ಕೊಲೆಗಾರರು ಏನೇ ಮಾಡಿದರೂ ಒಂದಾದರೂ ಕ್ಲೂ ಬಿಟ್ಟೇ ಬಿಟ್ಟಿರುತ್ತಾರೆ ಎನ್ನುವುದು ಪೊಲೀಸರ ನಂಬಿಕೆ. ಅಪರಾಧಿಗಳಿಗೆ ತಪ್ಪು ಮಾಡುವುದಕ್ಕೆ, ತಪ್ಪಿಸಿಕೊಳ್ಳುವುದಕ್ಕೆ ನೂರಾರು ದಾರಿಗಳಿರುತ್ತವೆ. ಆದರೆ ಪೊಲೀಸರಿಗೆ ಮಾತ್ರ ಒಂದೇ ದಾರಿ. ಅದು ಅಪರಾಧಿ ಯಾವ ಮಾರ್ಗದಲ್ಲಿ ಹೋಗಿದ್ದಾನೋ.. ಅದೇ ರೂಟ್‍ನಲ್ಲಿ ಹೋಗಬೇಕು. ಇಲ್ಲದಿದ್ದರೆ ಅಪರಾಧಿ ಸಿಕ್ಕುವುದೇ ಇಲ್ಲ. ಅಫ್ತಾಬ್ ಪ್ರಕರಣದಲ್ಲೂ ಆಗಿದ್ದು ಇದೇ. ಶ್ರದ್ಧಾಳನ್ನು ಕೊಂದು 35 ತುಂಡುಗಳಾಗಿ ಕತ್ತರಿಸಿ ಇಡೀ ದೇಶಕ್ಕೆ ಭಯ ಹುಟ್ಟಿಸಿದ್ದ ನಡುಕ ಹುಟ್ಟಿಸಿದ್ದ ಹಂತಕ ಅಫ್ತಾಬ್ ಸಿಕ್ಕಿ ಬಿದ್ದಿದ್ದೇ ರೋಚಕ. ಅಪರಾಧಿಗಳು ಏನಾದರೊಂದು ಕ್ಲೂ ಬಿಟ್ಟೇ ಬಿಟ್ಟಿರುತ್ಥಾರೆ ಎಂಬ ನಂಬಿಕೆ ಮತ್ತೊಮ್ಮೆ ನಿಜವಾಗಿದೆ.
ನಾನು ನಿಮ್ಮ ಮಗಳೇ ಅಲ್ಲ ಎಂದು ಹೇಳಿ ಅಫ್ತಾಬ್‍ಗಾಗಿ ಹೆತ್ತವರನ್ನೇ ಬಿಟ್ಟು ಹೋದ ಶ್ರದ್ಧಾ ಬಗ್ಗೆ ತಂದೆ ತಾಯಿ ಕಣ್ಣೀರು ಹಾಕಿದರು. ಆದರೆ ಏನೂ ಮಾಡಲಾಗದ ಅಸಹಾಯಕತೆ. ಕೊನೆಗೆ ಮಗಳು ಸೋಷಿಯಲ್ ಮೀಡಿಯಾದಲ್ಲಿ ಹಾಕುತ್ತಿದ್ದ ಪೋಸ್ಟ್, ವಿಡಿಯೋ ನೋಡಿ ಎಲ್ಲೋ ಮಗಳು ಚೆನ್ನಾಗಿದ್ದಾಳಲ್ಲ ಎಂದು ಸಮಾಧಾನ ಪಟ್ಟುಕೊಳ್ಳುತ್ತಿದ್ದರು. ಅದು ಅಫ್ತಾಬ್‍ಗೂ ಗೊತ್ತಿತ್ತು. ಅಷ್ಟಕ್ಕೂ ಅವನಿಗೆ ಶ್ರದ್ಧಾಳನ್ನು ಮದುವೆಯಾಗುವ ಯಾವ ಮನಸ್ಸೂ ಇರಲಿಲ್ಲ. ಉಂಡು ಮುಗಿಸುವ ಆತುರವಷ್ಟೇ ಇತ್ತು. ಎಲ್ಲ ಮುಗಿದ ಮೇಲೆ ಹಲವು ಹುಡುಗಿಯರಂತೆ.. ಈಕೆಯೂ ದೂರವಾಗುತ್ತಾಳೆ ಎಂದುಕೊಂಡಿದ್ದ ಅಫ್ತಾಬ್. ಆದರೆ ಶ್ರದ್ಧಾ ಮದುವೆಗೆ ಹಠ ಹಿಡಿದಳು.
ಇದಕ್ಕೂ ಮುನ್ನ ಒಮ್ಮೆ ಶ್ರದ್ಧಾಳನ್ನು ಕತ್ತರಿಸಲು ಮುಂದಾಗಿದ್ದನಂತೆ ಅಫ್ತಾಬ್. ಆದರೆ ಗೋಗರೆದು ಕಣ್ಣೀರಿಟ್ಟು ಕಾಲು ಹಿಡಿದು ಹೇಗೋ ಬಚಾವ್ ಆಗಿದ್ದಳಂತೆ. ಆ ದಿನ ಅವಳ ಕಣ್ಣೀರು ನೋಡಿ ಇವಳನ್ನು ಕೊಲ್ಲಬಾರದು ಎನಿಸಿತು. ಆ ದಿನ ಬಿಟ್ಟುಬಿಟ್ಟೆ. ಆದರೆ ನಾನು ಬೇರೆ ಹುಡುಗಿಯರ ಜೊತೆ ಮಾತನಾಡುತ್ತಿದ್ದರೂ ಅವಳು ಸಹಿಸುತ್ತಿರಲಿಲ್ಲ. ಆಗ ಅವಳನ್ನು ಕತ್ತರಿಸಿ ಕೊಂದೆ ಎಂದು ವಿವರವಾಗಿ ಬಾಯಿಬಿಟ್ಟಿದ್ದಾನೆ ಅಫ್ತಾಬ್.
ಮೇ 18ರಂದು ಕೊಂದಿರುವ ಅಫ್ತಾಬ್ ಆ ದಿನ ಏನಾಯಿತು? ಕೊಲೆಯಾಗುವ ಮುನ್ನ ನಡೆದಿದ್ದೇನು ಎನ್ನವುದನ್ನೆಲ್ಲ ಎಳೆ ಎಳೆಯಾಗಿ ಹೇಳಿದ್ದಾನೆ. ಆ ದಿನ ಬೇರೊಬ್ಬ ಹುಡುಗಿಯ ಜೊತೆ ಕ್ಲೋಸ್ ಆಗಿದ್ದನ್ನು ಶ್ರದ್ಧಾ ನೋಡಿದ್ದಳು. ಜಗಳ ತೆಗೆದಿದ್ದಳು. ಮದುವೆಯಾಗು ಎಂದು ಹಠ ಹಿಡಿದಿದ್ದಳು. ಕಪಾಳಕ್ಕೆ ಒಂದು ಬಿಟ್ಟೆ. ಹೊಡೆದ ರಭಸಕ್ಕೆ ಪ್ರಜ್ಞೆ ತಪ್ಪಿ ಬಿದ್ದಳು. ಹಾಲ್‍ನಲ್ಲಿಯೇ ಆಕೆಯನ್ನು ಕತ್ತರಿಸಿಬಿಟ್ಟೆ. ನಂತರ ಅವಳ ಹೆಣವನ್ನು ಅಡುಗೆ ಮನೆಯಲ್ಲಿಟ್ಟೆ. ನಂತರ ಮಟನ್ ಕತ್ತ್ತರಿಸುವ ಕತ್ತಿ, ಗರಗಸ ತಂದೆ. ಮೊದಲು ಸ್ವಿಗ್ಗಿಯಲ್ಲಿ ಊಟ ತರಿಸಿಕೊಂಡು ಊಟ ಮಾಡಿ ನಂತರ ಕತ್ತರಿಸೋಕೆ ಶುರು ಮಾಡಿದೆ ಎಂದು ವಿವರವಾಗಿ ಹೇಳಿದ್ಧಾನೆ ಅಫ್ತಾಬ್.
ಶ್ರದ್ಧಾಳನ್ನು ಕೊಂದ ಮೇಲೆ ತನ್ನ ಮೇಲೆ ಡೌಟ್ ಬರಬಾರದು. ಹೀಗಾಗಿ ಅವಳ ಮೊಬೈಲ್ ಬಳಸಿಕೊಂಡೇ ಅವಳ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದ. ಸತತ ಒಂದು ವಾರ ಅವಳ ಮೊಬೈಲ್ ಮೂಲಕವೇ ಆಕ್ಟಿವ್ ಆಗಿದ್ದು ನಂತರ ಫೋನ್ ಎಸೆದಿದ್ದ. ಆದರೆ ಪೊಲೀಸರು ಪ್ರಶ್ನಿಸಿದಾಗ ಆತನ ಉತ್ತರವೇ ಬೇರೆಯಾಗಿತ್ತು.
ನನ್ನ ಜೊತೆ ಲಿವಿಂಗ್ ಇನ್ ರಿಲೇಷನ್‍ಶಿಪ್‍ನಲಿದಳು. ಇಬ್ಬರೂ ಈಗ ಸಪರೇಟ್ ಆಗಿದ್ದೇವೆ. ಅವಳು ವಾರದ ಹಿಂದೆಯೇ ಮನೆ ಬಿಟ್ಟು ಹೋದಳು. ಮೇ 22 ನೇ ತಾರೀಕು ನನಗೂ ಅವಳಿಗೂ ಜಗಳವಾಯಿತು. ಅವತ್ತೇ ಅವಳು ಎಲ್ಲ ಲಗ್ಗೇಜ್ ಮತ್ತು ಮೊಬೈಲ್ ತೆಗೆದುಕೊಂಡು ಮನೆ ಬಿಟ್ಟು ಹೋದಳು ಎಂದಿದ್ದ ಅಫ್ತಾಬ್. ಪೊಲೀಸರಿಗೆ ಅನುಮಾನ ಮೂಡಿದ್ದು ಅಲ್ಲೇ.
ಮೇ 22-26ರ ಮಧ್ಯೆ ಶ್ರದ್ಧಾಳ ಫೋನ್ ಆಕ್ಟಿವ್ ಆಗಿತ್ತು. ಲೊಕೇಷನ್ ಮೆಹ್ರೌಲಿಯನ್ನೇ ತೋರಿಸುತ್ತಿತ್ತು. ಮನೆ ಬಿಟ್ಟು ಹೋದ ಶ್ರದ್ದಾಳ ಫೋನ್ ಲೊಕೇಷನ್, ಅಫ್ತಾಬ್ ಮನೆಯನ್ನೇ ತೋರಿಸೋಕೆ ಹೇಗೆ ಸಾಧ್ಯ ಎನ್ನುವುದು ಎಲ್ಲರಿಗೂ ಮೂಡುವ ಪ್ರಶ್ನೆ. ಪೊಲೀಸರಿಗೂ ಆ ಪ್ರಶ್ನೆ ಬಂತು. ಅಷ್ಟೇ ಅಲ್ಲ, ಶ್ರದ್ಧಾಳ ಅಕೌಂಟಿನಿಂದ 54 ಸಾವಿರ ಹಣ ಅಫ್ತಾಬ್ ಅಕೌಂಟಿಗೆ ಟ್ರಾನ್ಸ್‍ಫರ್ ಆಗಿತ್ತು. ಒನ್ಸ್ ಎಗೇನ್ ಮೆಹ್ರೌಲಿ ಲೊಕೇಷನ್ನಿನಲ್ಲಿ. ಅಂದರೆ ಅವನ ಮನೆಯಿದ್ದ ಲೊಕೇಷನ್ನಿನಲ್ಲಿ. ಪೊಲೀಸರಿಗೆ ಅನುಮಾನ ಉಳಿಯಲಿಲ್ಲ. ಎತ್ತಿಕೊಂಡು ಹೋದರು. ಪೊಲೀಸ್ ಭಾಷೆಯಲ್ಲಿ ಪ್ರಶ್ನೆ ಮಾಡಿದರು.
ಈಗ ಅಫ್ತಾಬ್ ಇನ್ನೊಂದು ನಾಟಕವಾಡುತ್ತಿದ್ದಾನೆ. ಮೊಬೈಲ್‍ನ್ನು ಎಲ್ಲಿ ಎಸೆದೆ ಎಂಬ ಪ್ರಶ್ನೆಗೆ ಒಮ್ಮೊಮ್ಮೆ ಒಂದೊಂದು ಉತ್ತರ ನೀಡುತ್ತಿದ್ದಾನೆ. ಅಲ್ಲದೆ ಅಫ್ತಾಬ್ ಈ ಕ್ರೌರ್ಯವನ್ನು ಮೊದಲ ಬಾರಿ ಎಸಗಿರೋಕೆ ಸಾಧ್ಯವಿಲ್ಲ. ಇನ್ನೂ ಬೇರೆ ಕೇಸ್ ಇರಬಹುದು ಎಂಬುದು ಪೊಲೀಸರ ಶಂಕೆ. ಹೀಗಾಗಿಯೇ ಆತನ ಮಂಪರು ಪರೀಕ್ಷೆಗೆ ಒಳಪಡಿಸಲಿದ್ದಾರೆ ಪೊಲೀಸರು.



