ಕಾಂತಾರ ಚಿತ್ರ ನವೆಂಬರ್ 4ಕ್ಕೆ ಅಮೇಜಾನ್ ಪ್ರೈಂನಲ್ಲಿ ರಿಲೀಸ್ ಆಗಲಿದೆ. ಇಂಥಾದ್ದೊಂದು ಸುದ್ದಿ ಇತ್ತೀಚೆಗೆ ಹರಿದಾಡಿತ್ತು. ಪ್ರೇಕ್ಷಕರು ಅಚ್ಚರಿಗೊಂಡಿದ್ದರು . ಅರೆ.. ಇದು ನಿಜಾನಾ? ಕಾಂತಾರ ನೋಡಿದರೆ ಎಲ್ಲ ಚಿತ್ರಮಂದಿರಗಳಲ್ಲೂ ಸತತ 5ನೇ ವಾರವೂ ಹೌಸ್ಫುಲ್ ಶೋ ನಡೆಯುತ್ತಿದೆ. ಡಬ್ ಆಗಿ ತೆಲುಗು, ತಮಿಳು, ಮಲಯಾಳಂ ಹಿಂದಿಯಲ್ಲಿಯೂ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಏನಿದು ಅಚ್ಚರಿ ಎಂದಿದ್ದರು.

ಅದಕ್ಕೆ ತಕ್ಕಂತೆ ಕಾಂತಾರ 5ನೇ ವಾರವೂ ಕೂಡಾ ಯಾವುದೇ ಥಿಯೇಟರ್ ಕ್ಯಾನ್ಸಲ್ ಆಗಿಲ್ಲ. ಕೆಲವು ಮಲ್ಟಿಪ್ಲೆಕ್ಸ್ಗಳಲ್ಲಿ ಶೋಗಳನ್ನು ಗಂಧದ ಗುಡಿಗೆ ನೀಡಲಾಗಿದೆ. ಕೆಲವು ಕಡೆ ಹೆಡ್ ಬುಷ್ ತೆಗೆದು ಮತ್ತೆ ಕಾಂತಾರ ಹಾಕಿಕೊಂಡಿದ್ದಾರೆ. ಕರ್ನಾಟಕವೊಂದರಲ್ಲೇ ಸಿನಿಮಾ ನೋಡಿದವರ ಸಂಖ್ಯೆ ಹತ್ತಿರ ಹತ್ತಿರ 90 ಲಕ್ಷ. 1 ಕೋಟಿ ದಾಟುವ ಎಲ್ಲ ಸೂಚನೆಗಳೂ ಇವೆ. ಬೆಂಗಳೂರಿನ ವೀರೇಶ್ ಸಿನಿಮಾಸ್ನಲ್ಲಿಯೇ 1 ಲಕ್ಷಕ್ಕೂ ಹೆಚ್ಚು ಜನ ಸಿನಿಮಾ ನೋಡಿದ್ದಾರೆ. ತಿಪಟೂರಿನ ತ್ರಿಮೂರ್ತಿಯಲ್ಲಿ ಹೆಚ್ಚೂ ಕಡಿಮೆ 35 ಸಾವಿರ ಮಂದಿ ಸಿನಿಮಾ ನೋಡಿದ್ದಾರೆ. ವೀರೇಶ್ ರಾಜಧಾನಿಯ ಸೆಂಟರ್ ಥಿಯೇಟರುಗಳಲ್ಲಿ ಒಂದಾದರೆ ತ್ರಿಮೂರ್ತಿ ತಾಲೂಕು ಕೇಂದ್ರದ ಥಿಯೇಟರ್. ಜನ ಕಡಿಮೆಯಾಗಿಲ್ಲದಿರುವಾಗ ಹೀಗೇಕೆ ಮಾಡಿದರು ಎಂದು ಸುದ್ದಿ ಹಬ್ಬಿತ್ತು.
ಈ ಪ್ರಶ್ನೆಗೆ ಕೆಆರ್ಜಿ ಸ್ಟುಡಿಯೋಸ್ನ ಕಾರ್ತಿಕ್ ಗೌಡ ಅವರೇ ಉತ್ತರ ಕೊಟ್ಟಿದ್ದಾರೆ. ಒಟಿಟಿಯಲ್ಲಿ ನವೆಂಬರ್ 4ಕ್ಕೆ ರಿಲೀಸ್ ಆಗುತ್ತಿಲ್ಲ. ಎಲ್ಲ ಸುದ್ದಿಗಳೂ ತಪ್ಪು. ಸದ್ಯಕ್ಕೆ ಒಟಿಟಿಗೆ ಇಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.



