ಕನ್ನಡದಲ್ಲಿ ಈಗೀಗ ಏನು ಸಿನಿಮಾ ತೆಗಿತಿದ್ದೀರಪ್ಪ.. ಕನ್ನಡ ಚಿತ್ರರಂಗದ ಬಗ್ಗೆ ಇಡೀ ಭಾರತ ಮಾತನಾಡುತ್ತಿದೆ. ಇತ್ತೀಚೆಗೆ ಬಂದ ಕಾಂತಾರ ಬಗ್ಗೆ ಕೂಡ ಕೇಳಿದೆ, ಸಖತ್ ಆಗಿದ್ದೆಯಂತೆ. ಎಲ್ಲಿ ಹೋದರೂ ಕನ್ನಡ ಚಿತ್ರರಂಗದ ಬಗ್ಗೆ ಮಾತನಾಡುತ್ತಿದ್ದಾರೆ. ತುಂಬ ಹೆಮ್ಮೆಯಾಗುತ್ತಿದೆ
ಬೆಂಗಳೂರಿನಲ್ಲಿ ನಡೆದ ಫಿಲ್ಮ್‍ಫೇರ್ ಸಮಾರಂಭದಲ್ಲಿ ತೆಲುಗು ನಟ ನಾನಿ ಹೇಳಿದ ಮಾತು ವೈರಲ್ ಆಗುತ್ತಿದೆ. ಅದಕ್ಕೆ ಕಾರಣವಾಗಿರುವುದು ಕಾಂತಾರ ಒಂದೇ ಅಲ್ಲ ಅನ್ನೋದು ವಿಶೇಷ. ಕಾಂತಾರ ಕನ್ನಡದಲ್ಲಿ ದಂತಕಥೆಯೇ ಎಂಬಂತೆ ಗೆದ್ದಿದೆ. ಕಂಬಳದ ಕೋಣಗಳಿಗಿಂತ ವೇಗವಾಗಿ ಬಾಕ್ಸಾಫೀಸ್‍ನಲ್ಲಿ ಓಡುತ್ತಿದೆ. ಹೀಗಿರುವಾಗಲೇ ತೆಲುಗು ನಟ ನಾನಿ ಅವರ ವಿಡಿಯೋ ವೈರಲ್ ಆಗಿದ್ದು.
ಇತ್ತೀಚೆಗೆ ಕನ್ನಡ ಚಿತ್ರಗಳ ಬಗ್ಗೆ ಎಲ್ಲರೂ ತಿರುಗಿ ನೋಡುವಂತೆ ಮಾಡಿದ ಸಿನಿಮಾ ಕೆಜಿಎಫ್ ಅನ್ನೋದ್ರಲ್ಲಿ ಎರಡು ಮಾತಿಲ್ಲ. ತೆಲುಗು, ತಮಿಳು, ಮಲಯಾಳಂ, ಹಿಂದಿಯಲ್ಲಿ ನಭೂತೋ ನಭವಿಷ್ಯತಿ ಎಂಬಂತೆ ಹಿಟ್ ಆದ ಕೆಜಿಎಫ್ ಹೊಸ ದಾಖಲೆಯನ್ನೇ ಬರೆದಿತ್ತು.
ಆನಂತರ ಗರುಡ ಗಮನ ವೃಷಭ ವಾಹನ ಚಿತ್ರ ರಾಜಮೌಳಿ, ರಾಜಮೌಳಿಯಂತಹವರ ಮೆಚ್ಚುಗೆ ಗಿಟ್ಟಿಸಿತ್ತು.
777 ಚಾರ್ಲಿ ಸಿನಿಮಾ ಇಡೀ ಭಾರತದಲ್ಲಿ ಈ ರೀತಿಯೂ ಸಿನಿಮಾ ಮಾಡಬಹುದು ಹಾಗೂ ಅದರಲ್ಲೂ ಗೆಲ್ಲಬಹುದು ಎಂದು ತೋರಿಸಿಕೊಟ್ಟಿತ್ತು.
ವಿಕ್ರಾಂತ್ ರೋಣ ಹೊಸ ಟೆಕ್ನಾಲಜಿಯ ಮೂಲಕ ಗಮನ ಸೆಳೆದು ಮೇಕಿಂಗ್‍ನಲ್ಲೂ ಭರ್ಜರಿ ಎನ್ನಿಸಿಕೊಂಡು ಬಾಕ್ಸಾಫೀಸ್ ಕಮಾಲ್ ಮಾಡಿತ್ತು.
ಈಗ ಕಾಂತಾರ ಸರದಿ. ನೆಲದ ಕಥೆಯನ್ನಿಟ್ಟುಕೊಂಡು ಮಾಡಿರುವ ಚಿತ್ರ ಕನ್ನಡಿಗರ ಹೃದಯವನ್ನು ಗೆದ್ದಾಗಿದೆ. ಅಕ್ಟೋಬರ್ 14ರಂದು ಹಿಂದಿಯಲ್ಲಿ, ಅಕ್ಟೋಬರ್ 15ರಂದು ತೆಲುಗಿನಲ್ಲಿ ಯಾತ್ರೆ ಹೊರಡಲಿದೆ. ಇಷ್ಟಕ್ಕೇ ನಿಲ್ಲಲ್ಲ..
ಈಗ ರಿಲೀಸ್ ಆಗಿರುವ ಗಂಧದ ಗುಡಿ ಎಂಬ ಡಾಕ್ಯುಮೆಂಟರಿ ಥಿಯೇಟರಲ್ಲಿ ರಿಲೀಸ್ ಆಗುತ್ತಿದೆ. ಖುದ್ದು ಮೋದಿಯವರ ಗಮನ ಸೆಳೆದಿರುವ ಗಂಧದ ಗುಡಿ ಬೇರೊಂದು ಇತಿಹಾಸ ಬರೆಯಲಿದೆ.



