ಪದ್ಮಭೂಷಣ ಡಾ. ರಾಜ್‌ಕುಮಾರ್ ರವರ ಕುಟುಂಬದಿಂದ ಈ ನಾಡಿಗೆ ಹಾಗೂ ಕನ್ನಡ ಚಿತ್ರರಂಗಕ್ಕೆ ಹಲವಾರು ಕೊಡುಗೆಗಳು ನಮ್ಮ ರಾಜ್ಯಕ್ಕೆ ದೊರೆತಿದೆ. ಆ ಕುಟುಂಬದ ಡಾ. ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಡಾ. ಪುನೀತ್ ರಾಜ್‌ಕುಮಾರ್, ವಿನಯ್ ರಾಜ್‌ಕುಮಾರ್ ಮುಂತಾದವರ ಬಳಿಕ ಈಗ ಯುವ ರಾಜ್‌ಕುಮಾರ್ ಕೂಡ ಎಂಟ್ರಿ ಸ್ಯಾಂಡಲ್‌ವುಡ್‌ಗೆ ಕೊಟ್ಟಿದ್ದಾರೆ.
ಹೊಂಬಾಳೆ ಫಿಲ್ಮ್ಸ್‌ಗಾಗಿ ರಾಜಕುಮಾರ ಮತ್ತು ಯುವರತ್ನ ಸಿನಿಮಾಗಳನ್ನು ಸಂತೋಷ್ ಆನಂದ್‌ರಾಮ್ ನಿರ್ದೇಶಿಸಿದ್ದರು. ಹಾಗೆಯೇ ಜಗ್ಗೇಶ್ ನಾಯಕತ್ವದ, ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ‘ರಾಘವೇಂದ್ರ ಸ್ಟೋರ್ಸ್’ ಸಿನಿಮಾಗೂ ಸಂತೋಷ್ ಆನಂದ್‌ರಾಮ್ ಅವರೇ ನಿರ್ದೇಶಕರು. ಆ ಸಿನಿಮಾ ಇನ್ನಷ್ಟೇ ತೆರೆಗೆ ಬರಬೇಕಿದೆ. ಇದೀಗ ‘ಯುವ’ ಮೂಲಕ ಒಂದು ಪವರ್‌ಫುಲ್ ಆಕ್ಷನ್ ಸಿನಿಮಾ ಮಾಡಲು ಸಂತೋಷ್ ಮುಂದಾಗಿದ್ದಾರೆ.
ಯುವ ರಾಜ್‌ಕುಮಾರ್ ಸಿನಿಮಾ ಏನು ಟೈಟಲ್ ಇಡಬಹುದು ಎಂದು ಸಾಕಷ್ಟು ಲೆಕ್ಕಾಚಾರ ಮಾಡಲಾಗಿತ್ತು. ರಾಜ್‌ಕುಮಾರ್ ಅವರ ‘ಜ್ವಾಲಾಮುಖಿ, ಕುಮಾರ್ ಬಂಗಾರಪ್ಪ ಅವರ ಅಶ್ವಮೇಧ, ಯುವ ಅವರ ಅಭಿನಯ ಪ್ರತಿಭೆಯನ್ನು ಜಗತ್ತಿಗೆ ಸಾರಿದ್ದ ಕಂಠೀರವ ಸೇರಿದಂತೆ ಹಲವು ಟೈಟಲ್‍ಗಳು ಚರ್ಚೆಯಲ್ಲಿದ್ದವು. ಆದರೆ ಯುವ ಎಂಬ ಟೈಟಲ್‍ನ್ನು ಹೊಂಬಾಳೆ ಫೈನಲ್ ಮಾಡಿದೆ. ನಿರ್ದೇಶಕ ಸಂತೋಷ್ ಆನಂದ್‌ರಾಮ್ ಅವರ ಐದನೇ ಸಿನಿಮಾವಾಗಿದ್ದು, ಹೊಂಬಾಳೆ ಫಿಲ್ಮ್ಸ್ ಜೊತೆಗೆ ಸತತವಾಗಿ ನಾಲ್ಕನೇ ಸಿನಿಮವಾಗಿದೆ.
‘ಯುವ’ ಸಿನಿಮಾದ ಟೈಟಲ್ ಲಾಂಚ್ ಬೆಂಗಳೂರಿನ ಲಲಿತ್ ಅಶೋಕ ಹೋಟೆಲ್‌ನಲ್ಲಿ ಅದ್ದೂರಿಯಾಗಿ ನೆರವೇರಿತು. ನಿರ್ಮಾಪಕರಾದ ವಿಜಯ್ ಕಿರಗಂದೂರ್, ನಿರ್ದೇಶಕ ಸಂತೋಷ್ ಆನಂದ್‌ರಾಮ್, ನಟ ಯುವ ರಾಜ್‌ಕುಮಾರ್, ಸಂಗೀತ ನಿರ್ದೇಶಕ ಅಜನೀಶ್ ಬಿ ಲೋಕನಾಥ್, ಛಾಯಾಗ್ರಾಹಕ ಶ್ರೀಶ ಕೂದುವಳ್ಳಿ ಮುಂತಾದವರು ಆಗಮಿಸಿದ್ದರು.
ಶೈಲಜಾ ವಿಜಯ್ ಕಿರಗಂದೂರು ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರೆ, ಮೊದಲ ದೃಶ್ಯಕ್ಕೆ ದೊಡ್ಡಪ್ಪ ಶಿವ ರಾಜ್ ಕುಮಾರ್ ಆಕ್ಷನ್ ಕಟ್ ಹೇಳಿದರು. ಚಿಕ್ಕಮ್ಮ ಅಶ್ವಿನಿ ಪುನೀತ್ ರಾಜ್ ಕುಮಾರ್ ಕ್ಯಾಮೆರಾಗೆ ಚಾಲನೆ ನೀಡಿದರು. ಚಿತ್ರ ಸೆಟ್ಟೇರಿದ ದಿನವೇ ಚಿತ್ರದ ಬಿಡುಗಡೆ ದಿನಾಂಕ ಘೋಷಿಸಿದ್ದು ವಿಶೇಷವಾಗಿತ್ತು. ಇದೇ ವರ್ಷ ಡಿಸೆಂಬರ್ 23ರಂದು ಯುವ ತೆರೆಗೆ ಬರಲಿದೆ.
ಚಿತ್ರದ ಟೀಸರ್ ರಿಲೀಸ್ ಆಗಿದ್ದು ಗ್ಯಾಂಗ್ ವಾರ್ ಕಥೆ ಚಿತ್ರದಲ್ಲಿರುವಂತಿದೆ. ಆದರೆ ಚಿತ್ರದ ಕಥೆಯಲ್ಲಿ ಬೇರೇನೋ ಹೊಸತನ ಇರುವಂತೆ ಕಾಣುತ್ತಿದೆ. ಸಂತೋಷ್ ಆನಂದರಾಮ್ ಚಿತ್ರದಲ್ಲಿ ಮೆಸೇಜ್ ಕೂಡಾ ಇರುವ ಕಾರಣ, ಕೇವಲ ಗ್ಯಾಂಗ್ ವಾರ್ ಕಥೆಯಂತೂ ಆಗಿರಲ್ಲ ಎನ್ನುವುದು ಅಭಿಮಾನಿಗಳ ಭರವಸೆ. ಪ್ರಕಾಶ್ ರಾಜ್ ಧ್ವನಿಯಲ್ಲಿ ಅವ್ನನ್ನ ಹೊಡೆಯೋಕೆ ಅಂತಾ ಒಂದು ಗ್ಯಾಂಗ್ ಕಾಯ್ತಾ ಇತ್ತು. ಅವನನ್ನ ತಡೆಯೋಕೂ ಒಂದು ಗ್ಯಾಂಗ್ ಇತ್ತು. ಗ್ಯಾಂಗ್ ವಾರ್ ಅವ್ನು ಶುರು ಮಾಡಲಿಲ್ಲ. ಆದರೆ ಮುಗಿಸ್ತಾನೆ.. ಅನ್ನೋ ಹಿನ್ನೆಲೆ ಧ್ವನಿ ವ್ಹಾವ್ ಎನ್ನುವಂತಿದೆ. ಚಿತ್ರದ ಮೇಕಿಂಗ್ ಗಮನ ಸೆಳೆಯುವಂತಿದೆ.



