ಮಕ್ಕಳ ಪ್ರೀತಿ ಹೆತ್ತವರಿಗೆ ತಲೆನೋವು ತರುವುದು ಹೊಸದೇನಲ್ಲ. ಆದರೆ ಮಗಳು ಬೇರೆ ಜಾತಿಯ ಹುಡುಗನನ್ನು ಪ್ರೀತಿಸಿ ಓಡಿಹೋಗಿದ್ದಕ್ಕೆ ತಂದೆಯೊಬ್ಬ ಮಗಳನ್ನೇ ಕೊಚ್ಚಿ ಕೊಂದಿದ್ದರೆ, ಇನ್ನೊಂದು ಪ್ರಕರಣದಲ್ಲಿ ತಂದೆ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.
ಪ್ರಕರಣ 1. ಮಗಳನ್ನೇ ಕೊಚ್ಚಿ ಕೊಂದ ಕಥೆ.. ಪತ್ನಿ, ಷಡ್ಡಕನೂ ಈಗ ಆಸ್ಪತ್ರೆಯಲ್ಲಿ :
ಪ್ರಿಯಕರನ ಜತೆಗೆ ಮಗಳು ಓಡಿ ಹೋಗಿದ್ದರಿಂದ ಊರಲ್ಲಿ ತನ್ನ ಮರ್ಯಾದೆ ಹೋಯಿತು ಎಂದು ತಂದೆಯೇ ಆ ಮಗಳನ್ನು ಮಚ್ಚಿನಿಂದ ಬರ್ಬರವಾಗಿ ಕೊಚ್ಚಿ ಕೊಲೆಗೈದಿರುವ ಅಮಾನುಷ ಘಟನೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೈಸೂರಿನ ಎಚ್.ಡಿ.ಕೋಟೆ ಮೂಲದ ಪಲ್ಲವಿ(17) ಕೊಲೆಯಾದ ದುರ್ದೈವಿ. ಆಕೆಯ ತಂದೆ ಗಣೇಶ್(50) ಬಂಧಿತ. ಪರಪ್ಪನ ಅಗ್ರಹಾರ ಸಮೀಪದ ನಾಗನಾಥಪುರದ ಡಾಕ್ಟರ್ಸ್ ಲೇಔಟ್ನಲ್ಲಿ ನಡೆದ ಘಟನೆ ಇದು. ಎಚ್.ಡಿ.ಕೋಟೆಯ ಗಣೇಶ್ ಮತ್ತು ಶಾರದಮ್ಮ ದಂಪತಿಯ ಮಗಳು ಪಲ್ಲವಿ. ಗೌಡರ ಸಮುದಾಯಕ್ಕೆ ಸೇರಿದವರು. ವಯಸ್ಸಿನ್ನೂ 17 ವರ್ಷ. ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದಾಗ ಮನೋಜ್ ಎಂಬ ಎಸ್‌ಸಿ ಯುವಕನ ಜೊತೆ ಪ್ರೀತಿಯಾಗುತ್ತೆ. ಆಮೇಲೆ ಅಪ್ಪನಿಗೆ ಗೊತ್ತಾಗಿ, ಇಬ್ಬರೂ ಓಡಿ ಹೋಗ್ತಾರೆ.
ಬಳಿಕ ಆಕೆಯನ್ನು ಹೇಗೋ ಪತ್ತೆಹಚ್ಚಿ ಮನೆಗೆ ಕರೆತಂದು ಕಾಲೇಜು ಬಿಡಿಸ್ತಾರೆ ಅಪ್ಪ ಅಮ್ಮ. ಮಗಳು ಪಲ್ಲವಿಯನ್ನ ಪ್ರಿಯಕರ ಮನೋಜ್ನಿಂದ ದೂರ ಮಾಡೋದಕ್ಕೆಂದೇ ಚಿಕ್ಕಪ್ಪನ ಮನೆಗೆ ಅಂದ್ರೆ, ಶಾರದಮ್ಮನ ತಂಗಿ ಗೀತಾ ಮನೆಗೆ ಬಿಡ್ತಾರೆ. ಅಲ್ಲಿಂದಲೂ ಪಲ್ಲವಿ ಮನೋಜ್ ಜೊತೆ ಎಸ್ಕೇಪ್ ಆಗ್ತಾರೆ. ಇದು ಗೊತ್ತಾಗಿ, ಪೊಲೀಸ್ ಕಂಪ್ಲೇಂಟ್ ಆಗಿ, ಪೊಲೀಸರು ಪಲ್ಲವಿಯನ್ನು ಹುಡುಕಿ ಕರೆತಂದು ಅಪ್ಪ-ಅಮ್ಮನ ವಶಕ್ಕೆ ತಂದು ಬಿಡ್ತಾರೆ. ಏಕೆಂದರೆ ಹುಡುಗಿಯ ವಯಸ್ಸು 17.
ಅದಾದ ಮೇಲೆ ಮಗಳ ಜೊತೆ ಜಗಳ ಮಾಡಿದ ಅಪ್ಪ ನಿನ್ನಿಂದ ನನ್ನ ಮರ್ಯಾದೆ ಹೋಯ್ತು ಎಂದು ಮಗಳು ಪಲ್ಲವಿಯನ್ನ ಕೊಚ್ಚಿ ಕೊಂದಿದ್ದಾನೆ. ತಡೆಯಲು ಬಂದ ಹೆಂಡತಿ ಶಾರದಮ್ಮ, ಷಡ್ಡಕ ಶಾಂತಕುಮಾರ್ ಮೇಲೂ ಮಚ್ಚಿನಲ್ಲಿ ಹೊಡೆದಿದ್ದಾನೆ. ಅವರೀಗ ಆಸ್ಪತ್ರೆಯಲ್ಲಿದ್ಧಾರೆ.
ಅಪ್ರಾಪ್ತ ವಯಸ್ಸಿನ ಪ್ರೀತಿಯ ಪರಿಣಾಮ ಈಗ ಮನೋಜ್ ಮೇಲೆ ಲೈಂಗಿಕ ದೌರ್ಜನ್ಯದ ಕೇಸ್ ಆಗಿದೆ. ಏಕೆಂದರೆ 18 ವರ್ಷದೊಳಗಿನ ಹೆಣ್ಣು ಮಕ್ಕಳ ಜೊತೆ ಒಪ್ಪಿತ ಲೈಂಗಿಕ ಕ್ರಿಯೆಯೂ ಅಪರಾಧ. ಅವನು ಜೈಲಿನಲ್ಲಿದ್ದರೆ, ಮಗಳು ಹೆಣವಾಗಿದ್ದಾಳೆ. ತಂದೆಯೂ ಮಗಳನ್ನು ಕೊಂದು ಜೈಲು ಸೇರಿದ್ದರೆ, ಅತ್ತ ಮಗಳನ್ನೂ ಕಳೆದುಕೊಂಡು, ಗಂಡನೂ ಜೈಲಿಗೆ ಸೇರಿ ಹೆಂಡತಿ ಒಂಟಿಯಾಗಿದ್ಧಾರೆ. ಇತ್ತ ತಾಯಿಯ ತಂಗಿಯ ಗಂಡನಿಗೂ ಮಚ್ಚಿನೇಟು ಬಿದ್ದಿದ್ದು, ಆತನೂ ಆಸ್ಪತ್ರೆಯಲ್ಲಿದ್ಧಾನೆ. ಆಕೆಯ ಪತ್ನಿಯೂ ಆತಂಕದಲ್ಲಿದ್ದಾರೆ. ಎಲ್ಲವೂ ಒಂದು ಪ್ರೀತಿಯ ಕಥೆ.
ಪ್ರಕರಣ 2. ಮಗಳ ಪ್ರೀತಿಗೆ ನೊಂದು ತಂದೆಯೇ ಆತ್ಮಹತ್ಯೆ :
ಪ್ರೀತಿಯಿಂದ ಸಾಕಿ, ಸಲುಹಿ ಬೆಳೆಸಿದ್ದ ಮಗಳು ಬೇರೊಬ್ಬನನ್ನು ಪ್ರೀತಿಸಿ ಮನೆಯಿಂದ ಓಡಿ ಹೋಗಿದ್ದರಿಂದ ಮನನೊಂದು ತಂದೆ ಮರಕ್ಕೆ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ದುರ್ಘಟನೆ ನಡೆದಿರುವುದು ಆನೇಕಲ್ ತಾಲೂಕಿನ ನಾರಾಯಣಪುರದಲ್ಲಿ. ನಾರಾಯಣಪುರ ಗ್ರಾಮದ ನಿವಾಸಿ ಗೋಪಾಲ್ ನೇಣಿಗೆ ಶರಣಾದ ವ್ಯಕ್ತಿ. ಮಗ್ಗದ ಕೆಲಸ ಮಾಡಿಕೊಂಡಿದ್ದ ಗೋಪಾಲ್ ಕಳೆದೆರಡು ದಿನಗಳಿಂದ ಮಗಳು ಪ್ರೀತಿಸಿದವನ ಜೊತೆಗೆಓಡಿ ಹೋಗಿದ್ದ ವಿಚಾರಕ್ಕೆ ಮನನೊಂದಿದ್ದ ತಂದೆ, ಇದೇ ವಿಚಾರಕ್ಕೆ ಮನೆಯಲ್ಲಿನ ಸದಸ್ಯರೊಂದಿಗೂ ಗಲಾಟೆ ಮಾಡಿಕೊಂಡು ಮನಸ್ತಾಪ ಮಾಡಿಕೊಂಡಿದ್ದರು. ಮನೆಯಲ್ಲಿ ನೆಮ್ಮದಿ ಇಲ್ಲವೆಂದು ಬೆಳಗ್ಗೆ ಎದ್ದವರೇ ಮನೆಯಿಂದ ಹೊರಗೆ ಹೋಗಿದ್ದ ಗೋಪಾಲ್ ಆನೇಕಲ್ ಕೆರೆಯ ಆವರಣದಲ್ಲಿದ್ದ ಮರಕ್ಕೆ ಹಗ್ಗವನ್ನು ಕಟ್ಟಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ.
ಈ ಪ್ರಕರಣದಲ್ಲಿ ತಂದೆ ಆತ್ಮಹತ್ಯೆ ನಂತರ ತನ್ನಿಂದಲೇ ತನ್ನ ತಂದೆ ಮೃತಪಟ್ಟರು ಎಂದು ಜೀವನವಿಡೀ ನರಳುವ ಪರಿಸ್ಥಿತಿ ಮಗಳದ್ದು. ಮಗಳಿಂದಲೇ ತಾನು ವಿಧವೆಯಾದೆ ಎಂಬ ನೋವು ತಾಯಿಯದ್ದು. ಒಟ್ಟಿನಲ್ಲಿ ಯಾರಿಗೂ ನೆಮ್ಮದಿಯ ಬದುಕು ಇಲ್ಲ. ಬದುಕಿರುತ್ತಾರೆ ಅಷ್ಟೆ.



