ಇದು ದೇಶವನ್ನೇ ಬೆಚ್ಚಿಬೀಳಿಸಿರುವ ಪ್ರಕರಣ. ಪ್ರೀತಿಸಿ.. ಲಿವಿಂಗ್ ಟುಗೆದರ್ ನಡೆಸಿ ಮದುವೆಯಾಗು ಎನ್ನುತ್ತಿದ್ದಂತೆಯೇ ಕೊಂದು ತುಕ್ಡೇ ತುಕ್ಡೇ ಮಾಡಿ 35 ತುಂಡುಗಳಾಗಿ ಕತ್ತರಿಸಿ ಕತ್ತರಿಸಿ ದೆಹಲಿಯ ಹೊರಗಿನ ಬೇರೆ ಬೇರೆ ಪ್ರದೇಶಗಳಿಗೆ ಎಸೆದು ಬಂದ ಘಟನೆ ಇಡೀ ಇಂಡಿಯಾವನ್ನು ಬೆಚ್ಚಿ ಬೀಳಿಸಿದೆ. ಕೊಲೆ ನಡೆದ 6 ತಿಂಗಳ ನಂತರ ಈ ಘಟನೆ ಬೆಳಕಿಗೆ ಬಂದಿದೆ.
ಅಫ್ತಾಬ್-ಶ್ರದ್ಧಾ ಪರಿಚಯ ಹೇಗಾಯ್ತು?
ಶ್ರದ್ಧಾ ಕೊಲೆಯಾದ ಯುವತಿ, ಆಕೆ ‘ಲೀವ್-ಇನ್’ ಸಂಬಂಧ ಹೊಂದಿದ್ದ ಪ್ರೇಮಿ ಅಫ್ತಾಬ್ ಪೂನಾವಾಲಾ ಆರೋಪಿ. ಮುಂಬೈನ ಹುಡುಗಿ ಶ್ರದ್ಧಾ ಮತ್ತ ಅಫ್ತಾಬ್ ಡೇಟಿಂಗ್ ಆಪ್ ಮೂಲಕ ಪರಿಚಿತರಾಗಿದ್ದರು. ಡೇಟಿಂಗ್ ಆಪ್ ಪರಿಚಯ ಪ್ರೀತಿಗೆ ತಿರುಗಿತ್ತು. ಅವನನ್ನೇ ಮದುವೆಯಾಗುತ್ತೇನೆ ಎಂದಾಗ ಪೋಷಕರು ಒಪ್ಪಲಿಲ್ಲ. ನಾವು ಹಿಂದೂ ಕೋಳಿ ಸಮಾಜದವರು. ಆತ ಮುಸ್ಲಿಂ. ಬಿಲ್‍ಕುಲ್ ಬೇಡ ಎಂದರು. ನಾನು ಮೇಜರ್. ನನಗೂ 25 ವರ್ಷವಾಗಿದೆ. ನನ್ನ ಲೈಫು ನನ್ನದು. ನನ್ನ ಮದುವೆ ನಿರ್ಧಾರಕ್ಕೆ ಅಡ್ಡಿ ಮಾಡಬೇಡಿ ಎಂದು ಹೇಳಿದ ಮನೆ ಬಿಟ್ಟು ಹೋದಳು. ಉ.ಪ್ರದೇಶದ ದೆಹಲಿಗೆ ಸಮೀಪದಲ್ಲೇ ಅಪಾರ್ಟ್‍ಮೆಂಟ್ ಮಾಡಿಕೊಂಡು ಲಿವಿಂಗ್ ರಿಲೇಷನ್‍ಶಿಪ್‍ನಲ್ಲಿದ್ದರು.
ಮದುವೆಯಾಗೋಣ ಎಂದಾಗ ಕೊಂದೇಬಿಟ್ಟ..!

ಲಿವಿಂಗ್ ರಿಲೇಷನ್‍ಶಿಪ್ ತುಂಬಾ ದಿನಗಳೇನೂ ಇರಲಿಲ್ಲ. ಶ್ರದ್ಧಾ ಅಫ್ತಾಬ್‍ಗಾಗಿ ಮನೆ ಬಿಟ್ಟಿದ್ದು ಏಪ್ರಿಲ್‍ನಲ್ಲಿ. ಕೊಲೆಯಾಗಿದ್ದು ಮೇನಲ್ಲಿ. ಅಷ್ಟು ದಿನಗಳಲ್ಲಿ ಶ್ರದ್ಧಾಳ ಮೇಲಿನ ಮೋಹವೂ ಇಳಿದಿತ್ತು. ಹಾಗೆ ಹೇಳಿ ಜಗಳ ಮಾಡಲು ಶುರು ಮಾಡಿದ ತಕ್ಷಣ ಕೊಂದೇ ಬಿಟ್ಟಿದ್ದಾನೆ. ನಂತರ 300 ಲೀ.ನ ಫ್ರಿಡ್ಜ್ ತಂದು ಆಕೆಯ ಹೆಣವನ್ನು ಆ ಫ್ರಿಡ್ಜಿನಲ್ಲಿಟ್ಟು ದಿನವೂ ಕೈ, ಕಾಲು, ತೊಡೆ, ಕೈ.. ಹೀಗೆ ಒಂದೊಂದೇ ಪಾರ್ಟ್ ಕತ್ತರಿಸಿ ಪಾಲಿಥೀನ್ ಕವರ್‍ನಲ್ಲಿ ತುಂಬಿ ದೆಹಲಿಯ ಹೊರ ವಲಯದಲ್ಲಿ ಬೇರೆ ಬೇರೆ ಕಡೆ ಎಸೆದು ಬಂದಿದ್ದಾನೆ. ಅದಕ್ಕಾಗಿಯೇ ಬೆಳಗ್ಗೆ 2 ಗಂಟೆಗೆ ಮನೆ ಬಿಡುತ್ತಿದ್ದನಂತೆ.
ಅಪ್ಪ-ಅಮ್ಮನನ್ನೇ ಬಿಟ್ಟಿದ್ದಳು ಶ್ರದ್ಧಾ
ಕಾಲ್ ಸೆಂಟರ್‍ನಲ್ಲಿ ಪರಿಚಯವಾದ ಅಫ್ತಾಬ್ ಮೇಲಿನ ಪ್ರೀತಿ ಶ್ರದ್ಧಾಗೆ ಹೇಗಿತ್ತೆಂದರೆ ಇದಕ್ಕೆ ತಂದೆ ತಾಯಿ ವಿರೋಧಿಸಿದಾಗ ನಾನು ನಿಮ್ಮ ಮಗಳೇ ಅಲ್ಲ. ನಿಮೊಗೊಬ್ಬ ಮಗಳಿದ್ದಳು ಎನ್ನುವುದನ್ನೇ ಮರೆತುಬಿಡಿ ಎಂದು ಮನೆ ಬಿಟ್ಟು ಬಂದಿದ್ದಳಂತೆ.
ಸೋಷಿಯಲ್ ಮೀಡಿಯಾ ಕೊಟ್ಟ ಸುಳಿವು

ಕೊಲೆಯಾಗಿರುವ ಶ್ರದ್ಧಾ ಅಪ್ಪ-ಅಮ್ಮನನ್ನು ಬಿಟ್ಟು ದೂರವಾಗಿದ್ದಳು. ಪ್ರೀತಿಯ ಬಲೆಯಲ್ಲಿ ಮೋಸ ಅರ್ಥವೂ ಆಗಿರಲಿಲ್ಲ. ಆದರೆ ಇದ್ದಕ್ಕಿದ್ದಂತೆ ಸೋಷಿಯಲ್ ಮೀಡಿಯಾದಿಂದ ಮಗಳು ನಾಪತ್ತೆಯಾದಳು. ಎಲ್ಲೋ ಇದ್ದಾಳೆ. ಅವಳ ಲೈಫು.. ಹಾಳಾಗಿ ಹೋಗಲಿ ಎಂದೇ ಸುಮ್ಮನಿದ್ದ ಅಪ್ಪ-ಅಮ್ಮನಿಗೆ ಅನುಮಾನ ಶುರುವಾಯ್ತು. ತಂದೆ ವಿಕಾಸ್ ಮದನ್ ದೆಹಲಿಗೆ ಬಂದರು. ಮನೆ ಬಳಿ ವಿಚಾರಿಸಿದರು. ಆದರೆ ಮಗಳ ಸುಳಿವಿಲ್ಲ. ಆಕೆಯ ಫ್ರೆಂಡ್ಸ್ ಬಳಿ ವಿಚಾರಿಸಿದರೆ ಅವರಿಗೂ ಗೊತ್ತಿಲ್ಲ. ಅಫ್ತಾಬ್ ತನ್ನ ಅಕ್ಕ ಪಕ್ಕದವರಲ್ಲಿ ನಾವು ಸಪರೇಟ್ ಆದೆವು ಎಂದು ನಂಬಿಸಿದ್ದ. ಇದು ಹೊಸದೇನೂ ಅಲ್ಲವಾದ್ದರಿಂದ ಅವರೂ ಸುಮ್ಮನಾಗಿದ್ದರು. ಶ್ರದ್ಧಾ ಆಫೀಸಿನಲ್ಲಿ ವಿಚಾರಿಸಿದರೆ ಆಕೆ ಕೆಲಸಕ್ಕೇ ಬಂದಿಲ್ಲ. ಕೊನೆಗೆ ಎಲ್ಲಿಯೂ ಕಾಣದಾದಾದ ಕಂಪ್ಲೇಂಟ್ ಕೊಟ್ಟರು. ಅಫ್ತಾಬ್‍ನೇ ಮಗಳನ್ನು ಕಿಡ್ನಾಪ್ ಮಾಡಿದ್ದಾನೆ ಎಂದು ಮಿಸ್ಸಿಂಗ್ ಕಂಪ್ಲೇಂಟ್ ಕೊಟ್ಟರು. ಅಲ್ಲಿಂದ ಶುರುವಾಯ್ತು ತನಿಖೆ.
ಪೊಲೀಸರು ಲಾಠಿ ಹಿಡಿದುಕೊಂಡು ಬಾಯಿಬಿಡಿಸಿದಾಗ ಹೊರಬಿದ್ದಿದ್ದು ಶ್ರದ್ಧಾ ಕೊಲೆಯ ರಹಸ್ಯ. ಕೊಲೆಯ ವಿಷಯವನ್ನು ಒಂದೊಂದಾಗಿ ಹೇಳುತ್ತಿದ್ದಂತೆ ಪೊಲೀಸರೇ ಬೆಚ್ಚಿಬಿದ್ದರು. ಈಗಲೂ ಶ್ರದ್ಧಾಳ ದೇಹ ಸಂಪೂರ್ಣ ಸಿಕ್ಕಿಲ್ಲ. ಎಲ್ಲೆಲ್ಲಿ ಎಸೆದಿದ್ದನೋ ಅಲ್ಲಲ್ಲಿ ಹುಡುಕಿ ಈಗ ಅಳಿದುಳಿದು ಸಿಕ್ಕ ಭಾಗಗಳನ್ನೇ ಫೊರೆನ್ಸಿಕ್‍ಗೆ ಕಳಿಸಿಕೊಡಲಾಗಿದೆ.



