ಇತ್ತೀಚೆಗಷ್ಟೇ ಕರಾವಳಿಯಲ್ಲಿ ಸ್ಫೋಟಿಸಿದ್ದ ಕುಕ್ಕರ್ ಇಡೀ ರಾಜ್ಯದ ಜನರನ್ನು ಆತಂಕಕ್ಕೆ ದೂಡಿತ್ತು. ಶಂಕಿತ ಉಗ್ರ ಶಾರೀಕ್, ಪ್ರಾಣಾಪಾಯವಾಗದೇ ಇದ್ದರೂ ಸ್ಫೋಟದ ತೀವ್ರತೆ ಗಂಭೀರವಾಗಿಯೇ ಇತ್ತು. ಕುಕ್ಕರ್‍ನಲ್ಲಿ ಬಾಂಬ್ ಇಟ್ಟು ಸ್ಫೋಟಿಸೋಕೆ ಸಾಧ್ಯವಾ ಎಂದು ಜನ ಅಚ್ಚರಿಗೊಂಡಿದ್ದರಾದರೂ, ಅನಾಹುತವಾಗದೇ ಇದ್ದ ಕಾರಣ ನಿಟ್ಟುಸಿರುಬಿಟ್ಟಿದ್ದರು. ಈಗ ಮಿಕ್ಸರ್ ಸರದಿ. ಹಾಸನದಲ್ಲೀಗ ಒಂದು ಮಿಕ್ಸಿ ಬ್ಲಾಸ್ಟ್ ಆಗಿದೆ. ಮತ್ತೆ ಆತಂಕ. ಹಾಸನದ ಕೊರಿಯರ್ ಶಾಪ್ ಗೆ ಒಂದು ಮಿಕ್ಸಿ ಪಾರ್ಸಲ್ ಬಂದಿತ್ತು. ಆ ಮಿಕ್ಸಿ ಬ್ಲಾಸ್ಟ್ ಆಗಿ ಆತಂಕ ಮೂಡಿಸಿದೆ.

ಹಾಸನ ನಗರದ ಕೆ.ಆರ್.ಪುರಂ ಬಡಾವಣೆಯ ಸಬ್ ರಿಜಿಸ್ಟರ್ ಕಛೇರಿ ರಸ್ತೆಯಲ್ಲಿರುವ ಡಿಟಿಡಿಸಿ ಕೊರಿಯರ್ ಶಾಪ್ ಗೆ ಎರಡು ದಿನಗಳ ಹಿಂದೆ ಮಿಕ್ಸಿ ಪಾರ್ಸಲ್ ಬಂದಿತ್ತು. ಇದೀಗ ಮಿಕ್ಸಿ ಬ್ಲಾಸ್ಟ್ ಆಗಿದ್ದು, ಕೊರಿಯರ್ ಮಾಲೀಕ ಶಶಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಪಾರ್ಸಲ್ ಬಂದ ಮಿಕ್ಸಿಯನ್ನು ನಗರದ ವ್ಯಕ್ತಿಯೊಬ್ಬರಿಗೆ ಕೊರಿಯರ್ ಮಾಲೀಕ ಶಶಿ ಡಿಲವೆರಿ ಮಾಡಿದ್ದರು. ಎರಡು ದಿನಗಳ ಬಳಿಕ ಮಿಕ್ಸಿ ಸೂಕ್ತ ವಿಳಾಸದಿಂದ ಬಂದಿಲ್ಲ ಎಂದು ಕೊರಿಯರ್ ಸೆಂಟರ್ ಗೆ ಆ ವ್ಯಕ್ತಿ ಪಾರ್ಸಲ್ ವಾಪಸ್ ನೀಡಿದ್ದರು. ವಾಪಸ್ ಪಡೆಯುವ ವೇಳೆ ಕೊರಿಯರ್ ಅಂಗಡಿ ಮಾಲೀಕ ಶಶಿ ಮಿಕ್ಸಿ ಆನ್ ಮಾಡಿ ಪರಿಶೀಲನೆಗೆ ಮುಂದಾದರು. ಮಿಕ್ಸಿ ಆನ್ ಮಾಡುತ್ತಲೇ ಬ್ಲಾಸ್ಟ್ ಆಗಿ ಅದರ ತೀವೃತೆಗೆ ಕೊರಿಯರ್ ಕಛೇರಿಯ ಗ್ಲಾಸ್ ಪುಡಿಪುಡಿಯಾಗಿದೆ. ಗೋಡೆಗಳಿಗೆ ಹಾನಿಯಾಗಿದೆ.

ಬ್ಲಾಸ್ಟ್ ನಿಂದ ಕೊರಿಯರ್ ಶಾಪ್ ಮಾಲೀಕ ಶಶಿ ಅವರ ಬಲಗೈಗೆ ಗಂಭೀರ ಗಾಯವಾಗಿದೆ. ಶಶಿ ಹೊಟ್ಟೆ, ತಲೆಯ ಭಾಗಕ್ಕೂ ಪೆಟ್ಟು ಆಗಿದ್ದು, ಗಾಯಾಳು ಶಶಿಗೆ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಎಸ್ಪಿ ಹರಿರಾಮ್ ಶಂಕರ್ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಕೆಆರ್ ಪುರಂ ನ ಡಿಟಿಡಿಸಿ ಕೊರೊಯರ್ ಶಾಪ್ ನಲ್ಲಿ ಮಿಕ್ಸಿ ಬ್ಲಾಸ್ಟ್ ಆಗಿದೆ. ಸಂಜೆ 7-30 ಕ್ಕೆ ಈ ಬ್ಲಾಸ್ಟ್ ಆಗಿದೆ. ಕೊರಿಯರ್ ಬಂದಿದ್ದ ಮಿಕ್ಸಿ ಬ್ಲಾಸ್ಟ್ ಆಗಿದೆ ಎನ್ನುವ ಮಾಹಿತಿ ಇದೆ ಮಿಕ್ಸಿಯನ್ನು ಆನ್ ಮಾಡಿದಾಗ ಬ್ಲಾಸ್ಟ್ ಎಂದು ಹೇಳಲಾಗುತ್ತಿದೆ, ಆನ್ ಮಾಡದೆಯೇ ಬ್ಲಾಸ್ಟ್ ಆಗಿದೆ ಎಂದೂ ಹೇಳಲಾಗುತ್ತಿದೆ. ಕೊರಿಯರ್ ಆಫೀಸ್ ನಲ್ಲಿ ಕೆಲಸ ಮಾಡೋ ವ್ಯಕ್ತಿಗೆ ದೇಹದ ನಾಲ್ಕು ಭಾಗದಲ್ಲಿ ಪೆಟ್ಟಾಗಿದೆ. ಗಾಯಾಳುಗೆ ಯಾವುದೇ ಪ್ರಾಣಾಪಾಯ ಇಲ್ಲ. ಬ್ಲಾಸ್ಟ್ ಅದ ಮಿಕ್ಸಿಯ ಭಾಗಗಳೇ ತಾಗಿ ಪೆಟ್ಟಾಗಿದೆ. ಮಿಕ್ಸಿಯ ಬ್ಲೇಡ್ ತಾಗಿ ಅವರಿಗೆ ಪೆಟ್ಟಾಗಿದೆ.
ಮೈಸೂರಿನಿಂದ ಎಫ್.ಎಸ್.ಎಲ್ ನವರು ಬರಬೇಕಿದ್ದು ಆ ನಂತರವೇ ಇದು ಎಂತಹ ಪ್ರಕರಣ ಎಂಬ ಮಾಹಿತಿ ಸಿಗಲಿದೆ. ಕೊರಿಯರ್ ಬಂದಿದ್ದು ಎಲ್ಲಿಂದ ಅನ್ನೋ ಮಾಹಿತಿ ಇದೆ. ಎಲ್ಲವನ್ನೂ ನಾವು ಪರಿಶೀಲನೆ ನಡೆಸುತ್ತಿದ್ದೇವೆ. ಯಾರೂ ಊಹಾಪೋಹಗಳಿಗೆ ಒಳಗಾಗಿ ಗೊಂದಲ ಆಗೋದು ಬೇಡ. ಶಾರ್ಟ್ ಸಕ್ರ್ಯೂಟ್ ಅಗಿರುವ ಸಾಧ್ಯತೆಯೂ ಇದೆ ಎಂದು ಹೇಳಿದ್ದಾರೆ ಪೊಲೀಸರು.



