ವೇದ ಚಿತ್ರ ಶುರುವಾಗುವುದೇ ಆಕೆ ಜೈಲಿಂದ ಬಿಡುಗಡೆಯಾಗುವ ಮೂಲಕ. ಮಗಳನ್ನು ಅಪ್ಪಿಕೊಂಡು ಕರೆದುಕೊಂಡು ಹೋಗುವುದು ಅಪ್ಪ. ಅಲ್ಲಿಂದ ಇಂಟರ್‍ವೆಲ್‍ವರೆಗೂ ರಕ್ತ..ರಕ್ತಸಿಕ್ತ..ರಣಭೀಕರ ಕೊಲೆಗಳ ಆರ್ಭಟ..ಶಿವಣ್ಣನ ಚಿತ್ರದಲ್ಲಿ ಇಷ್ಟೊಂದು ಹಿಂಸೆಯಾ.. ಎಂಬ ಪ್ರಶ್ನೆ ಪ್ರೇಕ್ಷಕರ ಚಿತ್ರದಲ್ಲಿ ಮೂಡುತ್ತಿರುವಾಗಲೇ.. ಕಥೆ ಬೆಚ್ಚಿ ಬೀಳಿಸುತ್ತಾ ಹೋಗುತ್ತದೆ. ಕಾರಣ ಗೊತ್ತಾದ ಮೇಲೆ ಪ್ರೇಕ್ಷಕನ ಹೃದಯದಲ್ಲಿ ಈ ಹಿಂಸೆಯೂ ಕಡಿಮೆಯಾಯ್ತು ಎನ್ನಿಸಿದರೆ ಆಶ್ಚರ್ಯವಿಲ್ಲ. ಅಷ್ಟರಮಟ್ಟಿಗೆ ಆವರಿಸಿಕೊಳ್ಳುವುದು ಕನಕ. ವೇದನ ಮಗಳು ಕನಕ.

ಕನಕನ ಪಾತ್ರದಲ್ಲಿ ಮಿಂಚಿರುವುದು ಆದಿತಿ ಸಾಗರ್. ಸಕಲಕಲಾವಲ್ಲಭ ಅರುಣ್ ಸಾಗರ್ ಪುತ್ರಿ. ಗಾಯಕಿಯಾಗಿಯೂ ಹಿಟ್ ಆಗಿರುವ ಆದಿತಿಗೆ ನಟಿಸುವ ಆಸೆಯಿತ್ತಂತೆ. ಅದು ಶಿವಣ್ಣನ ಮಗಳ ಪಾತ್ರದಲ್ಲಿ ಈಡೇರಿದೆ. ಚಿತ್ರದುದ್ದಕ್ಕೂ ಸ್ತ್ರೀ ಪಾತ್ರಗಳು ವಿಜೃಂಭಿಸುತ್ತವೆ. ಆದಿತಿ, ಗಾನವಿ, ಶ್ವೇತಾ ಚೆಂಗಪ್ಪ, ವೀಣಾ ಪೊನ್ನಪ್ಪ, ಉಮಾಶ್ರೀ.. ಆದರೆ ಪ್ರೇಕ್ಷಕರ ಹೃದಯಕ್ಕೆ ಡೈರೆಕ್ಟ್ ದಾಳಿ ಮಾಡಿರುವುದು ಆದಿತಿ ಸಾಗರ್. ಮೌನದಲ್ಲಿ..ಕಣ್ಣುಗಳಲ್ಲೇ ನಟಿಸಿರುವ ಆದಿತಿ ಶಿವಣ್ಣನ ಸರಿಸಮನಾಗಿ ನಟಿಸಿದ್ದಾರೆ. ಗೆದ್ದಿದ್ದಾರೆ. ಆದರೆ, ಈಗಿನ್ನೂ ಆಸ್ಪತ್ರೆಯಿಂದ ಮನೆಗೆ ಬಂದಿರೋ ಆದಿತಿ ಸದ್ಯಕ್ಕೆ ರೆಸ್ಟಿನಲ್ಲಿದ್ದಾರೆ.
ವೇದ ರಿಲೀಸ್ ಆಗುವುದಕ್ಕೆ ಮುನ್ನ 2 ದಿನ ಮೊದಲು ಮನೆಯಲ್ಲಿಯೇ ಸುಸ್ತಾಗಿ ತಲೆ ಸುತ್ತಿ ಬಿದ್ದಿದ್ದರು ಆದಿತಿ ಸಾಗರ್. ಗದ್ದಕ್ಕೆ ಪೆಟ್ಟಾಗಿತ್ತು. ಬಿಗ್ ಬಾಸ್ ನಲ್ಲಿದ್ದ ಅರುಣ್ ಸಾಗರ್ ಕೂಡಾ ಓಡೋಡಿ ಬಂದಿದ್ದರು. ಆತಂಕ ಪಡುವ ಅಗತ್ಯವೇನೂ ಇಲ್ಲ ಎಂದಿದ್ದರಾದರೂ ಸಣ್ಣದೊಂದು ಆಪರೇಷನ್ ಆಗಿತ್ತು. ಹೊಲಿಗೆಯೂ ಬಿದ್ದಿತ್ತು. ಫಸ್ಟ್ ಡೇ ದಿನಕ್ಕೆ ಕೆಲವೇ ಗಂಟೆಗಳಿಗೆ ಮುನ್ನ ಸ್ಟಿಚ್ ಬಿಚ್ಚಲಾಗಿತ್ತು.

ನಾನು ಶಿವಣ್ಣ ಅವರ ಅಪ್ಪಟ ಅಭಿಮಾನಿ. ಅವರ ಸಿನಿಮಾಗಳನ್ನು ಸಖತ್ ಇಷ್ಟಪಟ್ಟು ನೋಡುತ್ತಿದ್ದೆ. ಈ ಅವರ ಚಿತ್ರದಲ್ಲೇ ನಟಿಸಿದ್ದೇನೆ. ಪ್ರೇಕ್ಷಕರು ಮೆಚ್ಚಿದ್ದಾರೆ. ಗಾನವಿ, ಶ್ವೇತಾ ಚೆಂಗಪ್ಪ ಕೂಡಾ ಚೆನ್ನಾಗಿ ನಟಿಸಿದ್ದಾರೆ. ನಮಗೆ ಹೀಗೇ ಸಪೋರ್ಟ್ ಮಾಡುತ್ತಿರಿ. ಎಲ್ಲರೂ ಸಿನಿಮಾ ನೋಡಿ ಮೆಚ್ಚುಗೆಯ ಮಾತನ್ನಾಡುತ್ತಿದ್ಧಾರೆ. ಅಪ್ಪನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದಿದ್ದಾರೆ ಆದಿತಿ.
ಶಿವಣ್ಣನ ಮಗಳ ಪಾತ್ರದ ಮೂಲಕ ನಟಿಯಾಗಿ ಅವಳು ಎಂಟ್ರಿ ಕೊಟ್ಟಿರುವುದು ಆಶೀರ್ವಾದ. ಅರುಣ್ ಇದ್ದಿದ್ದರೆ ಇನ್ನೂ ಖುಷಿಯಾಗುತ್ತಿದ್ದರು. ಸಿನಿಮಾ ಟೀಮಿನವರೆಲ್ಲ ಅವಳನ್ನು ಮಗು ತರ ನೋಡಿಕೊಂಡಿದ್ದಾರೆ. ಬಿಗ್ ಬಾಸ್ ಮುಗಿಸಿ ಬಂದಾಗ ಮಗಳಿಗೆ ಸಿಕ್ಕಿರುವ ಮೆಚ್ಚುಗೆಗೆ ಅವರು ಖಂಡಿತಾ ಇನ್ನೂ ಖುಷಿಯಾಗುತ್ತಾರೆ. ಚಿತ್ರದಲ್ಲಿ ಒಳ್ಳೆಯ ಮೆಸೇಜ್ ಇದೆ. ಹೆಣ್ಣು ಮಕ್ಕಳಿಗೆ ಗೌರವ ಕೊಡಬೇಕು ಎನ್ನುವ ಸಂದೇಶ ಇರುವ ಚಿತ್ರವಿದು ಎಂದು ಖುಷಿಯಾಗಿದ್ದಾರೆ ಅರುಣ್ ಸಾಗರ್ ಪತ್ನಿ.’

ಶಿವರಾಜ್ಕುಮಾರ್ ಜೊತೆ ಅದಿತಿ ಸಾಗರ್ ಮತ್ತು ಗಾನವಿ ಇಬ್ಬರಿಗೂ ತುಂಬಾನೇ ಒಳ್ಳೆಯ ಹೆಸರು ಬಂದಿದೆ. ಆ ಇಬ್ಬರು ಹೆಣ್ಣು ಮಕ್ಕಳಿಗೆ ಹೆಸರು ಬಂದಿರುವುದು ತುಂಬಾನೇ ಇಷ್ಟವಾಯಿತು. ಸಿನಿಮಾದಲ್ಲಿ ಶ್ರಮಪಟ್ಟು ಕೆಲಸ ಮಾಡಿದ್ದಾರೆ. ಶಿವರಾಜ್ಕುಮಾರ್ ಸರಿಸಮಾನಗಿ ನಟಿಸುವುದು ಸ್ವಲ್ಪ ಕಷ್ಟನೇ ಆದರೂ ಅವರು ತುಂಬಾ ಚೆನ್ನಾಗಿ ಆಕ್ಟ್ ಮಾಡಿದ್ದಾರೆ. ನಾನು ಯಾವತ್ತೂ ಸಿನಿಮಾ ರಿಲೀಸ್ಗೆ ಹೆದರಿಕೊಂಡಿರಲಿಲ್ಲ. ಒಳ್ಳೆಯದಾಗುತ್ತದೆ ಎಂದು ನನಗೆ ಗೊತ್ತಿತ್ತು ಎಂದಿದ್ದಾರೆ ಗೀತಾ ಶಿವ ರಾಜ್ ಕುಮಾರ್.

ಶಿವಣ್ಣ ಜೊತೆ ಪುಷ್ಪ ಪಾತ್ರದಲ್ಲಿ ಗಾನವಿ ಲಕ್ಷ್ಮಣ್ ಪತ್ನಿಯಾಗಿ ನಟಿಸಿದ್ದಾರೆ. ಆದಿತಿ ಸಾಗರ್ ಶಿವಣ್ಣ ಮಗಳಾಗಿ ಕನಕ ಪಾತ್ರದಲ್ಲಿ ನಟಿಸಿದ್ದಾರೆ. ನಟಿಸಿದ್ದಾರೆ. ಹರ್ಷ ಕ್ರೌರ್ಯವನ್ನು ವೈಭವೀಕರಿಸಿದ್ದರೂ, ಚಿತ್ರದ ಮೆಸೇಜ್ ಅದ್ಭುತವಾಗಿದ್ದು ಕ್ರೌರ್ಯ ಓಕೆ ಎನ್ನುವಂತೆ ಪ್ರೇಕ್ಷಕರು ಮೆಚ್ಚುಗೆ ತೋರಿಸಿದ್ದಾರೆ.
ಅಂದಹಾಗೆ ಜನುಮದ ಜೋಡಿ ಚಿತ್ರದಲ್ಲಿ ಶಿಲ್ಪಾ ಕನಕ ಪಾತ್ರದಲ್ಲಿ ನಟಿಸಿದ್ದರು. ಸಿನಿಮಾ ಇಂಡಸ್ಟ್ರಿ ಹಿಟ್ ಆಗಿತ್ತು. ಶಿವಣ್ಣ ಕೃಷ್ಣ ಪಾತ್ರದಲ್ಲಿ ನಟಿಸಿದ್ದರು. ಈಗ ಮತ್ತೆ ಕನಕ. ಈ ಬಾರಿ ಶಿವಣ್ಣ ಮಗಳಾಗಿ ನಟಿಸಿದ್ದಾರೆ ಎಂದು ಅಭಿಮಾನಿಗಳು ಒಂದಕ್ಕೊಂದು ಲಿಂಕ್ ಮಾಡುತ್ತಿದ್ದಾರೆ.



