ಅಪ್ಪು ಎಂದರೆ ಮನೆಯವರು ಕರೆಯುತ್ತಿದ್ದ ಹೆಸರು. ಅದನ್ನು ಇಡೀ ಕರುನಾಡು ಕೂಗಿ ಕೂಗಿ ಹೇಳಿತು. ಪವರ್ ಸ್ಟಾರ್ ಎನ್ನುವುದು ಶಿವಣ್ಣ ಕೊಟ್ಟ ಬಿರುದು. ಕರುನಾಡು ಒಪ್ಪಿಕೊಂಡಿತು. ಅಂತಹಾ ಅಪ್ಪು ಸಮಾಜ ಸೇವೆ ಎನ್ನುವ ಕಲ್ಪನೆಗೆ ಹೊಸ ರೂಪವನ್ನೇ ಕೊಟ್ಟರು. ಅವರು ಮೃತರಾಗುವವರೆಗೆ ಅವರ ಸಮಾಜ ಸೇವೆ, ನೀಡಿದ ನೆರವುಗಳು ಗೊತ್ತೇ ಇರಲಿಲ್ಲ. ಅದ್ಯಾರೋ ಅನಾಥರಿಗೆ ನೆರವು, ಇನ್ಯಾರಿಗೋ ಮನೆ, ಅದೆಷ್ಟೋ ವಿದ್ಯಾರ್ಥಿಗಳಿಗೆ ಶಿಕ್ಷಣ, ಚಿಕಿತ್ಸೆಗೆ ನೆರವು, ಶಾಲೆಗಳಿಗೆ ಅನಾಥಾಶ್ರಮಗಳಿಗೆ ನೆರವು.. ಹೀಗೆ ಎಲ್ಲವೂ ಬಯಲಿಗೆ ಬಂದಿದ್ದು ಅವರು ಕಾಲವಾದ ನಂತರ.
ಅಪ್ಪು ಅಷ್ಟಕ್ಕೇ ನಿಲ್ಲಲಿಲ್ಲ. ಗೊತ್ತಾದ ನಂತರ ಹಲವರಿಗೆ ಸ್ಫೂರ್ತಿಯಾದರು. ನೂರಾರು ಜನ ತಾವೂ ಸಮಾಜಮುಖಿ ಸೇವೆ ಆರಂಭಿಸಿದರು. ಗಂಧದ ಗುಡಿ ಕಾರ್ಯಕ್ರಮದಲ್ಲಿಯೇ ಕೆಲವು ಅಭಿಮಾನಿಗಳು, ಅಭಿಮಾನಿಗಳಿಗಾಗಿ ಊಟಕ್ಕೆ ವ್ಯವಸ್ಥೆ ಮಾಡಿದ್ದರು. ಟಿವಿ ಚಾನೆಲ್ಲಿನವರು ಮಾತನಾಡಿಸೋಕೆ ಹೋದ್ರೆ ನಮ್ ಅಪ್ಪೂನೇ ಏನೂ ಹೇಳದೆ ಸಹಾಯ ಮಾಡ್ತಾ ಇದ್ರು. ನಾವು ಊಟ ಕೊಟ್ಟು ಪ್ರಚಾರ ತಗೊಂಡ್ರೆ ಅಪ್ಪು ಮೆಚ್ತಾರಾ.. ಹಂಗೆಲ್ಲ ಹೇಳ್ಕೊಂಡ್ರೆ ಅಪ್ಪು ಫ್ಯಾನ್ಸ್ ಅಂತಾ ಹೇಳ್ಕೊಳ್ಳೋಕ್ ಆಗುತ್ತಾ.. ಬೇಡ ಸರ್.. ಅಪ್ಪು ಬಗ್ಗೆ ಮಾತಾಡ್ತೀವಿ. ಊಟ ಕೊಟ್ಟ ವಿಷಯದ ಬಗ್ಗೆ ಮಾತನಾಡಲ್ಲ ಎಂದವರು ಅಪ್ಪು ಫ್ಯಾನ್ಸ್. ಅದರ ಮುಂದಿನ ಹಂತ..
ವೇದಿಕೆಯಲ್ಲಿ ಮಾತನಾಡುತ್ತಿದ್ದ ಯಶ್ ಪ್ರಕಾಶ್ ರೈ ಮಾಡುತ್ತಿರುವ ಸಹಾಯ ನೆನಪಿಸಿದರು. ಪ್ರಕಾಶ್ ರೈ ತಮ್ಮ ಫೌಂಡೇಷನ್‍ನಿಂದ ಅಪ್ಪು ಎಕ್ಸ್‍ಪ್ರೆಸ್ ಸೇವೆ ಶುರು ಮಾಡಿದ್ದಾರೆ. ಈ ಸೇವೆಯಲ್ಲಿ ಪ್ರಕಾಶ್ ರೈ ಅವರ ಜೊತೆ ಶಿವಣ್ಣ, ಸೂರ್ಯ, ಚಿರಂಜೀವಿ ಎಲ್ಲರೂ ಕೈಜೋಡಿಸಿದ್ದು ತಾವೂ ಒಂದೊಂದು ಆಂಬುಲೆನ್ಸ್ ಕೊಡುವುದಾಗಿ ಹೇಳಿದ್ದಾರೆ. ನನ್ನದೂ ಯಶೋಮಾರ್ಗ ಫೌಂಡೇಷನ್ ಇದೆ. ಅದರ ಮೂಲಕ ನಿಮ್ಮ ಸೇವೆಗೆ ನಾನೂ ಕೈಜೋಡಿಸುತ್ತಿದ್ದೇನೆ. ಇನ್ನು ಉಳಿದಿರುವ ಎಲ್ಲ 25 ಜಿಲ್ಲೆಗಳಿಗೂ ಆಂಬುಲೆನ್ಸ್ ವ್ಯವಸ್ಥೆ ನಾನು ಕೊಡಿಸುತ್ತೇನೆ ಎಂದು ಘೋಷಿಸಿದರು ಯಶ್. ಅಪು ್ಪಇಲ್ಲದೆ ಹೋದರೂ ಅಪ್ಪು ಹೆಸರು ಮ್ಯಾಜಿಕ್ ಮಾಡಿತ್ತು. ಪ್ರಕಾಶ್ ರೈಗೆ ಸಹಾಯ ಹಸ್ತ ಅಲ್ಲಲ್ಲ ಅಪ್ಪು ಹಸ್ತ ನೆರವಾಗಿತ್ತು.



