ರಾಜಮೌಳಿ ಚಿತ್ರಗಳೆಂದರೆ ಇಡೀ ಚಿತ್ರ ಜಗತ್ತು ಅಚ್ಚರಿಯಿಂದ ಕಾಯುತ್ತದೆ. ರಾಜಮೌಳಿ ಎಂಬ ನಿರ್ದೇಶಕ ಕಥೆಗಳನ್ನು ಕಟ್ಟಿಕೊಡುವ ರೀತಿ, ಚಿತ್ರಕಥೆಯನ್ನು ಹೇಳುವ ರೀತಿ, ದೃಶ್ಯಗಳನ್ನು ವಿಜೃಂಭಣೆಯಿಂದ ಕಟ್ಟಿಕೊಡುವ ಕಲೆ.. ಹೀಗೆ ಎಲ್ಲವೂ ಪ್ರೇಕ್ಷಕರನ್ನು ಮಂತ್ರಮುಗ್ದರನ್ನಾಗಿಸುತ್ತದೆ. ಒಂದು ರೀತಿಯಲ್ಲಿ ರಾಜಮೌಳಿ ದೃಶ್ಯಕಾವ್ಯವನ್ನೇ ಕಟ್ಟಿಕೊಡುತ್ತಾರೆ. ಅದು ಸಾಹಸವೇ ಇರಲಿ, ಶೃಂಗಾರವೇ ಇರಲಿ, ಹಾಸ್ಯವೇ ಇರಲಿ.. ಎಲ್ಲವೂ ವೈಭವವೇ.
ರಾಜಮೌಳಿ ಇದುವರೆಗೆ ಮಾಡಿರುವ ಚಿತ್ರಗಳು ಸ್ಟೂಡೆಂಟ್ ನಂ.1 ನಿಂದ ಹಿಡಿದು ಆರ್.ಆರ್.ಆರ್. ವರೆಗೆ ನಿರ್ದೇಶನ ಮಾಡಿರುವ ಚಿತ್ರಗಳ ಸಂಖ್ಯೆ 12. ಈ 12 ಚಿತ್ರಗಳಲ್ಲಿ ನಟಿಸಿದವರೆಲ್ಲ ಸ್ಟಾರ್ ನಟರೇ. ಮಾಡಿದ್ದೆಲ್ಲ ಅದ್ಧೂರಿ ಚಿತ್ರಗಳೇ. ಎನ್‍ಟಿಆರ್, ಪ್ರಭಾಸ್, ರವಿತೇಜ, ರಾಮ್‍ಚರಣ್ ತೇಜ, ನಿತಿನ್.. ಎಲ್ಲರೂ ಸ್ಟಾರ್ ಆಗಿದ್ದವರೇ. ಸುದೀಪ್ ಕನ್ನಡದಲ್ಲಿ ಸೂಪರ್ ಸ್ಟಾರ್ ಆಗಿದ್ದರೂ ಈಗ ಮಾಡಿದಾಗ ತೆಲುಗಿನಲ್ಲಿ ಅಪರಿಚಿತರು. ಇನ್ನು ಮರ್ಯಾದಾ ರಾಮನ್ನದ ಸುನಿಲ್ ಕಾಮಿಡಿ ನಟ. ರಾಜಮೌಳಿಯ ಚಿತ್ರಗಳಲ್ಲೆಲ್ಲ ಅತಿ ಕಡಿಮೆ ಬಜೆಟ್ ಚಿತ್ರವೆಂದರೆ ಮರ್ಯಾದಾ ರಾಮನ್ನ ಒಂದೇ. ಹೀಗೆ ಅದ್ಧೂರಿ ಚಿತ್ರಗಳನ್ನು ಕೊಟ್ಟು ಅದ್ಧೂರಿಯಾಗಿ ಲಾಭವನ್ನು ಕೂಡಾ ನಿರ್ಮಾಪಕರಿಗೆ ಸಿಗುವಂತೆ ಮಾಡುವ ರಾಜಮೌಳಿ, ಪ್ರಚಾರದಲ್ಲಿಯೂ ಅದ್ಧೂರಿತನ ತೋರಿಸುತ್ತಾರೆ.

ಹೀಗಾಗಿಯೇ ರಾಜಮೌಳಿ. ಇವತ್ತಿನ ಇಂಡಿಯಾದ ನಂ.1 ನಿರ್ದೇಶಕರೆಂದು ಯಾರಾದರೂ ಇದ್ದರೆ ನಿಸ್ಸಂಶಯವಾಗಿ ರಾಜಮೌಳಿ ಹೆಸರು ಹೇಳಬಹುದು. ಇದುವರೆಗೆ ರಾಜಮೌಳಿಯವರ ಒಂದೇ ಒಂದು ಸಿನಿಮಾ ಸೋತಿಲ್ಲ ಎನ್ನುವುದು ಅವರ ಹೆಗ್ಗಳಿಕೆ. ಈಗ, ಬಾಹುಬಲಿ, ಆರ್.ಆರ್.ಆರ್ ಎಂಬ ಅದ್ಧೂರಿ ಚಿತ್ರಗಳನ್ನೂ ಮಾಡಿದ್ದಾರೆ. ಮರ್ಯಾದಾ ರಾಮಣ್ಣ ಎಂಬಂತಹ ಲೋ ಬಜೆಟ್ ಸಿನಿಮಾ ಮಾಡಿಯೂ ಗೆದ್ದಿದ್ದಾರೆ. ಆದರೆ.. ಒಟ್ಟಾರೆಯಾಗಿ ಹೇಳಬೇಕು ಎಂದರೆ ರಾಜಮೌಳಿ ಚಿತ್ರಗಳ ಬಜೆಟ್ ಮುಗಿಲಲ್ಲೇ ಇರುತ್ತದೆ. ಅಂತಹ ರಾಜಮೌಳಿ ಕಾಂತಾರ ನೋಡಿ ಮೆಚ್ಚಿ ಇದು ನಮಗೆಲ್ಲ ಒಂದು ಪಾಠ ಎಂದಿರುವುದು ಅಚ್ಚರಿ.
ಹೆಚ್ಚು ಹಣ ಗಳಿಸೋಕೆ ಹೆಚ್ಚು ದುಡ್ಡು ಖರ್ಚು ಮಾಡಬೇಕಿಲ್ಲ. ಸ್ಪೆಷಲ್ ಸಿನಿಮಾಗೆ ಬಿಗ್ ಬಜೆಟ್ ಸಿನಿಮಾಗಳೇ ಆಗಬೇಕೆಂದೇನೂ ಇಲ್ಲ. ಬಿಗ್ ಬಜೆಟ್ ಹಾಕಿಯೋ ಬಿಗ್ ಬ್ಯುಸಿನೆಸ್ ಮಾಡಬೇಕೆಂದೇನೂ ಇಲ್ಲ. ಕಾಂತಾರದ ಮ್ಯಾಜಿಕ್ ನಮ್ಮಂತಹ ದುಬಾರಿ ಚಿತ್ರಗಳ ನಿರ್ಮಾಪಕ, ನಿರ್ದೇಶಕರಿಗೆ ಒಂದು ಪಾಠ ಹೇಳಿದೆ. ಈ ಚಿತ್ರದಿಂದ ನಾವು ಕಲಿಯುವುದು ತುಂಬಾ ಇದೆ. ನಮ್ಮ ದೃಷ್ಟಿಕೋನ ಬದಲಾಗಬೇಕಿದೆ ಎಂದಿದ್ದಾರೆ ರಾಜಮೌಳಿ.

ಅಂದಹಾಗೆ ನಟ ಹೃತಿಕ್ ರೋಷನ್ ಕೂಡಾ ಇತ್ತೀಚೆಗೆ ಕಾಂತಾರ ನೋಡಿ ಮೆಚ್ಚಿದ್ದಾರೆ. ಇದು ನಮಗೆಲ್ಲ ಪಾಠದಂತಿದೆ ಎಂದು ಅವರೂ ಹೇಳಿದ್ದಾರೆ. ಒಟ್ಟಾರೆ ಇಡೀ ದೇಶದ ಜನರೆನ್ನೆಲ್ಲ ಸೂಜಿಗಲ್ಲಿನಂತೆ ಸೆಳೆದ ಕಾಂತಾರ ಸೃಷ್ಟಿಸಿರುವ ಇತಿಹಾಸ ಸಣ್ಣದಲ್ಲ. ಇಡೀ ಚಿತ್ರಜಗತ್ತು ದಕ್ಷಿಣದತ್ತ ತಿರುಗಿ ನೋಡುವಂತೆ ಮಾಡಿದೆ ಕಾಂತಾರ. ಅಂದಹಾಗೆ ಈ ಸಾಧನೆ ಮಾಡಿದ ಮೊದಲ ದಕ್ಷಿಣದ ನಿರ್ದೇಶಕ ರಾಜಮೌಳಿ. ಬಾಹುಬಲಿ ನಂತರ ಇಡೀ ಚಿತ್ರರಂಗ ತೆಲುಗಿನತ್ತ ತಿರುಗಿ ನೋಡಿತ್ತು. ಆರ್.ಆರ್.ಆರ್, ಪುಷ್ಪ ಮೂಲಕ ನಾವು ಸ್ಟಾಂಗ್ ಎಂದು ಪ್ರೂವ್ ಮಾಡಿತ್ತು ಟಾಲಿವುಡ್. ತಮಿಳಿನಲ್ಲಿ ವಿಕ್ರಂ ಹವಾ ಎಬ್ಬಿಸಿದ್ರೆ, ದೃಶ್ಯಂನಂತಹ ಚಿತ್ರಗಳು ಮಲಯಾಳಂ ಚಿತ್ರರಂಗದ ಹೊಸಮುಖ ತೋರಿಸಿದವು,
ಕನ್ನಡದಲ್ಲಿ ದೊಡ್ಡ ಮಟ್ಟದ ಸದ್ದು ಮಾಡಿ ಗೆದ್ದಿದ್ದು ಯಶ್ ಅವರ ಕೆಜಿಎಫ್. ಅದನ್ನು ಮತ್ತೆ ಸಾಬೀತು ಮಾಡಿದ್ದು ಕಾಂತಾರ. ಈಗ ಕಾಂತಾರ ಇಂಡಿಯಾದ ನಂ.ನಿರ್ದೇಶಕನಿಗೇ ಹೊಸ ಪಾಠ ಹೇಳುತ್ತಿದೆ.



