ನನಗೆ ಪುನೀತ್ ಅವರು ಸಿಕ್ಕಾಗಲೆಲ್ಲ ಗಂಧದ ಗುಡಿ ಬಗ್ಗೆ ಮಾತನಾಡ್ತಿದ್ರು. ನೀವು ಸೋಷಿಯಲ್ ಮೀಡಿಯಾದಲ್ಲಿ ಯಾವ ಸಿನಿಮಾ ಬಗ್ಗೆ ಏನೂ ಪೋಸ್ಟ್ ಮಾಡಲ್ಲ. ಆದರೆ ಗಂಧದ ಗುಡಿ ಬಗ್ಗೆ ನೀವು ಖಂಡಿತಾ ಪೋಸ್ಟ್ ಮಾಡ್ಬೇಕು ಅಂತಿದ್ರು. ಡಾಕ್ಯುಮೆಂಟರಿ ಅಲ್ವಾ ಅಂದಿದ್ದಕ್ಕೆ ಇಲ್ಲ, ಅದು ಸಿನಿಮಾ. ಸಿನಿಮಾ ರೀತಿಯಲ್ಲೇ ಜನರಿಗೆ ತೋರಿಸಬೇಕು ಎಂದು ಹೇಳ್ತಿದ್ರು. ಇದನ್ನು ಯಶ್ ಈ ಹಿಂದೆ ಹಲವು ಬಾರಿ ಹೇಳಿಕೊಂಡಿದ್ದಾರೆ. ಗಂಧದ ಗುಡಿ ಟ್ರೇಲರ್ ರಿಲೀಸ್ ಆದಾಗ ಅದನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಕೂಡಾ ಮಾಡಿದ್ರು. ಈಗ ಗಂಧದ ಗುಡಿ ಪ್ರೀ-ರಿಲೀಸ್ ಈವೆಂಟ್‍ನಲ್ಲಿ ಭಾಗವಹಿಸಿದ ಮಾತನಾಡಿದ ಯಶ್ ಕರುನಾಡು ಒಬ್ಬರನ್ನು ಮಾತ್ರ ಇಡೀ ಕರ್ನಾಟಕದ ಮಗ ಎಂದು ಒಪ್ಪಿಕೊಂಡಿದೆ ಎಂದರೆ ಅದು ಅಪ್ಪು ಅವರನ್ನು ಮಾತ್ರ ಎಂದರು.
ಕಳೆದ ವರ್ಷದ ಹೆಚ್ಚು ಕಡಿಮೆ ಇದೇ ಸಂದರ್ಭದಲ್ಲಿ ಯಶ್-ಶಿವಣ್ಣ ಮತ್ತು ಪುನೀತ್ ಒಂದೇ ವೇದಿಕೆಯಲ್ಲಿದ್ದರು. ಅದು ಭಜರಂಗಿ 2 ಚಿತ್ರದ ಪ್ರೀ-ರಿಲೀಸ್ ಈವೆಂಟ್. ಅದು ಶಿವರಾಜ್‍ಕುಮಾರ್ ಅಭಿನಯದ ಚಿತ್ರ. ಅಣ್ಣನ ಚಿತ್ರದ ರಿಲೀಸ್‍ಗಾಗಿ ತಮ್ಮ ಗನ್‍ಮ್ಯಾನ್‍ನ್ನೂ ಪುನೀತ್ ಶಿವಣ್ಣನ ಜೊತೆ ಕಳಿಸಿದ್ದರು. ಆ ಈವೆಂಟ್ ದಿನ ಶಿವಣ್ಣ ಮತ್ತು ಪುನೀತ್ ಜೊತೆ ಯಶ್ ಕೂಡಾ ಸ್ಟೆಪ್ ಹಾಕಿದ್ದರು. ಪುನೀತ್ ಪರ್ವದಲ್ಲಿ ಅದೆಲ್ಲವನ್ನೂ ನೆನಪಿಸಿಕೊಂಡರು ಯಶ್.
ನನ್ನ ಜೊತೆ ಕೆಲಸ ಮಾಡಿದವರು ಪುನೀತ್ ಸರ್ ಜೊತೆಯಲ್ಲೂ ಕೆಲಸ ಮಾಡಿದ್ದಾರೆ. ನನಗೆ ಗೊತ್ತು, ಅವರಿಗೂ ನನಗಿಂತ ಅಪ್ಪು ಎಂದರೆ ಇಷ್ಟ. ಈ ಒಳ್ಳೆಯ ಮನಸ್ಸಿನ ಕೆಲಸವನ್ನು ಪ್ರತಿಯೊಬ್ಬರೂ ಪ್ರೀತಿಸಬೇಕು. ಮನೆ ಮನೆಯವರೂ ಹೋಗಿ ನೋಡಬೇಕು. ಕೆಜಿಎಫ್ ದಾಖಲೆಯೂ ದೂಳೀಪಟವಾಗಬೇಕು ಎಂದರು ಯಶ್.
ಪುನೀತ್ ಅವರು ಪ್ರೀತಿಯನ್ನು ಪಡೆದುಕೊಂಡು ಹುಟ್ಟಿದವರು. ಮನೆಯಲ್ಲಿ ನಾಡಿನೆಲ್ಲಡೆ ಪ್ರೀತಿಯನ್ನೇ ಪಡೆದುಕೊಂಡರು. ಪ್ರೀತಿಸಿದವರನ್ನೇ ಮದುವೆಯಾದರು. ಪ್ರೀತಿಯನ್ನೇ ಹಂಚಿದರು. ಪ್ರೀತಿಗಾಗಿಯೇ ಬದುಕಿದವರು. ಅಶ್ವಿನಿ ಮೇಡಂ ನಿಮ್ಮನ್ನು ಅಪ್ಪು ಸರ್ ಯಾವ ಕಾರಣಕ್ಕೆ ನಿರ್ಮಾಪಕಿಯನ್ನಾಗಿ ಮಾಡಿದರೋ ಗೊತ್ತಿಲ್ಲ. ಅದನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದೀರಿ. ನಾನಷ್ಟೇ ಅಲ್ಲ ಇಡೀ ಕರುನಾಡು ನಿಮ್ಮೊಂದಿಗೆ ಇದೆ ಎಂದು ಭರವಸೆ ನೀಡಿದವರು ಯಶ್.



