ಈಕೆ ವಿಶ್ವದ ನಂ.91 ಶ್ರೀಮಂತ ಮಹಿಳೆ. ಇಂಡಿಯನ್.
ಭಾರತದಲ್ಲಿ ಈಕೆಯೇ ನಂ.1 ಶ್ರೀಮಂತ ಮಹಿಳಾ ಉದ್ಯಮಿ.
ಸಾವಿತ್ರಿ ಜಿಂದಾಲ್.
ವಯಸ್ಸು 72.
ಜಿಂದಾಲ್ ಗ್ರೂಪ್ನ ಚೇರ್ಮನ್.
ಮೂಲತಃ ಅಸ್ಸಾಂ ಮೂಲದ ಸಾವಿತ್ರಿ ಮದುವೆಯಾಗಿದ್ದು ಓಂ ಪ್ರಕಾಶ್ ಜಿಂದಾಲ್ ಅವರನ್ನ. 35 ವರ್ಷಗಳ ಕಾಲ ಪತಿಯ ಹಿಂದೆ ನೆರಳಾಗಿದ್ದ ಸಾವಿತ್ರಿ, 2005ರಲ್ಲಿ ಪತಿಯ ಅಕಾಲಿಕ ನಿಧನದ ಬಳಿಕ ಜಿಂದಾಲ್ ಗ್ರೂಪ್ಸ್ನ ಮಾಲೀಕತ್ವ ವಹಿಸಿಕೊಂಡರು. ಕಾಂಗ್ರೆಸ್ ರಾಜಕಾರಣಿಯೂ ಆಗಿರುವ ಸಾವಿತ್ರಿ ಜಿಂದಾಲ್ ಹರಿಯಾಣ ಸರ್ಕಾರದಲ್ಲಿ ಮಂತ್ರಿಯೂ ಆಗಿದ್ದವರು. 2014ರಲ್ಲಿ ಸೋತವರು ಈಗ ಉದ್ಯಮಕ್ಕೇ ಸೀಮಿತರಾಗಿದ್ದಾರೆ. ಸಾವಿತ್ರಿ ಜಿಂದಾಲ್ ಇಂಡಿಯಾದಲ್ಲಷ್ಟೇ ಅಲ್ಲ, ಏಷ್ಯಾದ ನಂ.1 ಶ್ರೀಮಂತ ಮಹಿಳೆಯೂ ಹೌದು.
ಚೀನಾದ ಯಾಂಗ್ ಹುವಾನ್ ಇತ್ತೀಚಿನವರೆಗೆ ಏಷ್ಯಾದ ನಂ.1 ಶ್ರೀಮಂತ ಮಹಿಳೆಯಾಗಿದ್ದರು.ಚೀನಾದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಅವರ ಆರ್ಥಿಕ ಸ್ಥಿತಿ ಕೆಳಜಾರಿ ಆ ಸ್ಥಾನಕ್ಕೆ ಸಾವಿತ್ರಿ ಜಿಂದಾಲ್ ಬಂದಿದ್ದಾರೆ. ಇವರ ಆಸ್ತಿಯ ಒಟ್ಟು ಮೊತ್ತ ಸುಮಾರು 18 ಬಿಲಿಯನ್ ಡಾಲರ್. ಈ ನಂ.1 ಶ್ರೀಮಂತ ಮಹಿಳಾ ಉದ್ಯಮಿ ದೇಶದ ಎಲ್ಲ ಉದ್ಯಮಿಗಳ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದಾರೆ.
ಸ್ಟೀಲ್ ಹಾಗೂ ಇಂಧನ ಕ್ಷೇತ್ರದಲ್ಲಿ ಜಿಂದಾಲ್ ಗ್ರೂಪ್ ನಂ.1 ಸ್ಥಾನದಲ್ಲಿದೆ. ಹೀಗಾಗಿಯೇ ಫೋರ್ಬ್ಸ್ ನಿಯತಕಾಲಿಕದ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 91ನೇ ಹಾಗೂ ಏಷ್ಯಾದ ನಂ.1 ಶ್ರೀಮಂತ ಮಹಿಳೆ ಎಂಬ ಸ್ಥಾನ ಪಡೆದಿದ್ದಾರೆ ಸಾವಿತ್ರಿ.
ಪತಿ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟಾಗ ಸಾವಿತ್ರಿಯವರಿಗೆ 55 ವರ್ಷ ವಯಸ್ಸು. ಸಂಸ್ಥೆಯ ಚುಕ್ಕಾಣಿ ಹಿಡಿದ ಮೇಲೆ ಸಂಸ್ಥೆಯ ಮೌಲ್ಯವನ್ನು 4 ಪಟ್ಟು ಹೆಚ್ಚಿಸಿದ್ದು ಇವರ ಸಾಧನೆ.
2020ರಲ್ಲಿ 4.8 ಶತಕೋಟಿ ಡಾಲರ್ ಇದ್ದ ಸಾವಿತ್ರಿ ಜಿಂದಾಲ್ ಅವರ ಸಂಪತ್ತು, ಕೊರೊನಾ ವೇಳೆ ಹೊಡೆತ ತಿಂದಿತ್ತು. 2022ರಲ್ಲಿ 17.7 ಶತಕೋಟಿ ಡಾಲರ್ ಗೆ ಏರಿಕೆಯಾಗಿತ್ತು. ಅದಕ್ಕೆ ಕಾರಣವಾಗಿದ್ದು ಉಕ್ರೇನ್-ರಷ್ಯಾ ಯುದ್ಧ.
ಸಾವಿತ್ರಿ ಜಿಂದಾಲ್ ಅದೃಷ್ಟ ಎರಡು ವರ್ಷಗಳಲ್ಲಿ ಕ್ಷಿಪ್ರ ಗತಿಯಲ್ಲಿ ಪ್ರಗತಿಯಾಗಿದೆ.
ಸಾವಿತ್ರಿ ಜಿಂದಾಲ್ ಉದ್ಯಮಿಯಾಗಿ ಬೆಳೆದ ಕಥೆಯೇ ರೋಚಕ. ಸಾಮಾನ್ಯವಾಗಿ ಉದ್ಯಮ ರಂಗದಲ್ಲಿ ಸಾಧನೆ ಮಾಡಿದ ಇತ್ತೀಚಿನ ಮಹಿಳೆಯರನ್ನು ಗಮನಿಸಿದ್ರೆ, ಬಹುತೇಕ ಎಲ್ಲರೂ ಉನ್ನತ ಶಿಕ್ಷಣ ಪಡೆದವರೇ ಆಗಿದ್ದಾರೆ. ಆದರೆ, ಸಾವಿತ್ರಿ ಜಿಂದಾಲ್ ಕಾಲೇಜು ಮೆಟ್ಟಿಲು ಹತ್ತಿಯೇ ಇಲ್ಲವಂತೆ. ಪತಿಯ ಸಾವಿಗೂ ಮುನ್ನ ಮನೆ, ಮಕ್ಕಳ ಜವಾಬ್ದಾರಿಯಷ್ಟೇ ವಹಿಸಿಕೊಂಡು ಅಪ್ಪಟ್ಟ ಗೃಹಿಣಿಯಾಗಿದ್ದ ಸಾವಿತ್ರಿ, 55ನೇ ವಯಸ್ಸಿಗೆ ಉದ್ಯಮಕ್ಕೆ ಬಂದರೂ ಬೇಗನ ಬಿಸಿನೆಸ್ ಅರ್ಥ ಮಾಡಿಕೊಂಡರು. ಇವರಿಗೆ ಒಟ್ಟು 4 ಮಕ್ಕಳಿದ್ದಾರೆ. ಸಜ್ಜನ್ ಜಿಂದಾಲ್ ನವೀನ್ ಜಿಂದಾಲ್ ಪೃಥ್ವಿರಾಜ್ ಮತ್ತು ರತನ್. ಅವರೂ ಕೂಡಾ ಉದ್ಯಮಿಯಾಗಿಯೇ ಮುಂದುವರೆದಿದ್ದಾರೆ.



