ವೀರಗಾಸೆ, ವೀರಭದ್ರ ನೃತ್ಯಗಾರರನ್ನು ರೌಡಿಗಳಂತೆ ಬಿಂಬಿಸಿದ್ದಾರೆ ಎಂಬ ಆರೋಪ ಬಹುತೇಕ ಸುಖಾಂತ್ಯ ಕಂಡಿದೆ. ಜುಜುಬಿ ಕರಗ ಎಂಬ ವಿವಾದವೂ ಅಂತ್ಯವಾದಂತೆ ಕಾಣುತ್ತಿದೆ. ಈ ವಿವಾದದಲ್ಲಿ ಡಾಲಿ ಧನಂಜಯ್ ಸಣ್ಣ ಆಕ್ಷೇಪ ಬಂದೊಡನೆ ಸ್ಪಷ್ಟನೆ ಕೊಟ್ಟಿದ್ದಾರಾದರೂ ವಿವಾದದ ಅಂತ್ಯಕ್ಕೆ ಬುಧವಾರವಿಡೀ ಶ್ರಮಿಸಿದರು.
ಸುವರ್ಣ ಕರ್ನಾಟಕ ವೀರಶೈವ ಲಿಂಗಾಯತ ಒಕ್ಕೂಟ, ವೀರಶೈವ ಪುರೋಹಿತ ಮಹಾಸಭಾ, ಭಜರಂಗ ದಳ ಸೇರಿದಂತೆ ಹಲವು ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದವು. ಪೊಲೀಸ್ ದೂರನ್ನೂ ಕೊಟ್ಟಿದ್ದವು. ವಿವಾದ ಚಲನಚಿತ್ರ ವಾಣಿಜ್ಯ ಮಂಡಳಿ ಮೆಟ್ಟಿಲನ್ನೂ ಏರಿತ್ತು. ವೀರಗಾಸೆ ಹಿರಿಯ ಕಲಾವಿದ ಪಂಚಾಕ್ಷರಿ ಗಡ್ಡಿ ಸೀನ್ನ್ನು ಕಟ್ ಮಾಡುವಂತೆ ಒತ್ತಾಯಿಸಿದ್ದರು.
ನಟ ಧನಂಜಯ : ಇಂಥ ಸಿನಿಮಾಗಳನ್ನ ಮಾಡೋದೇ ತಪ್ಪಾ? ಮೊದಲು ಸಿನಿಮಾ ನೋಡಿ ಮಾತಾಡಬೇಕು. ವೀರಗಾಸೆ, ಕರಗ ಸಮಾಜದವರ ಜತೆ ಚರ್ಚಿಸಿದ್ದೇನೆ. ಒಂದಿಷ್ಟು ಕಿಡಿಗೇಡಿಗಳು ಸಮಸ್ಯೆ ಮಾಡುತ್ತಿದ್ದಾರೆ. ಕಿಡಿಗೇಡಿಗಳಿಗೆ ವೀರಭದ್ರೇಶ್ವರನೇ ಬುದ್ಧಿ ಕಲಿಸಲಿ. ಸಿನಿಮಾ ತುಂಬಾ ಚನ್ನಾಗಿ ಹೋಗುತ್ತಿದೆ. ಈ ವಿವಾದ ನೋಡುತ್ತಿದ್ರೆ. ಸಿಮಾದಲ್ಲಿ ನಮ್ಮ ಆಚಾರ ವಿಚಾರ ತೋರಿಸೋದೆ ತಪ್ಪು ಅನ್ನಿಸುತ್ತೆ.
ಅಗ್ನಿ ಶ್ರೀಧರ್ : ಯಾರಿಗೂ ಅಪಮಾನ ಆಗದ ರೀತಿಯಲ್ಲಿ ಚಿತ್ರ ತೆಗೆಯಲಾಗಿದೆ. ಬೇರೆ ಭಾಷೆಯಲ್ಲೂ ವೀರಗಾಸೆಯನ್ನ ಬಳಸಿಕೊಳ್ಳಲಾಗಿದೆ. ಅಲ್ಲಿ ವಿವಾದ ಅಗಿರಲಿಲ್ಲ. ವೀರಗಾಸೆಯನ್ನ ಕೆಟ್ಟದಾಗಿ ತೋರಿಸಿಲ್ಲ. ಜುಜಬಿ ಕರಗ ಅಂತ ಪದ ಬಳಕೆ ಮಾಡಿದ್ದೇವೆ. ಅದನ್ನ ಬಿಟ್ರೆ ಬೇರೆ ಏನು ಪದ ಬಳಕೆ ಮಾಡಿಲ್ಲ. ಯಾವುದೇ ಕಾರಣಕ್ಕೂ ಚಿತ್ರ ದೃಶ್ಯಗಳಿಗೆ ಕತ್ತರಿ ಹಾಕಲ್ಲ. ಈಗ ಹೇಗಿದೆ ಹಾಗೇ ಇರಲಿದೆ. ನ್ಯಾಯಾಲಯ ಏನು ಹೇಳುತ್ತೋ ಅದಕ್ಕೆ ಬದ್ದ.

ಎಸ್. ಗುರು ಸ್ವಾಮಿ : ವೀರಶೈವ ಮಹಾಸಭಾ ಬೆಂಗಳೂರು ಜಿಲ್ಲಾಧ್ಯಕ್ಷ : ದೃಶ್ಯದಲ್ಲಿ ನಿಜವಾದ ವೀರಗಾಸೆಯವರಿಲ್ಲ. ವೀರಗಾಸೆ ವೇಷದಲ್ಲಿ ಬಂದವರನ್ನ ಹೊಡೆಯೂ ದೃಶ್ಯವಿದೆ. ಆದರೂ ಬೇಸರ ಆಗಿದ್ರೆ ನನ್ನ ಕಡೆಯಿಂದ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ.ಕಲಾವಿದರಿಗೆ ಜಾತಿ ಧರ್ಮ ಇಲ್ಲ.ಈ ವಿಚಾರವನ್ನ ಇಲ್ಲಿಗೇ ಬಿಡಿ.
ನೊಣಬ ಲಿಂಗಾಯತ ಸಂಘದ ಅಧ್ಯಕ್ಷ ಎಸ್. ಆರ್ ಪಾಟೀಲ್: ನಮ್ಮ ಸಮಾಜ ಅವಮಾನಪಡುವಂತದ್ದು ಏನು ಮಾಡಿಲ್ಲ.
ಅಖಿಲ ಭಾರತ ವೀರಶೈವ ಮಹಾ ಸಭಾ ರಾಜ್ಯ ಯುವ ಘಟಕದ ಅಧ್ಯಕ್ಷ ಮನೋಹರ್ : ಜಯರಾಜ್ ಕಥೆಯಲ್ಲಿದ್ದಂತೆ ಧನಂಜಯ್ ಮಾಡಿದ್ದಾರೆ. ಸಿನಿಮಾವನ್ನು ಸಿನಿಮಾದಂತಯೇ ನೋಡಬೇಕು. ಧನಂಜಯ್ ಕ್ಷಮೆ ಕೇಳುವ ಅಗತ್ಯವಿಲ್ಲ. ವಿವಾದವನ್ನು ಇಲ್ಲಿಗೇ ಮುಗಿಸೋಣ.
ವೀರಗಾಸೆ ಕಲಾವಿದ ರುದ್ರೇಶ್: ನಾನು ವೀರಗಾಸೆ ಕಲಾವಿದ. ಸಿನಿಮಾದಲ್ಲಿ ವೀರಗಾಸೆ ವೇಷದಲ್ಲಿ ನಾನು ಇದ್ದೇನೆ. ಅದು ವೀರಗಾಸೆ ವೇಷ ಅಲ್ಲ. ಕಾಲಿಗೆ ಗೆಜ್ಜೆ ಕಟ್ಟಿಲ್ಲ, ಕೈಗೆ ಪಟ್ಟಿ ಇಲ್ಲ. ಕಿರೀಟ ಹಾಕಿಲ್ಲ. ಲಿಂಗ ಹಾಕಿಲ್ಲ ವೀರಗಾಸೆ ಬಟ್ಟೆಯನ್ನೇ ಹಾಕಿಲ್ಲ.
ಮೊದಲು ಟೀಕಿಸಿದ್ದ ವೀರಗಾಸೆ ಕಲಾವಿದ ಪ್ರಕಾಶ್ ಇದು ಗೊತ್ತಿರಲಿಲ್ಲ. ತಪ್ಪಾಗಿ ಅರ್ಥ ಮಾಡಿಕೊಂಡಿದ್ದೆ. ಡಾಲಿ ಸರ್, ನಮ್ಮ ವೀರಗಾಸೆ ಕಲಾವಿದರ ಬಗ್ಗೆಯೂ ಸಿನಿಮಾ ಮಾಡಿ ಎಂದರು.



