ಕಾಂತಾರ ಚಿತ್ರಕ್ಕೆ ಓಂಕಾರ ಬಿದ್ದಿದ್ದು ಧರ್ಮಸ್ಥಳದಲ್ಲಿ. ಅಪ್ಪಣ್ಣ ಸ್ವಾಮಿಯ ಒಪ್ಪಿಗೆ ಪಡೆದೇ ಆರಂಭ ಮಾಡಿದ್ದರು ರಿಷಬ್ ಶೆಟ್ಟಿ. ಮಂಜುನಾಥ ಸ್ವಾಮಿ ದರ್ಶನದ ಬೆನ್ನಲ್ಲೇ ಭೂತಕೋಲದ ಅಪ್ಪಣೆಯನ್ನೂ ಪಡೆದಿದ್ದರು. ಪಂಜುರ್ಲಿ ಕೆನ್ನೆಗೆ ಬಣ್ಣ ಹಚ್ಚಿ ಶುಭ ಹಾರೈಸಿತ್ತಂತೆ. ಈಗ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಕಾಂತಾರ ಚಿತ್ರವನ್ನು ನೋಡಿದ್ದಾರೆ.
ತುಳುನಾಡಿದ ದೈವಾರಾಧನೆಯನ್ನು ವಿಶ್ವಕ್ಕೇ ತೋರಿಸಿಕೊಟ್ಟಿರುವ ರಿಷಬ್ ಶೆಟ್ಟಿ ದೈವಾರಾಧನೆಯ ಸೂಕ್ಷ್ಮತೆಯನ್ನು ಬಹಳ ಚೆನ್ನಾಗಿ ಚಿತ್ರಿಸಿದ್ದಾರೆ. ದೈವಗಳು ಅಧರ್ಮಕ್ಕೆ ಬೆಂಬಲ ಕೊಡೋದಿಲ್ಲ ಎನ್ನುವುದು ಈ ಸಿನಿಮಾದ ಸಂದೇಶ. ಸಮಾಜದಲ್ಲಿ ಸ್ವಾರ್ಥಿಗಳು ಇರುತ್ತಾರೆ. ಆದರೆ ನಮ್ಮ ದೈವಗಳು ಯಾವುದಕ್ಕೂ ಬೆಂಬಲ ಕೊಡೋದಿಲ್ಲ ಎನ್ನುವುದನ್ನು ಈ ಸಿನಿಮಾ ಮತ್ತೆ ತೋರಿಸಿಕೊಟ್ಟಿದೆ. ಇದು ಒಳ್ಳೆಯ ಸಂದೇಶ ಅಂತ ಅನಿಸಿದೆ ಎಂದಿದ್ದಾರೆ.
ಚೇತನ್ ಎತ್ತಿರುವ ಧರ್ಮ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ವೀರೇಂದ್ರ ಹೆಗ್ಗಡೆ ನಮ್ಮ ನಂಬಿಕೆ ಆಚರಣೆಗಳು ಸ್ವಾಭಾವಿಕವಾಗಿ ಬೆಳೆದು ಬಂದದ್ದು ಅದನ್ನು ಬಿಟ್ಟಿರಲು ಸಾಧ್ಯವಿಲ್ಲ. ನಾವೆಲ್ಲ ಇವತ್ತಿಗೂ ದೈವಾರಾಧನೆ ಮಾಡುತ್ತೇವೆ. ದೈವದ ನುಡಿಗೆ ಗೌರವ ಕೊಡುತ್ತೇವೆ. ದೈವ ಮೈಮೇಲೆ ಬಂದಾಗ ಅದಕ್ಕೆ ಗೌರವ ಕೊಡುತ್ತೇವೆ. ಇದನ್ನು ಹಿಂದೂ ಧರ್ಮಕ್ಕೆ ವಿಮರ್ಶೆ ಮಾಡುವ ಅಗತ್ಯ ಇಲ್ಲ ಎಂದು ಹೆಗ್ಗಡೆಯವರು ಅಭಿಪ್ರಾಯಪಟ್ಟಿದ್ದಾರೆ.



