ ಈಗ ಅರೆಸ್ಟ್ ಆಗಿದ್ದಾರೆ.
ಖಾತೆಯ ಬದಲಾವಣೆಗೆ 5 ಲಕ್ಷ ರೂ. ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಾರೆ. ತಹಸೀಲ್ದಾರ್ ವರ್ಷಾ ಒಡೆಯರ್ ಜೊತೆ ಅವರ ಮಧ್ಯವರ್ತಿಯಾಗಿದ್ದ ರಮೇಶ್ ಕೂಡಾ ಅರೆಸ್ಟ್ ಆಗಿದ್ದಾನೆ. ಕಂದಾಯ ಭವನದ ಸಮೀಪ ಸೇಂಟ್ ಮಾರ್ಥಸ್ ಆಸ್ಪತ್ರೆ ಬಳಿ ಪಾರ್ಕಿಂಗ್ ಜಾಗವಿದೆ. ಅಲ್ಲಿಯೇ ಕಾಂತರಾಜು ಎಂಬುವವರಿಂದ ವರ್ಷಾ ಲಂಚ ಪಡೆಯುತ್ತಿದ್ದರು. ಲಂಚ ಪಡೆಯುತ್ತಿದ್ದಾಗಲೇ ಸಿಕ್ಕುಬಿದ್ದಿದ್ದಾರೆ. ದೂರುದಾರ ಕಾಂತರಾಜ್ ದಾಸನಪುರ ಹೋಬಳಿ ಕೆಂಗನಹಳ್ಳಿ ಗ್ರಾಮದಲ್ಲಿ ಲಲಿತ್ ಕುಮಾರ್ ಎಂಬುವವರ ಬಳಿ 2 ಎಕರೆ ಜಮೀನು ಖರೀದಿಸಿದ್ದರು. ಆದರೆ ಪಹಣಿಯಲ್ಲಿ ಲಲಿತ್ ಕುಮಾರ್ ಹೆಸರು ಇರಲಿಲ್ಲ. ಲಲಿತ್ ಕುಮಾರ್ ಅವರ ಪರವಾಗಿ ಪಹಣಿಗೆ ಹೆಸರು ಸೇರಿಸುವಂತೆ ಕಾಂತರಾಜು ಅರ್ಜಿ ಸಲ್ಲಿಸಿದ್ದರು. ಆದೇಶವೂ ಆಗಿತ್ತು. ಆದರೆ ಆ ಅರ್ಜಿ ವರ್ಷಾ ಒಡೆಯರ್ ಅವರ ಬಳಿ ಬಂದಾಗ ಎಕರೆಗೆ 5 ಲಕ್ಷದಂತೆ 10 ಲಕ್ಷ ಲಂಚ ಕೇಳಿದ್ದರು. ನಿಮ್ಮ ಜಮೀನಿಗೆ ಕೋಟ್ಯಂತರ ರೂಪಾಯಿ ಮೌಲ್ಯವಿದೆ ಎಂದು ಹೇಳಿ ಮಧ್ಯವರ್ತಿ ರಮೇಶ್ ಮೂಲಕ ಲಂಚ ಕೇಳಿದ್ದರು. ರಮೇಶ್ ಹಣ ಪಡೆದುಕೊಂಡಿದ್ದ. ಆಗಲೇ ರಮೇಶ್‍ನನ್ನು ಪೊಲೀಸರು ಅರೆಸ್ಟ್ ಮಾಡಿದ್ದರು. ಅದಾದ ನಂತರ ರಮೇಶ್ ಇದು ನನ್ನ ಹಣವಲ್ಲ, ವರ್ಷಾ ಒಡೆಯರ್ ಅವರ ಹಣ ಎಂದು ಪೊಲೀಸರಿಗೆ ಹೇಳಿದ್ದ. ಅದರಂತೆಯೇ ರಮೇಶ್‍ನನ್ನು ಪೊಲೀಸರು ತಹಸೀಲ್ದಾರ್ ಕಚೇರಿಗೆ ಕರೆದುಕೊಂಡು ಹೋದರು. ಪೊಲೀಸರು ಮರೆಯಲ್ಲಿ ನಿಂತರು. ರಮೇಶ್, ಕಾಂತರಾಜು ಅವರಿಂದ ಹಣ ಬಂದಿದೆ ಎಂದು ಹೇಳಿ 5 ಲಕ್ಷ ಹಣ ಕೊಟ್ಟ. ವರ್ಷಾ ಅದನ್ನು ಸ್ವೀಕರಿಸಿದರು. ತಕ್ಷಣ ಪ್ರತ್ಯಕ್ಷರಾದ ಪೊಲೀಸರು ವರ್ಷಾ ಅವರನ್ನು ಅರೆಸ್ಟ್ ಮಾಡಿದ್ದಾರೆ.

ವರ್ಷಾ ಒಡೆಯರ್ ಅಧಿಕಾರ ಸ್ವೀಕರಿಸಿ ಇನ್ನೂ 8 ವರ್ಷವಷ್ಟೇ ಆಗಿದೆ. ಕ್ಯಾಮೆರಾ ಎದುರು ಪೋಸ್ ಕೊಟ್ಟು ಜನಪ್ರಿಯರಾಗಿದ್ದರು. ಆದರೆ ಪ್ರಾಮಾಣಿಕರೇನೂ ಆಗಿರಲಿಲ್ಲ. ಆಕೆಯ ಡ್ರಾಮಾ ನೋಡಿಯೇ ಕೆಲವು ಸಂಘಟನೆಗಳು ಆಕೆ ಪ್ರಾಮಾಣಿಕರು ಎಂಬ ಭ್ರಮೆಯಲ್ಲಿ ಬಿದ್ದು ಆಕೆಯ ಬೆಂಬಲಕ್ಕೆ ನಿಂತಿದ್ದವು. ಜೊತೆಗೆ ಡಿಕೆ ಬ್ರದರ್ಸ್ ಎದುರು ಹಾಕಿಕೊಂಡಾಗ ಆಕೆ ನಿಜಕ್ಕೂ ಖಡಕ್ ಆಫೀಸರ್ ಇರಬೇಕು ಎಂದು ಭ್ರಮಿಸಿದ್ದವು. ಹೀಗಾಗಿಯೇ ಆಕೆಯ ಪರ ಹಲವು ಸಂಘಟನೆಗಳು ಬಹಿರಂಗವಾಗಿ ಪ್ರತಿಭಟನೆ ನಡೆಸಿದ್ದವು. ಆದರೆ ಆಕೆ ಆ ರೀತಿ ಇರಲಿಲ್ಲ ಎಂದು ಕಂದಾಯ ಭವನದ ಸಿಬ್ಬಂದಿ ಗುಟ್ಟಾಗಿ ಹೇಳುತ್ತಾರೆ. ಸದ್ಯಕ್ಕೆ ವರ್ಷಾ ಅವರನ್ನು ಅರೆಸ್ಟ್ ಮಾಡಲಾಗಿದೆ. ತನಿಖೆ ಮತ್ತು ವಿಚಾರಣೆ ನಡೆಯಬೇಕಿದೆ.



