ಈ ಚುಂಬನ ಚರಿತ್ರೆ ರಸಿಕರಿಗೆ ಮಾತ್ರ. ಶೃಂಗಾರ ಪ್ರಿಯರಿಗೆ ಮಾತ್ರ. ಚಂದ್ರ ಚಕೋರಿಗಳನ್ನು ನೋಡಿ ರೋಮಾಂಚನಗೊಂಡಿದ್ದವರಿಗೆ ಮಾತ್ರ.
ಜಗತ್ತಿನಲ್ಲಿ ಪ್ರತಿಯೊಂದಕ್ಕೂ ಚರಿತ್ರೆ ಇದೆ. ಮುತ್ತಿಗೂ ಕೂಡಾ. ಶಿಲಾಬಾಲಿಕೆಯರನ್ನು ನೋಡುತ್ತಿದ್ದರೆ ಆಗಿನ ಕಾಲದಲ್ಲೇ ನಮ್ಮವರು ಎಷ್ಟೊಂದು ಸೃಜನಶೀಲರಾಗಿದ್ದರು..ರಸಿಕರಾಗಿದ್ದರು ಎನ್ನುವುದು ಗೊತ್ತಾಗುತ್ತೆ. ಅಲ್ಲಿನ ವೆರೈಟಿ ನೋಡಿದಾಗ.. ಈಗಿನ ಜನರೇಷನ್ನಿನವರಿಗೇ ರಸಿಕತೆ ಇಲ್ಲವೇನೋ ಎನಿಸಿದರೆ ಅಚ್ಚರಿಯಿಲ್ಲ. ಅಷ್ಟು ವೈವಿಧ್ಯತೆಯಿತ್ತು.. ಆಗಿನ ಚುಂಬನಗಳಲ್ಲಿ. ನಾವು ಅಲ್ಲಿಗೆಲ್ಲ ಹೋಗೋದು ಬೇಡ. ಕೇವಲ ಸಿನಿಮಾರಂಗದ ಚುಂಬನ ಚರಿತ್ರೆ ನೋಡೋಣ. ಅದರಲ್ಲೂ ನಮ್ಮ ಭಾರತದ ಚಿತ್ರರಂಗದ ಕಥೆಯನ್ನಷ್ಟೇ ನೋಡೋಣ.
ನಮ್ಮಲ್ಲಿ ಕಿಸ್ಸಿಂಗ್ ಸೀನ್ ತೋರಿಸೋ ಪರಿಪಾಠವೇ ಇರಲಿಲ್ಲ. ಹೂವಿನ ಮೇಲೆ ದುಂಬಿ ಕುಳಿತಿದ್ದನ್ನೋ.. ಉರಿಯುವ ಬೆಂಕಿಯನ್ನೋ.. ಹಕ್ಕಿಗಳ ಕುಚ್ಚುಕುವನ್ನೋ.. ತೋರಿಸಿ.. ಉಳಿದದ್ದನ್ನು ಪ್ರೇಕ್ಷಕರ ಕಲ್ಪನೆಗೆ ಬಿಡುತ್ತಿದ್ದರು. ಮುತ್ತು ಕೊಟ್ಟಿದ್ದನ್ನು ಮಾತ್ರ ಮುಚ್ಚಿಟ್ಟು ನಾಯಕನೊ.. ನಾಯಕಿಯೊ.. ತುಟಿ ಒರೆಸಿಕೊಂಡಿದ್ದನ್ನು ತೋರಿಸಿದರೆ.. ಅದರಲ್ಲೇ ಥ್ರಿಲ್ಲಾಗುತ್ತಿದ್ದರು ಪ್ರೇಕ್ಷಕರು.
ನಂತರ ಅದು ಕೆನ್ನೆಗೆ ಬಂತು. ಕಣ್ಣಿಗೆ ಬಂತು. ತುಟಿಗೂ ಬಂತು. ಇದರ ಮಧ್ಯೆ ಹೀರೋ-ಹೀರೋಯಿನ್ ಕೈಯ್ಯಿಂದ ಬಾಯ್ಮುಚ್ಚಿಕೊಂಡು ಮತ್ತು ಕೊಡೋದೂ ಬಂತು. ಅವರ ತುಟಿಗಳನ್ನಷ್ಟೇ ಹತ್ತಿರ ತಂದು ಹೂವನ್ನೋ.. ಫೋಟೋನೋ.. ಔಟ್ ಆಫ್ ಫೋಕಸ್ ಮಾಡಿಯೋ ತೋರಿಸುವ ಪದ್ಧತಿಯೂ ಬಂತು. ಅದನ್ನು ಇವತ್ತಿಗೂ ಕೆಲವರು ಫಾಲೋ ಮಾಡ್ತಾರೆ.


ನಂಬಿದ್ರೆ ನಂಬಿ.. ಬಿಟ್ರೆ ಬಿಡಿ. ದೇಶದ ಚಿತ್ರರಂಗದ ಇತಿಹಾಸದಲ್ಲೇ ತೆರೆಯ ಮೇಲೆ ಸುದೀರ್ಘ ಕಾಲ ಚುಂಬಿಸಿಕೊಂಡ ಮೊದಲ ಜೋಡಿ ದೇವಿಕಾ ರಾಣಿ ಮತ್ತು ಹಿಮಾಂಶು ರೈ. ಅದೂ 1933ರಲ್ಲಿ. ಚಿತ್ರದ ಹೆಸರು ಕರ್ಮಾ. ಅದು ಆಗಿನ ಕಾಲಕ್ಕೆ 4 ನಿಮಿಷಗಳ ಅವಧಿಯ ಸುದೀರ್ಘ ಚುಂಬನ ದೃಶ್ಯ. ಅವರಿಬ್ಬರೂ ನಿಜ ಜೀವನದ ದಂಪತಿಗಳು ಅನ್ನೋದನ್ನು ಮರೆಯುವಂತಿಲ್ಲ. ಹೀಗಿದ್ದರೂ ಅವರ ಚುಂಬನದ ದೃಶ್ಯಕ್ಕೆ ದೇಶದಾದ್ಯಂತ ವಿರೋಧ ವ್ಯಕ್ತವಾಗಿತ್ತು.
ಅದಕ್ಕಿಂತಲೂ ಮೊದಲು ಸೀತಾದೇವಿ ಎಂಬ ನಾಯಕಿ 1929ರಲ್ಲಿ ಚಾರು ರಾಯ್ ಎಂಬ ನಾಯಕನನ್ನು ತೆರೆಯ ಮೇಲೆ ಕಿಸ್ ಮಾಡಿದ್ದರು. ಎ ಥ್ರೋ ಆಫ್ ಡೈಸ್ ಅನ್ನೋದು ಚಿತ್ರದ ಹೆಸರು. ಅದು ಮೂಕಿ ಚಿತ್ರ. 1932ರಲ್ಲಿ ತೆರೆ ಕಂಡ ಝರೀನಾ ಅನ್ನೋ ಚಿತ್ರದಲ್ಲೂ ಕಿಸ್ಸಿಂಗ್ ಸೀನ್ ಇತ್ತು. ಸ್ವಾತಂತ್ರ್ಯಕ್ಕೂ ಮೊದಲು ಬಂದ ಚಿತ್ರಗಳಲ್ಲಿ ಸೆನ್ಸಾರ್ ಸಮಸ್ಯೆ ಇರಲಿಲ್ಲ. ಕೆಲವು ಚಿತ್ರಗಳು ಆಗಿನ ಕಾಲಕ್ಕೇ ತುಂಬಾ ತುಂಬಾ ಬೋಲ್ಡ್ ಎನ್ನಿಸಿದ್ದವು. ಆದರೆ ಅವುಗಳಲ್ಲಿ ಹೆಚ್ಚಿನವು ಹಾಲಿವುಡ್ನಿಂದ ಬಂದು ಇಲ್ಲಿ ಹಿಂದಿಯಲ್ಲಿ ನಿರ್ದೇಶಿಸಿದ ಚಿತ್ರಗಳಾಗಿದ್ದವು.
ಸ್ವಾತಂತ್ರ್ಯಾನಂತರ ಸೆನ್ಸಾರ್ ಬೋರ್ಡ್ ಅಸ್ಥಿತ್ವಕ್ಕೆ ಬಂದು ಕಿಸ್ಸಿಂಗ್, ಸೆಕ್ಸ್ ದೃಶ್ಯಗಳು ಹೆಚ್ಚೂ ಕಡಿಮೆ ನಿಂತೇ ಹೋದವು. ಅಂತಹ ದೃಶ್ಯಗಳಿದ್ದರೆ ಎ ಪ್ರಮಾಣ ಪತ್ರ ಹಾಗೂ ಅಂತಹ ಚಿತ್ರಗಳಿಗೆ ವಯಸ್ಕರಿಗೆ ಮಾತ್ರ ಪ್ರವೇಶ ಎಂಬ ನಿಯಮ ಬಾಲಿವುಡ್ಗೆ ಮರ್ಯಾದಾ ರೇಖೆ ಹಾಕಿತ್ತು.ಅದನ್ನು ಮುರಿದದ್ದು ರಾಜ್ ಕಪೂರ್. ರಾಜ್ ಕಪೂರ್ ತಮ್ಮ ಚಿತ್ರಗಳಲ್ಲಿ ನಾಯಕಿಯರಿಗೆ ಸ್ವಿಮ್ ಸೂಟ್ ಅಥವಾ ಒದ್ದೆ ಸೀರೆ ತೊಡಿಸುವ ಮೂಲಕ ಹಿಂಬಾಗಿಲಿನಿಂದ ಶೃಂಗಾರ ತಂದರು.ಅದಾದ ಮೇಲೆ ಬಾಬ್ಬಿಯಲ್ಲಿ ಸೋಲಿನಿಂದ ತಪ್ಪಿಸಿಕೊಳ್ಳೋ ಹೋರಾಟದಲ್ಲಿ ಶಮ್ಮಿ ಕಪೂರ್ ಮತ್ತು ಡಿಂಪಲ್ ಕಪಾಡಿಯಾ ಜೋಡಿಯನ್ನು ತೆರೆಯ ಮೇಲೆ ಕಿಸ್ ಮಾಡುವಂತೆ ಮಾಡಿದರು. ಸಿನಿಮಾ ಸೂಪರ್ ಹಿಟ್. ನಂತರ ಜೀನತ್ ಅಮಾನ್,ಶಶಿ ಕಪೂರ್ಗೆ ಸತ್ಯಂ ಶಿವಂ ಸುಂದರಂನಲ್ಲಿ ಕಿಸ್ ಮಾಡಿದರು. ಅದಕ್ಕೂ ನಿರ್ದೇಶಕ ರಾಜ್ ಕಪೂರ್. ನಂತರ ರಾಮ್ ತೇರಿ ಗಂಗಾ ಮೈಲಿಯಲ್ಲಿ ನಗ್ನತೆಯನ್ನು ಜಲಪಾತಗಳ ಕೆಳಗೆ ಬಿಳಿ ಸೀರೆಯ ಅಡಿಯಲ್ಲಿ ತೋರಿಸಿದರು. ಮಂದಾಕಿನಿಯ ಅರೆನಗ್ನತೆಗೆ ಪ್ರೇಕ್ಷಕರು ಹುಚ್ಚಾಗಿ ಹೋದರು. ಟ್ರೆಂಡ್ ಸೃಷ್ಟಿಯಾಗಿತ್ತು. ಇದರ ಮಧ್ಯೆ ಡಿಂಪಲ್ ಕಪಾಡಿಯಾ ಅನಿಲ್ ಕಪೂರ್, ರಿಷಿ ಕಪೂರ್ಗೂ ತೆರೆಯ ಮೇಲೆ ಕಿಸ್ ಮಾಡಿ ಸೆಕ್ಸ್ ಸಿಂಬಲ್ ಆಗಿ ಹೋದರು.
ಮಾಧುರಿ ದೀಕ್ಷಿತ್ ಕೂಡಾ ವಿನೋದ್ ಖನ್ನಾಗೆ ಕಿಸ್ ಮಾಡಿಯೇ ಚಿತ್ರರಂಗಕ್ಕೆ ಬಂದಿದ್ದು. ಪ್ರೇಮಲೋಕದ ಜ್ಯೂಹಿ ಚಾವ್ಲಾ ಹಿಂದಿಗೆ ಹೋದಾಗ ಅಮೀರ್ ಖಾನ್ ತುಟಿಗೆ ತುಟಿಯಿಟ್ಟರು. ಜ್ಯೂಹಿಗೆ ಮುತ್ತಿಟ್ಟ ಅಮೀರ್ ಖಾನ್ ಚಿತ್ರರಂಗದ ಮುತ್ತಿನ ಇತಿಹಾಸ ಬದಲಿಸಿದ್ದು ರಾಜಾ ಹಿಂದೂಸ್ತಾನಿಯಲ್ಲಿ. ಆ ಚಿತ್ರದಲ್ಲಿ ಕರಿಷ್ಮಾ ಕಪೂರ್ ಮತ್ತು ಅಮೀರ್ ಖಾನ್ ನಡುವಿನ ಸುದೀರ್ಘ ಕಿಸ್ಸಿಂಗ್ ಸೀನ್ ಚಿತ್ರವನ್ನು ಬಾಕ್ಸಾಫೀಸ್ನಲ್ಲಿ ಭರ್ಜರಿಯಾಗಿ ಗೆಲ್ಲಿಸಿತು.
ಇದಾದ ಮೇಲೆ ಕಿಸ್ಸಿಂಗ್ ಕಾಮನ್ ಆಗುವಂತೆ ಮಾಡಿದವರಲ್ಲಿ ಮಲ್ಲಿಕಾ ಶೆರಾವತ್ ಪಾಲು ದೊಡ್ಡದು. ಮರ್ಡರ್ ಚಿತ್ರದಲ್ಲಿ ಇಮ್ರಾನ್ ಹಶ್ಮಿ ತುಟಿ ಕಚ್ಚಿದ್ದ ಮಲ್ಲಿಕಾ, ಅದಕ್ಕೂ ಮೊದಲು ಕ್ವಾಶಿಶ್ ಚಿತ್ರದಲ್ಲಿ 18 ಬಾರಿ ಹೀರೋ ತುಟಿಗೆ ತುಟಿಯಿಟ್ಟಿದ್ದಳು. ಆಮೇಲೆ ಕಿಸ್ಸಿಂಗ್ ಸ್ಟಾರ್ ಆಗಿದ್ದು ಇಮ್ರಾನ್ ಹಶ್ಮಿ. ಈತನ ಚಿತ್ರಗಳಲ್ಲಿ ಕಿಸ್ಸಿಂಗ್ ಮತ್ತು ಬೆಡ್ ರೂಂ ಸೀನ್ ಕಾಮನ್ ಆಗಿ ಹೋಯಿತು.
ಅದರೆ ಬಾಲಿವುಡ್ನ ಸೆನ್ಸೇಷನಲ್ ಕಿಸ್ಸಿಂಗ್ ಸೀನ್ ಎಂದರೆ ಅದು ಹೃತಿಕ್ ರೋಷನ್ ಮತ್ತು ಐಶ್ವರ್ಯಾ ರೈ ನಡುವಿನ ಧೂಮ್ ಸೀನ್. ಈಗ ಕಿಸ್ಸಿಂಗ್ ಕಾಮನ್ ಆಗಿ ಹೋಗಿದೆ. ಮುತ್ತುಗಳಿಲ್ಲದ ಸಿನಿಮಾನೇ ಈಗ ಬರಲ್ಲ. ಕಿಸ್ ಮಾಡದ ನಾಯಕ-ನಾಯಕಿಯರಿಲ್ಲ. ಮದುವೆಯಾದ ನಂತರವೂ ದೀಪಿಕಾ ಪಡುಕೋಣೆ, ಅನೂಷ್ಕಾ ಶರ್ಮಾ ಕೊಹ್ಲಿ, ಕರೀನಾ ಕಪೂರ್, ವಿದ್ಯಾ ಬಾಲನ್ ಮುತ್ತು ಕೊಟ್ಟಿದ್ದಾರೆ. ಒಟಿಟಿಗಳಲ್ಲಿ ಆಗಲೇ ಮುತ್ತಿನ ನಂತರದ ಕಾಮದಾಟವೂ ಶುರುವಾಗಿ ಹೋಗಿದೆ.



