ಜಗತ್ತಿನ ಅತಿ ದೊಡ್ಡ ಇ-ಕಾಮರ್ಸ್ ಸಂಸ್ಥೆ ಮತಾಂತರಕ್ಕೆ ಕುಮ್ಮಕ್ಕು ನೀಡುತ್ತಿದೆಯಾ? ಭಾರತದಲ್ಲಿ ಭಾರತೀಯರ ಹಣದಿಂದಲೇ ಮತಾಂತರ ನಡೆಯುತ್ತಿದೆಯಾ? ಇಂತಾದ್ದೊಂದು ಆರೋಪ ಸಂಚಲನ ಮೂಡಿಸಿದೆ. ಏಕೆಂದರೆ ಆರೋಪ ಮಾಡಿರುವುದು ಆರ್.ಎಸ್.ಎಸ್.ನ ಮುಖವಾಣಿ ಪಾಂಚಜನ್ಯ ಮತ್ತು ಆರ್ಗನೈಸರ್.
ಅಮೇಜಾನ್ನಿಂದ ದೇಣಿಗೆ ಪಡೆಯುತ್ತಿರುವ ಅಮೇಜಿಂಗ್ ಕ್ರಾಸ್ ಕನೆಕ್ಷನ್ ಸಂಸ್ಥೆ ಈಶಾನ್ಯ ರಾಜ್ಯಗಳಲ್ಲಿ ತಾವು 25 ಸಾವಿರ ಮಂದಿಯನ್ನು ಕ್ರಿಶ್ಚಿಯಾನಿಟಿಗೆ ಮತಾಂತರ ಮಾಡಿದ್ದೇವೆ ಎಂದು ತನ್ನದೇ ವೆಬ್ಸೈಟ್ನಲ್ಲಿ ಬರೆದುಕೊಂಡಿದೆ. ಆ ಅಮೇಜಿಂಗ್ ಕ್ರಾಸ್ ಕನೆಕ್ಷನ್ಗೆ ಅಮೇಜಾನ್ ದೇಣಿಗೆ ನೀಡುತ್ತಿದೆ. ನಾವು ಭಾರತೀಯರು ಅಮೇಜಾನ್ ಮೂಲಕ ಭಾರತದಲ್ಲಿಯೇ ವ್ಯವಹಾರ ನಡೆಸಿ ಆ ಮೂಲಕ ಮತಾಂತರಕ್ಕೆ ನೆರವು ನೀಡುತ್ತಿದ್ದೇವೆ ಎಂದು ಆರ್ಗನೈಸರ್ನಲ್ಲಿ ಬರೆಯಲಾಗಿದೆ. ಈ ಮೂಲಕ ಭಾರತದ ಸಾಮಾಜಿಕ ಮತ್ತು ಅರ್ಥ ವ್ಯವಸ್ಥೆಯನ್ನು ಬುಡಮೇಲು ಮಾಡುವ ಸಂಚು ನಡೆಯುತ್ತಿದೆ ಎನ್ನುವುದು ಆರ್ಎಸ್ಎಸ್ ವಾದ.
ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್ ಆಮಿಷವೊಡ್ಡಿ ಹಾಗೂ ಬಲವಂತವಾಗಿ ಮತಾಂತರ ನಡೆಯುತ್ತಿರುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿತ್ತು. ಈ ಬಗ್ಗೆ ಕ್ರಮ ಕೈಗೊಳ್ಳದೇ ಹೋದರೆ ದೇಶದ ಸಾರ್ವಭೌಮತೆಗೆ ಧಕ್ಕೆಯಾಗಲಿದೆ ಎಂದು ಎಚ್ಚರಿಕೆ ನೀಡಿತ್ತು. ಸುಪ್ರೀಂಕೋರ್ಟ್ ಸೂಚನೆ ನೀಡಿ ಮತಾಂತರದ ಬಗ್ಗೆ ಎನ್ಐಎ (ರಾಷ್ಟ್ರೀಯ ತನಿಖಾ ಸಂಸ್ಥೆ) ತನಿಖೆ ನಡೆಸಬೇಕು ಎಂದು ರಾಷ್ಟ್ರೀಯ ಸ್ವದೇಶಿ ಜಾಗರಣ್ ಮಂಚ್ನ ಅಧ್ಯಕ್ಷರಾದ ಅಶ್ವನಿ ಮಹಾಜನ್ ಆಗ್ರಹಿಸಿದ್ದಾರೆ.
ಅಮೇಜಾನ್ ಸಂಸ್ಥೆಯಲ್ಲಿ ಒಂದು ಸಿಸ್ಟಂ ಇದೆ. ಅಮೇಜಾನ್ ಸ್ಮೈಲ್ ಪ್ರೋಗ್ರಾಂ ಮೂಲಕ ಅದು ದೇಣಿಗೆ ಸಂಗ್ರಹಿಸುತ್ತದೆ. ಗ್ರಾಹಕರು ಖರೀದಿಸಿದ ನಂತರ ತಾವು ಇಷ್ಟಬಂದ ಸಂಸ್ಥೆಗೆ ದೇಣಿಗೆ ನೀಡಬಹುದು. ಆ ವ್ಯವಸ್ಥೆ ಮೂಲಕ ಹಣ ಸಂಗ್ರಹಿಸಿ ಮತಾಂತರ ನಡೆಸುವ ಸಂಸ್ಥೆಗೆ ಹಣ ನೀಡಲಾಗುತ್ತಿದೆ ಎನ್ನುವುದು ಆರ್ಗನೈಸರ್ ಮತ್ತು ಪಾಂಚಜನ್ಯದ ಅಮೇಜಿಂಗ್ ಕ್ರಾಸ್ ಕನೆಕ್ಷನ್ ಹೆಸರಲ್ಲಿ ಸರಣಿ ಲೇಖನದ ಸಾರ. ಅಮೇಜಾನ್ ಕಂಪೆನಿಯನ್ನು ಈಸ್ಟ್ ಇಂಡಿಯಾ ಕಂಪೆನಿ-2 ಎಂದೂ ಕರೆದಿದೆ. ಅಮೇಜಾನ್ ಕಂಪೆನಿಗೂ ಅಮೆರಿಕದ ಬ್ಯಾಪ್ಟಿಸ್ಟ್ ಚರ್ಚ್ಗೂ ಲಿಂಕ್ ಇದೆ. ಬ್ಯಾಪ್ಟಿಸ್ಟ್ ಚರ್ಚ್ಗೆ ಹಲವು ಕಂಪನಿಗಳು ಹಣ ನೀಡುತ್ತವೆ.ಅವುಗಳನ್ನೆಲ್ಲ ಅಮೇಜಾನ್ ಮಾರ್ಗದಲ್ಲಿ ಸಂಗ್ರಹಿಸಿ ಮತಾಂತರ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಮಾಡಿವೆ ಆರ್ಗನೈಸರ್ ಮತ್ತು ಪಾಂಚಜನ್ಯ. ಆಲ್ ಇಂಡಿಯಾ ಮಿಷನ್ ವೆಬ್ಸೈಟ್ನಲ್ಲಿ ಮತಾಂತರದ ಉಲ್ಲೇಖವಿದ್ದು, ಈ ಸಂಸ್ಥೆಯೇ 25 ಸಾವಿರ ಜನರನ್ನು ಮತಾಂತರ ಮಾಡಿದೆ. ಕ್ರಿಶ್ಚಿಯಾನಿಗೆ ಕನ್ವರ್ಟ್ ಮಾಡಿದೆ ಎನ್ನುವುದು ಆರೋಪ.
ಆದರೆ ಅಮೇಜಾನ್ ಸಂಸ್ಥೆ ಇದನ್ನು ನಿರಾಕರಿಸಿದೆ. ಆಲ್ ಇಂಡಿಯಾ ಮಿಷನ್ನೊಂದಿಗೆ ಅಮೆಜಾನ್ ಸಂಬಂಧ ಹೊಂದಿಲ್ಲ. ಅಮೆಜಾನ್ ಸ್ಮೈಲ್ ಮೂಲಕ ಗ್ರಾಹಕರಿಂದ ದೇಣಿಗೆ ಸಂಗ್ರಹಿಸುವುದು ನಿಜ. ಆದರೆ ಅಮೆಜಾನ್ ಸ್ಮೈಲ್ನಲ್ಲಿ ಗ್ರಾಹಕರು ತಮಗೆ ಬೇಕಾದವರಿಗೆ ದೇಣಿಗೆ ನೀಡಬಹುದು. ದೇಣಿಗೆ ಸಂಗ್ರಹಿಸುವ ಸಂಸ್ಥೆಗಳ ನಿಲುವುಗಳನ್ನ ನಾವು ಬೆಂಬಲಿಸಲ್ಲ. ಅದು ಗ್ರಾಹಕರ ಆಯ್ಕೆಯೇ ಹೊರತು ನಮಗೆ ಸಂಬಂಧವಿಲ್ಲ ಎಂದು ಸ್ಪಷ್ಟನೆ ಕೊಟ್ಟಿದೆ.



