ಕಾಲ ಎನ್ನುವುದು ಎಲ್ಲವನ್ನೂ ಕಲಿಸುತ್ತದಂತೆ. ಅದಕ್ಕಿಂತ ದೊಡ್ಡ ಮೇಷ್ಟು ಇನ್ನೊಬ್ಬರಿಲ್ಲ. ಏಕೆಂದರೆ ಅದು ಚಕ್ರ. ಒಮ್ಮೆ ಮೇಲೆ ಹೋದವರು ಕೆಳಗೆ ಬರಲೇಬೇಕು. ಕೆಳಿದ್ದವರು ಮೇಲೆ ಹೋಗಬೇಕು. ಅದು ತಿರುಗುತ್ತಲೇ ಇರುತ್ತದೆ. ಇದು ಅಂತುಹುದೇ ಒಂದು ಕಥೆ.
ರಿಷಬ್ ಶೆಟ್ಟಿ ಕೆಲವು ವರ್ಷಗಳ ಹಿಂದೆ ತಮ್ಮದೊಂದು ಸಿನಿಮಾಗೆ (ರಿಕ್ಕಿ ಚಿತ್ರಕ್ಕೆ) ಒಂದೇ ಒಂದು ಶೋ ಗಿಟ್ಟಿಸಿಕೊಳ್ಳಲು ಮಲ್ಟಿಪ್ಲೆಕ್ಸುಗಳ ಎದುರು ಪರದಾಡಿದ್ದರು. ಆ ಚಿತ್ರಕ್ಕೆ ರಕ್ಷಿತ್ ಶೆಟ್ಟಿ ಹೀರೋ. ಇದೇ ಜೋಡಿ ಕಿರಿಕ್ ಪಾರ್ಟಿಯಂತ ಸೂಪರ್ ಹಿಟ್ ಕೊಟ್ಟಿತ್ತು. ಕಿರಿಕ್ ಪಾರ್ಟಿ ನಂತರ ಅವನೇ ಶ್ರೀಮನ್ನಾರಾಯಣ ಸೋತಾಗ ಇನ್ನು ಇವನ ಕಥೆ ಮುಗೀತು. ಇವನು ಒನ್ ಟೈಂ ವಂಡರ್ ಎಂದವರೆಷ್ಟೋ. ಅದೇ ಸ್ಥಿತಿ ರಿಷಬ್ ಶೆಟ್ಟಿಯವರದ್ದು. ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಮಾಡಿದಾಗ ಅವಾರ್ಡ್ ಸಿಗಬಹದೇನೋ.. ಇಷ್ಟೇ ಇವರ ಕೆಪಾಸಿಟಿ ಎಂದಿದ್ದರು. ಅದರಲ್ಲಿಯೂ ರಿಷಬ್ ಗೆದ್ದರು. ಬೆಲ್ ಬಾಟಂ ಮೂಲಕ ಹೀರೋ ಆಗಿಯೂ ಮಿಂಚಿದರು. ಆದರೆ ಅವರಿಬ್ಬರೂ ಪರಿಚಯಿಸಿದ್ದ ರಶ್ಮಿಕಾ ಮಂದಣ್ಣ ಕಥೆ ನಾಗಾಲೋಟದಲ್ಲಿ ಓಡತೊಡಗಿತ್ತು.

ರಶ್ಮಿಕಾ ಮಂದಣ್ಣ, ರಕ್ಷಿತ್ ಶೆಟ್ಟಿ ಜೊತೆ ಬ್ರೇಕಪ್ ಮಾಡಿಕೊಂಡು ತೆಲುಗಿನಲ್ಲಿ ಸ್ಟಾರ್ ಆದರು. ವಿಜಯ್ ದೇವರಕೊಂಡ, ಮಹೇಶ್ ಬಾಬು, ತಮಿಳಿನಲ್ಲಿ ಕಾರ್ತಿ, ಹಿಂದಿಯಲ್ಲಿ ಅಮಿತಾಭ್ ಬಚ್ಚನ್ ಜೊತೆ ನಟಿಸಿರು. ಅಲ್ಲು ಅರ್ಜುನ್ ಜೊತೆಗಿನ ಪುಷ್ಪ ಸಿನಿಮಾ ಬೇರೆಯದೇ ಲೆವೆಲ್ಲಿಗೆ ಹೋಯಿತು. ವಿಜಯ್ ದೇವರಕೊಂಡ ಜೊತೆ ಲಿಪ್ ಲಾಕ್ ಸೀನುಗಳು ಹಾಟ್ ಆಗಿದ್ದರೆ ಇವರಿಬ್ಬರ ಮಧ್ಯೆ ಬೇರೇನೋ ಇದೆ ಎಂದು ಅನುಮಾನ ಪಟ್ಟವರೂ ಇದ್ದರು. ಅದು ನಿಜ ಎಂದೂ ಈ ಜೋಡಿ ಹೇಳಲಿಲ್ಲ. ಸುಳ್ಳು ಎಂದೂ ತಳ್ಳಿ ಹಾಕಲಿಲ್ಲ. ಈಗ ಇಡೀ ಕಾಲಚಕ್ರ ಒಂದು ಸುತ್ತು ತಿರುಗಿದೆ. ಮೇಲೆ ಹೋದವರು ಕೆಳಗೆ ಬಂದಿದ್ದಾರೆ. ಕೆಳಗಿದ್ದವರು ಮೇಲಕ್ಕೇರಿದ್ದಾರೆ.

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರ ಮಿಷನ್ ಮಜ್ನು ರಿಲೀಸ್ ಯಾವಾಗ ಅನ್ನೋದೇ ಗೊತ್ತಿಲ್ಲ. ಅಂದಹಾಗೆ ಇದು ಅವರ ಬಾಲಿವುಡ್ ಮೊದಲ ಸಿನಿಮಾ. ಜೂನ್ 10ಕ್ಕೆ ರಿಲೀಸ್ ಆಗಬೇಕಿತ್ತು. ಆಗಲಿಲ್ಲ. ಅದೇ ದಿನ ರಿಲೀಸ್ ಆದ 777 ಚಾರ್ಲಿ ಇತಿಹಾಸ ಬರೆಯಿತು. ಆ ಚಿತ್ರಕ್ಕೆ ರಕ್ಷಿತ್ ಶೆಟ್ಟಿಯೇ ಪ್ರೊಡ್ಯೂಸರ್ ಕಂ ಹೀರೋ. ಅವರೀಗ ನ್ಯಾಷನಲ್ ಸ್ಟಾರ್.
ಇಲ್ಲಿಗೇ ನಿಲ್ಲಲಿಲ್ಲ, ಕಾಲಚಕ್ರ. ಈಗ ರಿಷಬ್ ಶೆಟ್ಟಿಯವರ ಕಾಂತಾರ ಅಬ್ಬರಿಸುತ್ತಿದೆ. ಕಾಂತಾರದ ಅಬ್ಬರ ಹೇಗಿದೆಯೆಂದರೆ ಇದೇ ರಶ್ಮಿಕಾ ಮಂದಣ್ಣ ನಟಿಸಿದ್ದ ರಿಲೀಸ್ ಕೂಡಾ ಆಗಿದ್ದ ಮೊದಲ ಬಾಲಿವುಡ್ ಸಿನಿಮಾ ಗುಡ್ ಬೈ ಚಿತ್ರಕ್ಕೆ ಪ್ರೇಕ್ಷಕರು ಬೈಬೈ ಎಂದಿದ್ದಾರೆ. ಕಾಂತಾರದ ಅಬ್ಬರದ ಎದುರು ಗುಡ್ ಬೈ ಸೋತಿದೆ.
ಈ ಎರಡು ಚಿತ್ರಗಳ ಮಧ್ಯೆ ವಿಜಯ್ ದೇವರಕೊಂಡ ಅವರ ಹಿಂದಿಯಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿದ್ದ ಲೈಗರ್ ಭಯಂಕರವಾಗಿ ಮಕಾಡೆ ಬಿದ್ದಿದೆ.

ಅಂದಹಾಗೆ ಇಲ್ಲಿ ರಿಷಬ್ ಮತ್ತು ರಕ್ಷಿತ್ ಶೆಟ್ಟಿಯವರ ಸ್ನೇಹವನ್ನು ಹೇಳಬೇಕು. ಅವನೇ ಶ್ರೀಮನ್ನಾರಾಯಣ ಸೋತಾಗ ರಕ್ಷಿತ್ ಶೆಟ್ಟಿ ಜೊತೆ ಗಟ್ಟಿಯಾಗಿ ನಿಂತವರಲ್ಲಿ ರಿಷಬ್ ಕೂಡಾ ಒಬ್ಬರು. ಸೋತಾಗಲೂ ಜೊತೆಯಲ್ಲಿದ್ದರು. 777 ಚಾರ್ಲಿ ಚಿತ್ರದ ಪ್ರಚಾರಕ್ಕೂ ಜೊತೆಯಲ್ಲಿದ್ದರು. ಗೆದ್ದಾಗಲೂ ಜೊತೆಯಲ್ಲೇ ಇದ್ದರು. ರಕ್ಷಿತ್ ಶೆಟ್ಟಿ ಕೂಡಾ ಅಷ್ಟೆ. ಕಾಂತಾರದ ಗೆಲುವನ್ನು ಪುಟ್ಟ ಮಗುವಿನಂತೆ ಸಂಭ್ರಮಿಸಿದ್ದರು. ಅವರಿಬ್ಬರಿಂದಲೇ ಚಿತ್ರರಂಗಕ್ಕೆ ಬಂದ ರಶ್ಮಿಕಾ ಮಂದಣ್ಣ ಎಲ್ಲಿಯೂ ಇವರ ಹೆಸರನ್ನು ಹೇಳುವುದಿಲ್ಲ. ಆದರೆ.. ಈಗ ಕಾಲಚಕ್ರ ತಿರುಗಿದೆ.



