ಮದುವೆಯಾಗುತ್ತೇನೆ ಎಂದು ಪ್ರೀತಿಸಿ ಮೋಸ ಮಾಡಿದ. ಇನ್ನೊಬ್ಬಳನ್ನು ಮದುವೆಯಾಗುತ್ತಿದ್ದಾನೆ. ಮುದುವೆಯಾಗಿದ್ದಾನೆ. ನ್ಯಾಯ ಕೊಡಿ. ಇಂತಹ ಪ್ರಕರಣಗಳು ಪೊಲೀಸರಿಗೆ ಹಾಗೂ ನ್ಯಾಯಾಲಯಗಳಿಗೆ ಹೊಸದಲ್ಲ. ಇಂತಹ ಪ್ರಕರಣಳಿಗೆ ಮಾರ್ಗಸೂಚಿಯಾಬಲ್ಲಂತಹ ತೀರ್ಪು ಹೈಕೋರ್ಟ್ನಿಂದ ಹೊರಬಂದಿದೆ. ಪ್ರೀತಿಸಿ ಮದುವೆಯಾಗದೇ ಇರುವುದು ವಂಚನೆಯ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಹುಡುಗ ಹುಡುಗಿ ಪ್ರೀತಿ ಮಾಡ್ತಾ ಇದ್ದಾರೆ ಅಂದ್ರೆ ಅವರು ಮದುವೆ ಆಗಲೇಬೇಕು. ಇಲ್ಲ ಅಂದ್ರೆ ಅದು ಮಹಾವಂಚನೆ ಅನ್ನೋ ಭಾವನೆ ನಮ್ಮ ಸಮಾಜದಲ್ಲಿ ಇಂದಿಗೂ ಇದೆ. ಆದ್ರೆ ಇದೀಗ ಹೈಕೋರ್ಟ್ ಒಂದು ಮಹತ್ವದ ತೀರ್ಪು ನೀಡಿದ್ದು, ಪ್ರೀತಿ ಮಾಡಿ ಮದುವೆಯಾಗದೇ ಇರುವುದು ವಂಚನೆಯಲ್ಲ ಎಂದು ತೀರ್ಪು ನೀಡಿದೆ.
ಬೆಂಗಳೂರಿನ ರಾಮಮೂರ್ತಿನಗರ ಠಾಣೆಯಲ್ಲಿ ವೆಂಕಟೇಶ್ ಎಂಬುವವರ ವಿರುದ್ಧ ಯುವತಿಯೊಬ್ಬಳು ದೂರು ಸಲ್ಲಿಸಿದ್ದರು. 2020ರ ಮೇ5 ರಂದು ಕೇಸ್ ದಾಖಲಾಗಿ ಎಫ್ಐಆರ್ ಆಗಿತ್ತು. ಇದನ್ನು ಪ್ರಶ್ನಿಸಿ ವೆಂಕಟೇಶ್ ನ್ಯಾಯಾಲಯದ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಈಗ ಎಫ್ಐಆರ್ ರದ್ದು ಮಾಡುವಂತೆ ಸೂಚನೆ ನೀಡಿದೆ.
ವೆಂಕಟೇಶ್ ನನ್ನನ್ನು 8 ವರ್ಷದಿಂದ ಪ್ರೀತಿಸುತ್ತಿದ್ದ. ಎಲ್ಲೆಡೆ ಸುತ್ತಾಡಿಸಿದ್ದ. ಮದುವೆಯಾಗುವ ಭರವಸೆಯನ್ನೂ ನೀಡಿದ್ದ. ಅಷ್ಟೇ ಅಲ್ಲದೆ, ಆತನ ಮನೆಗೂ ಕರೆದುಕೊಂಡು ಹೋಗಿದ್ದ. ಮನೆಯವರ ಎದುರು ಮದುವೆಯಾಗುತ್ತೇನೆ ಎಂದಿದ್ದ. ಇದೀಗ ವೆಂಕಟೇಶ್ ಬೇರೆ ಯುವತಿಯ ಜೊತೆ ಮದುವೆಯಾಗಿದ್ದಾನೆ. ವೆಂಕಟೇಶ್ ನನಗೆ ಮೋಸ ಮಾಡಿದ್ದಾನೆ. ಆತನ ಇಡೀ ಕುಟುಂಬವೇ ನನಗೆ ಮೋಸ ಮಾಡಿದೆ ಎಂದು ತನ್ನ ದೂರಿನಲ್ಲಿ ಉಲ್ಲೇಖಿಸಿದ್ದರು. ನಾನು ಯುವತಿಗೆ ಯಾವುದೇ ಮೋಸ ಮಾಡಿಲ್ಲ. ಯುವತಿ ನೀಡಿದ ದೂರು ಕಾನೂನು ಬಾಹಿರವಾಗಿದ್ದು ಪ್ರಕರಣ ರದ್ದು ಮಾಡುವಂತೆ ವೆಂಕಟೇಶ್ ಹೈಕೋರ್ಟ್ ಮೆಟ್ಟಿಲೇದ್ರು. ಸದ್ಯ ಪ್ರಕರಣ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ.ಕೆ.ನಟರಾಜನ್ ಪ್ರೀತಿಸಿ ಮದುವೆ ಆಗದೇ ಇರೋದು ವಂಚನೆ ಆಗಲ್ಲ ಎಂದು ತೀರ್ಪು ನೀಡಿದ್ದಾರೆ.
ಮದುವೆ ಆಗ್ತೀನಿ ಅಂತ ಭರವಸೆ ನೀಡಿ ಅದನ್ನ ಉಲ್ಲಂಘನೆ ಮಾಡಿದರೆ ಅದನ್ನ ವಂಚನೆ ಎಂದು ವ್ಯಾಖ್ಯಾನಿಸಲು ಸಾಧ್ಯವಿಲ್ಲ. ವಂಚನೆ ಎಂದರೆ ಏನು ಎಂದು ಭಾರತೀಯ ದಂಡ ಸಂಹಿತೆ (ಐಪಿಸಿ)ಯ ಸೆಕ್ಷನ್ 415ರಲ್ಲಿ ಸ್ಪಷ್ಟವಾಗಿ ವ್ಯಾಖ್ಯಾನಿಸಲಾಗಿದೆ. ಮೋಸದ ಉದ್ದೇಶದಿಂದಲೇ ಒಪ್ಪಂದ ಮಾಡಿ ಉಲ್ಲಂಘಿಸಿದರೆ ಮಾತ್ರ ಅದನ್ನ ವಂಚನೆ ಅಪರಾಧದ ಅಡಿ ಶಿಕ್ಷಿಸಲು ಸಾಧ್ಯ. ಆದ್ರೆ ಇಲ್ಲಿ ಮೋಸ ಮಾಡುವ ಉದ್ದೇಶ ಕಂಡು ಬಂದಿಲ್ಲ ಎಂಬ ಅಭಿಪ್ರಾಯಯನ್ನ ಹೈಕೋರ್ಟ್ ಏಕಸದಸ್ಯ ಪೀಠ ವ್ಯಕ್ತಪಡಿಸಿದೆ.



