ಕುಕ್ಕರ್ ಬಾಂಬ್. ಒಂದು ವಿಷಲ್ ದೇಶದಾದ್ಯಂತ ಸದ್ದು ಮಾಡುತ್ತಿದೆ. ಅನುಮಾನವೇ ಇಲ್ಲ, ಇದು ಭಯೋತ್ಪಾದಕ ಕೃತ್ಯ ಅನ್ನೋದನ್ನ ಖುದ್ದು ಡಿಜಿಪಿಯೇ ಹೇಳಿದ್ದಾರೆ. ಕುಕ್ಕರ್ ಬಾಂಬ್ ಸಾಗಿಸುವ ವೇಳೆ ನಡೆದ ಸ್ಫೋಟ, ಅದರ ಹಿಂದಿನ ನಿಗೂಢತೆಯ ನಂತರ ಇದು ಆಕ್ಸಿಡೆಂಟ್ ಅಲ್ಲ ಎಂಬ ನಿರ್ಧಾರಕ್ಕೆ ಪೊಲೀಸರು ಬಂದಿದ್ದಾರೆ.
ಘಟನೆ ನಡೆದಿದ್ದು ಹೇಗೆ?
ಮೈಸೂರಿಂದ ಮಂಗಳೂರಿಗೆ ಬಂದ ಆರೋಪಿ ಪಡೀಲ್‍ನಲ್ಲಿ ಇಳಿದ. ಅಲ್ಲಿ ಸ್ವಲ್ಪ ದೂರ ನಡೆದು ರಿಕ್ಷಾ ಹತ್ತಿ ಪಂಪ್‍ವೆಲ್ ಕಡೆ ಹೊರಟ. ನಾಗುರಿ ಬಳಿ ಆತನ ಬಳಿಯಿದ್ದ ಕುಕ್ಕರ್ ಸ್ಫೋಟಿಸಿತ್ತು. ಸ್ಫೋಟದ ತೀವ್ರತೆಗೆ ಆಟೋ ಚಾಲಕ ಮತ್ತು ಆರೋಪಿ ಇಬ್ಬರೂ ಗಾಯಗೊಂಡರು. ಸಂಜೆ 4.3ರ ಸುಮಾರಿಗೆ ನಡೆದ ಸ್ಫೋಟವಿದು. ಪೊಲೀಸರು ಪರಿಶೀಲನೆ ನಡೆಸಿದಾಗ ಕುಕ್ಕರ್‍ನಲ್ಲಿ ಕಾಣಿಸಿದ ವೈರ್‍ಗಳು ಅನುಮಾನಕ್ಕೆಡೆ ಮಾಡಿದವು.
ಸದ್ಯ, ಬಸ್‍ನಲ್ಲಿ ಸ್ಫೋಟಿಸಲಿಲ್ಲ : ಆರೋಪಿ ಕುಕ್ಕರ್ ಬಾಂಬ್ ತಯಾರಿಸಿರುವುದು ಮೈಸೂರಿನಲ್ಲಿ. ಮೈಸೂರಿನ ಅಗ್ರಹಾರದ ಮೊಬೈಲ್ ಅಂಗಡಿಯೊಂದರಲ್ಲಿ ಮೊಬೈಲ್ ರಿಪೇರಿ ಕಲಿಯುತ್ತಿದ್ದ. ಕುಕ್ಕರ್‍ನಲ್ಲಿ ಎಲ್ಲವನ್ನೂ ಸಿದ್ಧ ಮಾಡಿಕೊಂಡೇ ಬಸ್ ಹತ್ತಿದ್ದ. ಅದೃಷ್ಟವಶಾತ್ ಬಸ್‍ನಲ್ಲಿ ಬಾಂಬ್ ಸ್ಫೋಟಿಸಲಿಲ್ಲ. ಅಕಸ್ಮಾತ್ ಸ್ಫೋಟಿಸಿದ್ದರೆ ದುರಂತವೇ ಸಂಭವಿಸುತ್ತಿತ್ತು.
ಪ್ರೇಮ್ ರಾಜ್ ಹೆಸರಲ್ಲಿ ಬಾಡಿಗೆಯಲ್ಲಿದ್ದ : ಮೈಸೂರಿನಲ್ಲಿ ಲೊಕನಾಯಕ ನಗರದ ಸಂಜೀವಿನಿ ರಸ್ತೆಯಲ್ಲಿ ಮಂಗಳಮ್ಮ ಎನ್ನುವವರ ಮನೆಯಲ್ಲಿ ಪ್ರೇಮ್ ರಾಜ್ ಹೆಸರಿನಲ್ಲಿ ಆರೋಪಿ ಬಾಡಿಗೆಗಿದ್ದ. ಅದಕ್ಕಾಗಿ ಆಧಾರ್ ಕಾರ್ಡ್ ಕೂಡಾ ಕೊಟ್ಟಿದ್ದ. ಇವನ ಮನೆಯಲ್ಲಿ ಪರಿಶೀಲನೆ ನಡೆಸಿದಾಗ ಸರ್ಕಿಟ್ ಬೋರ್ಡ್, ಬ್ಯಾಟರಿ, ವೈರ್‍ಗಳು, ಸಣ್ಣ ಸಣ್ಣ ಬೋಲ್ಟ್‍ಗಳು, ಬ್ಯಾಟರಿ, ಫ್ರೆಷರ್ ಕುಕ್ಕರ್ ಸಿಕ್ಕಿವೆ. ಒಂದು ಮೊಬೈಲ್, ಎರಡು ನಕಲಿ ಆಧಾರ್ ಕಾರ್ಡ್, ಒಂದು ನಕಲಿ ಪಾನ್ ಕಾರ್ಡ್ ಸಿಕ್ಕಿವೆ.
3 ಅಂಗಿ ರಹಸ್ಯ : ಆರೋಪಿಯೂ ಕೂಡಾ ಫ್ರೆಷರ್ ಕುಕ್ಕರ್ ಸ್ಫೋಟದಲ್ಲಿ ಗಾಯಗೊಂಡಿದ್ದಾನೆ. ಶೇ.50ರಷ್ಟು ಸುಟ್ಟಿವೆ. ಆದರೆ ಪೊಲೀಸರಿಗೆ ಅಚ್ಚರಿಯಾಗಿರುವುದು ಆತ ಎರಡು ಶರ್ಟ್ ಧರಿಸಿದ್ದದ್ದು. ನಂತರ ಪರಿಶೀಲನೆ ನಡೆಸಿದಾಗ ಆತ ಬಸ್ ಹತ್ತುವಾಗ ಧರಿಸಿದ್ದ ಶರ್ಟ್ ಬೇರೆ. ರಿಕ್ಷಾ ಹತ್ತುವ ಮುಂಚೆ ಅದನ್ನು ಬದಲಿಸಿದ್ದಾನೆ. ಇನ್ನೆರಡು ಶರ್ಟ್ ಇದ್ದವು. ಸಿಸಿಟಿವಿಯಲ್ಲಿ ಗುರುತು ತಪ್ಪಿಸಲು ಈ ನಾಟಕವಾಡಿದ್ದಾನೆ. ಆದರೆ ಪಂಪ್‍ವೆಲ್ ಬಳಿ ಆತ ಯಾರನ್ನು ಭೇಟಿ ಮಾಡಬೇಕಿತ್ತು? ಇನ್ನೂ ಗೊತ್ತಾಗಿಲ್ಲ.
ಕೊಯಮತ್ತೂರುಗೂ ಮಂಗಳೂರುಗೂ ಲಿಂಕ್ : ಅಕ್ಟೋಬರ್ 23ರಂದು ತಮಿಳುನಾಡಿನ ಕೊಯಮತ್ತೂರಿನಲ್ಲಿ ಕಾರ್ ಬಾಂಬ್ ಸ್ಫೋಟ ಸಂಭವಿಸಿತ್ತು. ಸಂಗಮೇಶ್ವರ ದೇಗುಲದ ಬಳಿ ಸಂಭವಿಸಿದ್ದ ಸ್ಫೋಟವದು. ಆರಂಭದಲ್ಲಿ ಆಕಸ್ಮಿಕ ಎಂದೇ ಅಂದುಕೊಂಡಿದ್ದ ಪೊಲೀಸರಿಗೆ ತನಿಖೆ ಸಾಗುತ್ತಾ ಹೋದಂತೆ ಬೆಚ್ಚಿ ಬೀಳುವ ಸಂಗತಿಗಳು ಬೆಳಕಿಗೆ ಬಂದಿದ್ದವು. ಮೊದಲಿಗೆ ಅದು ಸಿಲಿಂಡರ್ ಸ್ಫೋಟ ಎಂದು ಅಂದುಕೊಡಿದ್ದರು. ಜಮೀಶಾ ಮುಬಿನ್ ಎಂಬ 29 ವರ್ಷದ ಯುವತಿ ಮೃತಪಟ್ಟಿದ್ದಳು. ಆಮೇಲೆ, ಅದೊಂದು ಐಸಿಸ್ ಭಯೋತ್ಪಾದಕರ ಸಂಚು ಎಂಬುದು ಗೊತ್ತಾಗಿತ್ತು. ಮೃತಪಟ್ಟಿದ್ದ ಮುಬಿನ್ 75 ಕೆಜಿಯಷ್ಟು ಬಾಂಬ್ ಸ್ಫೋಟಕ್ಕೆ ಬೇಕಾದ ಪೊಟಾಷಿಯಂ ನೈಟ್ರೇಟ್, ಅಲ್ಯುಮಿನಿಯಂ ಪೌಡರ್, ಸಲ್ಫರ್, ಚಾರ್‍ಕೋಲ್ ಸಂಗ್ರಹಿಸಿಟ್ಟಿದ್ದಳು. 6 ಜನ ಅರೆಸ್ಟ್ ಆದರು. ಆಕೆ ತಮಿಳುನಾಡಿನಲ್ಲಿ ಆತ್ಮಹತ್ಯಾ ಬಾಂಬ್ ದಾಳಿಗಳನ್ನು ನಡೆಸಲು ಸಂಚು ನಡೆಸಿದ್ದಳು ಎಂಬ ಮಾಹಿತಿ ಗೊತ್ತಾಗಿತ್ತು. ಈಗ ಸಿಕ್ಕಿರುವ ಆರೋಪಿಗೂ ಕೊಯಮತ್ತೂರು ನಂಟಿದೆ. ಈತನ ಸಿಮ್ ಅಡ್ರೆಸ್ ಕೊಯಮತ್ತೂರಿನದ್ದು. ಕೃಷ್ಣಗಿರಿಯಲ್ಲಿ ಸುರೇಂದ್ರನ್ ಎಂಬಾತ ಅರೆಸ್ಟ್ ಆಗಿದ್ದಾನೆ.
ಅವನೇ ಇವನಾ..? : 2020ರಲ್ಲಿ ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ ಲಷ್ಕರ್ ಜಿಂದಾಬಾದ್ ಎಂಬ ಗೋಡೆಬರಹ ಸದ್ದು ಮಾಡಿತ್ತು. ಆ ಪ್ರಕರಣದಲ್ಲಿ ಶಾಕಿರ್ ಎಂಬಾತ ಅರೆಸ್ಟ್ ಆಗಿದ್ದ. ನಂತರ ಜಾಮೀನಿನ ಮೇಲೆ ಬಿಡುಗಡೆಯೂ ಆಗಿದ್ದ. ಇತ್ತೀಚೆಗೆ ಸಾವರ್ಕರ್ ವಿರೋಧಿಸಿ ನಡೆದ ಗಲಾಟೆಯಲ್ಲಿ ಯುವಕನೊಬ್ಬನಿಗೆ ಚಾಕು ಇರಿಯಲಾಗಿತ್ತು. ಜೊತೆಗೆ ತುಂಗಾ ನದಿ ದಂಡೆಯಲ್ಲಿ ಟ್ರಯಲ್ ಸ್ಫೋಟ ನಡೆದಿದ್ದದ್ದು ಬೆಳಕಿಗೆ ಬಂದಿತ್ತು. ಆಗ ಪೊಲೀಸರು ಶಂಕಿಸಿದ್ದೇ ಶಾಕೀರ್‍ನನ್ನ. ಆದರೆ ಸಿಕ್ಕಿರಲಿಲ್ಲ. ಈಗ ಆಟೋದಲ್ಲಿ ಗಾಯಗೊಂಡಿರುವ ವ್ಯಕ್ತಿಯೇ ಶಾಕಿರ್ ಇರಬಹುದು ಎಂಬ ಅನುಮಾನ ಪೊಲೀಸರದ್ದು. ಇಂದು ಶಾರೀಕ್ ಮನೆಯವರಿಂದ ಐಡೆಂಟಿಟಿ ಟೆಸ್ಟ್ ಮಾಡಿಸಲಿದ್ದಾರೆ.
ಪ್ರೇಮರಾಜ್ ಹುಟಗಿ ಯಾರಿದು? : ಪ್ರೇಮರಾಜ್ ಹುಟಗಿ ಮೂಲತಃ ಹುಬ್ಬಳ್ಳಿಯವರು. ರೈಲಿನಲ್ಲಿ ಎರಡು ಬಾರಿ ಇವರ ಆಧಾರ್ ಕಳುವಾಗಿತ್ತು. ಆಟೋದಲ್ಲಿ ಗಾಯಗೊಂಡಿರುವ ವ್ಯಕ್ತಿಯ ಬಳಿ ಸಿಕ್ಕಿರುವುದು ಇದೇ ಆಧಾರ್ ಕಾರ್ಡ್. ಆದರೆ ಅದರಲ್ಲಿರುವ ಫೋಟೋ ಮಾತ್ರ ಇವನದ್ದಲ್ಲ. ರಿಯಲ್ ಪ್ರೇಮರಾಜ್ ಹುಟಗಿ ರೈಲ್ವೆ ಇಲಾಖೆ ನೌಕರನಾಗಿದ್ದು, ತುಮಕೂರಿನಲ್ಲಿ ಡ್ಯೂಟಿಯಲ್ಲಿದ್ದಾರೆ. ಪ್ರೇಮರಾಜ್ ಅವರ ತಂದೆ, ತಾಯಿ, ತಮ್ಮ ಹುಬ್ಬಳ್ಳಿಯಲ್ಲಿದ್ದರೆ, ಪ್ರೇಮರಾಜ್ ತುಮಕೂರಿನಲ್ಲಿ ವಾಸವಿದ್ದಾರೆ. ಆಧಾರ್ ಕಳೆದುಹೋದಾಗ ಪ್ರೇಮರಾಜ್ ದೂರು ಕೊಟ್ಟಿರಲಿಲ್ಲ. ಮತ್ತೊಂದು ಪ್ರಿಂಟ್ ತೆಗೆದುಕೊಂಡಿದ್ದರು.



