ಅಶ್ವಿನಿ ಪುನೀತ್ ರಾಜ್ಕುಮಾರ್ ಇದೂವರೆಗೂ ಮಾತನಾಡಿದ್ದು ಕಡಿಮೆ. ಕೆಲವೇ ಕೆಲವು ವೇದಿಕೆಗಳಲ್ಲಿ ಕಾಣಿಸಿಕೊಂಡಿದ್ದು ಬಿಟ್ಟರೆ ಗಂಭೀರವದನರಾಗಿಯೇ ಇದ್ದಾರೆ. ವೇದಿಕೆಗಳು ಸಿಕ್ಕರೂ ಸಂದರ್ಭಕ್ಕೆ ತಕ್ಕಂತೆ ಒಂದೆರಡು ಮಾತು ಬಿಟ್ಟರೆ ಇನ್ನೂ ಪುನೀತ್ ಹಠಾತ್ ನಿರ್ಗಮನದಿಂದ ಹೊರ ಬಂದಂತೆ ಕಾಣುತ್ತಿಲ್ಲ. ಮೊದಲೂ ಕೂಡಾ ಸಿನಿಮಾಗಳಿಂದ ಸ್ವಲ್ಪ ಅಂತರ ಕಾಯ್ದುಕೊಂಡಿದ್ದ ಅಶ್ವಿನಿ ಈಗ ಪುನೀತ್ ಅವರ ಎಲ್ಲ ಕಾರ್ಯಭಾರಗಳನ್ನೂ ನಿಭಾಯಿಸುತ್ತಿದ್ದಾರೆ. ಪುನೀತ್ ರಾಜ್‌ಕುಮಾರ್ ಕನಸಿನ ಪ್ರಾಜೆಕ್ಟ್ ಗಂಧದ ಗುಡಿ ಈ ವೇಳೆಯಲ್ಲೇ ಬಿಡುಗಡೆಗೆ ಸಿದ್ಧವಾಗಿದೆ.
ಇದೇ ತಿಂಗಳು 28 ರಂದು ದೇಶಾದ್ಯಂತ ಹಲವು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ. ಅದಕ್ಕೂ ಮುನ್ನ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ಪ್ರಿ ರಿಲೀಸ್ ಇವೆಂಟ್ ಆಯೋಜನೆ ಮಾಡಿದೆ. ಭಾರತೀಯ ಸಿನಿಮಾ ರಂಗದ ಅನೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಪ್ರಿ ರಿಲೀಸ್ ಇವೆಂಟ್‌ಗಾಗಿ ಈಗಿನಿಂದಲೇ ಬೆಂಗಳೂರಿನ ಅರಮನೆ ಮೈದಾನ ಸಿದ್ಧವಾಗುತ್ತಿದೆ. ಸಾವಿರಾರು ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಭಾಗಿ ಆಗುತ್ತಿದ್ದು, ಭಾರತೀಯ ಸಿನಿಮಾ ರಂಗದ ದಿಗ್ಗಜರು ಈ ಇವೆಂಟ್‌ಗೆ ಸಾಕ್ಷಿಯಾಗಲಿದ್ದಾರೆ. ಅಲ್ಲದೇ, ಕನ್ನಡದ ಬಹುತೇಕ ನಟ-ನಟಿಯರು ಹಾಗೂ ತಂತ್ರಜ್ಞರಿಗೆ ಈಗಾಗಲೇ ಆಹ್ವಾನ ನೀಡಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ರಾಜ್ ಕುಟುಂಬ ಆಹ್ವಾನ ನೀಡಿದೆ. ಹೀಗೆ ಗಂಧದ ಗುಡಿಗೆ ಏನೆಲ್ಲ ಶಕ್ತಿ ತುಂಬಬೇಕೋ ಆ ಕೆಲಸವನ್ನು ಪುನೀತ್ ಅವರ ಪತ್ನಿ ಅಶ್ವಿನಿ ಮಾಡುತ್ತಿದ್ದಾರೆ.
ಗಂಧದ ಗುಡಿ ವಿಚಾರವಾಗಿ ಪುನೀತ್ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಕೊಟ್ಟಿರುವ ಅಶ್ವಿನಿ ಅವರು, ಇದೇ ಮೊದಲ ಬಾರಿಗೆ ಹಿನ್ನೆಲೆ ಧ್ವನಿ ನೀಡಿದ್ದಾರೆ. ಗಂಧದ ಗುಡಿಯ ಆಶಯವನ್ನು ಸ್ವತಃ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರೇ ಹೇಳಿದ್ದಾರಂತೆ. ಹಾಗಾಗಿ ಈ ಡಾಕ್ಯುಮೆಂಟರಿ ಮಾದರಿ ಸಿನಿಮಾದಲ್ಲಿ ಡಾ.ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ಹಾಗೂ ಅಶ್ವಿನಿ ರಾಜ್‌ಕುಮಾರ್ ಧ್ವನಿಯನ್ನು ಕೇಳಬಹುದಾಗಿದೆ.
ಗಂಧದ ಗುಡಿ ಟ್ರೇಲರ್ ಈಗಾಗಲೇ ರಿಲೀಸ್ ಆಗಿದ್ದು, ಕೋಟ್ಯಂತರ ವೀಕ್ಷಣೆ ಪಡೆದಿದೆ. ಪ್ರಧಾನಿ ನರೇಂದ್ರ ಮೋದಿ ಕೂಡಾ ಟ್ವೀಟ್ ಮಾಡಿ ಶುಭ ಕೋರಿದ್ದಾರೆ. ಪುನೀತ್ ವೃತ್ತಿ ಜೀವನದಲ್ಲಿ ಇದೊಂದು ಅಪರೂಪದ ಸಿನಿಮಾ. ಕರುನಾಡಿನ ಕಾಡು, ಜಲ ಸಂಪತ್ತು, ಜೀವ ಸಂಪತ್ತು ಹಾಗೂ ಕಾಡು ಪ್ರಾಣಿಗಳ ಹೊಸ ಲೋಕವನ್ನೇ ಈ ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ ಹಿಡಿದಿಟ್ಟಿದ್ದಾರೆ. ಪುನೀತ್ ರಾಜ್‌ಕುಮಾರ್ ನಟನೆಯ ಕೊನೆ ಸಿನಿಮಾ ಇದಾಗಿದೆ.



