ಮಾರ್ಚ್ 31ರಂದು ಕನಕಪುರದ ಸಾತನೂರು ಬಳಿ ಪುನೀತ್ ಕೆರೆಹಳ್ಳಿ ಹಾಗೂ ತಂಡ ಗೋವುಗಳನ್ನು ಸಾಗಿಸುತ್ತಿದ್ದ ಕ್ಯಾಂಟರ್ ತಡೆದು ಜಾನುವಾರು ರಕ್ಷಣೆ ಮಾಡಿದ್ದರು. ಆದರೆ, ಮರುದಿನ ಅಂದರೆ ಏಪ್ರಿಲ್ 1 ರಂದು ಕ್ಯಾಂಟರ್ನಲ್ಲಿದ್ದ ಮಂಡ್ಯದ ಗುತ್ತಲು ನಿವಾಸಿ ಇದ್ರೀಷ್ ಪಾಷಾ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಇದ್ರೀಷ್ ಪಾಷಾ ಅವರ ಮೃತದೇಹ ಸಾತನೂರು ಗ್ರಾಮದ ಬಳಿ ಶವವಾಗಿ ಪತ್ತೆಯಾಗಿದ್ದರು.
ಈ ಹಿನ್ನೆಲೆ ಮೃತನ ಸಹೋದರ ಯೂನುಸ್ ಪಾಷಾ ಸಾತನೂರು ಪೊಲೀಸ್ ಠಾಣೆಗೆ ಪುನೀತ್ ಕೆರೆಹಳ್ಳಿ ಸೇರಿ ಇತರರರ ವಿರುದ್ಧ ದೂರು ಸಲ್ಲಿಸಿದ್ದರು. ಮೃತನ ಸಹೋದರನ ದೂರಿನಂತೆ ದೂರಿನಂತೆ ಪೊಲೀಸರು ಐಪಿಸಿ ಸೆಕ್ಷನ್ 341, 504, 506, 324, 302, 34ರ ಅಡಿ ಪ್ರಕರಣ ದಾಖಲಾಗಿತ್ತು. ದೂರು ದಾಖಲಾಗುತ್ತಿದ್ದಂತೆ ಪುನೀತ್ ಕೆರೆಹಳ್ಳಿ ಮತ್ತು ಅವರ ತಂಡ ತಲೆಮರೆಸಿಕೊಂಡಿತ್ತು. ಈಗ ಪುನೀತ್ ಕೆರೆಹಳ್ಳಿ ಮತ್ತು ಟೀಂ ಅನ್ನು ಪೊಲೀಸರು ರಾಜಸ್ಥಾನದಲ್ಲಿ ಬಂಧಿಸಿದ್ದು, ರಾಜಸ್ಥಾನದಿಂದ ಅವರನ್ನು ಕರೆದುಕೊಂಡು ಬರುತ್ತಿದ್ದಾರೆ. ಪುನೀತ್ ಕೆರೆಹಳ್ಳಿ ಸೇರಿ ರಾಮನಗರದ ಗೋಪಿ, ತೀರ್ಥಹಳ್ಳಿಯ ಪವನ್ ಕುಮಾರ್, ಬಸವನಗುಡಿಯ ಪಿಲ್ಲಿಂಗ್ ಅಂಬಿಗಾರ್, ರಾಯಚೂರಿನ ಸುರೇಶ್ ರನ್ನ ಬಂಧಿಸಲಾಗಿದೆ.
ವಿಡಿಯೋ ಮೂಲಕ ಸಿಕ್ಕಿತ್ತು ಲೊಕೇಷನ್ ಕ್ಲೂ
ಆರೋಪಿಗಳನ್ನು ಬಂಧಿಸಲು ರಾಮನಗರ ಎಸ್ಪಿ ಕಾರ್ತಿಕ್ ರೆಡ್ಡಿ ಅವರು ನಾಲ್ಕು ತಂಡಗಳನ್ನು ರಚಿಸಿದ್ದರು. ಅತ್ತ ಪುನೀತ್ ಕೆರೆಹಳ್ಳಿ ನಾನೆಲ್ಲೂ ಓಡಿ ಹೋಗಿಲ್ಲ. ನನ್ನ ವಿರುದ್ಧ ಎಫ್ಐಆರ್ ದಾಖಲಾಗಿದ್ದರೆ ವಿಚಾರಣೆ ಎದುರಿಸುತ್ತೇನೆ. ಪ್ರಕರಣದ ವಿಚಾರವಾಗಿ ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇನೆ ಎಂದು ವಿಡಿಯೋ ಮಾಡಿ ಬಿಟ್ಟಿದ್ದರು. ಆ ವಿಡಿಯೋ ಅಪ್‍ಲೋಡ್ ಆದ ಸ್ಥಳದ ಟ್ರ್ಯಾಕ್ ಮಾಡಿದ ಪೊಲೀಸರಿಗೆ ಆರೋಪಿಗಳು ರಾಜಸ್ಥಾನದಲ್ಲಿದ್ದಾರೆಂದು ಮಾಹಿತಿ ಸಿಕ್ಕಿತ್ತು. ಬಳಿಕ ರಾಜಸ್ಥಾನ ಪೊಲೀಸರ ಸಹಾಯದಿಂದ ರಾಜಸ್ಥಾನದ ಗಡಿ ಜಿಲ್ಲೆ ಬನಸ್ವಾರ ಎಂಬಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲಿನ ನ್ಯಾಯಾಲಯದ ಅನುಮತಿ ಬಳಿಕ ಆರೋಪಿಗಳನ್ನು ರಾಜ್ಯಕ್ಕೆ ಕರೆತರಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ತಿಳಿಸಿದ್ದಾರೆ. ಆರೋಪಿಗಳನ್ನು ಬಂಧಿಸುವಲ್ಲಿ ಶ್ರಮಿಸಿದ್ದ ಪೊಲೀಸರಿಗೆ 1 ಲಕ್ಷ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.


ಕೊಲೆಯಾದ ಇದ್ರಿಕ್ ಪಾಷಾ ಅವರದ್ದು ಕೊಲೆಯೋ.. ಆಕಸ್ಮಿಕವೋ.. ಎಂಬುದೇ ಇನ್ನೂ ಖಚಿತವಾಗಿಲ್ಲ. ಸೋಷಿಯಲ್ ಮೀಡಿಯಾಗಳ ವಿಡಿಯೋ ನೋಡಿ ಕೇಸ್ ಮಾಡಲು ಬರುವುದಿಲ್ಲ. ಸೋಷಿಯಲ್ ಮೀಡಿಯಾ ಪ್ರಕಾರ ಎಲೆಕ್ಟ್ರಾನಿಕ್ ಶಾಕ್ ಕೊಟ್ಟು, ದೊಣ್ಣೆಗಳಿಂದ ಬಡಿದು ಸಾಯಿಸಿದ್ಧಾರೆ. ಆದರೆ ಪೊಲೀಸರು ಎಫ್‍ಎಸ್‍ಎಲ್ ವರದಿ ಬರುವವರೆಗೆ ಏನನ್ನೂ ಹೇಳೋಕೆ ಬರಲ್ಲ. ಆನಂತರವೇ ಸಾವಿನ ಕಾರಣ ಗೊತ್ತಾಗಲಿದೆ. ಇತ್ತ ಕೊಲೆಯಾದ ಇದ್ರಿಕ್ ಪಾಷಾನ ಪರ ನಿಂತಿರುವ ಮುಸ್ಲಿಂ ಮುಖಂಡರು ಗೋವುಗಳನ್ನು ಸಾಗಿಸುವುದಕ್ಕೆ ಎಲ್ಲ ದಾಖಲೆಗಳಿದ್ದವು. ಪುನೀತ್ ಕೆರೆಹಳ್ಳಿ ಹಣಕ್ಕೆ ಬೇಡಿಕೆ ಇಟ್ಟಿದ್ದ. ಬಳಿಕ ಈತ ಕರೆಂಟ್ ನೀಡಿ ಇದ್ರೀಶ್ ಪಾಷನನ್ನು ಹತ್ಯೆ ಮಾಡಿದ್ದಾನೆ. ಈತನ ಹಿಂದೆ ಕಾಣದ ಶಕ್ತಿಗಳು ಕೆಲಸ ಮಾಡುತ್ತಿವೆ. ಹಿಂದೂ -ಮುಸ್ಲಿಮರುಗಳು ಅಣ್ಣತಮ್ಮರಂತೆ ಬಾಳುತ್ತಿದ್ದೇವೆ. ಕೆಲವರು ಸಮಾಜದ ಸಾಮರಸ್ಯ ಹಾಳು ಮಾಡುತ್ತಿದ್ದಾರೆ. ಇಂತಹವರ ಮೇಲೆ ಕಠಿಣ ಕ್ರಮ ಜರುಗಿಸಬೇಕು ಎಂದಿದ್ದಾರೆ.



