ಶ್ರದ್ಧಾ ಕೇಸ್. ಇಡೀ ದೇಶವನ್ನೇ ಬೆಚ್ಚಿಬೀಳಿಸಿರುವ ಪ್ರಕರಣ. ತಾನೇ ಪ್ರೀತಿಸಿ ಲಿವಿಂಗ್ ಟುಗೆದರ್‍ನಲ್ಲಿದ್ದ ಶ್ರದ್ಧಾಳನ್ನು 35 ತುಂಡು ಮಾಡಿ ಕೊಂದ ಅಫ್ತಾಬ್ ಕ್ರೌರ್ಯ ದೇಶಕ್ಕೆ ದೇಶವನ್ನೇ ಬೆಚ್ಚಿಬೀಳಿಸಿದೆ. ವಿಚಾರಣೆ ನಡೆಯುತ್ತಿದ್ದು, ಒಂದು ಕಡೆ ವಶಪಡಿಸಿಕೊಂಡಿರುವ ಶ್ರದ್ಧಾಳ ಮಾಂಸದ ತುಂಡುಗಳನ್ನು ಸಂಗ್ರಹಿಸಿ ಫೊರೆನ್ಸಿಕ್ ಲ್ಯಾಬ್‍ಗೆ ಕಳಿಸಿಕೊಡಲಾಗಿದೆ. ಇನ್ನೊಂದೆಡೆ ಪಾಲಿಗ್ರಫಿ ಪರೀಕ್ಷೆಯೂ ನಡೆಯುತ್ತಿದೆ. ಪಾಲಿಗ್ರಫಿ ಪರೀಕ್ಷೆಗಾಗಿ ಪೊಲೀಸರು ಅಫ್ತಾಬ್ ಪೂನವಾಲಾನನ್ನು ಕರೆದುಕೊಂಡು ಹೋಗುವಾಗಲೇ ಇಬ್ಬರು ಯುವಕರು ಅಪ್ತಾಬ್‍ನನ್ನು ಕತ್ತರಿಸಿ ಕೊಲ್ಲೋಕೆ ಯತ್ನಿಸಿದ್ದಾರೆ.

ಪಾಲಿಗ್ರಫಿ ಪರೀಕ್ಷೆಗಾಗಿ ಅಫ್ತಾಬ್‍ನನ್ನು ಪೊಲೀಸರು ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ಅಫ್ತಾಬ್ ಇದ್ದ ವ್ಯಾನ್ ಮೇಲೆ ಖಡ್ಗಧಾರಿ ಯುವಕರು ಅಟ್ಯಾಕ್ ಮಾಡಿದ್ದಾರೆ. ಆತನನ್ನು ಕೊಲ್ಲೋಕೆ ಬೆಳಗ್ಗೆ 11 ಗಂಟೆಯಿಂದಲೂ ಕಾಯುತ್ತಿದ್ದವರು ರಾತ್ರಿ ವಾಪಸ್ ಬರುವ ಹೊತ್ತಿನಲ್ಲಿ ಅಟ್ಯಾಕ್ ಮಾಡಿದ್ದಾರೆ. ಖಡ್ಗಗಳನ್ನು ಝಳಪಿಸುತ್ತಾ ನುಗ್ಗಿದವರನ್ನು ಪೊಲೀಸರು ಬಂಧಿಸಿದ್ದಾರೆ. ಇಬ್ಬರೂ ಹಿಂದೂ ಸೇನಾ ಸಂಘಟನೆಗೆ ಸೇರಿದ ಯುವಕರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕೊಲೆಗೆ ಯತ್ನಿಸಿದವರನ್ನು ಅರೆಸ್ಟ್ ಮಾಡಲಾಗಿದ್ದು, ಖಡ್ಗಗಳನ್ನು ಸೀಜ್ ಮಾಡಲಾಗಿದೆ.
ತಮ್ಮ ಸಂಘಟನೆಯ ಸದಸ್ಯರು ಅಫ್ತಾಬ್‍ನನ್ನು ಕೊಲ್ಲಲು ಯತ್ನಿಸಿದ ಘಟನೆ ಹೊರಬೀಳುತ್ತಿದ್ದಂತೆಯೇ ಹಿಂದೂ ಸೇನಾ ಘಟಕದ ಅಧ್ಯಕ್ಷ ವಿಷ್ಣು ಗುಪ್ತಾ ಪ್ರತಿಕ್ರಿಯೆ ನೀಡಿದ್ದು ಆ ಯುವಕರು ತಮ್ಮ ವೈಯಕ್ತಿಕ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಇದಕ್ಕೂ ನಮ್ಮ ಸಂಘಟನೆಗೂ ಸಂಬಂಧವಿಲ್ಲ. ಸಂವಿಧಾನ ಮತ್ತು ಕಾನೂನಿಗೆ ವಿರುದ್ಧವಾದ ಯಾವುದೇ ಕೃತ್ಯಗಳಿಗೆ ಸಂಘಟನೆ ಬೆಂಬಲ ನೀಡುವುದಿಲ್ಲ. ನಮಗೆ ದೇಶದ ಕಾನೂನಿನ ಮೇಲೆ ನಂಬಿಕೆ ಮತ್ತು ಗೌರವವಿದೆ ಎಂದಿದ್ದಾರೆ.

ಅಫ್ತಾಬ್ ಅರೆಸ್ಟ್ ಆದ ಮೇಲೆ ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಅಫ್ತಾಬ್ ಹತ್ಯೆಗೆ ಕೆಲ ಸಂಘಟನೆಗಳಿಂದ ಅಪಾಯವಿದ್ದು ವಿಡಿಯೋ ಮೂಲಕ ವಿಚಾರಣೆ ನಡೆಸುವಂತೆ ಮನವಿ ಮಾಡಿದ್ದರು. ಆದರೆ ಅಫ್ತಾಬ್ ಮೇಲೆ ನಡೆದ ದಾಳಿ ರಕ್ಷಣಾ ವ್ಯವಸ್ಥೆ ಲೋಪವನ್ನು ಎತ್ತಿ ತೋರಿಸಿದೆ. ಘಟನೆ ಸಂಜೆ 6.45ರ ಸುಮಾರಿಗೆ ನಡೆದಿದ್ದು ಕಾರಿನಲ್ಲಿ ಬಂದು ವ್ಯಾನ್ ಅಡ್ಡ ಹಾಕಿದ ದುಷ್ಟರ್ಮಿಗಳು ಆರೋಪಿಯ ಹತ್ಯೆಗೆ ನುಗ್ಗಿದ್ದಾರೆ. ವ್ಯಾನ್ ಡ್ರೈವರ್ ತಕ್ಷಣ ವ್ಯಾನ್‍ನ್ನು ರಿವರ್ಸ್ ಗೇರ್‍ನಲ್ಲಿ ತಿರುಗಿಸಿ ಓಡಿಸಿದ್ದಾನೆ. ಆದರೂ ಖಡ್ಗಧಾರಿಗಳು ಅಟ್ಟಿಸಿಕೊಂಡು ಬಂದಿದ್ದಾರೆ.



