ಕರಾವಳಿಯ ಜಿಲ್ಲೆಗಳು ಸದಾ ಉದ್ವಿಗ್ನ ಸ್ಥಿತಿಯಲ್ಲಿರುತ್ತವೆ. ಪ್ರತಿಭಟನೆ, ಹೋರಾಟ, ಕೋಮುದ್ವೇಷ, ಗಲಭೆ, ಕೊಲೆ.. ಇತ್ಯಾದಿಗಳು ನಡೆಯುತ್ತಲೇ ಇರುತ್ತವೆ. ಎನ್ಸಿಎ ವಿರೋಧಿ ಹೋರಾಟ, ಲವ್ ಜಿಹಾದ್, ಧರ್ಮ ದಂಗಲ್, ಹಿಜಾಬ್ ಗಲಾಟೆ, ಹಲಾಲ್ ವಿವಾದ. ಹೀಗೆ ರಾಜ್ಯದ ಮಟ್ಟಿಗೆ ಮಂಗಳೂರು ಒಂದು ರೀತಿಯಲ್ಲಿ ಕೋಮು ಸೂಕ್ಷ್ಮ ಪ್ರದೇಶವೂ ಹೌದು. ಅಂತದ್ದೇ ಜಿಲ್ಲೆಯಲ್ಲಿ ಸಂಭವಿಸಿದ್ದು ಈ ಕುಕ್ಕರ್ ಬಾಂಬ್ ಬ್ಲಾಸ್ಟ್. ಅದೃಷ್ಟವಶಾತ್ ಅನಾಹುತವಾಗಲಿಲ್ಲ.
ಕುಕ್ಕರ್ ಬಾಂಬ್ ಸ್ಫೋಟಿಸಿದ್ದು ಆಟೋದಲ್ಲಿ. ದಾರಿಯ ಮಧ್ಯೆಯೇ ಸ್ಫೋಟಿಸಿತು. ದೇವರು ದೊಡ್ಡವನು, ಉಗ್ರರ ಟಾರ್ಗೆಟ್ ಇನ್ನೂ ರೀಚ್ ಆಗಿರಲಿಲ್ಲ. ಆರ್.ಎಸ್.ಎಸ್. ಸಮಾವೇಶದ ಜಾಗ ಬರುವುದಕ್ಕೆ ಮುನ್ನವೇ ಸ್ಫೋಟಿಸಿತ್ತು. ನೀವು ಆ ಬಾಂಬ್ ಸ್ಫೋಟದ ವಿಡಿಯೋ ನೋಡಿದರೇ ಅರ್ಥವಾಗುತ್ತದೆ. ಬಾಂಬ್ ಸ್ಫೋಟಿಸುವ ಕೆಲವೇ ಸೆಕೆಂಡುಗಳ ಮುಂಚೆ ಅಲ್ಲಿಯೇ ಒಂದು ಆಯಿಲ್ ಟ್ಯಾಂಕರ್ ಪಾಸ್ ಆಗುತ್ತದೆ. ಅಕಸ್ಮಾತ್ ಆಯಿಲ್ ಟ್ಯಾಂಕರ್ ಬರುವಾಗಲೇ ಸ್ಫೋಟಿಸಿದ್ದರೆ.. ಅನಾಹುತ ಎಲ್ಲಿಗೆ ತಲುಪುತ್ತಿತ್ತೋ.. ಅಷ್ಟೇ ಅಲ್ಲ.. ಅದಾದ ನಂತರ ಎರಡು ಬಸ್ಗಳು ಪಾಸ್ ಆಗುತ್ತವೆ. ಸಂಪೂರ್ಣ ತುಂಬಿಕೊಂಡ ಬಸ್ಗಳ ಪಕ್ಕದಲ್ಲಿಯೇ ಈ ಬಾಂಬ್ ಸ್ಫೋಟಿಸಿದ್ದರೂ ಅನಾಹುತ ಇನ್ನೂ ಹೆಚ್ಚುತ್ತಿತ್ತು. ಅಷ್ಟೇ ಏಕೆ, ಗರೋಡಿ ಕ್ಷೇತ್ರದ 200 ಮೀಟರ್ದೂರ ನಡೆದಿದ್ದ ಕುಕ್ಕರ್ ಬಾಂಬ್ಬ್ಲಾಸ್ಟ್ನಲ್ಲಿ ಆಟೋ ಡ್ರೈವರ್ ಪುರುಷೋತ್ತಮ್ ಗಾಯಾಳುವಾಗಿದ್ದಾರೆಯೇ ಹೊರತು, ಜೀವಕ್ಕೆ ಹಾನಿಯಾಗಿಲ್ಲ.
ಇದೆಲ್ಲದರ ಹಿನ್ನೆಲೆಯಲ್ಲೇ ಕರಾವಳಿಯಲ್ಲಿ ಬಾಂಬ್ ಬ್ಲಾಸ್ಟ್ ನಂತರದ ದೈವ ಪವಾಡದ ಸುದ್ದಿ ಚರ್ಚೆಯಾಗ್ತಿದೆ. ದೊಡ್ಡ ಅನಾಹುತ ತಪ್ಪಿಸಿದ್ದೇ ಗರೋಡಿ ಕ್ಷೇತ್ರದ ಕಾರಣಿಕ ಶಕ್ತಿಗಳು ಎಂದು ಭಕ್ತರು ಹೇಳುತ್ತಿದ್ದಾರೆ. ಮಂಗಳೂರಿನ ಗರೋಡಿ ಶ್ರೀ ಬ್ರಹ್ಮ ಬೈದರ್ಕಳ ಕ್ಷೇತ್ರದಲ್ಲಿ ನೆಲೆಯೂರಿರುವ ಕೋಟಿ-ಚೆನ್ನಯ್ಯ ಎಂಬ ಅವಳಿ ಮಹಾಪುರುಷ ಶಕ್ತಿಗಳೇ ದೊಡ್ಡ ಮಟ್ಟದ ಅನಾಹುತ ತಪ್ಪಿಸಿದ್ದು ಎನ್ನುವುದು ಭಕ್ತರ ನಂಬಿಕೆ. ಮಾನವ ಬಲವೊಂದಿದ್ದರೆ ಸಾಲದು ದೈವಬಲವೂ ಬೇಕು ಅನ್ನೋದಕ್ಕೆ ಸಾಕ್ಷಿಯೆನ್ನುವಂತೆ ಜನ ಕೋಟಿ-ಚೆನ್ನಯರ ಪೂಜೆ ಮಾಡುತ್ತಿದ್ದಾರೆ.
ಗಾಯಾಳು ಆಟೋ ಡ್ರೈವರ್ ಪುರುಷೋತ್ತಮ್ ಪ್ರತಿ ದಿನ ಬ್ರಹ್ಮಬೈದರ್ಕಳ ಕ್ಷೇತ್ರಕ್ಕೆ ಬಂದು ಕೈ ಮುಗಿಯುತ್ತಿದ್ದರು. ಇಲ್ಲಿನ ಪ್ರತೀ ಆಟೋ ಚಾಲಕರು ಈ ಕ್ಷೇತ್ರದಲ್ಲಿ ಕೈಮುಗಿದೇ ದಿನದ ಕೆಲಸವನ್ನು ಆರಂಭಿಸುವುದು. ಹೀಗಾಗಿ ಶಕ್ತಿಯೇ ದೊಡ್ಡ ಅನಾಹುತ ತಪ್ಪಿದೆ ಅನ್ನೋದು ಭಕ್ತರ ನಂಬಿಕೆ. ಖುದ್ದು ಎಡಿಜಿಪಿ ಅಲೋಕ್ ಕುಮಾರ್ ಕೂಡಾ ದೇವರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಕರಾವಳಿ ಉಗ್ರರ ಸ್ಲೀಪರ್ ಸೆಲ್ ಆದರೂ ಇಲ್ಲಿ ತನಕ ಬಹಿರಂಗ ಬ್ಲಾಸ್ಟ್ ಆಗಿರಲಿಲ್ಲ. ಇದೇ ಮೊದಲ ಬಾರಿಗೆ ಪ್ರಯತ್ನ ನಡೆದರೂ ವಿಫಲವಾದ ಬಾಂಬ್ ಬ್ಲಾಸ್ಟ್ ಪ್ರಯತ್ನ. ಅಧರ್ಮದ ಹಾದಿಯಲ್ಲಿ ಬಂದವರಿಗೆ ಶಿಕ್ಷೆ ನೀಡಿದ ತುಳುನಾಡಿನ ಅವಳಿ ವೀರ ಪುರುಷರ ಪವಾಡ ಇದಾಗಿದೆ. ಗರೋಡಿ ಕ್ಷೇತ್ರದ 200 ಮೀಟರ್ ದೂರ ಕುಕ್ಕರ್ ಬಾಂಬ್ ಬ್ಲಾಸ್ಟ್ ಆಗಿದೆ. ದೊಡ್ಡ ಅನಾಹುತ ತಪ್ಪಿಸಿದ್ದೇ ಗರೋಡಿ ಕ್ಷೇತ್ರದ ಕಾರಣಿಕ ಶಕ್ತಿಗಳು ಎಂದು ಭಕ್ತರು ಹೇಳಿದ್ದಾರೆ ಎಂದು ಅಲೋಕ್ ಕುಮಾರ್ ಹೇಳಿದ್ದಾರೆ.
ಕೋಟಿ-ಚೆನ್ನಯರು ತುಳು ಪಾಡ್ದನದಲ್ಲಿ ಬರುವ ಅವಳಿ ದೈವಗಳು. ಅಲೌಕಿಕ ವೀರರು. ಜೀವಿತ ಕಾಲದಲ್ಲಿ ಶೋಷಿತರ ಪರ ನಿಂತು ಅಮರತ್ವ ಪಡೆದವರು. ತುಳು ನಾಡಿನಾದ್ಯಂತ ಹರಡಿರುವ 225ಕ್ಕೂ ಹೆಚ್ಚು ಗರೊಡಿಗಳೆಂಬ ದೈವಸ್ಥಾನಗಳಲ್ಲಿ ವೀರ ಆರಾಧನೆ ಪಡೆಯುತ್ತಿರುವವರು. ‘ನಂಬಿನಕ್ಲೆಗ್ ಇಂಬು ಕೊರ್ಪ, ಸತ್ಯ ಗೆಂದಾದ್ ಕೊರ್ಪ’ (ನಂಬಿದವರಿಗೆ ರಕ್ಷಣೆ ನೀಡಿ, ಸತ್ಯವನ್ನು ಜಯಿಸಿಕೊಡುತ್ತೇವೆ) ಎನ್ನುವುದು ಇವರು ನೀಡುವ ಅಭಯವಾಣಿ. ಈ ದೈವಗಳನ್ನು ಜಾತಿ-ವರ್ಗಭೇದವಿಲ್ಲದೆ ಜನ ಆರಾಧಿಸುತ್ತಾರೆ.



