ನಟ, ಹೋರಾಟಗಾರ, ಸಮಾಜಸೇವಕ.. ಹೀಗೆ ನಾನಾ ಮುಖಗಳೊಂದಿಗೆ ಗುರುತಿಸಿಕೊಳ್ಳುವ ಚೇತನ್ ಕನ್ನಡಿಗರಿಗೆ ಹೆಚ್ಚಾಗಿ ಪರಿಚಯವಾಗಿದ್ದು ಆ ದಿನಗಳು ಎಂಬ ಹಿಟ್ ಸಿನಿಮಾ ಮೂಲಕ. ಇತ್ತೀಚೆಗೆ ಕಾಂತಾರ ಚಿತ್ರದ ಗೆಲುವನ್ನು ಎಲ್ಲರೂ ಸಂಭ್ರಮಿಸುತ್ತಿರುವಾಗ ವಿವಾದದ ಕಿಡಿ ಹೊತ್ತಿಸಿದ್ದರು. ಕಾಂತಾರ ಚಿತ್ರದಲ್ಲಿ ತೋರಿಸಿರುವ ಭೂತಕೋಲ ಹಿಂದೂಗಳ ಆಚರಣೆಯೇ ಅಲ್ಲ. ಅದು ಬುಡಕಟ್ಟು ಜನಾಂಗದವರದ್ದು ಎಂದು ಹೇಳಿದ್ದರು. ಕಾಂತಾರ ಚಿತ್ರದಲ್ಲಿ ಬ್ರಾಹ್ಮಣ್ಯವನ್ನು ಹೇರಲಾಗಿದೆ. ಹಿಂದೂಗಳಲ್ಲಿರುವ ವರಾಹನೇ ಬೇರೆ. ಹಂದಿಯೇ ಬೇರೆ. ನಮ್ಮ ಬುಡಕಟ್ಟು ಜನರ ಆಚರಣೆ ನಂಬಿಕೆಗಳನ್ನು ಹಿಂದೂ ಧರ್ಮಕ್ಕೆ ಸೇರಿಸಲಾಗಿದೆ.. ಹೀಗೆ ಒಂದಿಷ್ಟು ವಾದಗಳನ್ನು ಮುಂದಿಟ್ಟಿದ್ದರು.
ನಾವೂ ಹಿಂದೂಗಳೇ. ಸುಮ್ಮನೆ ಎಲ್ಲದಕ್ಕೂ ವಿವಾದ ಸೃಷ್ಟಿಸಬೇಡಿ. ದೈವದ ಬಗ್ಗೆ ಹೀಗೆಲ್ಲ ಮಾತನಾಡಬೇಡಿ ಎಂದಿದ್ದರು ದೈವಾರಾಧಕರು. ಚೇತನ್ ಸುಮ್ಮನಾಗಲಿಲ್ಲ. ವಿವಾದ ಮುಂದುವರೆಸಿದರು. ಆಗಲೂ ನಾವು ಇದನ್ನು ದೈವದ ನಿರ್ಣಯಕ್ಕೇ ಬಿಡುತ್ತೇವೆ. ದೈವಕ್ಕೆ ಮನವಿ ಮಾಡುತ್ತೇವೆ. ಮುಂದಿನದ್ದು ದೈವದ್ದು ಎಂದರು. ಇಂತಹವುಗಳ ಬಗ್ಗೆ ಮಾತನಾಡುವ ಅರ್ಹತೆ ದೈವಾರಾಧಕರಿಗೆ ಮಾತ್ರ ಇದೆ. ಚೇತನ್ ಬಗ್ಗೆ ನೋ ಕಮೆಂಟ್ಸ್ ಎಂದರು ನಟ, ನಿರ್ದೇಶಕ ರಿಷಬ್ ಶೆಟ್ಟಿ. ಚಿತ್ರ ನೋಡಿದವರೇ ಚೇತನ್ ವಿರುದ್ಧ ಕಿಡಿ ಕಾರಿದರು.
ಚೇತನ್ ಮತ್ತೆ ಮತ್ತೆ ಹೇಳಿಕೆ ನೀಡಿದರು. ಉಡುಪಿಯಲ್ಲಿ ಮೊದಲ ಕೇಸ್ ಆಯ್ತು. ಹಿಂದೂಗಳ ಧಾರ್ಮಿಕ ನಂಬಿಕೆ, ಭಾವನೆಗಳಿಗೆ ಧಕ್ಕೆ ತರುತ್ತಿದ್ದಾರೆ ಎಂದು ಉಡುಪಿ ಜಿಲ್ಲೆಯಲ್ಲಿ ಹಿಂದೂ ಜಾಗರಣ ವೇದಿಕೆ ದೂರು ಕೊಟ್ಟಿತ್ತು. ಆ ಹಿನ್ನೆಲೆಯಲ್ಲಿ ಎಫ್‍ಐಆರ್ ಹಾಕಲಾಗಿತ್ತು. ಇನ್ನೂ ವಿಚಾರಣೆ ಶುರುವಾಗಿಲ್ಲ. ಈಗ ಮತ್ತೊಂದು ಎಫ್‍ಐಆರ್ ಬಿದ್ದಿದೆ.
ಶಿವಕುಮಾರ್ ಎಂಬುವರು ಶೇಷಾದ್ರಿಪುರಂ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ. ಹಿಂದೂಗಳ ಧಾರ್ಮಿಕ ನಂಬಿಕೆ, ಭಾವನೆಗೆ ಧಕ್ಕೆ ಮಾಡಬೇಕು ಎಂದೇ ಉದ್ದೇಶಪೂರ್ವಕವಾಗಿ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ ಎಂದು ದೂರು ಕೊಟ್ಟಿದ್ದಾರೆ. ಪೊಲೀಸರು ಎಫ್‍ಐಆರ್ ದಾಖಲು ಮಾಡಿದ್ದು ವಿಚಾರಣೆ ಆರಂಭಿಸಲಿದ್ದಾರೆ. ರಾಜ್ಯದ ಇನ್ನೂ ಹಲವೆಡೆ ಚೇತನ್ ವಿರುದ್ಧ ದೂರು ದಾಖಲಾಗುವ ಸಾಧ್ಯತೆಗಳಿವೆ. ಏಕೆಂದರೆ ಚೇತನ್ ಹೇಳಿಕೆಗಳು ಇನ್ನೂ ತಣ್ಣಗಾಗಿಲ್ಲ.



