ಗಂಡಸರು ಅ ಊರಿಗೆ ಬರಬಹುದು. ರಾತ್ರಿ ಹೊತ್ತು ಮಲಗುವಂತಿಲ್ಲ. ಆ ಊರಿನಲ್ಲಿ ಗಂಡಸರೇ ಇಲ್ಲ. ಇಂತಾದ್ದೊಂದು ಊರು ಕೀನ್ಯಾದಲ್ಲಿದೆ. ಊರಿನ ಹೆಸರು ಉಮೋಜಾ. ಉಮೋಜಾ ಎಂದರೆ ಒಗ್ಗಟ್ಟು ಎಂದರ್ಥ. ಈ ಊರಿನಲ್ಲಿ ಮಹಿಳೆಯರು ಗರ್ಭ ಧರಿಸುತ್ತಾರೆ. ಆದರೆ ಹುಟ್ಟುವ ಮಗುವಿಗೆ ಅಪ್ಪನ ಹೆಸರು ಹೇಳಲ್ಲ. ಅಷ್ಟೇ ಏಕೆ, ಆ ಮಗು ಜನ್ಮ ಕೊಟ್ಟ ತಂದೆಯ ಮುಖವನ್ನೆ ನೋಡಲ್ಲ. ಹೆಂಗಸರೇ ಇರುವ, ಹೆಣ್ಣು ಮಕ್ಕಳಿಗೆ ಮಾತ್ರವೇ ಇರುವ ಈ ಊರು ಹುಟ್ಟಿದ್ದರ ಹಿಂದೊಂದು ವಿಚಿತ್ರ ಮತ್ತು ಅಷ್ಟೇ ಕರುಣಾಜನಕ ಕಥೆಯಿದೆ.


ಗಂಡಂದಿರು ಮನೆಯಿಂದ ಹೊರದಬ್ಬಿದಾಗ ಹಲವು ಮಂದಿ ಆತ್ಮಹತ್ಯೆ ಮಾಡಿಕೊಂಡರೆ ಇನ್ನೂ ಕೆಲವರು ಗಂಡನ ಮನೆ ಅಥವಾ ಊರಿಗೆ ಬರಲೇ ಇಲ್ಲ. ಇನ್ನೂ ಕೆಲವರು ಗಂಡ ದೂರ ತಳ್ಳಿದ ಮೇಲೆ ಎಲ್ಲೆಲ್ಲೋ ಹೋಗಿ ಯಾವ್ಯಾವುದೋ ರೀತಿ ಬದುಕು ಕಟ್ಟಿಕೊಂಡರು. ಆದರೆ ಕೆಲವರಿಗೆ ಮಾತ್ರ ಇದರಲ್ಲಿ ನಮ್ಮ ತಪ್ಪೇನು ಎಂಬ ಪ್ರಶ್ನೆ ಎದ್ದಿತ್ತು. ಅವರು ಸಿಡಿದು ಬಿದ್ದರು. ತಮ್ಮದೇ ಊರಿನಿಂದ ಸ್ವಲ್ಪ ದೂರದಲ್ಲಿರೋ ಕಾಡಿಗೆ ಹೋದರು. ಹೊಸದಾಗಿ ಊರನ್ನೇ ಕಟ್ಟಿದರು. ಹಾಗೆ ಬಂಡಾಯವೆದ್ದು ಊರು ಕಟ್ಟಿದ ಹೆಣ್ಣು ಮಕ್ಕಳ ಸಂಖ್ಯೆ ಆಗ 20ನ್ನೂ ದಾಟಿರಲಿಲ್ಲ.
ಮಣ್ಣು, ಸಗಣಿಯ ಬೆರಣಿ, ಮರಗಳಿಂದಲೇ ಕಟ್ಟಿರುವ ಮನೆಗಳಲ್ಲಿ ಬದುಕುತ್ತಿರುವ ಈ ಹೆಂಗಸರಿಗೆ ಬುಟ್ಟಿ ಮಾಡುವುದೇ ಕಾಯಕ. ಕರಕುಶಲ ಕೆಲಸಗಳಷ್ಟೇ ಗೊತ್ತು. ಅತ್ಯಾಚಾರಕ್ಕೊಳಗಾಗಿ ಗಂಡಂದಿರೇ ತ್ಯಜಿಸಿದ 20 ಹೆಣ್ಣು ಮಕ್ಕಳಿಂದ ಉದ್ಭವವಾದ ಈ ಊರಿನಲ್ಲೀಗ 250 ಮಹಿಳೆಯರಿದ್ದಾರೆ. ಈ ಊರಿಗೆ ಪ್ರವಾಸಿಗರು ಬರುತ್ತಾರೆ. ಆ ಪ್ರವಾಸಿಗರಲ್ಲಿ ಗಂಡಸರೂ ಇರುತ್ತಾರೆ. ಆದರೆ ಹಾಗೆ ಬಂದ ಗಂಡಸರು ಸಂಜೆಯೊಳಗೆ ಊರು ಖಾಲಿ ಮಾಡಬೇಕು. ಹೆಣ್ಣು ಮಕ್ಕಳು ಮಾತ್ರವೇ ಇಲ್ಲಿ ಉಳಿದುಕೊಳ್ಳಬಹುದು.
ಗಂಡಸರು ಬರಲ್ಲ. ಊರಲ್ಲಿ ಇರಲ್ಲ. ಹಾಗಾದರೆ ಈ ಊರಿನಲ್ಲಿ ಜನಸಂಖ್ಯೆ ಬೆಳೆದಿದ್ದು ಹೇಗೆ? ಆ ಪ್ರಶ್ನೆಗೆ ಉತ್ತರ ಅವರ ವರ್ತನೆಯಲ್ಲೇ ಇದೆ. ಆ ಊರಿಗೆ ಮದುವೆ ಧಿಕ್ಕರಿಸಿದ ಹುಡುಗಿಯರು, ಅತ್ಯಾಚಾರಕ್ಕೊಳಗಾದವರು ಬರಬಹುದು. ಗಂಡನಿಂದ ದೌರ್ಜನ್ಯಕ್ಕೊಳಗಾದವರೂ ಬರಬಹುದು. ಅವರಿಗೆ ಈ ಊರಿನಲ್ಲಿ ರಕ್ಷಣೆ ಇದೆ.


ಹಾಗಾದರೆ ಇಂತಹವರಿಗೆ ಗಂಡು ಮಕ್ಕಳು ಹುಟ್ಟಿದರೆ ಏನು ಕಥೆ ಎನ್ನುತ್ತೀರ. ಸಮಸ್ಯೆಯೇನೂ ಇಲ್ಲ. ಆ ಊರಿನಲ್ಲಿಯೇ ಜನ್ಮ ಪಡೆದ ಗಂಡು ಮಕ್ಕಳು ಆ ಊರಿನಲ್ಲಿ ರಾತ್ರಿ ಹೊತ್ತು ಮಲಗಬಹುದು.



