ಯೋಗರಾಜ್ ಭಟ್. ಕನ್ನಡದ ಖ್ಯಾತ ನಿರ್ದೇಶಕ. ಮುಂಗಾರು ಮಳೆ, ಗಾಳಿಪಟ, ಪಂಚರಂಗಿ, ಪಂಚತಂತ್ರ, ಡ್ರಾಮಾ, ಪರಮಾತ್ಮ, ಮುಗುಳುನಗೆ, ಗಾಳಿಪಟ 2.. ಹೀಗೆ ಹಲವು ಹಿಟ್ ಚಿತ್ರಗಳನ್ನು ಕೊಟ್ಟಿರುವ ಯೋಗರಾಜ್ ಭಟ್ ಕೆಲವು ಚಿತ್ರಗಳಲ್ಲಿ ಪುಟ್ಟ ಪುಟ್ಟ ಪಾತ್ರಗಳಲ್ಲಿ ನಟಿಸಿದ್ದಾರೆ. ಗಣೇಶ್, ಸುದೀಪ್, ಯಶ್, ನೀನಾಸಂ ಸತೀಶ್, ದಿಗಂತ್, ದುನಿಯಾ ವಿಜಯ್, ದಿ.ಪುನೀತ್ ರಾಜಕುಮಾರ್ ಸೇರಿದಂತೆ ಸ್ಟಾರ್ ನಟರಿಗೆ ಹಾಗೂ ಹೊಸ ಪ್ರತಿಭೆಗಳ ಅಚ್ಚುಮೆಚ್ಚಿನ ನಿರ್ದೇಶಕ. . ವಿಕಟ ಕವಿ ಎನ್ನುವುದು ಇವರಿಗೆ ಇರುವ ಬಿರುದು. ಕನ್ನಡದ ಎಲ್ಲ ನಟರಿಗೂ ಹಾಡು ಬರೆದಿರೋ ಯೋಗರಾಜ್ ಭಟ್ ಪದಗಳಲ್ಲಿ ಆಟವಾಡುವುದೇ ಒಂದು ಸೊಗಸು. ಯಾರ ಬಗ್ಗೆಯೂ ನೆಗೆಟಿವ್ ಮಾತನ್ನಾಡದ ಎಲ್ಲರನ್ನೂ ಪ್ರೀತಿಸುವ ಯೋಗರಾಜ್ ಭಟ್ ಇದೇ ಮೊದಲ ಬಾರಿಗೆ ಝೀಟಿವಿ ಕನ್ನಡದ ಮುಖ್ಯಸ್ಥ ರಾಘವೇಂದ್ರ ಹುಣಸೂರು ವಿರುದ್ಧ ಕೆರಳಿ ಕೆಂಡವಾಗಿದ್ದಾರೆ. ಈ ಕುರಿತ ಎರಡು ಆಡಿಯೋಗಳು ಹೊರಬಿದ್ದಿದ್ದು ರಾಘವೇಂದ್ರ ಹುಣಸೂರು ವಿರುದ್ಧ ಕಿಡಿಕಾರಿದ್ದಾರೆ.
ಯೋಗರಾಜ್ ಭಟ್ ಎರಡು ಆಡಿಯೋಗಳ ಸಾರಾಂಶ ಇದು :ರಾಘಪ್ಪ ನೀನು ಜೀ ಟಿವಿ ಉದ್ಧಾರ ಮಾಡಿದವನಾಗಿ ನಿನ್ನ ನಂಬಿಕೊಂಡಿರೋ ಇಂಡಸ್ಟ್ರಿಯವರನ್ನೂ ಉದ್ಧಾರ ಮಾಡಪ್ಪೋ. ಪದವಿಪೂರ್ವ ಅಂತ ಅಚ್ಚ ಕನ್ನಡದ ಚಿತ್ರ, ತುಂಬಾ ಅದ್ಭುತವಾಗಿ ಬಂದಿದೆ. ಈ ಚಿತ್ರದ ಟಿವಿ ಹಾಗೂ ಡಿಜಿಟಲ್ ತಗೊತಿನಿ ಅಂತ ಹೇಳಿದ್ದೆ. ಅದರ ಪ್ರಪೋಸಲ್ ಕಳಿಸಿದ್ದೀನಿ, ಆದರೆ ಫೋನ್ ತೆಗೀತಾ ಇಲ್ಲ ನೀನು. ಈಗ ಚಿತ್ರವನ್ನು ತಗೊಳ್ತಿಯೋ ಇಲ್ವೋ ಕ್ಲಾರಿಟಿ ಬೇಕು, ತುಂಬಾ ಅರ್ಜೆಂಟ್ ಇದೆ, ಇನ್ನು ಹತ್ತು ನಿಮಿಷದಲ್ಲಿ ಕಾಲ್ ಮಾಡು. ಇಲ್ಲಾ ಅಂದ್ರೆ ಒಂದು ಆಡಿಯೋ ಕಳುಹಿಸುತ್ತೇನೆ ಆಮೇಲೆ ಬಯ್ಕೊಬೇಡ.
ಅಲ್ಲ ರಾಘು, ಯಥಾಪ್ರಕಾರ ಫೋನ್ ತೆಗಿತಾ ಇಲ್ಲ, ಇಪ್ಪತ್ತು ದಿನದಿಂದ ಕಾಲ್ ಮಾಡ್ತಾ ಇದ್ದೇನೆ ನಿಂಗೆ, ವಾಪಸ್ ಫೋನ್ ಮಾಡಿಲ್ಲ. ಈಗ ಸರಿಯಾಗಿ ಉಗೀತಿನಿ, ಸರಿಯಾಗಿ ಕೇಳುಸ್ಕೋ ಬೇಕು ನೀನು. ನಿಂಗೆ ಕಷ್ಟ ಅಂದಾಗ ನಮ್ಮತ್ರ ಬರ್ತಿಯ, ಅದೇ ನಮಗೆ ಅಗತ್ಯ ಬಿದ್ದಾಗ ಸಹಾಯ ಮಾಡುವುದಿಲ್ಲ. ಇದು ನನ್ನೊಬ್ಬನ ಆರೋಪವಲ್ಲ, ಮುಕ್ಕಾಲು ಚಿತ್ರರಂಗದ ಆರೋಪ. ನಾವೆಲ್ಲಾ ಕಾಲ್ ಮಾಡೋವಷ್ಟು ದೊಡ್ಡವನಲ್ಲ ನೀನು, ಅದು ನಿಂಗೂ ಗೊತ್ತು ಇರಲಿ ಅಂತ ನೆನಪಿಸುತ್ತಿದ್ದೇನೆ. ಯಾವ ಇಂಡಸ್ಟ್ರಿ ಚಿತ್ರಗಳನ್ನು ಬಳಸಿಕೊಂಡು ನಾವು ಟಿಆರ್‌ಪಿಯಲ್ಲಿ ಮುಂದು ಅಂತ ಮೆರೆಯುತ್ತೀಯೋ ಅದೇ ಇಂಡಸ್ಟ್ರಿಯವರ ಫೋನ್ ತೆಗೆಯಲ್ಲ ನೀನು ಅಂದರೆ ನೀನು ತುಂಬಾ ಬೆಳೆದಿದ್ದೀಯ ಅಂತ ಅರ್ಥ. ಇಲ್ಲ, ನಾವು ಸತ್ತಿದ್ದೀವಿ ಅಂತ ಅರ್ಥ. ನೀ ಯಾವುದೇ ಕಾರಣಕ್ಕೂ ಬೆಳೆಯೋ ಮಗ ಅಲ್ಲ, ನಾವು ಸಾಯೋ ಮಂದಿ ಅಲ್ಲ ನಂಗೊತ್ತು. ನಿನ್ನಂತವರನ್ನೆಲ್ಲಾ ಹೂತೇ ಲೇಟಾಗಿ ಹೋಗ್ತೀನಿ. ನಿನ್ನ ಅವನತಿ ಶುರುವಾಗಿದೆ ಕಣೋ. ಬೀಳ್ತಿಯ ಆದ್ರೆ ಯಾವ ಹೈಟ್‌ನಿಂದ ಅಂತ ಗೊತ್ತಿಲ್ಲ. ಎಲ್ಲಾ ರೀತಿಯಲ್ಲೂ ದಬಾರ್ ಅಂತ ಬೀಳ್ತಿಯ, ಬಿದ್ದಾಗ ನಾಲ್ಕು ಜನ ಬರ್ತಾರೆ, ನನ್ನ ಕರ್ಮ ನಾನು ಬರ್ತೀನಿ, ಎತ್ತುತ್ತೀನಿ ತಮಟೆ ಡಾನ್ಸ್ ಬೇಕಿದ್ರು ಮಾಡ್ತಿನಿ. ಆದರೆ ನಿನ್ನ ಜೊತೆ ವ್ಯವಹಾರ ಮಾತ್ರ ಬೇಡ.
ಪದವಿಪೂರ್ವ, ಗರಡಿ, ಶಿವಣ್ಣನ ಕರಕಟ ದಮನಕ ಚಿತ್ರಗಳ ವ್ಯವಹಾರವನ್ನು ಬೇರೆಯವರ ಜೊತೆ ಮಾಡ್ತೀನಿ. ನಿನ್ನ ಜೊತೆಯಂತೂ ಮಾಡಲ್ಲ, ನಿನ್ನ ಜೊತೆ ವ್ಯವಹಾರಕ್ಕೆ ಇಳಿಯಲ್ಲ, ಫೋನ್ ಕೂಡ ಮಾಡಲ್ಲ, ಸಹವಾಸ ಸಾಕು, ನಿನ್ನನ್ನು ತಿದ್ದಿಕೋ ಅಂತಾನೂ ಹೇಳಲ್ಲ. ಏಕೆಂದರೆ ನೀನು ತುಂಬಾ ಹೈಟ್‌ಗೆ ಹೋಗಿದ್ದೀಯ ನಿನ್ನ ಬರಿಗೈನಲ್ಲಿ ಹಿಡಿದುಕೊಳ್ಳೋಕೆ ನನ್ನಂತ ಬಡವನಿಂದ ಆಗಲ್ಲ. ನಾವು ನೌಕರರು, ಮೇಸ್ತ್ರಿಗಳು, ಕಾರ್ಪೋರೇಷನ್ ಅವರು ಅನ್ಕೊಳಪ್ಪ. ನೀನು ನೀಟಾಗಿ ಬೀಳು ತಲೆ ಹೊಡ್ಕೊ, ಬದುಕಿದ್ರೆ ಬರ್ತೀನಿ. ಟಾಟಾ ಬೈ ಬೈ.

ಇದು ಯೋಗರಾಜ್ ಭಟ್ಟರು ಹೇಳಿರೋ ಮಾತು. ಮಧ್ಯೆ ಮಧ್ಯೆ ಅಶ್ಲೀಲ ಪದಗಳನ್ನೂ ಬೈಗುಳಗಳನ್ನೂ ಬಳಸಿದ್ದಾರೆ. ಆದರೆ ರಾಘವೇಂದ್ರ ಹುಣಸೂರು ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಯೋಗರಾಜ್ ಭಟ್ ಝೀ ಕನ್ನಡಕ್ಕೆ ಹೊಸಬರಲ್ಲ. ಡ್ರಾಮಾ ಜೂನಿಯರ್ಸ್, ಕಾಮಿಡಿ ಕಿಲಾಡಿಗಳು ಶೋಗಳಿಗೆ ಜಡ್ಜ್ ಆಗಿದ್ದವರು. ಹಲವು ವರ್ಷಗಳಿಂದ ಝೀ ಕುಟುಂಬದ ಭಾಗವಾಗಿದ್ದವರು. ಇತ್ತೀಚಿಗೆ ಬಿಡುಗಡೆಯಾಗಿ ಹಿಟ್ ಆದ ಗಾಳಿಪಟ-2 ಚಿತ್ರವನ್ನೂ ಝೀ ಕನ್ನಡ ಖರೀದಿಸಿತ್ತು. ಆದರೆ ಪದವಿಪೂರ್ವ, ಗರಡಿ, ಕರಟಕ ದಮನಕ ಚಿತ್ರಗಳು ಇನ್ನೂ ಬಿಡುಗಡೆಯಾಗಿಲ್ಲ. ಪದವಿಪೂರ್ವ ಚಿತ್ರ ಯೋಗರಾಜ್ ಭಟ್ ಬ್ಯಾನರ್ನ ಚಿತ್ರ. ಶಾಮನೂರು ಕುಟುಂಬದ ಪೃಥ್ವಿ ಹೀರೋ. ಭಟ್ಟರ ಗರಡಿಯ ಹುಡುಗ ಹರಿಪ್ರಸಾದ್ ಜಯಣ್ಣ ನಿರ್ದೇಶಕ. ಇನ್ನು ಗರಡಿ ಚಿತ್ರಕ್ಕೆ ಸಚಿವ ಬಿ.ಸಿ.ಪಾಟೀಲ್ ನಿರ್ಮಾಪಕ. ಸಿನಿಮಾದಲ್ಲಿ ಸಚಿವ ಎಸ್.ಟಿ.ಸೋಮಶೇಖರ್ ಕೂಡಾ ನಟಿಸಿದ್ದಾರೆ. ಯಶಸ್ ಸೂರ್ಯ ಹೀರೋ. ಇನ್ನು ಕರಟಕ ದಮನಕ ಚಿತ್ರಕ್ಕೆ ಭಟ್ಟರೇ ಡೈರೆಕ್ಟರ್. ಶಿವಣ್ಣ-ಪ್ರಭುದೇವ ಕಾಂಬಿನೇಷನ್ನಿನ ಸಿನಿಮಾ.
ಇನ್ನು ರಾಘವೇಂದ್ರ ಹುಣಸೂರು. ಝೀ ಕನ್ನಡದ ಬ್ಯುಸಿನೆಸ್ ಹೆಡ್. ಈ ಹಿಂದೆ ಕಲರ್ಸ್ ಕನ್ನಡ ಮತ್ತು ಸ್ಟಾರ್ ಸುವರ್ಣದಲ್ಲಿ ಕೆಲಸ ಮಾಡಿದ್ದವರು. ಝೀ ಕನ್ನಡ ನಂ.1 ಆಗಿದ್ದು ಅವರು ಬಂದ ನಂತರವೇ. ಆದರೆ ಇತ್ತೀಚೆಗೆ ಝೀ ಕನ್ನಡದಲ್ಲಿದ್ದ ಹಲವು ಕಲಾವಿದರು ಚಾನೆಲ್ ಬದಲಿಸಿದ್ದಾರೆ.



